Dailyhunt

ಟ್ರೇಡ್ ಲೈಸೆನ್ಸ್‌ ಇನ್ನಷ್ಟು ಸುಲಭ

ಮಂಗಳೂರು: ನಗರದಲ್ಲಿ ಟ್ರೇಡ್‌ ಲೈಸೆನ್ಸ್‌ ಪಡೆಯುವುದಕ್ಕೆ ಎದುರಾಗುತ್ತಿರುವ ತೊಂದರೆಗಳನ್ನು ನಿವಾರಿಸಲು ಮಂಗಳೂರು ಮಹಾನಗರ ಪಾಲಿಕೆ ಹೊಸ ಆಯಪ್‌ ಅನ್ನು ಸಿದ್ಧಪಡಿಸಿದ್ದು, ಬರುವ ಜನವರಿಯಿಂದ ಸೇವೆಗೆ ಲಭ್ಯವಾಗುವ ಸಾಧ್ಯತೆ ಇದೆ.

ಈ ಆಯಪ್‌ ಮೂಲಕ ವ್ಯಾಪಾರಿಗಳು ಲೈಸೆನ್ಸ್‌ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಶುಲ್ಕವನ್ನು ನೆಟ್‌ ಬ್ಯಾಂಕಿಂಗ್ ಅಥವಾ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಪಾವತಿಸಬಹುದಾಗಿದೆ. ಫೋನ್‌ನಲ್ಲಿಯೇ ಈ ಆಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು, ಹೊಸ ಲೈಸೆನ್ಸ್‌, ಲೆಸೆನ್ಸ್‌ ನವೀಕರಣ, ರದ್ದತಿಗೆ ಅರ್ಜಿ ಸಲ್ಲಿಸಬಹುದು. ತಮ್ಮ ಅರ್ಜಿಯ ಸ್ಥಿತಿಗತಿಯನ್ನೂ ಈ ಆಯಪ್‌ನಲ್ಲಿಯೇ ನೋಡಬಹುದು.

ಈ ಆಯಪ್‌ನಲ್ಲಿ ಸೇವಾ ಕೇಂದ್ರಗಳು, ಕಚೇರಿ, ಕೈಗಾರಿಕೆ, ಆಸ್ಪತ್ರೆ, ಮಾರುಕಟ್ಟೆ, ಸಭಾಂಗಣ, ಅಟೋಮೊಬೈಲ್‌ ಶೋರೂಂ, ಬಿಡಿ ಭಾಗಗಳು ಸೇರಿದಂತೆ 10 ಕೆಟಗರಿಗಳನ್ನು ನೀಡಲಾಗಿದೆ.

ಸಂಬಂಧಿಸಿದ ಕೆಟಗರಿ ಆಯ್ಕೆ ಮಾಡಿಕೊಂಡ ನಂತರ, ಸಬ್‌ ಕೆಟಗರಿಯಲ್ಲಿ ದಾಖಲೆಗಳು ಮತ್ತು ಫೋಟೊಗಳನ್ನು ಅಪ್‌ಲೋಡ್‌ ಮಾಡಬಹುದಾಗಿದೆ. ತಮ್ಮ ವಹಿವಾಟಿನ ಸ್ಥಳದ ಮೂರು ಫೋಟೊಗಳ ಜೊತೆಗೆ, ವ್ಯಾಪಾರಿಗಳು ತಮ್ಮ ಸೆಲ್ಫಿಗಳನ್ನು ಕಳಹಿಸಬೇಕು. ಆಯಪ್‌ನಲ್ಲಿರುವ ಜಿಯೊ ಟ್ಯಾಗಿಂಗ್‌ನ ಸಹಾಯದಿಂದ ಅಧಿಕಾರಿಗಳು ವಹಿವಾಟು ಕೇಂದ್ರದ ಸ್ಥಳವನ್ನು ಗುರುತಿಸಲು ಅನುಕೂಲವಾಗಲಿದೆ.

'ಈಗಾಗಲೇ ಈ ಆಯಪ್‌ಗೆ ಸಂಬಂಧಿಸಿದಂತೆ ಅಧಿಕಾರಿಗಳ ಮಟ್ಟದ ತರಬೇತಿ ಪೂರ್ಣವಾಗಿದೆ. ಇದೀಗ ವ್ಯಾಪಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಆಯಪ್‌ಗೆ ಸಂಬಂಧಿಸಿದ ತೊಂದರೆಗಳನ್ನು ಪರಿಹರಿಸಲು ಜನವರಿವರೆಗೆ ಪಾಲಿಕೆ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ' ಎಂದು ಪಾಲಿಕೆ ಪರಿಸರ ಎಂಜಿನಿಯರ್‌ ಮಧು ಮನೋಹರ್ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani