ಲಖನೌ: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಾಗಲೇ ಮೈತ್ರಿ ಲೆಕ್ಕಾಚಾರಗಳು ಗರಿಗೆದರಿವೆ. ಈ ನಡುವೆ, ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ ಮತ್ತು ಆಜಾದ್ ಸಮಾಜ ಪಾರ್ಟಿಯ ಚಂದ್ರಶೇಖರ್ ನಡುವೆ ಚುನಾವಣಾಪೂರ್ವ ಮೈತ್ರಿ ಏರ್ಪಟ್ಟಿದ್ದು, ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ಈ ಮೈತ್ರಿಯಿಂದಾಗಿ ಬಿಜೆಪಿ, ಬಿಎಸ್ಪಿ ಅಥವಾ ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟಗಳಲ್ಲಿ ಯಾರಿಗೆ ಸಂಕಷ್ಟ ಎದುರಾಗಬಹುದು ಎಂಬುದನ್ನು ಅಂದಾಜಿಸಲು ರಾಜಕೀಯ ತಜ್ಞರು ಪ್ರಯತ್ನಿಸುತ್ತಿದ್ದಾರೆ.
'ಸಾಮಾಜಿಕ ಪರಿವರ್ತನಾ ಮೋರ್ಚಾ' ಎಂದು ಕರೆಯಲ್ಪಡುವ ಎಐಎಂಐಎಂ ಮತ್ತು ಆಜಾದ್ ಸಮಾಜ ಪಕ್ಷದ ಮೈತ್ರಿಕೂಟವು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 403 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಆದರೆ, ಮುಸ್ಲಿಮರು ಮತ್ತು ದಲಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳ ಮೇಲೆ ಈ ಮೈತ್ರಿಕೂಟ ವಿಶೇಷ ಗಮನಹರಿಸಲಿದೆ ಎಂಬುದು ಸ್ಪಷ್ಟವಾಗಿದೆ.
ಉತ್ತರ ಪ್ರದೇಶದ ಸುಮಾರು 143 ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರು ಫಲಿತಾಂಶ ನಿರ್ಧರಿಸಲಿದ್ದು, ಸುಮಾರು 100 ಕ್ಷೇತ್ರಗಳಲ್ಲಿ ದಲಿತ ಮತದಾರರು ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಾರೆ. ಪಶ್ಚಿಮ ಉತ್ತರ ಪ್ರದೇಶದಿಂದ ಹಿಡಿದು ಪೂರ್ವಾಂಚಲ ಪ್ರದೇಶದವರೆಗಿನ, ಮುಸ್ಲಿಂ ಮತ್ತು ದಲಿತ ಜನಸಂಖ್ಯೆಯು ನಿರ್ಣಾಯಕ ಪಾತ್ರ ವಹಿಸುವ ಕ್ಷೇತ್ರಗಳ ಮೇಲೆ ಈ 'ಮೋರ್ಚಾ' ಪ್ರಮುಖವಾಗಿ ಗಮನಹರಿಸುವ ಸಾಧ್ಯತೆ ಇದೆ.
ಕುತೂಹಲಕಾರಿ ಸಂಗತಿ ಎಂದರೆ, ಇದೇ ವೋಟ್ಬ್ಯಾಂಕ್ ಅನ್ನು ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟ ಅವಲಂಬಿಸಿದೆ.
ಬಲಿಷ್ಠ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವ ದೃಷ್ಟಿಯಿಂದ ಒಂದಾಗುವಂತೆ ಮುಸ್ಲಿಂ ಮತ್ತು ದಲಿತರಿಗೆ ಓವೈಸಿ ಮತ್ತು ಚಂದ್ರಶೇಖರ್ ಕರೆ ನೀಡಿದ್ದಾರೆ. ಬಿಜೆಪಿ ವಿರೋಧಿ ವೋಟ್ಬ್ಯಾಂಕ್ ಮೇಲೆ ಈ ಮೈತ್ರಿಕೂಟ ಪ್ರಭಾವ ಬೀರಿದರೆ, ಎಸ್ಪಿ-ಕಾಂಗ್ರೆಸ್ ಮತ್ತು ಬಿಎಸ್ಪಿ ಮೇಲೆ ಪರಿಣಾಮ ಬೀರಲಿದೆ ಎಂದು ಕೆಲ ರಾಜಕೀಯ ತಜ್ಞರು ವಿಶ್ಲೇಷಿಸಿದ್ಧಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ದಲಿತರ ಪ್ರಾಬಲ್ಯವಿರುವ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಚಂದ್ರಶೇಖರ್ ಪಕ್ಷವು ಬಿಎಸ್ಪಿಗೆ ಆಘಾತ ನೀಡಿತ್ತು. ನಾಗಿನ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪಕ್ಷದ ಅಧ್ಯಕ್ಷ ಚಂದ್ರಶೇಖರ್ ಅವರು, ಶೇ 51.19ರಷ್ಟು ಮತ ಪಡೆಯುವ ಮೂಲಕ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2019ರಲ್ಲಿ ಈ ಕ್ಷೇತ್ರ ಗೆದ್ದಿದ್ದ ಬಿಎಸ್ಪಿ ಕೇವಲ ಶೇ 1.33 ರಷ್ಟು ಮತ ಪಡೆದಿತ್ತು.
2024ರ ನವೆಂಬರ್ ತಿಂಗಳಲ್ಲಿ ನಡೆದ ಉತ್ತರ ಪ್ರದೇಶದ 9 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯು ಮಾಯಾವತಿ ಮತ್ತು ಚಂದ್ರಶೇಖರ್ ನಡುವೆ ನೇರ ಹಣಾಹಣಿಗೆ ಸಾಕ್ಷಿಯಾಗಿತ್ತು. 9 ಕ್ಷೇತ್ರಗಳ 7ರಲ್ಲಿ ಬಿಎಸ್ಪಿ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿತ್ತು.
ಆದರೆ, ಮೀರಾಪುರ ಮತ್ತು ಕುಂದರ್ಕಿ ಕ್ಷೇತ್ರಗಳಲ್ಲಿ ಚಂದ್ರಶೇಖರ್ ಮತ್ತು ಓವೈಸಿ ಅವರ ಪಕ್ಷಗಳು ಬಿಎಸ್ಪಿಯನ್ನು ಐದನೇ ಸ್ಥಾನಕ್ಕೆ ತಳ್ಳಿದ್ದವು. ಮೀರಾಪುರದಲ್ಲಿ, ಚಂದ್ರಶೇಖರ್ ಪಕ್ಷದ ಅಭ್ಯರ್ಥಿ 22,661 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರೆ, ಓವೈಸಿ ಅವರ ಎಐಎಂಐಎಂ ಅಭ್ಯರ್ಥಿ 18,869 ಮತ ಪಡೆದಿದ್ದರು. ಬಿಎಸ್ಪಿ ಅಭ್ಯರ್ಥಿ ಕೇವಲ 3,248 ಮತಗಳನ್ನು ಗಳಿಸಲಷ್ಟೇ ಶಕ್ತರಾಗಿದ್ದರು.
ಅದೇ ರೀತಿ, 2022ರ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ 95 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಒಂದೂ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ, ಹಲವು ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಗೆಲುವಿಗೆ ಕೊಕ್ಕೆ ಹಾಕಿತ್ತು. ಸುಲ್ತಾನ್ಪುರ, ಶಾಹಗಂಜ್ ಮತ್ತು ಕನ್ನೌಜ್ನಂತಹ ಹಲವು ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಸೋಲಿಗೆ ಓವೈಸಿ ಪ್ರಮುಖ ಪಾತ್ರ ವಹಿಸಿದ್ದರು. ಈಗ, ಎಐಎಂಐಎಂ ಮತ್ತು ಆಜಾದ್ ಸಮಾಜ ಪಕ್ಷಗಳು ಒಗ್ಗೂಡಿರುವುದರಿಂದ, ಮತ ವಿಭಜನೆಯಾಗಿ, ಅದು ಅಖಿಲೇಶ್ ಯಾದವ್ ಅವರ 'ಪಿಡಿಎ'(ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರು) ಮತಬ್ಯಾಂಕ್ಗೆ ನೇರ ಹೊಡೆತ ನೀಡುವ ಸಾಧ್ಯತೆ ಇದೆ.
ಓವೈಸಿ-ಆಜಾದ್ ಮೈತ್ರಿಯು ಬಿಜೆಪಿಗೆ ಲಾಭ ಮಾಡಿಕೊಡಬಹುದು ಎಂದು ಮೇಲ್ನೋಟಕ್ಕೆ ಅನ್ನಿಸುತ್ತಿದೆ. ಆದರೆ, ಯುವ ದಲಿತ ಮತದಾರರು ಈ ಮೈತ್ರಿಗೆ ಬೆಂಬಲ ನೀಡಿದರೆ, ಅದು ಬಿಜೆಪಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿಗೆ ಅನುಕೂಲ ಮಾಡಿಕೊಡಲೆಂದೇ ಈ ಮೈತ್ರಿಕೂಟ ರಚಿಸಲಾಗಿದೆ ಎಂದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಾಯಕರು ಆರೋಪಿಸಿದ್ದಾರೆ.

