Dailyhunt Logo
  • Light mode
    Follow system
    Dark mode
    • Play Story
    • App Story
ತುಂಗಭದ್ರಾ ಜಲಾಶಯ ಸಮಸ್ಯೆ: ವರದಿ ಸಲ್ಲಿಸಲು ಉನ್ನತ ಸಮಿತಿಯಿಂದ ಸೂಚನೆ

ತುಂಗಭದ್ರಾ ಜಲಾಶಯ ಸಮಸ್ಯೆ: ವರದಿ ಸಲ್ಲಿಸಲು ಉನ್ನತ ಸಮಿತಿಯಿಂದ ಸೂಚನೆ

ಕೊಪ್ಪಳ: ತುಂಗಭದ್ರಾ ಜಲಾಶಯದ ನೂತನ ಕ್ರೆಸ್ಟ್‌ಗೇಟ್‌ಗಳ ಲೋಕಾರ್ಪಣೆ ಬಳಿಕ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ನಡುವಿನ ಮಾತುಕತೆ ಆರಂಭವಾಗಿದ್ದು, ಇದಕ್ಕಾಗಿ ಉನ್ನತ ಸಮಿತಿ ರಚಿಸಲಾಗಿದೆ.

ಈ ಸಮಿತಿಯ ಮೊದಲ ಸಭೆ ಸೋಮವಾರ ನವದೆಹಲಿಯಲ್ಲಿ ನಡೆದಿದ್ದು, ಮುಂದಿನ 15 ದಿನಗಳಲ್ಲಿ ತುಂಗಭದ್ರಾ ಜಲಾನಯನ ಪ್ರದೇಶದ ಸಮಸ್ಯೆಗಳ ಕುರಿತ ವರದಿ ನೀಡುವಂತೆ ಸಮಿತಿಯ ಅಧ್ಯಕ್ಷರು ಮೂರೂ ರಾಜ್ಯಗಳ ಪ್ರತಿನಿಧಿಗಳಿಗೆ ಸೂಚಿಸಿದ್ದಾರೆ.

ಕ್ರೆಸ್ಟ್‌ ಗೇಟ್‌ಗಳು ಲೋಕಾರ್ಪಣೆಯಾದ ಒಂದು ತಿಂಗಳಲ್ಲಿ ಸಭೆ ನಡೆಸಿದ್ದು ಹತ್ತಾರು ವರ್ಷಗಳಿಂದ ತುಂಗಭದ್ರಾ ಜಲಾಶಯಕ್ಕೆ ಬಾಧಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುವ ಆಶಾಭಾವ ಮೂಡಿದೆ. ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಪ್ರತಿನಿಧಿಗಳು ವರ್ಚುವಲ್‌ ಮೂಲಕ ಸಭೆಯಲ್ಲಿ ಪಾಲ್ಗೊಂಡರೆ ಕರ್ನಾಟಕ ಮತ್ತು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ನೇರವಾಗಿ ದೆಹಲಿಗೆ ತೆರಳಿ ಭಾಗವಹಿಸಿದ್ದರು.

ತುಂಗಭದ್ರಾ ಜಲಾನಯನ ಪ್ರದೇಶದ ಸಮಸ್ಯೆಗಳ ಕುರಿತು ಚರ್ಚಿಸಲು ಇರುವ ಉನ್ನತ ಸಮಿತಿಯ ಸದಸ್ಯರಾದ ಕರ್ನಾಟಕದ ಬಿ.ಎಸ್‌. ಶಿವಕುಮಾರ್‌, ಆಂಧ್ರದ ಕೆ. ನರಸಿಂಹಮೂರ್ತಿ, ತೆಲಂಗಾಣದ ರಮೇಶ ಬಾಬು, ಸಿಡಬ್ಲ್ಯುಸಿ ಮುಖ್ಯ ಎಂಜಿನಿಯರ್‌ಗಳಾದ ಆಶಿಶ್‌ ಬ್ಯಾನರ್ಜಿ, ಸಂಜಯ್‌ ಗಂಗಾವರ, ಓಂಪ್ರಕಾಶ ಗುಪ್ತಾ, ಸರಬ್ಜಿತ್‌ಸಿಂಗ್‌ ಬಕ್ಷಿ ಹಾಗೂ ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ (ಪ್ರಭಾರ) ಅಸ್ಮಾ ಖಾತೂನ್‌ ವಿಶೇಷ ಆಹ್ವಾನಿತರಾಗಿ ಸಭೆಯಲ್ಲಿ ಭಾಗವಹಿಸಿದ್ದರು.

ಮೊದಲ ಸಭೆಯಲ್ಲಿ ಮೂರು ಪ್ರಮುಖ ಕಾರ್ಯಸೂಚಿಯ ವಿಷಯಗಳನ್ನು ಚರ್ಚಿಸಲಾಗಿದೆ ಎಂದು ಗೊತ್ತಾಗಿದೆ. ತುಂಗಭದ್ರಾದಲ್ಲಿ ತುಂಬಿರುವ ಹೂಳು ತೆರವು, ಸಮತೋಲನ ಜಲಾಶಯ ಮತ್ತು ರಾಜೊಳ್ಳಿಬಂಡಾ ತಿರುವ ಯೋಜನೆಯಂಥ ಆಧುನೀಕರಣ ವಿಷಯಗಳನ್ನು ಕುರಿತು ಚರ್ಚೆಯಾಗಿದೆ.

ಜಲಾಶಯದ ವ್ಯಾಪ್ತಿಯ ರಾಜ್ಯಗಳಲ್ಲಿರುವ ಸಮಸ್ಯೆಗಳು, ಪರಿಹಾರದ ಕ್ರಮಗಳೇನು, ಇವುಗಳಿಗೆ ಮೂರೂ ರಾಜ್ಯಗಳ ನಿಲುವು ಏನು ಎನ್ನುವುದರ ಬಗ್ಗೆಯೂ ಲಿಖಿತವಾಗಿ ಮಾಹಿತಿ ಒದಗಿಸುವಂತೆ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣಗಳ ಪ್ರತಿನಿಧಿಗಳಿಗೆ ಸೂಚಿಸಲಾಗಿದೆ. ಕ್ರೆಸ್ಟ್‌ಗೇಟ್‌ಗಳ ಲೋಕಾರ್ಪಣೆ ನಡೆದ ದಿನದಂದು ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಜಲಶಕ್ತಿ ಖಾತೆ ಸಚಿವ ಸಿ.ಆರ್. ಪಾಟೀಲ್ ಸಮ್ಮುಖದಲ್ಲಿ ಈ ಕುರಿತು ಗೌಪ್ಯ ಸಭೆ ನಡೆಸಿದ್ದರು.

ತುಂಗಭದ್ರಾ ಜಲಾಶಯದಲ್ಲಿ ಕಾಡುತ್ತಿರುವ ಹೂಳಿನ ಸಮಸ್ಯೆ, ಪರ್ಯಾಯ ಯೋಜನೆಗಳ ಬಗ್ಗೆ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚಿಸಿದ್ದು ಮೂರೂ ರಾಜ್ಯಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯಯೋಜನೆ ರೂಪಿಸುವುದಾಗಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಅದರ ಮೊದಲ ಹೆಜ್ಜೆಯಾಗಿ ಈಗ ನಡೆದಿರುವ ಸಭೆ ಹೊಸ ಆಶಾಭಾವ ಹುಟ್ಟುಹಾಕಿದೆ.

ಹೂಳು ತೆಗೆಯಲು ಒತ್ತು ನೀಡಿ; ಆಂಧ್ರ ಮನವಿ?

ಕೊಪ್ಪಳ: ಜಲಾಶಯದಲ್ಲಿ ತುಂಬಿರುವ ಹೂಳು ತೆಗೆಯಬೇಕೊ ಅಥವಾ ಪರ್ಯಾಯ ಮಾರ್ಗಗಳ ಬಗ್ಗೆ ಯೋಜನೆ ರೂಪಿಸಬೇಕು ಎನ್ನುವುದರ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಗೊತ್ತಾಗಿದೆ.

