ಕೊಟ್ಟೂರು (ವಿಜಯನಗರ ಜಿಲ್ಲೆ): ತಾಲ್ಲೂಕಿನ ಕನ್ನನಾಯಕನಕಟ್ಟೆ ಗ್ರಾಮದ ಬಿ.ಬಿಂದು (24) ಎಂಬುವರು ಉಗಾಂಡಾದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮೃತದೇಹವನ್ನು ಭಾರತಕ್ಕೆ ತರುವುದಕ್ಕೆ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೆರವಾಗಿದ್ದಾರೆ.
'ಮಹಿಳೆಯ ಸಾವು ಹೇಗೆ ಸಂಭವಿಸಿದೆ ಎಂಬ ಮಾಹಿತಿ ಇಲ್ಲ. ಮೃತದೇಹವನ್ನು ಇಲ್ಲಿಗೆ ತಂದ ಬಳಿಕ ಪ್ರಕರಣ ದಾಖಲಿಸಬೇಕಿದೆ. ಜರ್ಮನಿಯಲ್ಲಿ ಧರ್ಮ ವಚನ ಪ್ರಸಾರ ಯಾತ್ರೆಯಲ್ಲಿರುವ ತರಳಬಾಳು ಶ್ರೀಗಳು ರಾಯಭಾರ ಕಚೇರಿಗಳನ್ನು ಸಂಪರ್ಕಿಸಿ ಮೃತದೇಹವನ್ನು ಕರ್ನಾಟಕಕ್ಕೆ ತರಿಸುವಲ್ಲಿ ನೆರವಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಮೃತದೇಹ ಇಲ್ಲಿಗೆ ಗುರುವಾರ ತಲುಪುವ ನಿರೀಕ್ಷೆ ಇದೆ' ಎಂದು ಕೊಟ್ಟೂರು ಠಾಣೆ ಪಿಎಸ್‌ಐ ಗೀತಾಂಜಲಿ ಶಿಂಧೆ 'ಪ್ರಜಾವಾಣಿ'ಗೆ ತಿಳಿಸಿದರು.
ಈ ಮಧ್ಯೆ, ತರಳಬಾಳು ಮಠ ಪ್ರಕಟಣೆ ಪ್ರಕಾರ, ಬಿಂದು ಅವರ ಪತಿ ಚಂದ್ರಶೇಖರ ಗುಟ್ಟ ಅವರ ಪಾಸ್‌ಪೋರ್ಟ್ ಉಗಾಂಡಾ ಪೊಲೀಸರ ವಶದಲ್ಲಿದೆ. ಮೃತದೇಹ ಉಗಾಂಡಾದ ಎಂಟೆಬ್ಬೆ ನಗರದಿಂದ ದುಬೈ ಮೂಲಕ ಬೆಂಗಳೂರಿಗೆ ಗುರುವಾರ ಬೆಳಿಗ್ಗೆ ತಲುಪಲಿದೆ. ಅಂತ್ಯಕ್ರಿಯೆಗೆ ತೊಂದರೆ ಆಗದಿರಲಿ ಎಂಬ ಕಾರಣಕ್ಕೆ ಮೃತದೇಹದ ಜತೆ ಪತಿ ಚಂದ್ರಶೇಖರ್ ಅವರನ್ನೂ ಕಳುಹಿಸಿಕೊಡಲಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260702-51-1663158702

