ತಿರುವನಂತಪುರ: ಸಿಪಿಎಂ ರಾಷ್ಟ್ರೀಯ ನಾಯಕರು ಸೇರಿದಂತೆ ವಿವಿಧ ಸ್ತರಗಳಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ಪೊಲೀಸ್ ಕಾಯ್ದೆಯ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಅನುಷ್ಠಾನಗೊಳಿಸದಿರಲು ಆಡಳಿತಾರೂಢ ಎಡರಂಗ ಸರ್ಕಾರ ನಿರ್ಧರಿಸಿದೆ.
ಕಾಯ್ದೆಯಲ್ಲಿ 118-ಎ ಎಂಬ ಹೊಸ ಸೆಕ್ಷನ್ ಸೇರ್ಪಡೆಗೊಳಿಸಿದ್ದ ಸರ್ಕಾರವು ಸಾಮಾಜಿಕ ಮಾಧ್ಯಮ ಸೇರಿದಂತೆ ಯಾವುದೇ ಮಾಧ್ಯಮದ ಮುಖಾಂತರ ವ್ಯಕ್ತಿಯೊಬ್ಬರ ಮಾನಹಾನಿ ಮಾಡಿದರೆ ಅಥವಾ ಬೆದರಿಸಿದರೆ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ₹10 ಸಾವಿರ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಕೊಡುವ ತಿದ್ದುಪಡಿ ತಂದಿತ್ತು.
ಈ ತಿದ್ದುಪಡಿ ಸುಗ್ರೀವಾಜ್ಞೆಗೆ ಕೇರಳದ ರಾಜ್ಯಪಾಲರು ಶನಿವಾರ ಸಹಿ ಮಾಡಿದ್ದರು.
'ಎಲ್‌ಡಿಎಫ್‌ಗೆ ಬೆಂಬಲ ನೀಡಿರುವವರು ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಲು ಬದ್ಧತೆ ಹೊಂದಿರುವವರು ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಸರ್ಕಾರವು ಕೇರಳ ಪೊಲೀಸ್ ಕಾಯ್ದೆಯಲ್ಲಿನ ತಿದ್ದುಪಡಿಯನ್ನು ಅನುಷ್ಠಾನಕ್ಕೆ ತರದಿರಲು ನಿರ್ಧರಿಸಿದೆ.
ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಯಲು ಈ ತಿದ್ದುಪಡಿಯನ್ನು ತರಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದ್ದರೂ, ಸುಗ್ರೀವಾಜ್ಞೆಯಲ್ಲಿ 'ಯಾವುದೇ ಮಾದರಿಯ ಸಂವಹನ' ಎನ್ನುವ ಪ್ರಸ್ತಾಪವಿದ್ದ ಕಾರಣ, ಮಾಧ್ಯಮ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸರ್ಕಾರ ಈ ತಿದ್ದುಪಡಿ ತಂದಿದೆ ಎನ್ನುವ ವಿರೋಧ ವ್ಯಕ್ತವಾಗಿತ್ತು.

