Dailyhunt Logo
  • Light mode
    Follow system
    Dark mode
    • Play Story
    • App Story
ಉದ್ಯೋಗ: ಅರ್ಹತೆಯೊಂದಿಗೆ ಸಾಮರ್ಥ್ಯವೂ ಬೇಕು

ಉದ್ಯೋಗ: ಅರ್ಹತೆಯೊಂದಿಗೆ ಸಾಮರ್ಥ್ಯವೂ ಬೇಕು

ಉದ್ಯೋಗ ಮಾರುಕಟ್ಟೆಯಲ್ಲಿ ಹೊಸಬರನ್ನು ಕೆಲಸಕ್ಕೆ ಅರ್ಹನೆಂದು ಪರಿಗಣಿಸುವ ಮಾನದಂಡ ಇಂದು ಬದಲಾಗಿದೆ. ಐದು ವರ್ಷಗಳ ಹಿಂದೆ ಕೆಲಸ ನೀಡಲು ಇದ್ದ ಅರ್ಹತೆ, ಕೌಶಲ ಈಗ ಸಾಕಾಗುವುದಿಲ್ಲ. ಕಾಲೇಜು ಪಠ್ಯಕ್ರಮಗಳು ಅಪ್‌ಡೇಟ್ ಆಗುವುದಕ್ಕಿಂತಲೂ ವೇಗವಾಗಿ ಕೆಲಸ ಗಿಟ್ಟಿಸಿಕೊಳ್ಳಲು ಇರುವ ಕನಿಷ್ಠ ಮಾನದಂಡಗಳು ಬದಲಾಗುತ್ತಿವೆ.

ಪ್ರತಿ ವರ್ಷ ಅಂತಿಮ ವರ್ಷದ ಸಾವಿರಾರು ಕಾಲೇಜು ವಿದ್ಯಾರ್ಥಿಗಳು ಕೆಲವು ನಿರ್ದಿಷ್ಟ ಅರ್ಹತೆಗಳನ್ನು ಪೂರೈಸಿದರೆ ಉದ್ಯೋಗ ಸಿಗುವುದು ಖಚಿತ ಎಂಬ ಬಲವಾದ ನಂಬಿಕೆಯೊಂದಿಗೆ ಹೊರಬರುತ್ತಿದ್ದಾರೆ. ಉತ್ತಮ ಜಿಪಿಎ, ಒಂದೆರಡು ಇಂಟರ್ನ್‌ಶಿಪ್‌ಗಳು ಹಾಗೂ ಒಂದೋ ಎರಡೋ ಪ್ರಮಾಣಪತ್ರಗಳು ಸಾಕು ಎಂಬುದು ಅವರ ಲೆಕ್ಕಾಚಾರ. ದೀರ್ಘಕಾಲದವರೆಗೆ ಈ ಸೂತ್ರವು ತಕ್ಕಮಟ್ಟಿಗೆ ಯಶಸ್ವಿಯಾಗಿಯೇ ಕೆಲಸ ಮಾಡಿದೆ. ಆದರೆ ಇನ್ನು ಮುಂದೆ ಈ ಸೂತ್ರ ಅದೇ ರೀತಿಯಾಗಿ ಕೆಲಸ ಮಾಡುವುದಿಲ್ಲ ಎಂಬುದು ಕಟುವಾಸ್ತವ.

ಇಂದಿನ ಹೊಸ ಪದವೀಧರರು ಪ್ರವೇಶಿಸುತ್ತಿರುವ ಉದ್ಯೋಗ ಮಾರುಕಟ್ಟೆಯು ಸದ್ದಿಲ್ಲದೆ, ಆಮೂಲಾಗ್ರವಾಗಿ ಬದಲಾಗಿದೆ. ಕಂಪನಿಗಳು ಕಡಿಮೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ ಎಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ಅವು ಸಂಪೂರ್ಣವಾಗಿ ವಿಭಿನ್ನ ರೀತಿಯ ವ್ಯಕ್ತಿಗಳನ್ನು ಹುಡುಕುತ್ತಿರುವುದೇ ಇದಕ್ಕೆ ಕಾರಣ. ಐದು ವರ್ಷಗಳ ಹಿಂದೆ ಅಭ್ಯರ್ಥಿಯೊಬ್ಬರನ್ನು ಉದ್ಯೋಗಕ್ಕೆ ಅರ್ಹರನ್ನಾಗಿಸುತ್ತಿದ್ದ ಕೌಶಲಗಳನ್ನು ಇಂದು ಕೇವಲ ಕನಿಷ್ಠ ಮಾನದಂಡವೆಂದು ಪರಿಗಣಿಸಲಾಗುತ್ತಿದೆ. ಅಷ್ಟೇ ಅಲ್ಲ, ಬಹುತೇಕ ಕಾಲೇಜು ಪಠ್ಯಕ್ರಮಗಳು ಅಪ್‌ಡೇಟ್ ಆಗುವುದಕ್ಕಿಂತಲೂ ವೇಗವಾಗಿ ಆ ಕನಿಷ್ಠ ಮಾನದಂಡಗಳು ಬದಲಾಗುತ್ತಿವೆ.

ಕೆಲವು ವರ್ಷಗಳ ಹಿಂದೆ, ಎಐ ಎಂಬುದು ಮನುಷ್ಯರು ವೇಗವಾಗಿ ಕೆಲಸ ಮಾಡಲು ನೆರವಾಗುತ್ತಿದ್ದ ಕೇವಲ ಒಂದು ಸಾಧನವಾಗಿತ್ತು. ಆಗಲೂ ಇಡೀ ಕಾರ್ಯವಿಧಾನದ ನಿಯಂತ್ರಣ ಮನುಷ್ಯನ ಕೈಯಲ್ಲೇ ಇರುತ್ತಿತ್ತು. ಆದರೆ ಈಗ ಆ ಮಾದರಿಯೇ ಪ್ರಮುಖವಾಗಿ ಉಳಿದಿಲ್ಲ. ಇಂದು ಮನುಷ್ಯನ ಕನಿಷ್ಠ ಮಾರ್ಗದರ್ಶನದೊಂದಿಗೆ ಸಂಕೀರ್ಣ ಕಾರ್ಯವಿಧಾನಗಳನ್ನು ಯೋಜಿಸುವ, ನಿರ್ವಹಿಸುವ ಮತ್ತು ಸಂದರ್ಭಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವ ಏಜೆಂಟಿಕ್ ಎಐ ವ್ಯವಸ್ಥೆಗಳು ಕಾರ್ಯಾಚರಣೆ, ಹಣಕಾಸು, ಮಾರ್ಕೆಟಿಂಗ್ ಹಾಗೂ ಸಂಶೋಧನಾ ಕ್ಷೇತ್ರಗಳನ್ನು ಪ್ರವೇಶಿಸುತ್ತಿವೆ. ಅವು ಕೇವಲ ಸಹಾಯ ಮಾಡುವುದಿಲ್ಲ, ಸ್ವತಃ ಕಾರ್ಯಾಚರಣೆಗೂ ಇಳಿಯುತ್ತವೆ.

ಅಂತಹ ವ್ಯವಸ್ಥೆಯಲ್ಲಿ ಮನುಷ್ಯನ ಪಾತ್ರವೇನು ಎಂದರೆ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುವುದು, ತಪ್ಪುಗಳು ಗಂಭೀರ ಸ್ವರೂಪ ಪಡೆಯುವ ಮುನ್ನವೇ ಅವುಗಳನ್ನು ಪತ್ತೆಹಚ್ಚುವುದು ಹಾಗೂ ವ್ಯವಸ್ಥೆಗೆ ಸುಲಭವಾಗಿ ನಿಭಾಯಿಸಲಾಗದ ಪರಿಸ್ಥಿತಿ ಎದುರಾದಾಗ ತಮ್ಮ ವಿವೇಚನೆಯನ್ನು ಬಳಸಿ ಮಧ್ಯ ಪ್ರವೇಶಿಸುವುದು. ಆದರೆ ಹೆಚ್ಚಿನ ಕಾಲೇಜು ಕೋರ್ಸ್‌ಗಳು ಇಂತಹ ಜವಾಬ್ದಾರಿಯನ್ನು ಹೊರಲು ವಿದ್ಯಾರ್ಥಿಗಳನ್ನು ಇನ್ನೂ ಸಜ್ಜುಗೊಳಿಸುತ್ತಿಲ್ಲ.

ಬಹಿರಂಗವಾಗಿ ಚರ್ಚಿಸದ ನೇಮಕಾತಿ ಬಿಕ್ಕಟ್ಟು

ಭಾರತವು ಪ್ರತಿ ವರ್ಷ 15 ಲಕ್ಷಕ್ಕೂ ಹೆಚ್ಚು ಎಂಜಿನಿಯರಿಂಗ್ ಪದವೀಧರರನ್ನು ಹೊರತರುತ್ತಿದೆ. ಆದರೆ ಅವರ ಸಂದರ್ಶನ ನಡೆಸುವ ಕಂಪನಿಗಳ ಪ್ರಕಾರ, ಅವರಲ್ಲಿ ಅರ್ಧಕ್ಕಿಂತ ಕಡಿಮೆ ಮಂದಿ ಮಾತ್ರ ನಿಜವಾದ ಉದ್ಯೋಗಕ್ಕೆ ಅರ್ಹರಾಗಿದ್ದಾರೆ. ಎಐ ತಂತ್ರಜ್ಞಾನವು ಈ ಅಂತರವನ್ನು ಇನ್ನಷ್ಟು ತೀವ್ರ ಹಾಗೂ ಗಂಭೀರ ಬಿಕ್ಕಟ್ಟನ್ನಾಗಿ ಪರಿವರ್ತಿಸಿದೆ.

ಪ್ರತಿಯೊಬ್ಬ ಹೊಸ ಪದವೀಧರನ ರೆಸ್ಯೂಮ್ ಎಐ ನೆರವಿನಿಂದಲೇ ತಯಾರಾಗುತ್ತಿರುವಾಗ ಮತ್ತು ಪ್ರಾಜೆಕ್ಟ್ ಪೋರ್ಟ್‌ಫೋಲಿಯೊಗಳು ಎಐ ಪರಿಕರಗಳ ಮೂಲಕವೇ ನಿರ್ಮಾಣವಾಗುತ್ತಿರುವಾಗ, ಸಾಮರ್ಥ್ಯವನ್ನು ಅಳೆಯುವ ಹಳೆಯ ಮಾನದಂಡಗಳು ನಿಷ್ಪ್ರಯೋಜಕವಾಗಿವೆ. ನೇಮಕಾತಿ ವ್ಯವಸ್ಥಾಪಕರು ಈಗ ಕೇಳುತ್ತಿರುವ ಪ್ರಶ್ನೆ ಸಂಪೂರ್ಣವಾಗಿ ಬದಲಾಗಿದೆ. ಅಭ್ಯರ್ಥಿಯು ಎಐ ಬಳಸಲು ಸಾಧ್ಯವೇ ಎಂಬುದು ಈಗಿನ ಪ್ರಶ್ನೆಯಲ್ಲ, ಅದರ ಬಳಕೆ ಸಹಜ ಎಂದೇ ಭಾವಿಸಲಾಗಿದೆ. ಅಭ್ಯರ್ಥಿಯು ಅದನ್ನು ನಿಯಂತ್ರಿಸಬಲ್ಲನೇ ಎಂಬುದೇ ಇಂದಿನ ಮುಖ್ಯ ಪ್ರಶ್ನೆ. ಎಐ ಸೃಷ್ಟಿಸಿದ್ದನ್ನು ಮೌಲ್ಯಮಾಪನ ಮಾಡುವುದು, ಅದು ಎಲ್ಲಿ ತಪ್ಪಾಗಿದೆ ಎಂದು ಗುರುತಿಸುವುದು ಮತ್ತು ಎಐ ನೀಡಿದ ಫಲಿತಾಂಶದ ಮೇಲೆ ಕೇವಲ ತನ್ನ ಹೆಸರನ್ನು ಹಾಕಿ ಮುಂದಕ್ಕೆ ಕಳುಹಿಸುವ ಬದಲು, ನಿರ್ಧಾರದ ಸಂಪೂರ್ಣ ಜವಾಬ್ದಾರಿಯನ್ನು ಸ್ವತಃ ತಾನೇ ವಹಿಸಿಕೊಳ್ಳಬಲ್ಲನೇ ಎಂಬುದೇ ಈಗಿನ ಅಳತೆಗೋಲು.

ಎಐ ವ್ಯವಸ್ಥೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುದಷ್ಟೇ ಅಲ್ಲ, ಅವು ಹೇಗೆ ವಿಫಲವಾಗುತ್ತವೆ ಎಂಬುದನ್ನೂ ತಿಳಿಯುವುದು ಮುಖ್ಯ. ಸಂಸ್ಥೆಗಳಿಗೆ ಮುಖ್ಯವಾಗಿ ಬೇಕಿರುವುದು ಸದಾ ಪ್ರಶ್ನಿಸುವ ಮನೋಭಾವ. ಈ ವ್ಯವಸ್ಥೆ ಎಲ್ಲಿ ಕೈಕೊಡುತ್ತದೆ? ಇದು ಯಾವಾಗ ವಾಸ್ತವವಲ್ಲದ ತಪ್ಪು ಮಾಹಿತಿಗಳನ್ನು ಸೃಷ್ಟಿಸುತ್ತದೆ? ತನ್ನ ಉತ್ತರ ಸಂಪೂರ್ಣ ನಿಖರವಾಗಿಲ್ಲದಿದ್ದರೂ ಇದು ಅತಿಯಾದ ಆತ್ಮವಿಶ್ವಾಸವನ್ನು ಯಾವಾಗ ತೋರಿಸುತ್ತದೆ? ತಪ್ಪುಗಳು ಭಾರಿ ನಷ್ಟಕ್ಕೆ ಯಾವಾಗ ಕಾರಣವಾಗುತ್ತವೆ? ಎಂಬುದನ್ನು ಕಾರ್ಪೊರೇಟ್ ಜಗತ್ತಿಗೆ ಕಾಲಿಡುವ ಮುನ್ನವೇ ತಿಳಿದುಕೊಳ್ಳಬೇಕು. ಇಂಥ ಸೂಕ್ಷ್ಮ ವಿಮರ್ಶಾತ್ಮಕ ದೃಷ್ಟಿಯನ್ನು ಬೆಳೆಸಿಕೊಳ್ಳುವುದು ನೀವು ಮಾಡಬಹುದಾದ ಅತ್ಯಂತ ಮೌಲ್ಯಯುತ ಕಾರ್ಯವಾಗಿದೆ.

ಗೊಂದಲಮಯ ಸಮಸ್ಯೆಗಳನ್ನು ವ್ಯವಸ್ಥಿತ ರೂಪಕ್ಕೆ ತರುವುದು ಅಗತ್ಯ. ಸಮಸ್ಯೆಗಳನ್ನು ಹಂತಹಂತವಾಗಿ ವಿಂಗಡಿಸಿ ಅರ್ಥೈಸಿಕೊಳ್ಳುವಲ್ಲಿ ಹೊಸಬರು ಸದಾ ಹೆಣಗಾಡುತ್ತಾರೆ. ಎಐ ವ್ಯವಸ್ಥೆಗಳು ಎಷ್ಟು ಶಕ್ತಿಶಾಲಿಯೋ ಅಷ್ಟೇ ಕಠಿಣವಾದವು. ಅವುಗಳಿಗೆ ಅಸ್ಪಷ್ಟ ವಿವರ ನೀಡಿದರೆ, ಅವು ಅಷ್ಟೇ ಆತ್ಮವಿಶ್ವಾಸದಿಂದ ತಪ್ಪು ಫಲಿತಾಂಶವನ್ನು ನೀಡುತ್ತವೆ. ನೈಜ ಜಗತ್ತಿನ ಜಟಿಲ ಸಮಸ್ಯೆಯನ್ನು ಸರಳ ಹಾಗೂ ಕಾರ್ಯಸಾಧ್ಯ ಹಂತಗಳಾಗಿ ವಿಭಜಿಸುವ ಸಾಮರ್ಥ್ಯ ಇಂದು ಅಪರೂಪವಾಗುತ್ತಿದೆ ಮತ್ತು ಅದಕ್ಕಾಗಿಯೇ ಮೌಲ್ಯವೂ ಹೆಚ್ಚುತ್ತಿದೆ.

ವಿಮರ್ಶಾತ್ಮಕ ದೃಷ್ಟಿಯಿಂದ ಡೇಟಾವನ್ನು ವಿಶ್ಲೇಷಿಸಬೇಕು. ಎಐ ವ್ಯವಸ್ಥೆಯ ವಿಶ್ವಾಸಾರ್ಹತೆಯು ಅದು ಬಳಸುವ ಡೇಟಾವನ್ನು ಮಾತ್ರ ಅವಲಂಬಿಸಿರುತ್ತದೆ. ನೀವು ಹೀಗೆ ಪ್ರಶ್ನಿಸಲು ಶಕ್ತರಾಗಿರಬೇಕು. ಈ ಡೇಟಾ ಎಲ್ಲಿಂದ ಬಂತು? ಇದರಲ್ಲಿ ಏನು ಬಿಟ್ಟುಹೋಗಿರಬಹುದು? ಮತ್ತು ಏನನ್ನು ಸೇರಿಸಬೇಕೆಂದು ನಿರ್ಧರಿಸಿದವರು ಯಾರು?... ಹೀಗೆ ಆರಂಭದಲ್ಲೇ ಮೈಗೂಡಿಸಿಕೊಳ್ಳುವ ಈ ಒಳನೋಟವು ನಿಮ್ಮ ವೃತ್ತಿಜೀವನದ ಪ್ರತಿಯೊಂದು ಹಂತದಲ್ಲೂ ನೆರವಾಗುತ್ತದೆ. v

261102-51-1214689306

Dailyhunt
Disclaimer: This content has not been generated, created or edited by Dailyhunt. Publisher: Prajavani