ರಾಮನಗರ: ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿ ಮಾದಾಪಟ್ಟಣ ಬಳಿಯ ಕ್ವಾರಿಯಲ್ಲಿ ಗುರುವಾರ ಬಂಡೆ ಕುಸಿದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ತಾವರೆಕೆರೆ ಠಾಣೆ ಪೊಲೀಸರು ಈವರೆಗೆ ಮೂವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳಾದ ಇಬ್ಬರು ಕ್ವಾರಿ ಮಾಲೀಕರು ತಲೆ ಮರೆಸಿಕೊಂಡಿದ್ದಾರೆ.
ಬಸವೇಶ್ವರ ಸ್ಟೋನ್ಸ್ ಕ್ವಾರಿಯನ್ನು ಗುತ್ತಿಗೆ ಪಡೆದು ನಡೆಸುತ್ತಿದ್ದ ಸಾಯಿರಾಮ್ ಕ್ರಷರ್ ಮಾಲೀಕ ಬೆಂಗಳೂರಿನ ಮಲ್ಲೇಶ್ವರದ ಪಾಂಡುರಂಗ, ಬಸವೇಶ್ವರ ಸ್ಟೋನ್ಸ್ ಕ್ವಾರಿಯ ವ್ಯವಸ್ಥಾಪಕ ತಾವರೆಕೆರೆ ಹೋಬಳಿಯ ಗಾಣಕಲ್ಲು ಗ್ರಾಮದ ಎನ್.ಲೋಕೇಶ್, ಉದಯಶಂಕರ್ ಸ್ಟೋನ್ ಕ್ರಷರ್ ವ್ಯವಸ್ಥಾಪಕ ಹಾಗೂ ಕಾವೇರಿ ಸ್ಟೋನ್ಸ್ ಕ್ರಷರ್ ಮೇಲ್ವಿಚಾರಕ ಅಂಕಯ್ಯನಪಾಳ್ಯದ ರಾಜು ಬಂಧಿತರು.
ಘಟನೆ ನಂತರ ಬಸವೇಶ್ವರ ಕ್ವಾರಿ ಮಾಲೀಕ ಆನಂದಸ್ವಾಮಿ ಮತ್ತು ಎಸ್.ಆರ್.ಉದಯಶಂಕರ್ ಸ್ಟೋನ್ ಕ್ವಾರಿ ಮಾಲೀಕ ಉದಯ್ ಶಂಕರ್ ತಲೆ ಮರೆಸಿಕೊಂಡಿದ್ದಾರೆ. ಇಬ್ಬರೂ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದು, ಪತ್ತೆಗಾಗಿ 2 ತಂಡ ರಚಿಸಲಾಗಿದೆ.
ಶವ ರವಾನೆ: ದುರಂತದಲ್ಲಿ ಮೃತಪಟ್ಟ 7 ಕಾರ್ಮಿಕರ ಶವದ ಮರಣೋತ್ತರ ಪರೀಕ್ಷೆಯನ್ನು ಶುಕ್ರವಾರ ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ರಾಜ್ಯದ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಚಾಮನಾಳದ ನಡಿಹಾಳ್ ದೇಸುನಾಯ್ಕ ತಾಂಡದ ಕಾರ್ಮಿಕ ರಾಮು ಚೌಹಾಣ್ ಶವವನ್ನು ಆಂಬುಲೆನ್ಸ್‌ನಲ್ಲಿ ಸ್ವಗ್ರಾಮಕ್ಕೆ ಕಳಿಸಿ ಕೊಡಲಾಗಿದೆ.
