Dailyhunt Logo
  • Light mode
    Follow system
    Dark mode
    • Play Story
    • App Story
ಉಗ್ರರ ತಾಣಗಳನ್ನು ಧ್ವಂಸಗೊಳಿಸುವವರೆಗೆ ಪಾಕ್‌ನೊಂದಿಗೆ ಸಂವಾದ ಬೇಡ: ಮನೀಶ್ ತಿವಾರಿ

ಉಗ್ರರ ತಾಣಗಳನ್ನು ಧ್ವಂಸಗೊಳಿಸುವವರೆಗೆ ಪಾಕ್‌ನೊಂದಿಗೆ ಸಂವಾದ ಬೇಡ: ಮನೀಶ್ ತಿವಾರಿ

ವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೆ ಮಾತುಕತೆ ಆರಂಭಿಸಬೇಕು ಹಾಗೂ ರಾಜತಾಂತ್ರಿಕ ಬಾಂಧವ್ಯ ಪುನರಾರಂಭಿಸಬೇಕು ಎಂದು ಉಭಯ ದೇಶಗಳ ಪ್ರಮುಖ ಗಣ್ಯರು ಜಂಟಿಯಾಗಿ ಮನವಿ ಮಾಡಿರುವುದಕ್ಕೆ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಪ್ರಧಾನಿ ಮತ್ತು ನರೇಂದ್ರ ಮೋದಿ ಅವರಿಗೆ ಉಭಯ ದೇಶಗಳ 117 ಗಣ್ಯರು ಪತ್ರ ಬರೆದು ರಾಜತಾಂತ್ರಿಕ ಬಾಂಧವ್ಯವನ್ನು ಪುನರಾರಂಭಿಸುವಂತೆ ಮನವಿ ಮಾಡಿದ್ದರು.

ಭಯೋತ್ಪಾದನೆ ಪೋಷಣೆಯ ಸುದೀರ್ಘ ಇತಿಹಾಸ ಹೊಂದಿರುವ ಪಾಕಿಸ್ತಾನ, ಭಾರತದ ಹಿಂದಿನ ಶಾಂತಿ ಮಾತುಕತೆ ಪ್ರಯತ್ನಗಳಿಗೆ ಅಡ್ಡಿಪಡಿಸಿದ್ದನ್ನು ನೆನಪಿಸಿರುವ ಅವರು, ನಾವು ಯಾವ ಬೆಲೆ ತೆತ್ತು ಮಾತುಕತೆ ನಡೆಸಬೇಕು? ಎಂದು ಪ್ರಶ್ನಿಸಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ದಶಕಗಳಿಂದ ಭಾರತ ನಡೆಸುತ್ತಾ ಬಂದಿರುವ ಶಾಂತಿ ಪ್ರಯತ್ನಗಳಿಗೆ ಪಾಕಿಸ್ತಾನದಿಂದ ಕೇವಲ ರಕ್ತಪಾತ ಮಾತ್ರ ಉತ್ತರವಾಗಿ ಸಿಕ್ಕಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪಿ.ವಿ. ನರಸಿಂಹ ರಾವ್, ಎಚ್.ಡಿ.ದೇವೇಗೌಡ, ಐ.ಕೆ. ಗುಜ್ರಾಲ್, ಅಟಲ್ ಬಿಹಾರಿ ವಾಜಪೇಯಿ, ಡಾ. ಮನಮೋಹನ್ ಸಿಂಗ್ ಹಾಗೂ ಈಗಿನ ಪ್ರಧಾನಿ ನರೇಂದ್ರ ಮೋದಿ ಸರ್ಕಾರದವರೆಗೂ ಪ್ರತಿಯೊಬ್ಬರು ಪಾಕಿಸ್ತಾನದೊಂದಿಗೆ ಸೌಹಾರ್ದತೆ ಬೆಳೆಸಲು ಪ್ರಾಮಾಣಿಕ ಶ್ರಮ ವಹಿಸಿದ್ದಾರೆ. ಆದರೆ ಪಾಕಿಸ್ತಾನ ಪ್ರತಿ ಬಾರಿಯೂ ನಮಗೆ ಭಯೋತ್ಪಾದನಾ ದಾಳಿಯ ಮೂಲಕವೇ ಪ್ರತ್ಯುತ್ತರ ನೀಡಿದೆ ಎಂದು ತಿವಾರಿ ವಿಷಾದಿಸಿದರು.

ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂಬ ಭಾರತ ಸರ್ಕಾರದ ನಿಲುವು ಯಾವಾಗಲೂ ಸ್ಪಷ್ಟವಾಗಿದೆ. ಅದರಲ್ಲೂ ವಿಶೇಷವಾಗಿ ಪಹಲ್ಗಾಮ್ ದಾಳಿಯ ನಂತರ ಭಾರತ ಸರ್ಕಾರವು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದಾಗ ದೇಶದ ಕಠಿಣ ನಿಲುವು ಇಡೀ ಜಗತ್ತಿಗೆ ಮನವರಿಕೆಯಾಗಿತ್ತು ಎಂದು ಮನೀಶ್ ತಿವಾರಿ ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani