Dailyhunt Logo
  • Light mode
    Follow system
    Dark mode
    • Play Story
    • App Story
Union Budget: ನರೇಗಾದಿಂದ ಕೈಬಿಟ್ಟಿದ್ದ 'ಮಹಾತ್ಮ ಗಾಂಧಿ' ಹೆಸರಲ್ಲಿ ಹೊಸ ಯೋಜನೆ

Union Budget: ನರೇಗಾದಿಂದ ಕೈಬಿಟ್ಟಿದ್ದ 'ಮಹಾತ್ಮ ಗಾಂಧಿ' ಹೆಸರಲ್ಲಿ ಹೊಸ ಯೋಜನೆ

ವದೆಹಲಿ: ಮಹಾತ್ಮ ಗಾಂಧೀಜಿ ಹೆಸರಿನಲ್ಲಿ ಸರ್ಕಾರ ಹೊಸ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಕಟಿಸಿದೆ.

ಈ ಯೋಜನೆಗೆ 'ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್‌' ಯೋಜನೆ ಎಂದು ಹೆಸರಿಡಲಾಗಿದೆ. ಖಾದಿ, ಕೈಮಗ್ಗ ಮತ್ತು ಕರಕುಶಲ ವಲಯಕ್ಕೆ ಉತ್ತೇಜನ ನೀಡುವ ಮೂಲಕ ಗ್ರಾಮಾಭಿವೃದ್ಧಿ ಸಾಧಿಸುವ ಆಶಯವನ್ನು ಯೋಜನೆ ಹೊಂದಿದೆ.

ಆಧುನೀಕರಣ ಮತ್ತು ಮೌಲ್ಯವರ್ಧನೆ ಮೂಲಕ ಭಾರತದ ಖಾದಿ, ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು, ಹೊಸ ಬ್ರ್ಯಾಂಡ್‌ ಸೃಷ್ಟಿಸುವ ಉದ್ದೇಶವನ್ನು ಯೋಜನೆ ಹೊಂದಿದೆ.

ಮುಖ್ಯವಾಗಿ ಉದ್ಯೋಗ ಸೃಷ್ಟಿಯ ಮೂಲಕ ಗ್ರಾಮೀಣಾಭಿವೃದ್ಧಿ ಸಾಧಿಸಲು ಬಜೆಟ್‌ನಲ್ಲಿ ಉಪ ಕ್ರಮಗಳನ್ನು ಪ್ರಕಟಿಸಲಾಗಿದೆ. ನಗರ ವಲಸೆ ತಡೆಯಲು ಗಮನ ನೀಡಲಾಗಿದೆ. ಗಾಂಧಿ ಗ್ರಾಮ ಸ್ವರಾಜ್ ಯೋಜನೆಯನ್ನು ನೇಕಾರರಿಗೆ, ಗ್ರಾಮೀಣ ಪ್ರದೇಶದ ಸಣ್ಣ ಕೈಗಾರಿಕಾ ಘಟಕಗಳಿಗೆ, ಯುವ ಜನರಿಗೆ ಆರ್ಥಿಕ ಬಲ ತುಂಬುವಂತೆ ರೂಪಿಸಲಾಗಿದೆ. ಸ್ಥಳೀಯ ಕುಶಲ ಕರ್ಮಿಗಳನ್ನು ಸಬಲೀಕರಣಗೊಳಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ 'ಒಂದು ಜಿಲ್ಲೆ ಒಂದು ಉತ್ಪನ್ನ' (ಒಡಿಒಪಿ) ಯೋಜನೆಗೆ ಇದು ಪೂರಕವಾಗಿದೆ.

ಜವಳಿ ಕ್ಷೇತ್ರದ ಆಧುನೀಕರಣದ ಮೂಲಕ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಗೆ ಗಮನ ನೀಡಲಾಗಿದೆ. 'ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌' ಯೋಜನೆಯು ಬೃಹತ್‌ ಹೂಡಿಕೆ ಆಕರ್ಷಿಸುವ ಸಾಧ್ಯತೆ ಇದ್ದು, ರಫ್ತು ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ಮಹತ್ವ ನೀಡಲಾಗಿದೆ. ರೇಷ್ಮೆ, ಉಣ್ಣೆ, ಸೆಣಬು, ಕೈಮಗ್ಗದ ಬಟ್ಟೆ ಸೇರಿ ಜವಳಿಯನ್ನು ಐದು ವಲಯಗಳಾಗಿ ವಿಂಗಡಿಸಿ 'ಸಮಗ್ರ ರಾಷ್ಟ್ರೀಯ ಜವಳಿ ಯೋಜನೆಯನ್ನು ಘೋಷಿಸಲಾಗಿದೆ.

ಜವಳಿ, ಚರ್ಮದ ಉತ್ಪನ್ನಗಳು, ಪಾದರಕ್ಷೆಗಳ ರಫ್ತು ಬಾಧ್ಯತಾ ಅವಧಿಯನ್ನು 6 ತಿಂಗಳಿಂದ 12 ತಿಂಗಳಿಗೆ ವಿಸ್ತರಿಸಲಾಗಿದೆ. ಬಾಧ್ಯತಾ ಅವಧಿ ವಿಸ್ತರಣೆಯು ರಫ್ತುದಾರರಿಗೆ 'ದುಡಿಯುವ ಬಂಡವಾಳ' ನಿರ್ವಹಣೆಯನ್ನು ಸುಗಮಗೊಳಿಸಲಿದೆ. ಅಮೆರಿಕದಂತಹ ಹೆಚ್ಚುವರಿ ಸುಂಕ ವಿಧಿಸಿರುವ ದೇಶಗಳೊಂದಿಗೆ ರಫ್ತು ವಹಿವಾಟು ನಡೆಸಲು ಇದು ಅನುಕೂಲವಾಗಲಿದೆ.

ಹೈನುಗಾರಿಕೆ, ಮೀನುಗಾರಿಕೆ, ಹಣ್ಣು, ತರಕಾರಿ ಬೆಳೆಗಳನ್ನು ಒಳಗೊಂಡ ಗರಿಷ್ಠ ಮೌಲ್ಯದ ಕೃಷಿ ವಲಯಕ್ಕೆ ಹೆಚ್ಚಿನ ಕೊಡುಗೆ ನೀಡಲಾಗಿದೆ. ಪಶುವೈದ್ಯಕೀಯ ವೃತ್ತಿಪರರು, ಆಸ್ಪತ್ರೆಗಳ ಲಭ್ಯತೆಯನ್ನು ಹೆಚ್ಚಿಸಲು ವಿಶೇಷ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಮೀನುಗಾರಿಕೆ: ವಿಶೇಷ ಆರ್ಥಿಕ ವಲಯ (ಇಇಜೆಡ್‌) ಮತ್ತು ಆಳ ಸಮುದ್ರಗಳಲ್ಲಿ ಹಿಡಿಯುವ ಮೀನುಗಳ ಮೇಲೆ ಯಾವುದೇ ಸುಂಕವನ್ನು ವಿಧಿಸಲಾಗುವುದಿಲ್ಲ. ವಿದೇಶಿ ಬಂದರುಗಳಲ್ಲಿ ಈ ಮೀನುಗಳನ್ನು ಇಳಿಸುವುದನ್ನು ಸರಕುಗಳ ರಫ್ತು ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ, ವಿಶೇಷವಾಗಿ ಕರಾವಳಿಯ ರೈತರನ್ನು ಗಮನದಲ್ಲಿಟ್ಟುಕೊಂಡು ಸಬ್ಸಿಡಿ ಆಧಾರಿತ ಸಾಲ ಯೋಜನೆಗಳನ್ನೂ ಪ್ರಕಟಿಸಲಾಗಿದೆ. 500 ಕೆರೆಗಳು ಮತ್ತು ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿಗೆ ಗಮನ ನೀಡಲಾಗಿದೆ.

- ಶಕ್ತಿವೇಲು, ಜವಳಿ ರಫ್ತು ಉತ್ತೇಜನಾ ಮಂಡಳಿ (ಎಇಪಿಸಿ) ಅಧ್ಯಕ್ಷ ಸುಸ್ಥಿರತೆ, ಉದ್ಯೋಗಸೃಷ್ಟಿ, ಜಾಗತಿಕ ಮಟ್ಟದ ಸ್ಪರ್ಧೆಗೆ ಭಾರತದ ಜವಳಿ ಕ್ಷೇತ್ರವನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಕ್ರಮ ವಹಿಸಲಾಗಿದೆ.
Dailyhunt
Disclaimer: This content has not been generated, created or edited by Dailyhunt. Publisher: Prajavani