ಉಳಿದಂತೆ ಛತ್ತೀಸ್‌ಗಢದ ಒಬ್ಬ ಮತ್ತು ಮಧ್ಯಪ್ರದೇಶದ ಐವರು ಕಾರ್ಮಿಕರ ಶವಗಳನ್ನು ಕಾರ್ಗೊ ವಿಮಾನದ ಮೂಲಕ ಶುಕ್ರವಾರ ಸಂಜೆ ರವಾನಿಸಲಾಗಿದೆ. ಅಲ್ಲಿಂದ ಆಂಬುಲೆನ್ಸ್ ಮೂಲಕ ಸ್ವಗ್ರಾಮಗಳಿಗೆ ಶವ ಕಳಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಗೆ ಸಂಬಂಧಿಸಿದಂತೆ ಐವರ ವಿರುದ್ಧ ಪೊಲೀಸರು ಬಿಎನ್‌ಎಸ್ ಕಲಂ 105 (ಉದ್ದೇಶಪೂರ್ವಕವಲ್ಲದ ಹತ್ಯೆ), 125 (ಎ) (ಇತರರ ಜೀವಕ್ಕೆ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟುಮಾಡುವ ದುಡುಕಿನ ಅಥವಾ ನಿರ್ಲಕ್ಷ್ಯದ ಕೃತ್ಯ), 324 (5) (ಕಿಡಿಗೇಡಿತನ/ ದುಷ್ಕೃತ್ಯ), 3(5) (ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನವರಿಂದ ಸಮಾನ ಉದ್ದೇಶದ ಕೃತ್ಯ) ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
'ಸಾಲ' ಇಳಿಸಿಕೊಳ್ಳಲು ಕೆಲಸಕ್ಕೆ ಬಂದಿದ್ದರು
ಊರಿನಲ್ಲಿ ಮಳೆ-ಬೆಳೆ ಇಲ್ಲದೆ ಬರಗಾಲ. ಕುಟುಂಬಕ್ಕಿರುವ ತುಂಡು ಭೂಮಿಯೂ ಕೃಷಿಗೆ ಯೋಗ್ಯವಾಗಿಲ್ಲ. ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರ ಮದುವೆ ಸೇರಿದಂತೆ ಕುಟುಂಬದ ವಿವಿಧ ಕಷ್ಟಗಳಿಗೆ ಮಾಡಿಕೊಂಡಿದ್ದ ಸಾಲದ ಬಡ್ಡಿ ಬೆಳೆದು ಸುಮಾರು ₹10 ಲಕ್ಷ ತಲುಪಿತ್ತು. ಸಾಲದ ಭಾರ ಇಳಿಸಿಕೊಳ್ಳಲು ಕ್ವಾರಿಗೆ ಕೆಲಸಕ್ಕೆ ಬಂದಿದ್ದ ಆ ಕಾರ್ಮಿಕ ಮರಳಿ ಊರಿಗೆ ಹೋಗಿದ್ದು ಶವವಾಗಿ!
ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಮಾದಾಪಟ್ಟಣದ ಕ್ವಾರಿಯಲ್ಲಿ ಸಂಭವಿಸಿದ ದುರಂತದಲ್ಲಿ ಜೀವ ಕಳೆದುಕೊಂಡ ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಚಾಮನಾಳ ಗ್ರಾಮದ ನಡಿಹಾಳ್ ದೇಸುನಾಯ್ಕ ತಾಂಡದ ರಾಮು ಚೌಹಾಣ್ (48) ಅವರ ಕರುಣಾಜನಕ ಕಥೆ ಇದು.
ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳೊಂದಿಗೆ ಮಾದಾಪಟ್ಟಣಕ್ಕೆ ಬಂದಿದ್ದ ರಾಮು ಅವರು, ಎಸ್.ಆರ್. ಉದಯ ಶಂಕರ್ ಕ್ವಾರಿಯಲ್ಲಿ ಡ್ರಿಲ್ಲಿಂಗ್ ಕೆಲಸ ಮಾಡುತ್ತಿದ್ದರು. ಮಕ್ಕಳಿಗೆ ಕಂಪ್ರೆಸ್ಸರ್‌ನಲ್ಲಿ ಉಳಿ ಹೊಡೆಯುವ ಕೆಲಸ. ಮಹಿಳೆಯರು ಪಕ್ಕದ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕ್ವಾರಿಯಿಂದ ಅನತಿ ದೂರದಲ್ಲಿರುವ ಶೀಟ್‌ನ ಶೆಡ್‌ನಲ್ಲೇ ಇಡೀ ಕುಟುಂಬ ವಾಸವಾಗಿತ್ತು. 'ಕಷ್ಟಜೀವಿಯಾದ ರಾಮು ಅವರು ತನ್ನ ಐವರು ಮಕ್ಕಳ ಮದುವೆ ಮಾಡಿದ್ದರು. ಮದುವೆ ಸೇರಿದಂತೆ ಇತರ ಉದ್ದೇಶಗಳಿಗೆ ಸಾಲ ಮಾಡಿಕೊಂಡಿದ್ದರು. ಸ್ಥಳೀಯವಾಗಿ ಕೂಲಿ ಸಿಗದ ಕಾರಣ ನಾಲ್ಕೈದು ವರ್ಷದ ಹಿಂದೆಯೇ ಕುಟುಂಬ ಸಮೇತ ಬೆಂಗಳೂರಿಗೆ ಕೂಲಿಗಾಗಿ ಹೋಗಿದ್ದರು' ಎಂದು ರಾಮು ಸಂಬಂಧಿ ಗೋಪಾಲ್ ಚೌಹಾಣ್ 'ಪ್ರಜಾವಾಣಿ'ಗೆ ತಿಳಿಸಿದರು.
'ನಮ್ಮ ಭಾಗದಲ್ಲಿ ಬರಗಾಲ. ಬದುಕಿಗಾಗಿ ಇಲ್ಲಿನ ಜನ ಬೆಂಗಳೂರಿಗೆ ಹೋಗಿ ಕಟ್ಟಡ ನಿರ್ಮಾಣ, ಕ್ವಾರಿ ಸೇರಿದಂತೆ ವಿವಿಧೆಡೆ ಕೆಲಸ ಮಾಡುತ್ತಾರೆ. ಅದೇ ರೀತಿ ರಾಮು ಸಹ ಕುಟುಂಬದೊಂದಿಗೆ ಬಂದಿದ್ದರು' ಎಂದು
ತಿಳಿಸಿದರು.

