ತುಮಕೂರು: ಶ್ರೀಗಂಧ ಅತ್ಯಂತ ಶ್ರೀಮಂತ ಬೆಳೆ, ಮಾರುಕಟ್ಟೆಯಲ್ಲಿ ಸದ್ಯ ಒಂದು ಕೆ.ಜಿ ಶ್ರೀಗಂಧದ ಮರದ ತುಂಡು ₹10 ಸಾವಿರದಿಂದ ₹12 ಸಾವಿರಕ್ಕೆ ಮಾರಾಟವಾಗುತ್ತಿದೆ. ಇಂತಹ ಮರಗಳನ್ನು ಕಳ್ಳರು ರಾತ್ರೋರಾತ್ರಿ ಕಡಿದುಕೊಂಡು ಹೋಗುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ.
ಮರ ಉಳಿಸಿಕೊಳ್ಳುವುದು ಬೆಳೆಗಾರರಿಗೆ ಸವಾಲಾಗಿದೆ. ಇಲ್ಲೊಬ್ಬ ರೈತ ಮರದ ರಕ್ಷಣೆಗೆ ಸಿಮೆಂಟ್ ಕಾಂಕ್ರೀಟ್ ಮೊರೆ ಹೋಗಿದ್ದಾರೆ.
ಕುಣಿಗಲ್ ತಾಲ್ಲೂಕು ಕೂತಾರಹಳ್ಳಿ ಗ್ರಾಮದ ಯುವ ರೈತ ವಿನೋದ್ ಗೌಡ ವಿಭಿನ್ನ ಆಲೋಚನೆ ಮೂಲಕ ಮರಗಳ ರಕ್ಷಣೆಗೆ ಮುಂದಾಗಿದ್ದಾರೆ. ಮರದ ಸುತ್ತಲೂ ಒಂದೂವರೆ ಅಡಿ ಜಾಗ ಬಿಟ್ಟು, ಎಂಟು ಅಡಿ ಎತ್ತರಕ್ಕೆ ಸಿಮೆಂಟ್ ರಿಂಗ್ ಮೂಲಕ ಕಾಂಕ್ರೀಟ್ ಮಾಡಿದ್ದಾರೆ. ಬೇರುಗಳಿಗೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಎಚ್ಚರಿಕೆಯನ್ನೂ ವಹಿಸಿದ್ದಾರೆ. ಹೀಗಾಗಿ ಮರಗಳು ಸಮೃದ್ಧವಾಗಿ ಬೆಳೆದು ನಿಂತಿವೆ. ಹೊಸ ಕ್ರಮ ಹಲವರಿಗೆ ಮಾದರಿಯಾಗಿದೆ.
ವಿನೋದ್ ತಮ್ಮ ಮನೆ ಪಕ್ಕದ ಜಮೀನಿನಲ್ಲಿ 40 ಶ್ರೀಗಂಧ ಗಿಡಗಳನ್ನು ನೆಟ್ಟಿದ್ದಾರೆ. ಇದರಲ್ಲಿ 34 ಮರಗಳಿಗೆ ಸಿಮೆಂಟ್ ಕಾಂಕ್ರೀಟ್‌ನಿಂದ ರಕ್ಷಣೆ ಕಲ್ಪಿಸಿದ್ದಾರೆ. ಒಂದು ಮರಕ್ಕೆ ₹7 ಸಾವಿರದಂತೆ ಒಟ್ಟು ₹2.38 ಲಕ್ಷ ಖರ್ಚು ಮಾಡಿದ್ದಾರೆ. ಪೈಪ್, ಸಿಮೆಂಟ್, ಕಬ್ಬಿಣ, ಕಾರ್ಮಿಕರ ಕೂಲಿ, ಇತರೆ ಪರಿಕರಕ್ಕೆ ಹಣ ವ್ಯಯಿಸಿದ್ದಾರೆ. ಈಗ ಎಂಟು ಅಡಿಗೆ ಸಿಮೆಂಟ್ ರಿಂಗ್ ಹಾಕಿದ್ದು, ಇನ್ನೂ 4 ಅಡಿ ಎತ್ತರಿಸುವ ಯೋಚನೆಯಲ್ಲಿದ್ದಾರೆ.
ಶ್ರೀಗಂಧ ಮರ ಕಾಪಾಡಲು ಮುಳ್ಳು, ತಂತಿ, ಸೋಲಾರ್, ಕಬ್ಬಿಣದ ಬೇಲಿ ಮಾಡಲಾಗುತ್ತದೆ. ಎಷ್ಟೇ ಹರಸಾಹಸ ಪಟ್ಟರೂ ಕಳ್ಳರಿಂದ ಮರ ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಕಳ್ಳರು ಮರದ ಬುಡದಿಂದ 8 ರಿಂದ 10 ಅಡಿ ತನಕ ಕತ್ತರಿಸಿಕೊಂಡು ಹೋಗುತ್ತಾರೆ. ಈ 10 ಅಡಿ ವರೆಗೆ ಸಿಮೆಂಟ್ ಮಾಡಬೇಕು ಎಂಬ ಉದ್ದೇಶದಿಂದ ವಿನೋದ್ ಈ ಕೆಲಸಕ್ಕೆ ಕೈ ಹಾಕಿದ್ದರು. ಅವರ ಪ್ರಯತ್ನ ಈಗ ಯಶಸ್ವಿಯಾಗಿದೆ.
