Dailyhunt Logo
  • Light mode
    Follow system
    Dark mode
    • Play Story
    • App Story
ವಾಚಕರ ವಾಣಿ: ಸಹಕಾರ ಬ್ಯಾಂಕ್‌ಗಳ ಸ್ಥಿತಿ ಅಯೋಮಯ

ವಾಚಕರ ವಾಣಿ: ಸಹಕಾರ ಬ್ಯಾಂಕ್‌ಗಳ ಸ್ಥಿತಿ ಅಯೋಮಯ

ಸೌರ ವಿದ್ಯುತ್ ಉತ್ಪಾದಕರಿಗೆ ಬರೆ ಏಕೆ?

ಕರ್ನಾಟಕ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗವು ಸೌರ ವಿದ್ಯುತ್ ಉತ್ಪಾದಕ ರಿಂದ ವಿದ್ಯುತ್ ಖರೀದಿ ಮಾಡುವ ದರ ಇಳಿಸುವ ಪ್ರಸ್ತಾವವನ್ನು ಮಂಡಿಸಿದೆ. ಈಗಿರುವ ದರ ಪ್ರತಿ ಯೂನಿಟ್‌ಗೆ ₹3.03 (ಸಬ್ಸಿಡಿ ಸಹಿತ) ಮತ್ತು ₹4.03 (ಸಬ್ಸಿಡಿ ರಹಿತ).

ಮುಂದೆ ಅದು ಕ್ರಮವಾಗಿ ₹2.37 ಮತ್ತು ₹3.03ಕ್ಕೆ ಇಳಿಕೆ ಆಗಲಿದೆ. ಈಗಾಗಲೇ, ಸೌರ ವಿದ್ಯುತ್ ಉತ್ಪಾದಕರನ್ನು 'ಗೃಹಜ್ಯೋತಿ' ಯೋಜನೆ ಯಿಂದ ಹೊರಗಿಡಲಾಗಿದೆ. ಇದಕ್ಕೆ ನೀಡುವ ಕಾರಣ ಕೇಂದ್ರ ಸರ್ಕಾರದ ನೆರವು ಯೋಜನೆ. ಇದಕ್ಕೂ ರಾಜ್ಯ ಸರ್ಕಾರ ನೀಡುವ ಉಚಿತ ವಿದ್ಯುತ್‌ಗೂ ಇರುವ ಸಂಬಂಧವಾದರೂ ಏನು?

ಉತ್ತರಪ್ರದೇಶ, ದೆಹಲಿ, ಬಿಹಾರ, ತೆಲಂಗಾಣ, ಗುಜರಾತ್, ಹರಿಯಾಣದಲ್ಲಿ ಸೌರ ವಿದ್ಯುತ್ ಉತ್ಪಾದನೆಯನ್ನು ಉತ್ತೇಜಿಸಲು ಕೇಂದ್ರದ ಸಬ್ಸಿಡಿ ಜೊತೆಗೆ ಹೆಚ್ಚುವರಿ ಸಬ್ಸಿಡಿ ನೀಡಲಾಗುತ್ತಿದೆ. ಕರ್ನಾಟಕ ಸರ್ಕಾರ ಯಾವುದೇ ಸಬ್ಸಿಡಿ ಪಡೆಯದವರಿಗೂ ಉಚಿತ ವಿದ್ಯುತ್‌ ನಿರಾಕರಿಸಿರುವುದಲ್ಲದೆ ಈಗ ಖರೀದಿ ದರ ಇಳಿಸಲು ಹೊರಟಿದೆ. ಈಗಿರುವ ದರದಲ್ಲೇ ಸೌರ ಘಟಕಕ್ಕೆ ಹೂಡುವ ಹಣದಿಂದ ಬ್ಯಾಂಕ್‌ ನಿಶ್ಚಿತ ಠೇವಣಿ ಹಣದಷ್ಟೂ ಉಳಿತಾಯವಾಗದಿರುವಾಗ ಇನ್ನು ಹೊಸ ದರ ಅನ್ವಯವಾದರೆ ಯಾರೊಬ್ಬರೂ ಸೌರ ವಿದ್ಯುತ್‌ ಉತ್ಪಾದನೆಗೆ ಮುಂದೆ ಬರುವುದಿಲ್ಲ. ಹಸಿರು ಇಂಧನಕ್ಕೆ ಈ ರೀತಿಯ ನಿರುತ್ತೇಜನ ದೊರೆತರೆ ಶೂನ್ಯ ಇಂಗಾಲ ಸಾಧನೆಯ ಗುರಿ ತಲಪುವುದು ಹೇಗೆ?

⇒ಶ್ರೀಪತಿ ಎಲ್.ಕೆ., ಶಿವಮೊಗ್ಗ

ಅತಿಥಿ ಶಿಕ್ಷಕರ ಬಗ್ಗೆ ಮಲತಾಯಿ ಧೋರಣೆ

ಕಾಯಂ ಶಿಕ್ಷಕರಿಗೆ ಸಮನಾಗಿ ಅತಿಥಿ ಶಿಕ್ಷಕರು ಕೂಡ ಕೆಲಸ ನಿರ್ವಹಿಸುತ್ತಾರೆ. ಆದರೆ, ಅವರಿಗೆ ನೀಡುವ ವೇತನದಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗು ತ್ತಿದೆ. ಪ್ರಸ್ತುತ ಹೊರಗುತ್ತಿಗೆ ನೌಕರರಿಗೆ ಮಾಸಿಕ ಕನಿಷ್ಠ ₹23 ಸಾವಿರ ವೇತನ ನಿಗದಿಪಡಿಸಲಾಗಿದೆ. ಆದರೆ, ಅತಿಥಿ ಶಿಕ್ಷಕರಿಗೆ ಮಾಸಿಕ ₹12 ಸಾವಿರ ವೇತನ ನೀಡಲಾಗುತ್ತಿದೆ. ಶಿಕ್ಷಕರು ಉನ್ನತ ಕೌಶಲ ವಿಭಾಗದಲ್ಲಿ ಬರುತ್ತಾರೆ. ಅವರಿಗೆ ಕನಿಷ್ಠ ವೇತನ ನೀಡಿ ಅವರ ಕೆಲಸಕ್ಕೆ ನ್ಯಾಯ ಒದಗಿಸಬೇಕಿದೆ. ಜೊತೆಗೆ, ಖಾಲಿ ಇರುವ ಹುದ್ದೆಗಳಿಗೆ ಶಿಕ್ಷಕರನ್ನು ನೇಮಕಾತಿ ಮಾಡಬೇಕಿದೆ.

⇒ಆದರ್ಶ ಪಿ. ಆಗೇರ, ಅಂಕೋಲಾ

ಜಾತಿ ಪ್ರಮಾಣಪತ್ರ ಪಡೆಯಲು ಪರದಾಟ

ಸಿಇಟಿ ಕೋರ್ಸ್‌ಗಳಿಗೆ ಅವಧಿ ಮುಗಿದರೂ ವಿವಿಧ ಕಾರಣಗಳಿಂದ ಇನ್ನೂ ಶೇ 29.1ರಷ್ಟು ವಿದ್ಯಾರ್ಥಿಗಳು ಆಯ್ಕೆ ದಾಖಲಿಸಿಲ್ಲದಿರುವುದು ವರದಿಯಾಗಿದೆ. ವಿಶೇಷವಾಗಿ ಒಳಮೀಸಲಾತಿ ಬಯಸಿದ್ದ ಪರಿಶಿಷ್ಟ ಜಾತಿಯ ಸುಮಾರು 6,954 ವಿದ್ಯಾರ್ಥಿಗಳು ಆಯ್ಕೆ ದಾಖಲಿಸಲು ಸಾಧ್ಯವಾಗಿಲ್ಲ. ಒಳಮೀಸಲಾತಿ ಜಾತಿ ಪ್ರಮಾಣಪತ್ರದ ಆರ್‌ಡಿ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿದೆ. ಈ ಪ್ರಮಾಣಪತ್ರ ಸಿಗದ ಕಾರಣಕ್ಕೆ ಕೋರ್ಸ್ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಜಾತಿ ಪ್ರಮಾಣಪತ್ರ ನೀಡಲು ಅನುಸರಿಸುತ್ತಿರುವ ಪ್ರಕ್ರಿಯೆಯೇ ಇದಕ್ಕೆ ಕಾರಣ. ವಿಳಂಬ ಪ್ರಕ್ರಿಯೆಯಿಂದಾಗಿ ವಿವಿಧ ಕೋರ್ಸ್‌ಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಕನಸನ್ನು ಸರ್ಕಾರಗಳು ಹೊಸಕಿ ಹಾಕುತ್ತಿವೆ.

ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಪೊಲೀಸ್ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಜಾತಿ ಪ್ರಮಾಣಪತ್ರ ಕೇಳಲು ಹೋಗಿದ್ದ ಅಭ್ಯರ್ಥಿಯನ್ನು ತಹಶೀಲ್ದಾರ್ ಅವರು ಪೊಲೀಸರ ವಶಕ್ಕೆ ಒಪ್ಪಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿ. ವಿಳಂಬ ಮಾಡದೆ ಜಾತಿ ಪ್ರಮಾಣಪತ್ರ ನೀಡಲು ಸರ್ಕಾರ ಅಗತ್ಯ ಕ್ರಮವಹಿಸಬೇಕಿದೆ.

⇒ಸುಬ್ಬು ಹೊಲೆಯಾರ್, ಕೃಷ್ಣದಾಸ್, ಹಾಸನ

ಸಹಕಾರ ಬ್ಯಾಂಕ್‌ಗಳ ಸ್ಥಿತಿ ಅಯೋಮಯ

ರಾಜ್ಯದ ಹಲವೆಡೆ ಸಹಕಾರ ಬ್ಯಾಂಕ್‌ನ ಅಧ್ಯಕ್ಷರು ಮತ್ತು ನಿರ್ದೇಶಕರೇ ಗ್ರಾಹಕರ ಠೇವಣಿ ಹಣವನ್ನು ದೋಚಿದ್ದಾರೆ. ಕ್ರಿಮಿನಲ್ ಪ್ರಕರಣ ದಾಖಲಾಗಿ ಜೈಲಿಗೂ ಹೋಗಿ ಜಾಮೀನು ಪಡೆದು ಹೊರಬಂದಿದ್ದಾರೆ. ಆದರೂ, ಸಹಕಾರ ಇಲಾಖೆಯ
ಆಡಳಿತವನ್ನು ಉತ್ತಮಪಡಿಸಲು ಪ್ರಾಮಾಣಿಕ ವ್ಯಕ್ತಿಗಳನ್ನು ಅಧ್ಯಕ್ಷ ಮತ್ತು ನಿರ್ದೇಶಕರನ್ನಾಗಿ ನೇಮಿಸುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ. ಮತ್ತೊಂದು ಕಡೆ ರಾಜ್ಯ ಅಪೆಕ್ಸ್ ಬ್ಯಾಂಕ್‌ನ 93 ಸಹಾಯಕರ ಹುದ್ದೆಗಳ ನೇಮಕಾತಿ ಪರೀಕ್ಷೆಯು 2024ರ ಸೆಪ್ಟೆಂಬರ್‌ನಲ್ಲಿ ನಡೆದಿತ್ತು. ಅದೇ ವರ್ಷದ ಡಿಸೆಂಬರ್‌ನಲ್ಲಿ ಪರಿಷ್ಕೃತ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಇಂದಿಗೂ ನೇಮಕಾತಿ ಪತ್ರ ನೀಡಿಲ್ಲ. ನಿಯಮಬಾಹಿರವಾಗಿ ವೈಯಕ್ತಿಕ ಸಂದರ್ಶನದ ನೆಪ ಹೇಳಲಾಗುತ್ತಿದೆ. ಅಭ್ಯರ್ಥಿ ಗಳ ಹಿತರಕ್ಷಣೆಗೆ ಸರ್ಕಾರ ಮುಂದಾಗಬೇಕಿದೆ. ತ್ವರಿತವಾಗಿ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಬೇಕು.

⇒ಎಸ್.ಎನ್. ರಮೇಶ್, ಸಾತನೂರು

ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂ

ಪ್ರಧಾನಿ ನರೇಂದ್ರ ಮೋದಿಯವರು ₹29 ಸಾವಿರ ಕೋಟಿ ಮೌಲ್ಯದ 'ಉಡಾನ್' ಯೋಜನೆ ಉದ್ಘಾಟಿಸಿದ್ದಾರೆ. 'ಪ್ರಾದೇಶಿಕ ವಾಯು ಸಂಪರ್ಕ ದಲ್ಲಿ ಹೊಸ ದಶಕದ ಆರಂಭ' ಎಂಬ ಈ ಘೋಷಣೆಯು ಹೊಟ್ಟೆಗೆ ಹಿಟ್ಟಿಲ್ಲ ದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತಿದೆ. ಸಾಮಾನ್ಯ ನಾಗರಿಕನೊಬ್ಬ ವಿಮಾನಗಳಲ್ಲಿ ಪ್ರಯಾಣಿಸಲು ಸಾಧ್ಯವಿದೆಯೆ? ಬುಲೆಟ್ ರೈಲಿನ ಹಾಗೆ ಇದೂ ಶ್ರೀಮಂತರು ಹಾಗೂ ರಾಜಕಾರಣಿಗಳಿಗೆ ಉಪಯೋಗವಾದೀತು ಅಷ್ಟೆ. ಹಳ್ಳಿಗಾಡಿನವರಿಗೆ ಉದ್ಯೋಗದ ಭದ್ರತೆ ನೀಡಿದ್ದ ಮನರೇ‌ಗಾ ಯೋಜನೆ ರದ್ದುಪಡಿಸಿ 'ವಿಬಿ- ಜಿ ರಾಮ್ ಜಿ' ಜಾರಿಗೊಳಿಸಲಾಗಿದೆ. ಇದು
ಬಡವರ ಉದ್ಯೋಗ ಖಾತರಿ ಹಕ್ಕನ್ನು ಮೊಟಕುಗೊಳಿಸಿದೆ. ಕಳೆದ ವರ್ಷದ ಜಾಗತಿಕ ಹಸಿವಿನ ಸೂಚ್ಯಂಕದ ಪ್ರಕಾರ 123 ರಾಷ್ಟ್ರಗಳ ಪೈಕಿ ಭಾರತವು 102ನೇ ಸ್ಥಾನದಲ್ಲಿದೆ. ಅದಾನಿ, ಅಂಬಾನಿ ಕಿಸೆಯ ಪಾಲಾಗಿರುವ ಬಂದರುಗಳು, ದುಂದುವೆಚ್ಚದ ಷಟ್ಪಥ, ದಶಪಥ ಹೆದ್ದಾರಿಗಳು ಭಾರತದ ಆದ್ಯತೆ ಗಳಾಗುತ್ತಿರುವುದು ಎಷ್ಟರಮಟ್ಟಿಗೆ ಸಮರ್ಥನೀಯ.

ಪು‌.ಸೂ. ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

Dailyhunt
Disclaimer: This content has not been generated, created or edited by Dailyhunt. Publisher: Prajavani