ಪರಿಸರನಾಶಕ್ಕೆ ಕಾರಣವಾಗುವ ಅತಿ ದೊಡ್ಡ ಹಾನಿಕಾರಕ ಅಂಶವೆಂದರೆ ಪ್ಲಾಸ್ಟಿಕ್. ನಾನಾ ವಿಧಗಳಲ್ಲಿ, ರೂಪಗಳಲ್ಲಿ ಅದು ಪ್ರಕೃತಿಗೆ ಹಾನಿಯನ್ನು ಉಂಟುಮಾಡುತ್ತಲೇ ಇದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ನುಡಿಗಟ್ಟಿಗೆ ಅನುಗುಣವಾಗಿ ವಿಜ್ಞಾನಿಗಳು ಪ್ಲಾಸ್ಟಿಕ್‌ನಿಂದ ಬಿಸ್ಕತ್ತುಗಳನ್ನು ಮಾಡಬಹುದು ಎಂದು ಸಂಶೋಧಿಸಿದ್ದಾರೆ.
ಪ್ಲಾಸ್ಟಿಕ್ ಕಣಗಳನ್ನು ಅಥವಾ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಸ್ಕರಿಸಿ ತಿನ್ನುವ ಪದಾರ್ಥಗಳನ್ನಾಗಿ ಮಾರ್ಪಡಿಸುವ ವಿನೂತನ ಸಂಶೋಧನೆಯೊಂದು ಇತ್ತೀಚೆಗೆ ಬೆಳಕು ಕಂಡಿದೆ.
ಆಗಸ್ಟ್ 23 ರಿಂದ 27ರವರೆಗೆ ಅಮೆರಿಕದ ಶಿಕಾಗೋದಲ್ಲಿ ನಡೆದ ಎಸಿಎಸ್ ಫಾಲ್ ಮೀಟಿಂಗ್ (ಅಮೆರಿಕನ್ ಕೆಮಿಕಲ್ ಸೊಸೈಟಿ) ಆಯೋಜಿಸಿದ್ದ ಸಮ್ಮೇಳನದಲ್ಲಿ ಕಾರ್ಬನ್‌ಡೇಲ್ ನಗರದ ಸೌತ್ ಇಲಿನಾಯ್ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಭಾರತೀಯ ಸಂಜಾತೆ ಸಂಧ್ಯಾ ಜಯಶೇಖರ, ಇಸಾಬೆಲ್ ಹೂಇ, ಭಾಗ್ಯಶ್ರೀ ಕೊಲಿತಾ, ಎಲ್‌ವುಡ್ ಶೆಫ್ಲಿನ್ ಹಾಗೂ ಲಹಿರು ಜಯಕೋಡಿ ತಾವು ಅಭಿವೃದ್ಧಿಪಡಿಸಿರುವ ಪ್ಲಾಸ್ಟಿಕ್ ಬಿಸ್ಕತ್‌ಗಳ(ಕುಕಿ) ಕುರಿತಾದ ತಮ್ಮ ಸಂಶೋಧನೆಯನ್ನು ಮಂಡಿಸಿದ್ದಾರೆ.
ಪ್ಲಾಸ್ಟಿಕ್ ಮತ್ತು ಕೃಷಿತ್ಯಾಜ್ಯವನ್ನು ತಿನ್ನಬಹುದಾದ ಪ್ರೋಟೀನ್‌ಗಳು ಹಾಗೂ ಸುವಾಸನೆ ನೀಡುವ ಅಣುಗಳಾಗಿ ಪರಿವರ್ತಿಸಿ ಇವುಗಳೊಡನೆ ಈಸ್ಟ್‌ಗಳನ್ನು ಸೇರಿಸಿ ತಿನ್ನುವ ಆಹಾರಪದಾರ್ಥಗಳಾಗಿ ಪರಿವರ್ತಿಸುವ ರೀತಿಯನ್ನು ಕಂಡುಹಿಡಿದ್ದಾರೆ. ಈ ವಿಧಾನಕ್ಕೆ ಅವರು 'ಮೈಕ್ರೋ ಬೈಟ್ಸ್' ಎಂದು ಹೆಸರಿಟ್ಟಿದ್ದಾರೆ.
'ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆಯ ಉತ್ಪನ್ನಗಳಾಗಿ ಪರಿವರ್ತಿಸಲು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಲೇ ಇದ್ದೇವೆ. ಈ ದಾರಿಯಲ್ಲಿ ಹೊಳೆದದ್ದೇ ಪ್ಲಾಸ್ಟಿಕ್‌ತ್ಯಾಜ್ಯದಿಂದ ಆಹಾರ ತಯಾರಿಸುವ ಆಲೋಚನೆ. ಪ್ಲಾಸ್ಟಿಕ್ ಕೂಡ ಇಂಗಾಲದಿಂದ ಕೂಡಿದೆ, ಆಹಾರವೂ ಇಂಗಾಲವನ್ನು ಒಳಗೊಂಡಿದೆ. ಇದೇ ನಮ್ಮ ಸಂಶೋಧನೆಗೆ ನಾಂದಿ ಹಾಡಿತು' ಎಂಬುದು ಲಹಿರು ಜಯಕೋಡಿ ಅವರ ಮಾತುಗಳು.
ಪ್ಲಾಸ್ಟಿಕ್ ವಸ್ತು/ತ್ಯಾಜ್ಯಗಳಲ್ಲಿರುವ 'ಪಾಲಿಥಿಲೀನ್ ಟೆರೆಫ್ತಲೇಟ್' ಹಾಗೂ ಕಡಿಮೆ ಗುಣಮಟ್ಟದ ಸಿಹಿಜೋಳ (ಮೆಕ್ಕೆಜೋಳ)ಸಸ್ಯಗಳ ಕಾಂಡಗಳು ಮತ್ತು ಎಲೆಗಳನ್ನು 'ಆಕ್ಸಿಡೇಟಿವ್ ಹೈಡ್ರೋಥರ್ಮಲ್ ಡಿಸಾಲ್ಯೂಷನ್' ಎಂಬ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಶಾಖವನ್ನು ಬಳಸಿ ಪ್ಲಾಸ್ಟಿಕ್ ಕಣಗಳೊಂದಿಗೆ ಆಹಾರದ 'ಫರ್ಮಂಟೇಷನ್'ಗೆ ನೆರವಾಗುವ ಸೂಕ್ಷ್ಮಜೀವಿಗಳನ್ನು ಸೇರಿಸಲಾಗುತ್ತದೆ. ಆ ವಸ್ತುಗಳನ್ನು ಈ ಸೂಕ್ಷ್ಮಜೀವಿಗಳು ತಿನ್ನುತ್ತವೆ. ಇವನ್ನು ಅವು ಜೀರ್ಣಿಸಿಕೊಳ್ಳಬಹುದಾದ ಘಟಕಗಳಾಗಿ ವಿಭಜಿಸಲಾಗುತ್ತದೆ. ನಂತರ ಈ ಘಟಕಗಳನ್ನು ಜೀನ್ ಎಡಿಟಿಂಗ್ ತಂತ್ರಜ್ಞಾನವನ್ನು ಬಳಸಿ ಈಸ್ಟ್‌ನೊಂದಿಗೆ ಬೆರೆಸಲಾಗುತ್ತದೆ. ಆ ಈಸ್ಟ್‌ಗಳು ಈ ಎಲ್ಲಾ ಘಟಕಗಳನ್ನು ಪ್ರೋಟೀನ್‌ಗಳು, ಕೊಬ್ಬುಗಳು ಮತ್ತು ಆಮ್ಲಗಳು ಸೇರಿದಂತೆ ವಿವಿಧ ಉಪಯುಕ್ತ ಅಂಶಗಳಾಗಿ ಪರಿವರ್ತಿಸುತ್ತವೆ. ಜೊತೆಗೆ ಇದಕ್ಕೆ ವೆನಿಲ್ಲಾ ಸುವಾಸನೆಯನ್ನು ಸೇರಿಸಲಾಗುತ್ತದೆ. ಬಳಿಕ ನಾರು, ಪಿಷ್ಟ ಮತ್ತು ಸಿಹಿಕಾರಕಗಳನ್ನು ಸೇರಿಸಿ ಈ ಪೇಸ್ಟ್ ಅನ್ನು ತ್ರಿಡಿ ಪ್ರಿಂಟರ್ ಮೂಲಕ ಅಗತ್ಯವಿರುವ ಆಕಾರಕ್ಕೆ ತರಲಾಗುತ್ತದೆ. ಈ ರೀತಿಯಾಗಿ ಮೈಕ್ರೊ ಬೈಟ್‌ಗಳು ತಯಾರಾಗುತ್ತವೆ. ಇವುಗಳ ಸೇವನೆಯಿಂದ ದೇಹಕ್ಕೆ ಅಗತ್ಯವಿರುವ ವಿಟಮಿನ್ 'ಎ' ಆಗಿ ಪರಿವರ್ತಿಸಿಕೊಳ್ಳಬಹುದಾದ ಬೀಟಾ ಕ್ಯಾರೋಟಿನ್‌ಗಳು ದೇಹದಲ್ಲಿ ಉತ್ಪಾದನೆಯಾಗುತ್ತವೆ.
'ಮೈಕ್ರೊ ಬೈಟ್‌ಗಳು ಮೇಲ್ನೋಟಕ್ಕೆ ತಿನ್ನಲು ಸುರಕ್ಷಿತವಾಗಿವೆ ಎಂದು ತೋರುತ್ತಿರಬಹುದು. ಆದರೆ, ಅದರ ನಿಜವಾದ ರುಚಿ ಪರೀಕ್ಷೆಗಳನ್ನು ಆರಂಭಿಸುವ ಮೊದಲು ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಸಂಸ್ಥೆಗಳ ಅಧಿಕೃತ ಅನುಮೋದನೆ ಬೇಕಾಗುತ್ತದೆ'ಎಂದು ಅಮೆರಿಕನ್ ಕೆಮಿಕಲ್ ಸೊಸೈಟಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಪ್ಲಾಸ್ಟಿಕ್ಕನ್ನು ತಿನ್ನುವ ಆಹಾರವಾಗಿ ಪರಿವರ್ತಿಸುವ ಆಲೋಚನೆ ಅಚ್ಚರಿ ಎನಿಸಿದರೂ, ಇದು ಮಾನವನ ಸೃಜನಶೀಲತೆಯ ನವೀನ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಈ ಬೆಳವಣಿಗೆಯು ಪ್ಲಾಸ್ಟಿಕ್ ಮಾಲಿನ್ಯಕ್ಕೆ ಶಾಶ್ವತ ಪರಿಹಾರವೇ ಎಂಬ ವಾದಕ್ಕಿಂತ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಎಂದೇ ಹೇಳಬಹುದು. ಆದರೆ ಹಾನಿಕಾರಕ ವಸ್ತುವೊಂದನ್ನು ಆಹಾರವಾಗಿ ಪರಿವರ್ತಿಸಿ, ಅದನ್ನು ಬಳಸುವ ಮೊದಲು ಇದರಿಂದ ದೇಹ ಮತ್ತು ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಕಟ್ಟುನಿಟ್ಟಾದ ವೈಜ್ಞಾನಿಕ ಪರಿಶೀಲನೆ ಅತ್ಯಗತ್ಯ. ಒಂದು ವೇಳೆ ಯಶಸ್ವಿಯಾದರೆ, ಈ ತಂತ್ರಜ್ಞಾನವು ಜಗತ್ತಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಭಾಗಶಃ ಕಡಿಮೆ ಮಾಡುವುದರಲ್ಲಿ ಎರಡನೇ ಮಾತಿಲ್ಲ.
ಪ್ರಕೃತಿಗೆ ಕಂಟಕವಾಗಿರುವ ಪ್ಲಾಸ್ಟಿಕ್ ಭವಿಷ್ಯದಲ್ಲಿ ಮಾನವ ಬದುಕಿಗೆ ಉಪಯುಕ್ತ ಸಂಪನ್ಮೂಲವಾಗುವ ಸಾಧ್ಯತೆಯೊಂದನ್ನು ಈ ಸಂಶೋಧನೆ ತೆರೆದಿಟ್ಟಿದೆ. ಆದರೂ, ಪ್ಲಾಸ್ಟಿಕ್ಕನ್ನು ತಿನ್ನುವ ವಸ್ತುವಾಗಿ ಆಯ್ದುಕೊಳ್ಳುವ ಮೊದಲು, ಪ್ಲಾಸ್ಟಿಕ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಜವಾಬ್ದಾರಿಯನ್ನೇ ಹೊರುವುದು ಒಳಿತಲ್ಲವೇ?
260916-51-613482850

