Dailyhunt Logo
  • Light mode
    Follow system
    Dark mode
    • Play Story
    • App Story
ವಚನ ಮತ್ತು ದಾಸ ಸಾಹಿತ್ಯ ಕನ್ನಡ ಭಾಷೆಯ ಕಣ್ಣುಗಳು: ಡಾ.ಶರಣಪ್ರಕಾಶ

ವಚನ ಮತ್ತು ದಾಸ ಸಾಹಿತ್ಯ ಕನ್ನಡ ಭಾಷೆಯ ಕಣ್ಣುಗಳು: ಡಾ.ಶರಣಪ್ರಕಾಶ

ಯಾದಗಿರಿ: 'ಕಲ್ಯಾಣ ಕರ್ನಾಟಕವು ಕನ್ನಡ ‌ಭಾಷೆಗೆ ವಿಶೇಷವಾದ ಕೊಡುಗೆಗಳನ್ನು ನೀಡಿದ್ದು, ಅವುಗಳಲ್ಲಿನ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯವು ಕನ್ನಡ ಭಾಷೆಯ ಎರಡು ಕಣ್ಣುಗಳು ಇದ್ದಂತೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ರಾಜ್ಯೋತ್ಸವ ದಿನಾಚರಣೆ ಸಮಿತಿ ಹಾಗೂ ಭಾವೈಕ್ಯತಾ‌ ಸಮಿತಿ ವತಿಯಿಂದ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ‌ ಅವರು ಮಾತನಾಡಿದರು.

​'12ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯ ಮತ್ತು 15ನೇ ಶತಮಾನದಲ್ಲಿನ ದಾಸ ಸಾಹಿತ್ಯವು ಇವತ್ತಿನ ಕನ್ನಡ ಭಾಷೆಯ ಎರಡು ಕಣ್ಣುಗಳಾಗಿವೆ. ಮಾತ್ರವಲ್ಲದೆ, ಅಧ್ಯಾತ್ಮದ ಲೋಕದಲ್ಲೂ ಕನ್ನಡ ಭಾಷೆಗೆ ಬಹಳ ದೊಡ್ಡ ಮೆರುಗನ್ನು ತಂದು ಕೊಟ್ಟಿವೆ. ಇವತ್ತು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ‌ಸಿಗುವುದಕ್ಕೆ ರಾಷ್ಟ್ರಕೂಟರ ಕಾಲದಲ್ಲಿನ ಕವಿರಾಜ್ಯಮಾರ್ಗ ಕೃತಿಯೂ ಒಂದಾಗಿದೆ ಎಂಬುದನ್ನು ನಾವು ಯಾರೂ ಮರೆಯುವಂತಿಲ್ಲ' ಎಂದ ಸ್ಮರಿಸಿದರು.

'ಹೊಯ್ಸಳರು, ಶಾತವಾಹನರು, ರಾಷ್ಟ್ರಕೂಟರು, ಗಂಗರು, ಕದಂಬರು, ಚಾಲುಕ್ಯರು, ವಿಜಯನಗರದ ಅರಸರು, ಮೈಸೂರಿನ ಒಡೆಯರು ಕರ್ನಾಟಕವನ್ನು ಆಳಿ, ನಮ್ಮ ಭಾಷೆ ಮತ್ತು ಸಂಸ್ಕೃತಿಗೆ ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ. ಔದ್ಯೋಗಿಕವಾಗಿ ಹೊರ ರಾಜ್ಯ ಮತ್ತು ಹೊರ ದೇಶಗಳಲ್ಲಿ ಇದ್ದರೂ ಕನ್ನಡ ಭಾಷೆಯನ್ನು ಮರೆಯಬಾರದು. ನಮ್ಮ ಹಿರಿಯರು ಹೇಳಿದಂತೆ, 'ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ' ಎಂಬುದನ್ನು ಮರೆಯಬಾರದು' ಎಂದರು.

'ತಾಯಿಯ ವಾತ್ಸಲ್ಯ ಹಾಗೂ ಮಾತೃಭಾಷೆಗಿಂತ ಮಿಗಿಲಾದದ್ದು ಮತ್ತೊಂದು‌ ಇಲ್ಲ ಎಂಬ ಆಲೋಚನೆ ಮತ್ತು ಭಾವನೆ ಕನ್ನಡಿಗರಲ್ಲಿದೆ. ಈ ದಿನದ ರಾಜ್ಯೋತ್ಸವದ ಉತ್ಸವ ನಮ್ಮೆಲ್ಲರಲ್ಲಿಯೂ ನಿತ್ಯದ ಉತ್ಸವ ಆಗಬೇಕು. ನಮ್ಮ ನಾಡು ಶಾಂತಿ ನೆಮ್ಮದಿಯಿಂದ ಸೌಹಾರ್ದತೆಯಿಂದ ಮುಂದುವರೆಯಬೇಕು' ಎಂದು ಹೇಳಿದರು.

ಜಿಲ್ಲಾ ಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್ ಪಡೆ, ಅರಣ್ಯ ಪಡೆ, ಅಗ್ನಿಶಾಮಕ ಪಡೆ, ಶಾಲಾ ತಂಡಗಳ ಗೌರವ ವಂದನೆಯನ್ನು ಸಚಿವರು ಸ್ವೀಕರಿಸಿದರು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳ ಪ್ರದರ್ಶನ ಜರುಗಿತು.

ಕಾರ್ಯಕ್ರಮದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, 'ಯುಡಾ' ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಎಸ್‌ಪಿ ಪೃಥ್ವಿಕ್ ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಎಸ್.ಹೊಟ್ಟಿ ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani