Dailyhunt Logo
  • Light mode
    Follow system
    Dark mode
    • Play Story
    • App Story
ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆ ಸ್ಮರಿಸಿದ ರೈತ: ಮನೆಗೆ ಎಂ.ಬಿ.ಪಾಟೀಲ ಹೆಸರು

ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆ ಸ್ಮರಿಸಿದ ರೈತ: ಮನೆಗೆ ಎಂ.ಬಿ.ಪಾಟೀಲ ಹೆಸರು

ತಿಕೋಟಾ: ರೈತ ಕುಟುಂಬವೊಂದು ತಾವು ಕೃಷಿಯಲ್ಲಿ ಸಂಪಾದಿಸಿದ ₹1.05 ಕೋಟಿ ಮೊತ್ತದಲ್ಲಿ ವಿಜಯಪುರದ ರಾಜಕುಮಾರ್‌ ಬಡಾವಣೆಯಲ್ಲಿ ನಿರ್ಮಿಸಿದ ಸ್ವಂತ ಮನೆಗೆ 'ಸಚಿವ ಎಂ.ಬಿ. ಪಾಟೀಲ ನಿಲಯ' ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ.

ತಿಕೋಟಾ ತಾಲ್ಲೂಕಿನ‌ ಸೋಮದೇವರಹಟ್ಟಿ ಗ್ರಾಮದ ಹಿರೇಮಠ ಕುಟುಂಬದ ಸಿದ್ದಯ್ಯ, ಸಾತಯ್ಯ, ಮಲ್ಲಯ್ಯ, ಬಸಯ್ಯ ಹಾಗೂ ಚಂದ್ರವ್ವ ಎಂಬ 30ಕ್ಕೂ ಹೆಚ್ಚು ಜನ ಇರುವ ಅವಿಭಕ್ತ ಕುಟುಂಬವು ತಾವು ನಿರ್ಮಿಸಿದ ನೂತನ ಮನೆಗೆ ಸಚಿವ ಎಂ.ಬಿ.ಪಾಟೀಲರ ಹೆಸರನ್ನು ಇಡುವ ಮೂಲಕ ತಮ್ಮ ಭೂಮಿಗೆ ನೀರುಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

'ಒಂದು ಕಾಲದಲ್ಲಿ ಬರಗಾಲ ಎದುರಾಗಿ ನೀರು ಪೂರೈಕೆಯಾಗದೇ ದ್ರಾಕ್ಷಿ ಬಳ್ಳಿ ಕಡಿದು ಹಾಕಲಾಗಿತ್ತು. ಇಂದು ಅದೇ 40 ಎಕರೆಯಲ್ಲಿ ದ್ರಾಕ್ಷಿ ಬೆಳೆ ಇದ್ದು, ಸುಮಾರು 100 ಟನ್ ಒಣದ್ರಾಕ್ಷಿ ಬೆಳೆದಿದ್ದೇವೆ. ಈ ವರ್ಷ ಒಟ್ಟು ಆದಾಯ ₹ 3.5 ಕೋಟಿಯಿಂದ₹4 ಕೋಟಿವರೆಗೆ ಆದಾಯವಾಗಿದೆ. ಇದಕ್ಕೆ ಸಚಿವ ಎಂ.ಬಿ.ಪಾಟೀಲರ ನೀರಾವರಿ ಯೋಜನೆ ಕಾರಣ' ಎಂದು ರೈತ ಮಲ್ಲಯ್ಯ ಹಿರೇಮಠ ಹಾಗೂ ಸಹೋದರರು 'ಪ್ರಜಾವಾಣಿ'ಗೆ ತಿಳಿಸಿದರು.

'ಬರಗಾಲಕ್ಕೆ ತುತ್ತಾಗಿ ಹನಿ ನೀರಿಗೂ ಪರದಾಡಿದ ನಮ್ಮ‌ ಭಾಗಕ್ಕೆ ನೀರು ಹರಿಸಿದ ಸಚಿವ ಎಂ.ಬಿ. ಪಾಟೀಲರ ಕಾರ್ಯ ನಮ್ಮ‌ ಭಾಗದ ಜನರು ಎಂದು ಮರೆಯುವುದಿಲ್ಲ. ರೈತರೆಂದರೆ ಕೇವಲವಲ್ಲ. ನೀರಾವರಿಯಿಂದ ಆರ್ಥಿಕ ಆದಾಯ ಹೆಚ್ಚಳವಾಗಿದ್ದು, ನಮ್ಮ ಮಕ್ಕಳಿಗೂ ಸಹ ಉನ್ನತ ಶಿಕ್ಷಣ ನೀಡುತ್ತಿದ್ದೇವೆ' ಎಂದರು.

'ಜಲಸಂಪನ್ಮೂಲ ಸಚಿವರಾಗಿದ್ದಾಗ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದರಿಂದ ಕಾಲುವೆ ಮೂಲಕ ಹರಿದ ನೀರು ಈ ಭಾಗದ ಕೆರೆ ಕಟ್ಟೆ, ಹಳ್ಳ ಕೊಳ್ಳ ಹಾಗೂ ಬಾಂದಾರಗಳ ಮೂಲಕ‌ ನೀರು ಹರಿದಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ಬೋರ್‌ವೆಲ್‌ಗಳು ಮರುಪೂರಣಗೊಂಡವು. ಸಮರ್ಪಕ‌ ನೀರಾವರಿ ಯೋಜನೆ ಅನುಷ್ಠಾನದಿಂದ ರೈತರ ಬದುಕು ಬಂಗಾರವಾಗಿದೆ' ಎಂದು ಅವರು ಖುಷಿ ವ್ಯಕ್ತಪಡಿಸಿದರು.

ಸಾತಯ್ಯ ಹಿರೇಮಠ, ರೈತಬದುಕನ್ನೇ ಬಂಗಾರವಾಗಿಸಿ ಆರ್ಥಿಕವಾಗಿ ನಮ್ಮನ್ನು ನೀರಾವರಿ ಯೋಜನೆ ಮೂಲಕ ಸಬಲರಾಗಿ ಮಾಡಿದ್ದಕ್ಕಾಗಿ ಸಚಿವ ಎಂ.ಬಿ.ಪಾಟೀಲ ಅವರ ಹೆಸರು ನಮ್ಮ‌ ನಿಲಯಕ್ಕೆ ಇಟ್ಟಿದ್ದೇವೆ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260714-4-3136860

Dailyhunt
Disclaimer: This content has not been generated, created or edited by Dailyhunt. Publisher: Prajavani