ಒಳ್ಳೆಯ ನೆನಪುಗಳು ಇರುವ ಕಡೆ ಸಂಬಂಧ ಗಟ್ಟಿಯಾಗಿ ಬೆಸೆದುಕೊಂಡಿರುತ್ತದೆ! ಮಾನವ ಸಂಬಂಧಗಳ ನಡುವೆ ಸತ್ಯ ಎನ್ನಿಸುವ ಈ ಮಾತು ಪ್ಲಾಸ್ಟಿಕ್ಕುಗಳಿಗೂ ಅನ್ವಯಿಸುತ್ತದಂತೆ.
ಪ್ಲಾಸ್ಟಿಕ್ಕುಗಳನ್ನು ಬೆಸೆಯುವಾಗ ಅವುಗಳ ಅಂಚಿನಲ್ಲಿ ಕೂಡುವ ಬೆಸುಗೆ, ಪ್ಲಾಸ್ಟಿಕ್ಕಿನ ಹಳೆಯ ರಚನೆಯನ್ನು ನೆನಪಿಸುವಂತೆ ಇರುತ್ತದೆಯಾದ್ದರಿಂದ ಅದು ಗಟ್ಟಿಯಾಗಿರುತ್ತದೆ ಎಂದು ಅಮೆರಿಕೆಯ ಕೊಲಂಬಿಯ ವಿಶ್ವವಿದ್ಯಾಲಯದ ರಾಸಾಯನಿಕ ವಿಜ್ಞಾನಿ ಮಿಶೆಲ್ ವಾಲ್ಸೆಕ್ಕಿ ಮತ್ತು ಸಂಗಡಿಗರು ಪತ್ತೆ ಮಾಡಿದ್ದಾರೆ. ಇದು ಗಾಜು ಹಾಗೂ ಪ್ಲಾಸ್ಟಿಕ್ಕಿನ ಬೆಸುಗೆಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ವಿವರಿಸಿದೆ.
ಸೋರುವ ಕೊಳವೆಗಳನ್ನು ಕತ್ತರಿಸಿ ಮತ್ತೆ ಜೋಡಿಸುವಾಗ ಒಂದಿಷ್ಟು ಬಿಸಿ ಮಾಡಿ ಕೂಡಿಸುತ್ತಾರೆ. ಅಗಲದಲ್ಲಿ ವ್ಯತ್ಯಾಸ ಇರುವುದರಿಂದ ಅವನ್ನು ಹಿಗ್ಗಲಿಸುವುದಕ್ಕೆ ಬಿಸಿ ಮಾಡುವುದು ಅಗತ್ಯ ಎನ್ನುವುದು ಎಷ್ಟು ನಿಜವೋ ಹಾಗೆಯೇ ಬಿಸಿ ಮಾಡಿ ಕರಗಿಸಿದ ಪ್ಲಾಸ್ಟಿಕ್ಕು ಭದ್ರವಾಗಿ ಬೆಸೆದುಕೊಳ್ಳುತ್ತವೆ ಎನ್ನುವುದೂ ಸತ್ಯ. ಇದರ ಅರಿವು ನಮಗೆ ಇದ್ದರೂ, ಈ ಬೆಸುಗೆ ಅಷ್ಟೊಂದು ಗಟ್ಟಿಯಾಗುವುದೇಕೆ ಎನ್ನುವುದರ ಅರಿವು ಸ್ಪಷ್ಟವಾಗಿ ಇರಲಿಲ್ಲ.
