ಕಠ್ಮಂಡು: ತನ್ನ ವಿಮಾನಯಾನ ಜಾಲದ ನಕಾಶೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭೂ ಭಾಗ ಎಂದು ತೋರಿಸಿದ್ದಕ್ಕಾಗಿ 'ನೇಪಾಳ ಏರ್‌ಲೈನ್ಸ್' ಗುರುವಾರ ಕ್ಷಮೆಯಾಚಿಸಿದೆ.
ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ನಕಾಶೆಯಲ್ಲಿ ತೋರಿಸಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ನಕಾಶೆಯ ಸಂದೇಶಗಳನ್ನು ತೆಗೆದುಹಾಕಿದೆ.
ಇದಕ್ಕೆ ಸಂಬಂಧಿಸಿದಂತೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ವಿಮಾನಯಾನ ಸಂಸ್ಥೆಯು, 'ಅಂತರರಾಷ್ಟ್ರೀಯ ಗಡಿಗಳಿಗೆ ಸಂಬಂಧಿಸಿದ ಮಾಹಿತಿ ನಕಾಶೆಯಲ್ಲಿ ತಪ್ಪಾಗಿತ್ತು. ಇದು ನೇಪಾಳದ ಅಥವಾ ನೇಪಾಳ ಏರ್‌ಲೈನ್ಸ್‌ನ ನಿಲುವು ಬಿಂಬಿಸುವುದಿಲ್ಲ. ಅಚಾತುರ್ಯದಿಂದ ನಡೆದಿರುವ ಘಟನೆಗೆ ನಾವು ಕ್ಷಮೆಯಾಚಿಸುತ್ತೇವೆ' ಎಂದು ತಿಳಿಸಿದೆ.

