Dailyhunt
ತೌತೆ ಚಂಡಮಾರುತ: ದೋಣಿಗಳಲ್ಲಿ ಸಿಲುಕಿದ್ದ 60 ಮಂದಿಯನ್ನು ರಕ್ಷಿಸಿದ ನೌಕಾಪಡೆ

ತೌತೆ ಚಂಡಮಾರುತ: ದೋಣಿಗಳಲ್ಲಿ ಸಿಲುಕಿದ್ದ 60 ಮಂದಿಯನ್ನು ರಕ್ಷಿಸಿದ ನೌಕಾಪಡೆ

ಮುಂಬೈ: ತೌತೆ ಚಂಡಮಾರುತದ ಅಬ್ಬರಕ್ಕೆ ಅರಬ್ಬಿ ಸಮುದ್ರದಲ್ಲಿ ಎರಡು ದೋಣಿಗಳು ಸಿಲುಕಿದ್ದು, ಭಾರತೀಯ ನೌಕಾಪಡೆ ಕಾರ್ಯಾಚರಣೆ ನಡೆಸಿ 60 ಮಂದಿಯನ್ನು ರಕ್ಷಿಸಿದೆ.

ಚಂಡಮಾರುತದಿಂದಾಗಿ 185 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಜತೆಗೆ, ಗುಜರಾತ್ ಕರಾವಳಿಯ ಹಲವೆಡೆ ಭೂಕುಸಿತ ಉಂಟಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.

ಮುಂಬೈ ಕರಾವಳಿಯಲ್ಲಿ ಎರಡು ದೋಣಿಗಳು ದುರಂತಕ್ಕೀಡಾಗಿದ್ದು, ಅವುಗಳಲ್ಲಿ 410 ಮಂದಿ ಸಿಬ್ಬಂದಿ ಇರುವುದಾಗಿ ನೌಕಪಡೆಗೆ ಸೋಮವಾರ ಸಂದೇಶ ರವಾನಿಸಲಾಗಿತ್ತು. ಈ ಹಿನ್ನೆಲೆ ನೌಕಾಪಡೆಯು ಕಾರ್ಯಾಚರಣೆ ನಡೆಸಲು ಐಎನ್‌ಎಸ್‌ ಕೋಲ್ಕತ್ತ, ಐಎನ್‌ಎಸ್‌ ಕೊಚ್ಚಿ ಮತ್ತು ಐಎನ್‌ಎಸ್ ತಲ್ವಾರ್‌ ಮೂರು ಮುಂಚೂಣಿ ಯುದ್ಧನೌಕೆಗಳನ್ನು ನಿಯೋಜಿಸಲಾಗಿತ್ತು.

ಸೋಮವಾರ ರಾತ್ರಿ 11 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ 'ಬಾರ್ಜ್ ಪಿ 305 ಹಡಗಿನಲ್ಲಿದ್ದ 60 ಮಂದಿ ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಸದ್ಯ ಕಾರ್ಯಾಚರಣೆ ಮುಂದುವರಿಸಲಾಗಿದೆ' ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ತೀವ್ರ ಹವಾಮಾನ ವೈಪರಿತ್ಯದ ನಡುವೆಯೂ ನೌಕಾ ವಿಮಾನಗಳು, ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani