ಬೆಳಗಾವಿ: 'ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಜನರ, ಅದರಲ್ಲೂ ರೈತರ ಆತಂಕ ದೂರಗೊಳಿಸಿದೆ. ಒಂದು ವಾರ ಹೀಗೆಯೇ ಮಳೆ ಸುರಿದರೆ, ನಾಲ್ಕೈದು ತಿಂಗಳಿಗೆ ಬೇಕಾಗುವಷ್ಟು ನೀರು ಜಲಾಶಯಗಳಲ್ಲಿ ಸಂಗ್ರಹವಾಗಲಿದೆ' ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಜಿಲ್ಲೆಯಲ್ಲಿ ಕುಡಿಯುವ ಉದ್ದೇಶಕ್ಕಾಗಿ ಈಗಾಗಲೇ ಜಲಾಶಯಗಳಲ್ಲಿ ನೀರು ಸಂಗ್ರಹಿಸಿ ಇರಿಸಿದ್ದೆವು. ಆದರೆ, ಶುಕ್ರವಾರದಿಂದ ಜಲಾಶಯಗಳಿಗೆ ಹೊಸ ನೀರು ಬರಲು ಆರಂಭವಾಗಿದೆ. ಭಾನುವಾರ, ಸೋಮವಾರವೂ ಡ್ಯಾಂಗಳಿಗೆ ಹರಿದುಬರುವ ನೀರಿನ ಪ್ರಮಾಣ ಹೆಚ್ಚಲಿದೆ. ಇನ್ನೂ ಮೂರ್ನಾಲ್ಕು ದಿನ ಉತ್ತಮ ಮಳೆಯಾಗಬಹುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಷ್ಟು ಮಳೆಯಾದರೆ ಸಮಸ್ಯೆಯಿಂದ ಹೊರಬರುತ್ತೇವೆ' ಎಂದರು.
'ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ 29ರಷ್ಟು ಮಳೆ ಕೊರತೆಯಾಗಿದ್ದು, ಆತಂಕಪಡುವ ಪರಿಸ್ಥಿತಿ ಇಲ್ಲ' ಎಂದು ತಿಳಿಸಿದರು.
'ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರಕ್ಕಸಕೊಪ್ಪ ಜಲಾಶಯಕ್ಕೂ ಒಳಹರಿವು ಆರಂಭವಾಗಿದೆ. ವರುಣ ಕೈಹಿಡಿದರೆ ಒಂದು ವಾರದಲ್ಲಿ ಅದು ಭರ್ತಿಯಾಗುವ ಸಾಧ್ಯತೆ ಇದೆ. ಇದರಿಂದ ಬೆಳಗಾವಿಗರ ಕುಡಿಯುವ ನೀರಿಗೆ ಪರದಾಡುವುದು ತಪ್ಪಲಿದೆ' ಎಂದು ತಿಳಿಸಿದರು.
'ಜಿಲ್ಲೆಯಲ್ಲಿ ಶೇ 80ರಷ್ಟು ಬಿತ್ತನೆ ಪ್ರಕ್ರಿಯೆ ನಡೆದಿದೆ. ಈಗ ಸುರಿಯುತ್ತಿರುವ ಮಳೆಯಿಂದ ಕೃಷಿ ಬೆಳೆಗಳಿಗೆ ಅನುಕೂಲವಾಗಲಿದೆ' ಎಂದರು.
'ರಾಮದುರ್ಗ, ಸವದತ್ತಿಯಲ್ಲಿ ಮಳೆಯಾಗದೆ ಬೆಳೆ ಒಣಗುತ್ತಿವೆಯಲ್ಲ' ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, 'ಈ ವಾರ ಆ ಭಾಗದಲ್ಲೂ ಉತ್ತಮ ಮಳೆಯಾಗಬಹುದು ಎಂದು ನಿರೀಕ್ಷಿಸಿದ್ದೇವೆ. ಒಂದುವೇಳೆ ಮಳೆಯೇ ಆಗದಿದ್ದರೆ ಸರ್ಕಾರದ ಹಂತದಲ್ಲಿ ಚರ್ಚಿಸಿ, ಸರ್ವೆಗೆ ಕ್ರಮ ವಹಿಸುತ್ತೇವೆ. ಆದರೆ, ಈಗಲೇ ಸರ್ವೆ ಮಾಡುವ ಸ್ಥಿತಿ ಇಲ್ಲ' ಎಂದರು.
'ಹಾವೇರಿಯಲ್ಲಿ ಶಾಸಕ ಪ್ರಕಾಶ ಕೋಳಿವಾಡ ಅವರು, ಮೋಡ ಬಿತ್ತನೆಗೆ ತಯಾರಿ ನಡೆಸಿದ್ದಾರೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಹಾವೇರಿಯಂಥ ಪರಿಸ್ಥಿತಿ ಇಲ್ಲಿ ಎದುರಾದರೆ ಮಾತ್ರ, ಮೋಡ ಬಿತ್ತನೆ ಬಗ್ಗೆ ಯೋಜಿಸುತ್ತೇವೆ' ಎಂದು ಹೇಳಿದರು.
'ಶೀಘ್ರ ಸಂಪುಟ ವಿಸ್ತರಣೆ ಆಗುತ್ತದೆ. ಜಿಲ್ಲೆಯ ಯಾವ ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂಬುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಸಂಪುಟದಲ್ಲಿ 20 ಸ್ಥಾನ ಖಾಲಿ ಇವೆ. ವಿವಿಧ ಇಲಾಖೆಗಳಿಗೆ ಸಚಿವರ ಅವಶ್ಯಕತೆ ಇದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
'ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಬೆಳಗಾವಿಯ ಫುಟ್‌ಪಾತ್ ಅತಿಕ್ರಮಣ ತೆರವು ಪ್ರಕ್ರಿಯೆ ನಡೆದಿದೆ. ತೆರವಿಗೆ ಮುನ್ನ ಸಂಬಂಧಿತರಿಗೆ ನೋಟಿಸು ಕೊಡುವಂತೆ ಅಧಿಕಾರಿಗಳಿಗೆ ತಿಳಿಸುತ್ತೇವೆ' ಎಂದು ಜಾರಕಿಹೊಳಿ ತಿಳಿಸಿದರು.