ಪಕ್ಕದಲ್ಲಿ ಮತ್ತೊಂದು ಮರವಿದ್ದರೆ ಶ್ರೀಗಂಧ ಉತ್ತಮವಾಗಿ ಬೆಳೆಯುತ್ತದೆ. ಹತ್ತಿರದಲ್ಲಿರುವ ಮರದ ಬೇರಿನಿಂದ ಶಾಖ, ನೀರು, ಬೆಳಕು ಇತರೆ ಅಂಶಗಳನ್ನು ಶ್ರೀಗಂಧ ಹೀರಿಕೊಳ್ಳುತ್ತದೆ. ವಿನೋದ್ ಇದನ್ನು ಗಮನದಲ್ಲಿ ಇಟ್ಟುಕೊಂಡ ಶ್ರೀಗಂಧದ ಜತೆಯಲ್ಲಿ ಅಗರ್‌ವುಡ್, ಮಹಾಗನಿ, ಬಿಲ್ವಾರ, ಬೇವು, ಹಲಸಿನ ಮರಗಳನ್ನು ನೆಟ್ಟಿದ್ದಾರೆ. ಇದು ಮರ ಬೆಳವಣಿಗೆಗೆ ಸಹಕಾರಿಯಾಗಿದೆ.
'ಶ್ರೀಗಂಧ ಸ್ವಂತ ಬಲದಿಂದ ಬೆಳೆಯುವುದಿಲ್ಲ. ಅದಕ್ಕೊಬ್ಬ ಸ್ನೇಹಿತ ಬೇಕು. ಹೀಗಾಗಿ ಹಲವು ಬಗೆಯ ಮರಗಳನ್ನು ತೋಟದಲ್ಲಿ ಹಾಕಿದ್ದೇವೆ. ಶ್ರೀಗಂಧ ಮುಖ್ಯ ಬೆಳೆಯಾಗಿದೆ. ಗಿಡ ನೆಟ್ಟ 6 ವರ್ಷಗಳ ನಂತರ ರಕ್ಷಣೆ ಒದಗಿಸಬೇಕು. ನಮ್ಮ ಸಂಬಂಧಿಕರು ಈ ಮಾದರಿ ಅಳವಡಿಸಿದ್ದರು. ಅದೇ ಕ್ರಮವನ್ನು ನಮ್ಮ ತೋಟದಲ್ಲಿ ಅನುಸರಿಸಿದೆ' ಎನ್ನುತ್ತಾರೆ ವಿನೋದ್.
ಕಾಡು ಕೃಷಿಯ ಪ್ರೀತಿ
ಕಾಡು ಕೃಷಿ ಬಗ್ಗೆ ಹೆಚ್ಚಿನ ಒಲವು ಹೊಂದಿರುವ ವಿನೋದ್ ಮಳೆಯಾಶ್ರಿತ, ಸ್ವಾಭಾವಿಕ ಬೆಳೆಯುವ ಕಾಡು ಜಾತಿಯ ಮರಗಳನ್ನು ತೋಟದಲ್ಲಿ ಹಾಕಿದ್ದಾರೆ. ಇದರಿಂದ ಇಡೀ ತೋಟ ಹಸಿರು ಹೊದ್ದು ಮಲಗಿದಂತಿದೆ. ಅಡಿಕೆ, ತೆಂಗು, ಹಲಸು, ನಿಂಬೆ, ನೇರಳೆ ಗಿಡಗಳಿವೆ.
'ಪ್ರಕೃತಿ ನಮಗೆ ಬೇಕಾದ ಎಲ್ಲವನ್ನೂ ಕೊಟ್ಟಿದ್ದು, ನಾವು ಏನು ವಾಪಸ್ ನೀಡುತ್ತಿದ್ದೇವೆ ಎಂಬುವುದನ್ನು ಆಲೋಚಿಸಬೇಕು. ತೋಟದಲ್ಲಿ ಯಾವುದೇ ರಾಸಾಯನಿಕ ಬಳಸುವುದಿಲ್ಲ. ಸಾವಯವ ವಿಧಾನ ಅಳವಡಿಸಿಕೊಳ್ಳಲಾಗಿದೆ. ಮುಂದಿನ ಭವಿಷ್ಯ ದೃಷ್ಟಿಯಲ್ಲಿ ಇಟ್ಟುಕೊಂಡು ಬೇಸಾಯದಲ್ಲಿ ತೊಡಗಿಸಿಕೊಂಡಿದ್ದೇನೆ' ಎಂದು ಪ್ರತಿಕ್ರಿಯಿಸಿದರು ವಿನೋದ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260710-17-11482303

