ತಿಪಟೂರು: ನಗರದ ತ್ಯಾಜ್ಯ ನಿರ್ವಹಣೆಗೆ ಹೊಸ ಆಯಾಮ ನೀಡುವ ಉದ್ದೇಶದಿಂದ ನಗರಸಭೆಯು ಅಣ್ಣಾಪುರ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಬಳಿ 15 ಎಕರೆ ಪ್ರದೇಶದಲ್ಲಿ ₹1.25 ಕೋಟಿ ವೆಚ್ಚದ ಸಮಗ್ರ ಒಣ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಿದೆ.
ನಗರದ ವಿವಿಧ ವಾರ್ಡ್‌ಗಳಿಂದ ಸಂಗ್ರಹವಾಗುವ ಒಣ ತ್ಯಾಜ್ಯವನ್ನು ಈ ಕೇಂದ್ರದಲ್ಲಿ ವೈಜ್ಞಾನಿಕವಾಗಿ ವಿಂಗಡಿಸಿ, ಪ್ಲಾಸ್ಟಿಕ್, ಹಾಲಿನ ಪ್ಯಾಕೆಟ್, ಟೈರ್, ಚಪ್ಪಲಿ, ಕಾಗದ, ಗಾಜು, ಲೋಹ ಸೇರಿದಂತೆ ಮರುಬಳಕೆಗೆ ಯೋಗ್ಯ ವಸ್ತುಗಳನ್ನು ಪ್ರತ್ಯೇಕಿಸಿ ಮರು ಸಂಸ್ಕರಣೆಗೆ ಕಳುಹಿಸಲಾಗುತ್ತದೆ.
'ಪ್ಲಾಸ್ಟಿಕ್ ಬೇಲಿಂಗ್' ಯಂತ್ರ ಹಾಗೂ ಆಧುನಿಕ ತ್ಯಾಜ್ಯ ವಿಂಗಡಣಾ ಯಂತ್ರಗಳನ್ನು ಇಲ್ಲಿ ಅಳವಡಿಸಲಾಗಿದ್ದು, ತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಡೆಸುವ ವ್ಯವಸ್ಥೆ ರೂಪಿಸಲಾಗಿದೆ.
ಹಸಿ ಕಸವನ್ನು ಪ್ರತ್ಯೇಕವಾಗಿ ಸಂಸ್ಕರಿಸಿ ಸಾವಯವ ಗೊಬ್ಬರ ತಯಾರಿಸುವ ಅವಕಾಶ ಸೃಷ್ಟಿಯಾಗಿದ್ದು, ನಗರದಲ್ಲಿ ವೈಜ್ಞಾನಿಕ ಘನ ತ್ಯಾಜ್ಯ ನಿರ್ವಹಣೆಗೆ ಬಲ ಸಿಗಲಿದೆ ಎನ್ನುವುದು ಸ್ಥಳೀಯರ ನಂಬಿಕೆ.
ಸಾರ್ವಜನಿಕರು ಮನೆಗಳಲ್ಲಿಯೇ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸದೆ ನೀಡಿದರೆ ಯೋಜನೆಯ ಉದ್ದೇಶಕ್ಕೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮೂಲದಲ್ಲಿಯೇ ಕಸ ವಿಂಗಡಿಸಿ ನಗರಸಭೆಯ ವಾಹನಗಳಿಗೆ ನೀಡಬೇಕು. ಏಕಬಳಕೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದಿರುವುದು ಅತ್ಯಗತ್ಯ ಎನ್ನುತ್ತಾರೆ ಅಧಿಕಾರಿಗಳು.
ನಗರವನ್ನು ಸ್ವಚ್ಛ, ಸುಂದರ ಹಾಗೂ ಪರಿಸರ ಸ್ನೇಹಿಯಾಗಿ ರೂಪಿಸುವ ಗುರಿ ಇದೆ. ಪ್ರತಿದಿನ 8ರಿಂದ 10 ಟನ್ ಒಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ, ವಿಂಗಡಿಸಿ, ಮರುಬಳಕೆ ಹಾಗೂ ಮರುಸಂಸ್ಕರಣೆಗೆ ಒಳಪಡಿಸಲಾಗುತ್ತದೆ. ಇದರಿಂದ ಕಸದ ವೈಜ್ಞಾನಿಕ ನಿರ್ವಹಣೆ ಸಾಧ್ಯವಾಗಲಿದ್ದು, ಪರಿಸರ ಮಾಲಿನ್ಯ ತಗ್ಗಿಸಲು ನೆರವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಯೋಜನೆಯಿಂದ ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ತ್ಯಾಜ್ಯ ನಿರ್ವಹಣೆ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಲಿದೆ. ಸ್ವಚ್ಛ, ಆರೋಗ್ಯಕರ ಹಾಗೂ ಪರಿಸರ ಸ್ನೇಹಿ ವಾತಾವರಣ ನಿರ್ಮಾಣದತ್ತ ಇದು ಮಹತ್ವದ ಹೆಜ್ಜೆ. ಯೋಜನೆಯ ಯಶಸ್ಸಿಗೆ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ. ಪ್ರತಿಯೊಬ್ಬರೂ ಮನೆಗಳಲ್ಲಿಯೇ ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ನಗರಸಭೆಗೆ ನೀಡಬೇಕು ಎಂದು ನಗರಸಭೆ ಸಿಬ್ಬಂದಿ ಮನವಿ ಮಾಡಿದ್ದಾರೆ.
-ಕೆ.ಷಡಕ್ಷರಿ, ಶಾಸಕತಾಲ್ಲೂಕಿನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ನಗರವನ್ನು ಸ್ವಚ್ಛವಾಗಿಡಲು ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಿಂದೆ ನಗರದ ಕಸವನ್ನು ಸಂಗ್ರಹಿಸಿ ಸ್ಮಶಾನದ ಸಮೀಪದಲ್ಲಿ ರಾಶಿ ಹಾಕಿ ಬಳಿಕ ಹರಾಜು ಮಾಡಲಾಗುತ್ತಿತ್ತು. ಆದರೆ ಪರಿಸರ ಸಂರಕ್ಷಣೆ ಹಾಗೂ ವೈಜ್ಞಾನಿಕ ಕಸ ನಿರ್ವಹಣೆ ಉದ್ದೇಶದಿಂದ ಕಸ ವಿಲೇವಾರಿಯ ಎರಡು ಘಟಕಗಳನ್ನು ಸ್ಥಾಪಿಸಲಾಗಿದೆ. ಇದರಿಂದ ನಗರದಲ್ಲಿ ಶೇ 90ರಷ್ಟು ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಲು ಸಾಧ್ಯವಾಗಿದ್ದು, ಸ್ವಚ್ಛ ಪರಿಸರದಿಂದ ಸಾಂಕ್ರಾಮಿಕ ರೋಗ ತಡೆಗಟ್ಟಲು ಸಹಕಾರಿಯಾಗಿದೆ. -ವಿಶ್ವೇಶ್ವರ ಬದರಗಡೆ, ನಗರಸಭೆ ಪೌರಾಯುಕ್ತ ನಗರದಲ್ಲಿ ಸ್ವಚ್ಛತೆ ಮತ್ತು ಸೌಂದರ್ಯೀಕರಣಕ್ಕೆ ಆದ್ಯತೆ ನೀಡಲಾಗಿದೆ. ಪ್ರತಿದಿನ 8ರಿಂದ 10 ಟನ್ ಒಣಕಸ ಸಂಗ್ರಹವಾಗುತ್ತಿದ್ದು, ಅದನ್ನು ವೈಜ್ಞಾನಿಕವಾಗಿ ವಿಂಗಡಿಸಿ ಮರುಬಳಕೆಗೆ ಅವಕಾಶ ಕಲ್ಪಿಸಲಾಗಿದೆ. ಮರುಬಳಕೆ ವ್ಯವಸ್ಥೆಯಿಂದ ಪರಿಸರ ಸಂರಕ್ಷಣೆಯೊಂದಿಗೆ ನಗರಸಭೆಗೆ ಆದಾಯವೂ ದೊರೆಯುತ್ತದೆ. ಈ ಮಾದರಿಯ ಕಸ ನಿರ್ವಹಣಾ ಯೋಜನೆಯನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ನಗರಸಭೆಯಲ್ಲಿ ಆರಂಭಿಸಲಾಗಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260703-17-894664011

