Dailyhunt Logo
  • Light mode
    Follow system
    Dark mode
    • Play Story
    • App Story
ಟ್ರ್ಯಾಕ್ಟರ್ ಚಾಲಕನ ಮಗ ಈಗ ರಾಕೆಟ್ ವಿಜ್ಞಾನಿ !

ಟ್ರ್ಯಾಕ್ಟರ್ ಚಾಲಕನ ಮಗ ಈಗ ರಾಕೆಟ್ ವಿಜ್ಞಾನಿ !

ಕುಟುಂಬ ನಡೆಸಲು ಟ್ರ್ಯಾಕ್ಟರ್‌ ಚಾಲಕರಾಗಿ ಕೆಲಸ ಮಾಡುತ್ತಿದ್ದ ತಂದೆ, ಕಡುಬಡತನ, ಅವಕಾಶಗಳ ಕೊರತೆ... ಇಂತಹ ಪರಿಸ್ಥಿತಿಯನ್ನೂ ಎದುರಿಸಿ ವಿದ್ಯೆ ಕಲಿಯಬೇಕೆಂಬ ಹಂಬಲದಿಂದ 6 ಕಿ.ಮೀ ನಡೆದು ಸಾಗುತ್ತಿದ್ದ ಹುಡುಗ ಈಗ ದೇಶಕ್ಕಾಗಿ ರಾಕೆಟ್ ನಿರ್ಮಿಸುತ್ತಿದ್ದಾನೆ.

ಗ್ರಾಮೀಣ ಪ್ರದೇಶದ ಸಣ್ಣ ಕುಟುಂಬದಿಂದ ಬಂದಿರುವ ಡಾ.ಆನಂದ್ ಮೇಗಲಿಂಗಂ ಸದ್ಯ ದೇಶದ ಗಮನ ಸೆಳೆದಿದ್ದಾರೆ.

ತಮಿಳುನಾಡಿನ ಪುಟ್ಟ ಗ್ರಾಮದಲ್ಲಿ ಹುಟ್ಟಿದ ಆನಂದ್‌ 'ಸ್ಪೇಸ್ ಜೋನ್ ಇಂಡಿಯಾ' ಎನ್ನುವ ಕಂಪನಿಯನ್ನೂ ಸ್ಥಾಪಿಸಿದ್ದಾರೆ. ಈ ಕಂಪನಿ ನಿರ್ಮಿಸಲು ಆನಂದ್‌ ಅವರಿಗೆ ಬ್ಯುಸಿನೆಸ್‌ ಪಾಲುದಾರ ಎಂಬಂತೆ ಜೊತೆಯಲ್ಲಿ ನಿಂತಿದ್ದು ಇವರ ತಂದೆ. ಸದ್ಯ ಈ ಕಂಪನಿ ಭಾರತದಲ್ಲಿ ಮುಂಚೂಣಿಯಲ್ಲಿರುವ ಖಾಸಗಿ ಏರೋಸ್ಪೇಸ್ ಸಂಸ್ಥೆ ಎನಿಸಿಕೊಂಡಿದೆ.

ಕಂಪ್ಯೂಟರ್ ಎಂಜಿನಿಯರಿಂಗ್‌ಗೆ ಸೇರಿದ್ದ ಆನಂದ್, ಅದನ್ನು ಬಿಟ್ಟು ತಮ್ಮಿಷ್ಟದ ಏರೋನಾಟಿಕಲ್‌ ಎಂಜಿನಿಯರಿಂಗ್ ಪದವಿ ಸೇರಿ, ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಮಿಷನ್ RHUMI-2024

ಡಾ. ಆನಂದ್ ಅವರ ನೇತೃತ್ವದಲ್ಲಿ ಭಾರತದ ಮೊದಲ ಮೊಬೈಲ್ ಪ್ಲಾಟ್‌ಫಾರ್ಮ್ (ಚಲಿಸುವ ಟ್ರಕ್) ಮೂಲಕ ಉಡಾವಣೆ ಮಾಡಬಹುದಾದ RHUMI-1 ಮರುಬಳಕೆಯ ಹೈಬ್ರಿಡ್ ರಾಕೆಟ್ ಅನ್ನು 2024ರಲ್ಲಿ ಯಶಸ್ವಿಯಾಗಿ ಉಡಾಯಿಸಲಾಗಿದೆ.

2023 ರಲ್ಲಿ ನಡೆದ 'ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸ್ಟೂಡೆಂಟ್ಸ್ ಸ್ಯಾಟಲೈಟ್ ಲಾಂಚ್' ಮಿಷನ್ ಮೂಲಕ ದೇಶದಾದ್ಯಂತ ಸಾವಿರಾರು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ 150 ಪಿಕೋ ಉಪಗ್ರಹಗಳನ್ನು ಉಡಾವಣೆ ಮಾಡಿದ್ದರು.

ಅಲ್ಲದೆ ಇವರ ಸಂಸ್ಥೆ 'ಸ್ಪೇಸ್‌ ಸೈನ್ಸ್‌ ಆಫ್‌ ಆಲ್‌' ಅಭಿಯಾನದ ಮೂಲಕ ಜಾಗತಿಕವಾಗಿ 6 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣ ಉಪಗ್ರಹಗಳ ನಿರ್ಮಾಣದ ಕುರಿತು ಪ್ರಾಯೋಗಿಕ ತರಬೇತಿ ನೀಡಿದೆ.

ವೀಸಾ ಸಿಗದೆ ಪರದಾಡಿದ್ದ ಆನಂದ್

ವರ್ಷಗಳ ಹಿಂದೆ ಬಾಹ್ಯಾಕಾಶ ಸಂಶೋಧನೆಗಾಗಿ ಆನಂದ್‌ ಅಮೆರಿಕಕ್ಕೆ ಹೋಗಲು ಬಯಸಿದ್ದರು. ಇದಕ್ಕಾಗಿ ವೀಸಾಗೂ ಅರ್ಜಿ ಹಾಕಿದ್ದರು. ಆದರೆ ಅಮೆರಿಕ ಇವರ ವೀಸಾ ಅರ್ಜಿಯನ್ನು ತಿರಸ್ಕರಿಸಿತ್ತು.

ಆದರೆ, ಇತ್ತೀಚೆಗೆ ಅವರ ಹೈಬ್ರಿಡ್ ರಾಕೆಟ್ ತಂತ್ರಜ್ಞಾನದ ಸಾಧನೆಯನ್ನು ಗುರುತಿಸಿದ ಅಮೆರಿಕದ ಆಡಳಿತ ಇಲಾಖೆ, ವಿಶೇಷ ಅಂತರರಾಷ್ಟ್ರೀಯ ನಾಯಕತ್ವ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು. ವಿಶ್ವದಾದ್ಯಂತದ ಕೇವಲ 23 ಅತ್ಯುತ್ತಮ ಬಾಹ್ಯಾಕಾಶ ತಜ್ಞರಲ್ಲಿ ಒಬ್ಬರಾಗಿ ಇವರು ಆಯ್ಕೆಯಾಗಿದ್ದರು. ಈ ಹಿಂದೆ ವೀಸಾ ಅರ್ಜಿ ತಿರಸ್ಕರಿಸಿದ್ದ ಅಮೆರಿಕವೇ ಅವರಿಗೆ ವೀಸಾ ನೀಡಿ ಕರೆಯಿಸಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಅವರು ನಾಸಾ ವಿಜ್ಞಾನಿಗಳನ್ನು ಭೇಟಿಯಾಗಿದ್ದರು. ಬಳಿಕ ನಾಸಾ ಹಿರಿಯ ವಿಜ್ಞಾನಿಗಳು ಮತ್ತು ಡಿಫೆನ್ಸ್ ಕಮಾಂಡರ್‌ಗಳೊಂದಿಗೆ ಮರುಬಳಕೆ ರಾಕೆಟ್‌ಗಳ ಮಿಷನ್ ಪ್ಲಾನಿಂಗ್ ಕುರಿತೂ ತರಬೇತಿ ಪಡೆದಿದ್ದಾರೆ.

ಹೊಸ ಮೈಲುಗಲ್ಲಿಗೆ ಸಜ್ಜಾದ 'ಸ್ಪೇಸ್‌ ಜೋನ್ ಇಂಡಿಯಾ'

ಮಿಷನ್ ಚೆನ್ನೈನಿಂದ ಏಕಕಾಲದಲ್ಲಿ ಎರಡು ರಾಕೆಟ್‌ಗಳನ್ನು ಒಟ್ಟಿಗೆ ಉಡಾವಣೆ ಮಾಡುವ ಭಾರತದ ಮೊದಲ RHUMI ಟ್ವಿನ್ ಖಾಸಗಿ ಮಿಷನ್‌ಗಾಗಿ ಇವರ ತಂಡ ಕೆಲಸ ಮಾಡುತ್ತಿದೆ. ಈ ಸಂಸ್ಥೆಯು ಮುಂದುವರಿದ ಏರೋಸ್ಪೇಸ್ ವ್ಯವಸ್ಥೆ, ಉಪಗ್ರಹ ತಂತ್ರಜ್ಞಾನ, ಮರುಬಳಕೆ ಮಾಡಬಹುದಾದ ಉಡಾವಣಾ ವೇದಿಕೆಗಳು ಮತ್ತು ಭಾರತದ ಸ್ಥಳೀಯ ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸಲು ವಿನ್ಯಾಸಗೊಳಿಸಲಾದ ರಕ್ಷಣಾ-ಆಧಾರಿತ ನಾವೀನ್ಯತೆಗಳತ್ತಲೂ ಗಮನಹರಿಸುತ್ತಿದೆ.

'ನಮ್ಮ ಧ್ಯೇಯ ಕೇವಲ ರಾಕೆಟ್ ಉಡಾವಣೆ ಮಾಡುವುದಲ್ಲ, ಭಾರತದಲ್ಲಿ ಬಲಿಷ್ಠ, ಸುರಕ್ಷಿತ ಮತ್ತು ಜಾಗತಿಕವಾಗಿ ಗೌರವಿಸುವಂತಹ ತಂತ್ರಜ್ಞಾನಗಳನ್ನು ನಿರ್ಮಿಸುವುದು' ಎಂದು ಆನಂದ್‌ ಹೇಳಿರುವುದಾಗಿ ಪಿಟಿಐ ವರದಿ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani