Dailyhunt Logo
  • Light mode
    Follow system
    Dark mode
    • Play Story
    • App Story
ತ್ರಿಭಾಷಾ ಸೂತ್ರ | 6ನೇ ತರಗತಿಗೂ ವಿನಾಯಿತಿ: ಸಿಬಿಎಸ್‌ಇಗೆ  ಸುಪ್ರೀಂ ನಿರ್ದೇಶನ

ತ್ರಿಭಾಷಾ ಸೂತ್ರ | 6ನೇ ತರಗತಿಗೂ ವಿನಾಯಿತಿ: ಸಿಬಿಎಸ್‌ಇಗೆ ಸುಪ್ರೀಂ ನಿರ್ದೇಶನ

ನವದೆಹಲಿ: ತ್ರಿಭಾಷಾ ನೀತಿಯಡಿ 7ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಿರುವ ವಿನಾಯಿತಿಯನ್ನು ಪ್ರಸಕ್ತ ವರ್ಷದ 6ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಿಸುವಂತೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ಸುಪ್ರೀಂ ಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ.

ಸಿಬಿಎಸ್‌ಇಯ ತ್ರಿಭಾಷಾ ನೀತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಮತ್ತುವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಕುರಿತು ಆದೇಶಿಸಿದೆ.

7,8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಿರುವ ವಿನಾಯಿತಿಯನ್ನೇ 6ನೇ ತರಗತಿ ವಿದ್ಯಾರ್ಥಿಗಳಿಗೂ ನೀಡಬೇಕು. ಮೂರನೇ ಭಾಷೆಯ ಮೌಲ್ಯಮಾಪನವನ್ನು ಶಾಲಾ ಮಟ್ಟದಲ್ಲಿಯೇ ನಡೆಸಬೇಕು ಎಂದು ಪೀಠ ಆದೇಶಿಸಿದೆ.

'ಪ್ರಸ್ತುತ 6ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ವಿನಾಯಿತಿ ನೀಡಬೇಕು ಎಂಬ ಸಲಹೆ ಬಗ್ಗೆ ಈಗಾಗಲೇ ವಿಸ್ತೃತ ಚರ್ಚೆ ನಡೆಸಲಾಗಿದೆ' ಎಂದು ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ, ಪೀಠಕ್ಕೆ ತಿಳಿಸಿದರು.ತ್ರಿಭಾಷಾ ನೀತಿಯನ್ನು 6ನೇ ತರಗತಿಗೆ ಅನ್ವಯಿಸುವುದನ್ನು 2027ನೇ ಶೈಕ್ಷಣಿಕ ವರ್ಷಕ್ಕೆ ಮುಂದೂಡಬೇಕು. ಭಾಷೆಗಳ ಕಲಿಕೆ ವಿಚಾರದಲ್ಲಿ ಸೀಮಿತ ಆಯ್ಕೆಗಳನ್ನು ನೀಡಲಾಗಿದೆ ಹಾಗೂ ಪಠ್ಯಪುಸ್ತಕಗಳ ಲಭ್ಯತೆಯೂ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣನ್ ಹೇಳಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ಪೀಠವು, ತಿಂಗಳ ಒಳಗಾಗಿ ಪ್ರತಿ ಪ್ರಮಾಣಪತ್ರ ಸಲ್ಲಿಸುವಂತೆ ಸಿಬಿಎಸ್‌ಇಗೆ ಸೂಚಿಸಿತು. ಆರು ವಾರಗಳ ಬಳಿಕ ವಿಚಾರಣೆ ಮುಂದುವರಿಸುವುದಾಗಿ ಹೇಳಿತು.

ಪ್ರಸ್ತುತ 7, 8 ಹಾಗೂ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತೇರ್ಗಡೆಯಾಗಿ 10ನೇ ತರಗತಿಗೆ ಹೋದಾಗ, ಮೂರನೇ ಭಾಷೆಗೆ ಸಂಬಂಧಿಸಿ ಬೋರ್ಡ್‌ ಪರೀಕ್ಷೆಗೆ ಹಾಜರಾಗುವ ಅಗತ್ಯ ಇಲ್ಲ ಎಂದು ಸಿಬಿಎಸ್‌ಇ ಜೂನ್‌ 29ರಂದು ಹೊರಡಿಸಿದ್ದ ಪ್ರಕಟಣೆಯಲ್ಲಿ ತಿಳಿಸಿತ್ತು. ಇದೇ ರೀತಿಯ ವಿನಾಯಿತಿಯನ್ನು 6ನೇ ತರಗತಿ ವಿದ್ಯಾರ್ಥಿಗಳಿಗೂ ನೀಡಬೇಕು ಎಂಬ ಬೇಡಿಕೆ ಇತ್ತು.

Dailyhunt
Disclaimer: This content has not been generated, created or edited by Dailyhunt. Publisher: Prajavani