ಮುರಿದ ಎರಡು ಭಾಗಗಳನ್ನು ಜೋಡಿಸುವ ನಿತ್ಯ ಕಾಯಕದಲ್ಲಿ ಎರಡು ವಿಧಗಳಿವೆ. ಒಂದು ಅಂಟಿಸುವುದು. ಮತ್ತೊಂದು ಬೆಸೆಯುವುದು. ಮೂರನೆಯದೂ ಇದೆ. ಜೋಡಿಸುವುದು. ಕುಂಬಾರರು ಹಸಿಮಡಕೆ ಒಡೆದಾಗ, ಇನ್ನೊಂದಿಷ್ಟು ಹಸಿ ಮಣ್ಣನ್ನು ಸೇರಿಸಿ ಜೋಡಿಸುತ್ತಾರೆ. ಫೆವಿಕಾಲ್ ಹಾಕಿ ಅಂಟಿಸುವುದನ್ನೂ ನೋಡಿದ್ದೀರಿ. ಬಡಗಿಗಳು ಎರಡು ಹಲಗೆಗಳನ್ನು ಸೇರಿಸುವಾಗ, ಅಂಚನ್ನು ನಿರ್ದಿಷ್ಟ ಆಕಾರದಲ್ಲಿ ಕೆತ್ತಿ, ಒಂದಿನ್ನೊಂದರೊಳಗೆ ಭದ್ರವಾಗಿ ಕುಳಿತುಕೊಳ್ಳುವಂತೆ ಜೋಡಿಸುತ್ತಾರೆ. ಆದರೆ ವೆಲ್ಡಿಂಗ್ ಅಥವಾ ಬೆಸುಗೆ ಹಾಕುವುದು ಇವೆರಡಕ್ಕಿಂತಲೂ ಭಿನ್ನ.
ಎಂಜಿನಿಯರ್‌ಗಳ ದೃಷ್ಟಿಯಿಂದ ಬೆಸುಗೆ ಎನ್ನುವುದು ಬಿಸಿ ಮಾಡಿ ಕರಗಿಸಿ ಮಾಡುವ ಕ್ರಿಯೆ. ಬಿಸಿ ಮಾಡಿದ ಕಡೆಯಲ್ಲಿ ಎರಡು ತುಣುಕುಗಳೂ ಕರಗಿ ನೀರಾಗುತ್ತವೆ. ಎರಡೂ ತುಣುಕಿನ ಕರಗಿದ ಭಾಗಗಳು ಕೂಡಿಕೊಂಡು ಒಂದೇ ಎನ್ನುವಂತಾಗುತ್ತವೆ. ಅನಂತರ ತಣಿಸಿದಾಗ, ಕೂಡಿಸಿದ ಜಾಗ ಕಾಣದಂತೆ ಅವು ಒಂದಾಗಿರುತ್ತವೆ. ಇದನ್ನೇ ಬೆಸುಗೆ ಎನ್ನುತ್ತೇವೆ. ಲೋಹಗಳನ್ನು ವೆಲ್ಡ್ ಮಾಡಲೂ ಬಿಸಿ ಮಾಡುತ್ತೇವೆ. ಒಡೆದ ಕನ್ನಡಿಯ ತುಣುಕುಗಳನ್ನು ಬೆಸೆಯಲೂ ಬಿಸಿ ಮಾಡಿ ಕರಗಿಸಿ ಬೆಸೆಯಬಹುದು. ಪ್ಲಾಸ್ಟಿಕ್ಕುಗಳನ್ನೂ ಹೀಗೆಯೇ ಬಿಸಿ ಮಾಡಿ ಬೆಸೆಯುತ್ತೇವೆ.
ಆದರೆ ಈ ಮೂರೂ ವಸ್ತುಗಳ ಬೆಸುಗೆಯಲ್ಲಿಯೂ ವ್ಯತ್ಯಾಸ ಇವೆ. ಅವುಗಳನ್ನು ಬಿಸಿ ಮಾಡುವ ಉಷ್ಣತೆ ಒಂದು ವ್ಯತ್ಯಾಸ. ಗಾಜನ್ನು ಸುಮಾರು 400ರಿಂದ 600ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಕರಗಿಸಿದರೆ ಮಾತ್ರ ಬೆಸೆಯಬಹುದು. ಲೋಹಗಳನ್ನು ಇನ್ನೂ ಹೆಚ್ಚಿನ ಅಂದರೆ 800 ಡಿಗ್ರಿಗೂ ಮೀರಿದ ಉಷ್ಣತೆಗೆ ಕಾಯಿಸಬೇಕು. ಆದರೆ ಪ್ಲಾಸ್ಟಿಕ್ಕುಗಳನ್ನು ಕೇವಲ 200 ಡಿಗ್ರಿ ಉಷ್ಣಾಂಶಕ್ಕೆ ಬಿಸಿಯಾಗಿಸಿ ಬೆಸೆದುಬಿಡಬಹುದು. ಇಷ್ಟು ಕಡಿಮೆ ಉಷ್ಣತೆಯಲ್ಲಿ ಮಾಡಿದರೂ, ಪ್ಲಾಸ್ಟಿಕ್ಕಿನ ಬೆಸುಗೆಗಳು ಬಲು ಭದ್ರವಾಗಿರುತ್ತವೆ ಎನ್ನುವುದು ಅನುಭವ. ಅದೇಕೆ ಹಾಗೆ? ಇದು ಪ್ರಶ್ನೆ.
ಈ ಪ್ರಶ್ನೆಗೆ ಉತ್ತರ ಅಣುಗಳ ಜೋಡಣೆಯಲ್ಲಿ ಇರಬಹುದು ಎನ್ನುವ ಗುಮಾನಿ ಇತ್ತು. ಉದಾಹರಣೆಗೆ, ಗಾಜನ್ನು ಕರಗಿಸಿದಾಗ, ಅದರಲ್ಲಿರುವ ಸಿಲಿಕಾನ್, ಆಕ್ಸಿಜನ್ ಹಾಗೂ ಸೋಡಿಯಂ ಪರಮಾಣುಗಳನ್ನು ಕೂಡಿಟ್ಟಿರುವ ಬಂಧಗಳು ಸಡಿಲವಾಗುತ್ತವೆ. ಅನಂತರ ತಣಿಸಿದಾಗ ಈ ಪರಮಾಣುಗಳು ಮತ್ತೆ ಹೊಸ ಬಂಧಗಳನ್ನು ಸೃಷ್ಟಿಸಿಕೊಳ್ಳುತ್ತವೆ. ಎಂದರೆ ಅರ್ಥ. ಒಂದು ಸೋಡಿಯಂ ಆ ಹಿಂದೆ ಬೆಸೆದುಕೊಂಡಿದ್ದ ಸಿಲಿಕಾನ್ ಜೊತೆಗೇ ಕೂಡಬೇಕಿಲ್ಲ. ಬೇರೊಂದರ ಜೊತೆಗೂ ಬೆಸೆದುಕೊಳ್ಳಬಹುದು. ಇದೊಂದು ರೀತಿಯಲ್ಲಿ ಅದೇ ಇಟ್ಟಿಗೆಗಳನ್ನು ಬೇರೆ ರೀತಿಯಲ್ಲಿ ಜೋಡಿಸಿದ ಹಾಗೆ. ಇದರ ಪರಿಣಾಮವಾಗಿ, ಬೆಸುಗೆಯ ಜಾಗದಲ್ಲಿ ಬಿರುಕುಗಳು ಕಾಣಿಸಿಕೊಳ್ಳುವುದು ಸುಲಭ.
ಪ್ಲಾಸ್ಟಿಕ್ಕಿನಲ್ಲಿ ಬೆಸುಗೆ ಮಾಡಿದಾಗ ಈ ರೀತಿಯ ಬಿರುಕುಗಳು ಕಾಣಿಸುವುದಿಲ್ಲವಲ್ಲ ಅದೇಕೆ? ಈ ದೃಢತೆಗೂ ಪ್ಲಾಸ್ಟಿಕ್ಕಿನಲ್ಲಿರುವ ಅಣು ಜೋಡಣೆಗೂ ಸಂಬಂಧವಿದೆಯೇ? ಈ ಪ್ರಶ್ನೆಗಳನ್ನು ವಾಲ್ಸೆಕ್ಕಿ ತಂಡ ಪರಿಶೀಲಿಸಿದೆ. ಪ್ಲಾಸ್ಟಿಕ್ಕು ಎಂದರೆ ಒಂದೇ ತೆರನಾದ ಮಾನೋಮರ್ ಅಣುಗಳು ಒಂದರೊಡನೊಂದು ತಳುಕಿಕೊಂಡು ಆದ ವಸ್ತು. ಒಂದೇ ಗಾತ್ರದ ನೂರರಿಂದ ಸಾವಿರ ಅಣುಗಳು ಜೋಡಿಸಿಕೊಂಡು ಆದ ಸರಗಳು ಹೆಣೆದುಕೊಂಡು ಪ್ಲಾಸ್ಟಿಕ್ಕು ರೂಪುಗೊಂಡಿರುತ್ತದೆ. ಉದಾಹರಣೆಗೆ, ಪಾಲಿ-ಇಥಿಲೀನಿನಲ್ಲಿ ಇಥಿಲೀನಿನ ಅಣುಗಳು ನೂರರಿಂದ ಸಾವಿರದವರೆಗೆ ಜೋಡಿಸಿಕೊಂಡ ನೂಲುಗಳಾಗಿರಬಹುದು. ಈ ನೂಲುಗಳನ್ನು ಹಗ್ಗದಂತೆ ಹೆಣೆದರೆ ವಿವಿಧ ಬಗೆಯ ಪಾಲಿ-ಇಥಿಲೀನಿನ ವಸ್ತುಗಳು ಸಿಗುತ್ತವೆ. ತೆಳುವಾದ ಹಾಳೆಗಳಿಂದ ಗಟ್ಟಿಯಾದ ಕೊಳವೆಗಳನ್ನು ತಯಾರಿಸುವವರೆಗೆ ಇವು ಅನುಕೂಲಿ.
ಈ ನೂಲಿನಂತಹ ರಚನೆಯೇ ಪ್ಲಾಸ್ಟಿಕ್ಕುಗಳ ಬೆಸುಗೆ ಗಾಜಿಗಿಂತಲೂ ಗಟ್ಟಿಯಾಗಿರುವಂತೆ ಮಾಡುತ್ತದೆಂದು ವಾಲ್ಸೆಕ್ಕಿ ತಂಡ ಗುರುತಿಸಿದೆ. ಇದಕ್ಕಾಗಿ ಇವರು ಪಾಲಿ-ಇಥಿಲೀನನ್ನೇ ಅಧ್ಯಯನ ಮಾಡಿದರು. ಹರಿದು ಎರಡಾಗಿ ಮಾಡಿದ ಪಾಲಿ-ಇಥಿಲೀನಿನ ಅಂಚುಗಳಲ್ಲಿ ಇಥಿಲೀನಿನ ಜೋಡಣೆ ಹೇಗಾಗುತ್ತದೆ ಎಂದು ಗಮನಿಸಿದರು. ಇನ್ನೂರರಿಂದ ಎರಡು ಸಾವಿರದವರೆಗೆ ಇಥಿಲೀನು ಅಣುಗಳಿರುವ ನೂಲುಗಳ ಪ್ಲಾಸ್ಟಿಕ್ಕುಗಳನ್ನು ಹರಿದರೆ ಅಂಚುಗಳು ಹೇಗಿರುತ್ತವೆ ಎಂದು ಗಣಿಸಿದರು. ಅನಂತರ ಆ ಅಂಚುಗಳನ್ನು ವಿವಿಧ ಉಷ್ಣತೆಗೆ ಬಿಸಿ ಮಾಡಿದರೆ ಆ ಅಣುಜೋಡಣೆಗಳು ಏನಾಗಬಹುದು ಎಂದು ಗಮನಿಸಿದರು. ಬಿಸಿ ಮಾಡಿದಾಗ ಅಂಚುಗಳು ಕರಗುವುದು ಎಂದರೆ ಅಲ್ಲಿರುವ ನೂಲುಗಳ ಹೆಣಿಗೆ ಸಡಿಲಾಗುತ್ತದೆ. ಹಾಗೆಯೇ ಅಲ್ಲಿರುವ ಕೆಲವು ನೂಲುಗಳು ಚಿಕ್ಕದಾಗಿ ಹರಿದು ಹೋಗಿರುತ್ತವೆಯಷ್ಟೆ.
ಈಗ ಈ ಕರಗಿದ ಅಂಚುಗಳನ್ನು ಜೋಡಿಸಿದಾಗ ಅಣು ಜೋಡಣೆಗಳಿಗೆ ಏನಾಗುತ್ತದೆ ಎಂದು ಲೆಕ್ಕ ಹಾಕಿದರು. ವಿವಿಧ ಸಂಖ್ಯೆಯ ಇಥಿಲೀನಿನ ಅಂಚುಗಳನ್ನು ಗಮನಿಸಿದರು. ಇದರ ಫಲಿತಾಂಶ ವಿಶಿಷ್ಟವಾಗಿತ್ತು. ಬಿಸಿಯಾದ ಅಂಚುಗಳು ತಣಿದಂತೆಲ್ಲ, ಅದರ ತುದಿಯಲ್ಲಿರುವ ಹರಿದ ಅಣುಗಳು ಇನ್ನೊಂದು ಬದಿಯ ಅಣುಗಳ ಜೊತೆಗೆ ಕೂಡಿಕೊಳ್ಳುತ್ತವೆ. ಹೀಗೆ ಕೂಡಿಕೊಳ್ಳುವಾಗ, ಆರಂಭದಲ್ಲಿ, ಎಂದರೆ ಹರಿಯುವ ಮುನ್ನ ಅವು ಹೇಗಿದ್ದುವೋ ಅದೇ ಬಗೆಯಲ್ಲಿ ಮತ್ತೆ ಜೋಡಿಸಿಕೊಳ್ಳುತ್ತವೆ. ಹೀಗಾಗಿ ಅಂಚು ಗಟ್ಟಿಯಾಗಿ ಕೂಡಿಕೊಳ್ಳುತ್ತದೆ. ಗಾಜಿನಲ್ಲಿ ವಿವಿಧ ಅಣುಗಳು ಮತ್ತೆ ಒಂದರೊಡನೊಂದು ತಳುಕಿಕೊಂಡರೂ, ಅದು ಮೊದಲಿನಂತೆಯೇ ಇರುವ ರಚನೆ ಆಗಿರುವುದಿಲ್ಲ. ಆದರೆ ಅದು ಹೇಗೋ ಪಾಲಿ-ಇಥಿಲೀನಿನಂತಹ ಪ್ಲಾಸ್ಟಿಕ್ಕುಗಳ ಅಂಚುಗಳು ಮೊದಲು ತಮ್ಮಲ್ಲಿನ ಅಣು ಜೋಡಣೆಗಳು ಹೇಗಿದ್ದುವು ಎಂಬುದನ್ನು ನೆನಪಿಟ್ಟುಕೊಂಡ ಹಾಗೆ ಮತ್ತೆ ಹಾಗೆಯೇ ಜೋಡಿಸಿಕೊಳ್ಳುತ್ತವೆ. ಹೀಗಾಗಿ ಅಲ್ಲಿ ಗಾಜಿನಲ್ಲಿ ಬಿರುಕು ಕಾಣಿಸಿಕೊಳ್ಳುವಂತೆ, ಹರಕು ಇರುವುದಿಲ್ಲ ಎನ್ನುತ್ತಾರೆ ವಾಲ್ಸೆಕ್ಕಿ.
ಈ ಸಂಶೋಧನೆಯ ವಿವರಗಳನ್ನು 'ಫಿಸಿಕಲ್ ರಿವ್ಯೂ ಲೆಟರ್ಸ್' ಪತ್ರಿಕೆಯ ಇತ್ತೀಚಿನ ಸಂಚಿಕೆ ವರದಿ ಮಾಡಿದೆ.
260916-51-931978873

