ನವದೆಹಲಿ (ಪಿಟಿಐ): ದೇಶದ ತಯಾರಿಕಾ ವಲಯದ ಚಟುವಟಿಕೆ ಅಕ್ಟೋಬರ್ ತಿಂಗಳಿನಲ್ಲಿ ಇಳಿಕೆ ಆಗಿದೆ ಎಂದು ಎಸ್ ಆಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ಸಮೀಕ್ಷಾ ವರದಿ ಸೋಮವಾರ ತಿಳಿಸಿದೆ.
ಸಂಸ್ಥೆ ನಿರ್ವಹಿಸುವ 'ಎಚ್ಎಸ್ಬಿಸಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕ'ವು (ಪಿಎಂಐ) ಸೆಪ್ಟೆಂಬರ್ನಲ್ಲಿ 55.1ರಷ್ಟು ದಾಖಲಾಗಿತ್ತು.
ಇದು ಅಕ್ಟೋಬರ್ನಲ್ಲಿ 54.7ಕ್ಕೆ ಇಳಿದಿದೆ.
ಈ ಸೂಚ್ಯಂಕವು 50ರ ಮೇಲಿದ್ದರೆ ಸಕಾರಾತ್ಮಕ ಬೆಳವಣಿಗೆ ಎಂದು ಅರ್ಥೈಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ಅದನ್ನು ಕುಸಿತವೆಂದು ಕಾಣಲಾಗುತ್ತದೆ.
ಉತ್ಪಾದನೆ ಮತ್ತು ಸರಕುಗಳಿಗೆ ಹೊಸ ಕಾರ್ಯಾದೇಶವು ಕಡಿಮೆ ಆಗಿರುವುದು ವಲಯದ ಬೆಳವಣಿಗೆ ನಿಧಾನವಾಗಲು ಕಾರಣವಾಗಿವೆ ಎಂದು ತಿಳಿಸಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೇಶದ ಸರಕುಗಳಿಗೆ ಬೇಡಿಕೆ ಹೆಚ್ಚಿದೆ. ಬಾಂಗ್ಲಾದೇಶ, ಕೆನಡಾ, ಇಂಡೊನೇಷ್ಯಾ, ನೇಪಾಳ, ಒಮಾನ್, ಸೌದಿ ಅರೇಬಿಯಾ, ಶ್ರೀಲಂಕಾ, ಬ್ರಿಟನ್, ಅಮೆರಿಕ, ಯುಎಇ ಸೇರಿದಂತೆ ವಿವಿಧ ದೇಶಗಳಲ್ಲಿನ ಕಂಪನಿಗಳಿಂದ ಬೇಡಿಕೆ ಇದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಕಂಪನಿಗಳು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾದವು. ಆದರೆ, ಉದ್ಯೋಗ ಸೃಷ್ಟಿಯ ವೇಗದ ದರ ಕಡಿಮೆಯಾಯಿತು ಎಂದು ತಿಳಿಸಿದೆ.
'ಕೆಲವು ವಸ್ತುಗಳು ಮತ್ತು ಇಂಧನ ಬೆಲೆಯು ಹೆಚ್ಚಾಗಿದ್ದರೂ, ಒಟ್ಟಾರೆ ತಯಾರಿಕೆ ಮತ್ತು ಉತ್ಪಾದನೆ ಬೆಲೆಯು ಸೆಪ್ಟೆಂಬರ್ ತಿಂಗಳಿಗಿಂತ ಅಕ್ಟೋಬರ್ನಲ್ಲಿ ಸ್ವಲ್ಪ ಕಡಿಮೆಯಾಗಿದೆ' ಎಂದು ಎಚ್ಎಸ್ಬಿಸಿ ಇಂಡಿಯಾದ ಅರ್ಥಶಾಸ್ತ್ರಜ್ಞೆ ಪ್ರಾಂಜುಲ್ ಭಂಡಾರಿ ಹೇಳಿದ್ದಾರೆ.
261103-51-1206189432