ಇದರಲ್ಲಿ ತನ್ನ ವಾದವನ್ನು ಸ್ಪಷ್ಟವಾಗಿ ಮಂಡಿಸಿರುವ ಆಂಧ್ರ ತುಂಗಭದ್ರಾದಿಂದ ಹೂಳು ತೆಗೆಯುವ ಸಾಧ್ಯತೆಗಳ ಕುರಿತು ತಜ್ಞರು ಅಧ್ಯಯನ ನಡೆಸಬೇಕೆಂದು ವಿನಂತಿಸಿದೆ. ನಂತರವೇ ಸಮತೋಲನ ಜಲಾಶಯದ ಅಗತ್ಯವಿದೆಯೇ ಎಂಬುದರ ಕುರಿತು ಚರ್ಚೆ ನಡೆಸಬೇಕು. ರಾಜೊಳ್ಳಿಬಂಡಾ ತಿರುವು ಯೋಜನೆಯ ಆಧುನೀಕರಣಕ್ಕೆ ಆಕ್ಷೇಪವಿಲ್ಲ, ಆದರೆ, ಎತ್ತರ ಹೆಚ್ಚಳಕ್ಕೆ ಒಪ್ಪುವುದಿಲ್ಲ ಎಂದು ತನ್ನ ನಿಲುವು ಸ್ಪಷ್ಟಪಡಿಸಿದೆ.

ಜಲಾಶಯದ ಪೂರ್ಣನೀರಿನ ಸಂಗ್ರಹಣ ಸಾಮರ್ಥ್ಯ ಮೂಲದಲ್ಲಿ 132.47 ಟಿಎಂಸಿ ಅಡಿಯಿದ್ದರೂ 2016ರಲ್ಲಿ ನಡೆದ ಸ್ಥಳಾಕೃತಿ ಸಮೀಕ್ಷೆಯ ಪ್ರಕಾರ 107.788 ಟಿಎಂಸಿ ಅಡಿ ಎಂಬುದು ವರದಿಯಿಂದ ಗೊತ್ತಾಗಿದೆ. ವರ್ಷದಿಂದ ವರ್ಷಕ್ಕೆ ಜಲಾಶಯದಲ್ಲಿ ಹೂಳು ತುಂಬಿಕೊಳ್ಳುತ್ತಲೇ ಇರುವುದರಿಂದ ಈಗ ಹೂಳಿನ ಪ್ರಮಾಣ ಮತ್ತೆ ಹೆಚ್ಚಳವಾಗಿದೆ.

ನೀರಿನ ಸಂಗ್ರಹ ಪ್ರಮಾಣ ಹೆಚ್ಚಿಸುವುದರಿಂದ ಒಂದು ಟಿಎಂಸಿ ಅಡಿಗೆ ₹100 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ಆರ್ಥಿಕ ಹೊರೆಯಾದರೂ ಹೂಳು ತೆಗೆಯಲು ಇರುವ ಸುಲಭ ಮಾರ್ಗಗಳನ್ನು ಕಂಡುಕೊಳ್ಳಬೇಕು ಎನ್ನುವ ಬಗ್ಗೆ ಚರ್ಚೆಯಾಗಿದೆ ಎಂದು ಆಂಧ್ರದ ಮಾಧ್ಯಮಗಳು ವರದಿ ಮಾಡಿವೆ.

ತುಂಗಭದ್ರಾ ಜಲಾನಯನ ಪ್ರದೇಶದ ಸಮಸ್ಯೆಗಳ ಕುರಿತ 15 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. ನಿರ್ದೇಶನಕ್ಕೆ ತಕ್ಕಂತೆ ವರದಿ ಸಿದ್ಧಪಡಿಸುವುದಾಗಿ ರಾಜ್ಯಗಳು ಹೇಳಿವೆ ಆಸ್ಮಾ ಖಾತೂನ್‌, ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ (ಪ್ರಭಾರ)

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260729-32-1797958035

Dailyhunt
Disclaimer: This content has not been generated, created or edited by Dailyhunt. Publisher: Prajavani