Dailyhunt Logo
  • Light mode
    Follow system
    Dark mode
    • Play Story
    • App Story
ವಾಚಕರ ವಾಣಿ: ಜ್ಞಾನ ಭಂಡಾರಗಳ ನಾಶ ಮಾಡಬಹುದೆ?

ವಾಚಕರ ವಾಣಿ: ಜ್ಞಾನ ಭಂಡಾರಗಳ ನಾಶ ಮಾಡಬಹುದೆ?

ಜ್ಞಾನ ಭಂಡಾರಗಳ ನಾಶ ಮಾಡಬಹುದೆ?

ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳಿಗೆ ಸೇರಿದ ಪುಸ್ತಕ ಮಳಿಗೆಗಳನ್ನು ಧ್ವಂಸಗೊಳಿ

ಸುವ ಮತ್ತು ಎಡಪಂಥೀಯ ಪುಸ್ತಕಗಳನ್ನು ಸುಟ್ಟು ಹಾಕುತ್ತಿರುವ ಘಟನೆಗಳು ನಡೆದಿವೆ. ಇದಕ್ಕೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರೇ ಸೂಚಿಸಿದ್ದಾರೆಂಬ ಆರೋಪವಿದೆ.

ಕೋಲ್ಕತ್ತದಲ್ಲಿ ಹಿಂದೆಂದೂ ಕಂಡಿರದಂತಹ ಪುಸ್ತಕಗಳ ಧ್ವಂಸೀ
ಕರಣ ಜರುಗಿದೆ. ಸಾವಿರಾರು ಪುಸ್ತಕಗಳು ಭಸ್ಮವಾಗಿವೆ. 'ಈ ಕೃತ್ಯಕ್ಕೆ ನಾವು ಕುಮ್ಮಕ್ಕು ನೀಡಿಲ್ಲ' ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. ಸರ್ಕಾರದ ಧೋರಣೆ ಖಂಡಿಸಿ ಕೋಲ್ಕತ್ತದ ಬೀದಿಗಳಲ್ಲಿ ನಾಗರಿಕರು ತಮಗಿಷ್ಟವಾದ ಪುಸ್ತಕಗಳನ್ನು ಹಿಡಿದು ಬಂಗಾಳಿ ಕವಿಗಳ ಪದ್ಯಗಳನ್ನು ಹಾಡುತ್ತಾ ಪ್ರತಿರೋಧದ ಮೆರವಣಿಗೆ ನಡೆಸಿದ್ದಾರೆ. ಆ ಮೆರವಣಿಗೆಯಲ್ಲಿ ತಂದೆಯೊಬ್ಬರು ಎತ್ತಿಕೊಂಡಿದ್ದ ಪುಟ್ಟ ಮಗುವೊಂದು ಮಕ್ಕಳ ಕತೆಗಳ ಪುಸ್ತಕವೊಂದನ್ನು ಕೈಯಲ್ಲಿ ಹಿಡಿದಿದ್ದ ಚಿತ್ರವು ನನ್ನ ಬಾಲ್ಯದ ಓದಿನ ನೆನಪುಗಳನ್ನು ಮತ್ತೆ ಜಾಗೃತಗೊಳಿಸಿತು. ವಿದ್ಯೆ ಕರುಣಿಸುವ ಪುಸ್ತಕಗಳನ್ನು ನಾಶ ಮಾಡುವುದು ಸರಿಯೆ? ಬಂಗಾಳದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳು ದೇಶದ ಇನ್ನಾವುದೇ ಭಾಗದಲ್ಲೂ ಘಟಿಸದಿರಲಿ.

-ಶ್ಯಾಮಲಾ ಗುರುಪ್ರಸಾದ್, ಹುಬ್ಬಳ್ಳಿ

ಕನ್ನಡ ಬೇರಿಗೆ ಉದ್ಯೋಗದ ನೀರು ಬೇಕು

'ಕನ್ನಡ: ಮಾಧ್ಯಮವೊ? ಮಧ್ಯಮವೊ?' ಲೇಖನ (ಲೇ: ನಿರಂಜನಾರಾಧ್ಯ ವಿ.ಪಿ., ವಿಶ್ಲೇಷಣೆ, ನ. 3) ಚಿಂತನಾರ್ಹವಾಗಿದೆ. ಆದರೆ, ಈ ಚರ್ಚೆಯನ್ನು ಇನ್ನೊಂದು ರೀತಿಯಲ್ಲೂ ಗಮನಿಸಬೇಕಾಗಿದೆ. ಪೋಷಕರು ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಕಳುಹಿಸುವುದಕ್ಕೆ ಭಾಷಾಭಿಮಾನದ ಕೊರತೆಯ ಜತೆಗೆ, ಕನ್ನಡದಲ್ಲಿ ಕಲಿತರೆ ಉದ್ಯೋಗ ಸಿಗುವುದಿಲ್ಲವೆಂಬ ಆತಂಕವೂ ಕಾರಣವಾಗಿದೆ. ಇದಕ್ಕೆ ವಸ್ತುನಿಷ್ಠ ಆಧಾರಗಳಿವೆ. ಕೆಇಎ ಹೊರಡಿಸಿದ ಗ್ರಾಮ ಆಡಳಿತಾಧಿಕಾರಿ ನೇಮಕಾತಿಯ 505 ಹುದ್ದೆಗಳ ಪೈಕಿ ಕನ್ನಡ ಮಾಧ್ಯಮದವರಿಗೆ ಲಭ್ಯವಿರುವುದು 15 ಹುದ್ದೆ; ಕೆಪಿಎಸ್‌ಸಿಯ 319 ಹುದ್ದೆಗಳ ಪೈಕಿ 5 ಹುದ್ದೆಯಷ್ಟೇ. ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ ಹೆಚ್ಚಾಗಿ ಇಂಗ್ಲಿಷ್‌ನಲ್ಲಿರುತ್ತದೆ. ಪ್ರಶ್ನೆಪತ್ರಿಕೆಗಳು ಇಂಗ್ಲಿಷ್‌ನಲ್ಲಿ ಸಿದ್ಧವಾಗಿ ಕನ್ನಡಕ್ಕೆ ಅನುವಾದಗೊಳ್ಳುವಾಗ ಆಗುವ ದೋಷಗಳಿಗೆ ಬೆಲೆಯನ್ನು ಅಭ್ಯರ್ಥಿಗಳೇ ತೆರಬೇಕು. ಎಫ್‌ಡಿಎ ಪರೀಕ್ಷೆಯ ಎರಡನೇ ಪತ್ರಿಕೆಯಲ್ಲಿ ಮೊದಲು ಕನ್ನಡ ಸಾಹಿತ್ಯ ಇತ್ತು. ಈಗ ಕನ್ನಡ ವ್ಯಾಕರಣಕ್ಕೆ 35, ಇಂಗ್ಲಿಷ್ ವ್ಯಾಕರಣಕ್ಕೆ 35, ಕಂಪ್ಯೂಟರ್ ಜ್ಞಾನಕ್ಕೆ 30 ಅಂಕ ನಿಗದಿಯಾಗಿದೆ. ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ ಕನ್ನಡ ಸಾಹಿತ್ಯವೇ ಇಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ನೇಮಕಾತಿಯಲ್ಲಿ ಸಮಾನ ಅವಕಾಶ ಸಿಗದಿದ್ದರೆ ಬೇರು ಗಟ್ಟಿಯಾಗಿದ್ದರೂ ಫಲ ಸಿಗದು.

-ಮಹೇಂದ್ರ ಟಿ.ಎಂ., ಹೂಡೇಂ

ಪರೀಕ್ಷೆ ಅಕ್ರಮ: ಪ್ರಾಮಾಣಿಕರ ಕನಸು ಭಗ್ನ

ಇತ್ತೀಚಿನ ಪರೀಕ್ಷಾ ಅಕ್ರಮಗಳು ಪ್ರಾಮಾಣಿಕವಾಗಿ ಓದಿ ಉದ್ಯೋಗದ ಕನಸು ಕಾಣುತ್ತಿರುವ ಸಾವಿರಾರು ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸಿವೆ. ಶಂಕರ ಬನ್ನೂರ ಪ್ರಕರಣದಲ್ಲಿ ಅಭ್ಯರ್ಥಿಯನ್ನಷ್ಟೇ ಹೊಣೆ ಮಾಡಿ ಕೈತೊಳೆದುಕೊಳ್ಳುವುದು ಸರಿ
ಅಲ್ಲ. ಪರೀಕ್ಷಾ ಅಕ್ರಮದಲ್ಲಿ ಕೆಲವು ಕಾಲೇಜುಗಳ ಪ್ರಾಂಶುಪಾಲರು, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಕೈವಾಡ ಇರುವಂತಿದೆ. ಅವರನ್ನೂ ತನಿಖೆಗೆ ಒಳ
ಪಡಿಸಿದಾಗ ಸತ್ಯ ಹೊರಬರಲಿದೆ. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ಹುದ್ದೆ,
ಪ್ರಭಾವ ಅಥವಾ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಕಾನೂನು ಕ್ರಮಕೈಗೊಳ್ಳ
ಬೇಕು. ಸರ್ಕಾರವು ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾದ ನಿಗಾ, ಡಿಜಿಟಲ್ ಮೇಲ್ವಿಚಾರಣೆ ಹಾಗೂ ಸ್ವತಂತ್ರ ತನಿಖಾ ವ್ಯವಸ್ಥೆ ರೂಪಿಸಬೇಕು. ಹಗಲಿ
ರುಳು ಕಷ್ಟಪಟ್ಟು ಓದಿ ಪರೀಕ್ಷೆ ಬರೆಯುವ ಬಡ ಮತ್ತು ಮಧ್ಯಮವರ್ಗದ ಅಭ್ಯರ್ಥಿ
ಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ.

-ರಾಜಕುಮಾರ ಎಂ. ದಣ್ಣೂರ, ಅಫಜಲಪುರ

ರಸ್ತೆಬದಿ ಸಿಗರೇಟ್‌ ಸೇವನೆಗೆ ಅಂಕುಶ ಹಾಕಿ

ಕಳೆದ ದಶಕದಿಂದ ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ ಹಾಗೂ ಸಿಗರೇಟ್ ಸೇವನೆಗೆ ನಿರ್ಬಂಧವು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿತ್ತು. ಆದರೂ ಗೂಡಂಗಡಿಗಳ ಹಿಂದೆ, ಸಂದಿಗೊಂದಿಗಳಲ್ಲಿ ಗೋಚರಿಸದ ರೀತಿ ಸಿಗರೇಟ್ ಸೇವನೆ ನಡೆಯುತ್ತಿತ್ತು. ಈ ಕಾನೂನು ಪಾಲನೆ ಸಡಿಲಗೊಂಡಿರುವ ಕಾರಣಕ್ಕೋ ಅಥವಾ ಯಾರೂ ಏನೂ
ಮಾಡುವುದಿಲ್ಲ ಎಂಬ ಧೈರ್ಯದ ಕಾರಣಕ್ಕೋ ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ
ಸಿಗರೇಟ್ ಸೇವನೆ ಎಗ್ಗಿಲ್ಲದೆ ನಡೆದಿದೆ. ಇದೇ ಚಾಳಿಯು ವ್ಯಾಪಕವಾಗಿ ಹರಡಿ ರಸ್ತೆ,
ಹೋಟೆಲ್, ಕ್ಯಾಂಟೀನ್‌ಗಳಲ್ಲಿ ಸಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಎಚ್ಚತ್ತುಕೊಂಡು ಇದಕ್ಕೆ ಅಂಕುಶ ಹಾಕಬೇಕಿದೆ.

-ಹೇಮಂತ್ ಕೇಳ್ಕರ್, ಶಿವಮೊಗ್ಗ

ಕೇಳಬಾರದ ಕಥೆ ಕಟ್ಟುವುದು ಸರಿಯೆ?

'ಗಾಂಧಿ ಹತ್ಯೆಯ ಸತ್ಯ' ವಿವಾದಿತ ನಾಟಕದ ಕರ್ತೃ ಅಡ್ಡಂಡ ಕಾರ್ಯಪ್ಪಗೆ ಮಸಿ ಬಳಿದಿರುವುದು, ಅವರತ್ತ ಚಪ್ಪಲಿ ಎಸೆದಿರುವುದು ವರದಿಯಾಗಿದೆ. ಅವರಿಗೆ ಗಾಂಧೀಜಿ ಕೆಟ್ಟವರಾಗಿ ಕಾಣಿಸಿದರೆ ಆ ಕುರಿತೇಕೆ ನಾಟಕ ರಚಿಸಬೇಕು? ಇವರಿಗಿಷ್ಟವಾದ ಒಳ್ಳೆಯ ನಾಯಕನ ಬಗ್ಗೆ ನಾಟಕ ಬರೆದು ಪ್ರದರ್ಶಿಸಿ ಜನರಲ್ಲಿ ದೇಶಭಕ್ತಿ ಮೂಡಿಸಲಿ. ಗಾಂಧೀಜಿಯಿಂದ ವಿದೇಶಿ ನಾಯಕರೂ ಸ್ಫೂರ್ತಿ ಪಡೆದಿರುವುದು ಹೆಮ್ಮೆಯ ವಿಷಯ. ಕಾರ್ಯಪ್ಪರಿಗೆ ಈ ಸತ್ಯದ ಅರಿವಿಲ್ಲವೆ? ತಮ್ಮ ಮೂಗಿನ ನೇರಕ್ಕೆ ಬರೆದುಕೊಂಡ ಕೃತಿಗಳು
ಸತ್ಯ ಪ್ರತಿಪಾದಿಸುತ್ತವೆ ಎನ್ನುವುದು ಕತ್ತಲಲ್ಲಿ ಕರಿ ಬೆಕ್ಕು ಹುಡುಕಾಡಿ
ದಂತೆಯೇ ಸರಿ. ವ್ಯಕ್ತಿಯಲ್ಲಿನ ಪ್ರತಿಭೆಯು ಕಟ್ಟುವ ಕೆಲಸಕ್ಕೆ ಉಪಯೋಗ
ಆಗಬೇಕೇ ವಿನಾ ಕೆಡವುವ ಕೆಲಸಕ್ಕಲ್ಲ. ಗಾಂಧಿ ಹೆಸರಿನ ಪ್ರಬಲ ಸಂಘಟನೆ, ಜನಾಂಗ ಇಲ್ಲದಿರುವುದೇ ಅಡ್ಡಂಡ ಅವರಂಥವರ ವಿಕಟಾಟ್ಟಹಾಸ ಕಾರಣವಾಗಿದೆ. ಅವರ ನಾಟಕದಿಂದ ರಾಷ್ಟ್ರಪಿತನ ಬಗೆಗಿನ ನಮ್ಮ ಗೌರವ, ನಂಬುಗೆಯೇನೂ ಬದಲಾಗುವುದಿಲ್ಲ.

-ಶಿವಕುಮಾರ ಬಂಡೋಳಿ, ಯಾದಗಿರಿ

Dailyhunt
Disclaimer: This content has not been generated, created or edited by Dailyhunt. Publisher: Prajavani