ನವದೆಹಲಿ: ಕ್ರೀಡಾ ಸಾಮಗ್ರಿಗಳ ತಯಾರಿಕಾ ವಲಯಕ್ಕೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದ್ದು, ₹500 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಅಲ್ಲದೆ, ಮುಂದಿನ 10 ವರ್ಷಗಳಲ್ಲಿ ಕ್ರೀಡಾ ವಲಯದ ಸರ್ವತೋಮುಖ ಅಭಿವೃದ್ಧಿಗಾಗಿ 'ಖೇಲೊ ಇಂಡಿಯಾ ಮಿಷನ್' ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಕ್ರೀಡಾ ಸಲಕರಣೆಗಳ ತಯಾರಿಕೆ, ಅವುಗಳ ಉತ್ಪಾದನೆಗೆ ಸಂಬಂಧಿಸಿದ ಸಂಶೋಧನೆ ಹಾಗೂ ಆವಿಷ್ಕಾರಗಳನ್ನು ಬೆಂಬಲಿಸಲು ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ ಈ ಬಗ್ಗೆ ಯೋಜನೆ ರೂಪಿಸಿದೆ. ಈ ಯೋಜನೆಯು ಕ್ರೀಡಾ ಸಾಮಗ್ರಿ ತಯಾರಿಸುವ ನವೋದ್ಯಮ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಲಿದೆ ಎನ್ನಲಾಗಿದೆ.
ಕ್ರೀಡಾ ಸಚಿವಾಲಯಕ್ಕೆ ಒಟ್ಟಾರೆ ₹4,479.88 ಕೋಟಿಯನ್ನು ಹಂಚಲಾಗಿದೆ. ಕಳೆದ ಬಾರಿಯ ಬಜೆಟ್‌ನಲ್ಲಿ ₹3,346.54 ಕೋಟಿಯನ್ನು ಹಂಚಿಕೆ ಮಾಡಲಾಗಿತ್ತು.
ಕ್ರೀಡಾಪಟುಗಳ ಪ್ರೋತ್ಸಾಹಧನ ಹೆಚ್ಚಳ: ಕ್ರೀಡಾಪಟುಗಳಿಗೆ ನೀಡಲಾಗುವ ಪ್ರೋತ್ಸಾಹ ಧನವನ್ನು ₹28 ಕೋಟಿಯಿಂದ ₹40 ಕೋಟಿಗೆ ಹೆಚ್ಚಿಸಲಾಗಿದೆ. ಖೇಲೊ ಇಂಡಿಯಾ ಯೋಜನೆಗೆ ₹924.35 ಕೋಟಿ ನಿಗದಿಪಡಿಸಲಾಗಿದೆ. ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ನೀಡಲಾಗುವ ನೆರವನ್ನು ₹28.05 ಕೋಟಿಯಿಂದ ₹50 ಕೋಟಿಗೆ ಹೆಚ್ಚಿಸಲಾಗಿದೆ.
ರಾಷ್ಟ್ರೀಯ ತರಬೇತಿ ಶಿಬಿರಗಳನ್ನು ಆಯೋಜಿಸುವ ಹಾಗೂ ಅಥ್ಲೀಟ್‌ಗಳ ತರಬೇತಿಗೆ ಮೂಲಸೌಕರ್ಯ ಒದಗಿಸುವ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ₹917.38 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯಕ್ಕೆ ನೀಡಲಾಗುವ ಅನುದಾನವನ್ನು ₹78.64 ಕೋಟಿಯಿಂದ ₹46.98 ಕೋಟಿಗೆ ಇಳಿಸಲಾಗಿದೆ.
ರಾಷ್ಟ್ರೀಯ ಮಾದಕ ವಸ್ತು ಪರೀಕ್ಷಾ ಪ್ರಯೋಗಾಲಯ ಹಾಗೂ ರಾಷ್ಟ್ರೀಯ ಮಾದಕ ವಸ್ತು ಪ್ರತಿಬಂಧಕ ಸಂಸ್ಥೆಗೆ ಕ್ರಮವಾಗಿ ₹23 ಕೋಟಿ ಹಾಗೂ ₹20.30 ಕೋಟಿ ಹಂಚಿಕೆ ಮಾಡಲಾಗಿದೆ. 2025-26ನೇ ಸಾಲಿನ ಬಜೆಟ್‌ನಲ್ಲಿ ಈ ಎರಡು ಸಂಸ್ಥೆಗಳಿಗೆ ಕ್ರಮವಾಗಿ ₹28.55 ಕೋಟಿ ಹಾಗೂ ₹24.30 ಕೋಟಿ ಮೀಸಲಿಡಲಾಗಿತ್ತು.
ಖೇಲೊ ಇಂಡಿಯಾ ಮಿಷನ್
ಮುಂದಿನ ಒಂದು ದಶಕದಲ್ಲಿ ದೇಶದಲ್ಲಿ ಕ್ರೀಡಾ ತರಬೇತಿ ಕೇಂದ್ರಗಳ ಉನ್ನತೀಕರಣ ಹಾಗೂ ಕೋಚಿಂಗ್ ವ್ಯವಸ್ಥೆಯ ಸುಧಾರಣೆಗಾಗಿ 'ಖೇಲೊ ಇಂಡಿಯಾ ಮಿಷನ್' ಆರಂಭಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಗುಣಮಟ್ಟದ ತರಬೇತಿ ನೀಡಲು ಈ ಯೋಜನೆ ನೆರವು ನೀಡಲಿದೆ.
'ಕ್ರೀಡಾ ವಲಯವು ವಿವಿಧ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪೋಷಿಸುತ್ತಿದ್ದ 'ಖೇಲೊ ಇಂಡಿಯಾ' ಯೋಜನೆಯ ಸುಧಾರಿತ ಕ್ರಮವಾಗಿ 'ಖೇಲೊ ಇಂಡಿಯಾ ಮಿಷನ್' ಆರಂಭಿಸಲಾಗುವುದು' ಎಂದು ನಿರ್ಮಲಾ ಅವರು ಬಜೆಟ್ ಮಂಡನೆ ವೇಳೆ ಹೇಳಿದರು.
ಖೇಲೊ ಇಂಡಿಯಾ ಮಿಷನ್‌ನ ಐದು ಕ್ರಮಗಳು
ತರಬೇತಿ ಕೇಂದ್ರಗಳ ಮೂಲಕ ಕ್ರೀಡಾ ಪ್ರತಿಭೆಗಳ ಅನ್ವೇಷಣೆ
ಕೋಚ್‌ಗಳು ಮತ್ತು ಸಹಾಯಕ ಸಿಬ್ಬಂದಿಗೆ ಕಾರ್ಯದಕ್ಷತೆಯ ತರಬೇತಿ
ಕ್ರೀಡಾ ವಿಜ್ಞಾನ ಮತ್ತು ತಂತ್ರಜ್ಞಾನದ ಸಮನ್ವಯ
ಕ್ರೀಡಾ ಸಂಸ್ಕೃತಿ ಪ್ರೋತ್ಸಾಹಿಸಲು ಸ್ಪರ್ಧೆಗಳು ಹಾಗೂ ಲೀಗ್‌ಗಳ ಆಯೋಜನೆ
ಕೂಟಗಳ ಆಯೋಜನೆ ಮತ್ತು ತರಬೇತಿಗಾಗಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿ
2030ರ ಕಾಮನ್‌ವೆಲ್ತ್ ಗೇಮ್ಸ್ ಕೂಟದ ಆತಿಥ್ಯ ವಹಿಸಿರುವ ಹಾಗೂ 2036ರ ಒಲಿಂಪಿಕ್ಸ್ ಆಯೋಜಿಸಲು ಉತ್ಸುಕವಾಗಿರುವ ಭಾರತಕ್ಕೆ ಈ ಯೋಜನೆ ಪೂರಕವಾಗಲಿದೆ ಎನ್ನಲಾಗಿದೆ.
ವಿವಿಧ ವಯೋಮಾನಗಳಲ್ಲಿ ರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಿ, ಕ್ರೀಡಾ ಪ್ರತಿಭೆಗಳ ಗುರುತಿಸಲು ಕೇಂದ್ರ ಸರ್ಕಾರವು 2017ರಲ್ಲಿ 'ಖೇಲೊ ಇಂಡಿಯಾ' ಯೋಜನೆಯನ್ನು ಆರಂಭಿಸಿತ್ತು.
Union Budget 2026: ಆರ್ಥಿಕ ಬೆಳವಣಿಗೆ, ಕುಟುಂಬ ಆದಾಯದ ಹೆಚ್ಚಳವೇ ನಿರ್ಮಲಾ ಆಯವ್ಯಯದ ಸೂತ್ರ Union Budget 2026 LIVE| ಕೇಂದ್ರ ಬಜೆಟ್ ಮಂಡನೆ: ನೇರಪ್ರಸಾರ
