Dailyhunt
ವೈಭವ್ ಸೂರ್ಯವಂಶಿಗೆ ಹೆಚ್ಚು ಪ್ರಚಾರ ಬೇಡ: ಮಾಜಿ ಆಟಗಾರ ಗವಾಸ್ಕರ್ ಎಚ್ಚರಿಕೆ

ವೈಭವ್ ಸೂರ್ಯವಂಶಿಗೆ ಹೆಚ್ಚು ಪ್ರಚಾರ ಬೇಡ: ಮಾಜಿ ಆಟಗಾರ ಗವಾಸ್ಕರ್ ಎಚ್ಚರಿಕೆ

'ವೈಭವ್ ಸೂರ್ಯವಂಶಿಯ ಬಗ್ಗೆ ಹೆಚ್ಚು ಪ್ರಚಾರ ಮಾಡುವುದನ್ನು ಮೊದಲು ನಿಲ್ಲಿಸಿರಿ. ಒಬ್ಬ ಆಟಗಾರನ ಮೇಲೆ ನಿರೀಕ್ಷೆಗಳು ಹೆಚ್ಚಾದರೆ, ಆಟಗಾರ ಒತ್ತಡಕ್ಕೆ ಒಳಗಾಗುತ್ತಾನೆ. ಇದು ಆತನ ವೃತ್ತಿ ಬದುಕಿಗೂ ಮುಳುವಾಗಬಹುದು' ಎಂದು ಭಾರತ ತಂಡದ ಮಾಜಿ ಆಟಗಾರ ಸುನೀಲ್ ಗವಾಸ್ಕರ್‌ ಎಚ್ಚರಿಸಿದ್ದಾರೆ.

ರಾಜಸ್ಥಾನ ರಾಯಲ್ಸ್‌ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಸುದ್ದಿಯಲ್ಲಿದ್ದಾರೆ. 2026ರ ಐಪಿಎಲ್‌ ಟೂರ್ನಿಯಲ್ಲಿ ವಿಶ್ವದ ಪ್ರಮುಖ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಿದ್ದಾರೆ. 15 ವರ್ಷ‌ದ ಸೂರ್ಯವಂಶಿಯ ಸ್ಫೋಟಕ ಬ್ಯಾಟಿಂಗ್ ನೋಡಿ ಇಡೀ ಕ್ರಿಕೆಟ್ ಜಗತ್ತು ಅಚ್ಚರಿಗೀಡಾಗಿದೆ.

ವೈಭವ್ ಸೂರ್ಯವಂಶಿಯ ಆಟಕ್ಕೆ ಭಾರತ ತಂಡದ ಮಾಜಿ ಆಟಗಾರ ಸುನಿಲ್‌ ಗವಾಸ್ಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಬೂಮ್ರಾ ಅವರ ವಿರುದ್ಧ ವೈಭವ್‌ ಚಚ್ಚಿದ ಸಿಕ್ಸರ್‌ಗಳ ಕುರಿತು ಮಾತನಾಡಿದ್ದಾರೆ. 'ವೈಭವ್ ಸೂರ್ಯವಂಶಿ ಅವರಿಗೆ ಬೌಲಿಂಗ್‌ನ ಲೆಂತ್‌ ಮತ್ತು ಲೈನ್ ಅನ್ನು ಬೇಗನೆ ಗುರುತಿಸಿ ಆಟವಾಡುವ ಕೌಶಲ್ಯವಿದೆ' ಎಂದಿದ್ದಾರೆ.

'ಬೂಮ್ರಾ ವಿರುದ್ಧ ಇಂತಹ ಆಟವಾಡುವ ಯಾವುದೇ ಬ್ಯಾಟರ್ ಅನ್ನು ಈವರೆಗೆ ನಾನು ನೋಡಿರಲಿಲ್ಲ. ಇವನ ಆಟ ಉತ್ತಮವಾಗಿದೆ ಆದರೆ ಹೆಚ್ಚು ಪ್ರಚಾರ ಬೇಡ' ಎಂದಿದ್ದಾರೆ.

'ಹೆಚ್ಚು ಪ್ರಚಾರದಿಂದಾಗಿ ಎದುರಾಳಿ ತಂಡಗಳು ವೈಭವ್ ಅವರು ದೌರ್ಬಲ್ಯಗಳ ಕಡೆ ಹೆಚ್ಚು ಗಮನವಹಿಸುತ್ತಾರೆ. ಅವನ ಆಟದ ಶೈಲಿಯನ್ನು ಅಧ್ಯಯನ ಮಾಡುತ್ತಾರೆ. ಇದರಿಂದ ಆಟದಲ್ಲಿ ಆತನಿಗೆ ಹಿನ್ನೆಡೆಯಾಗಬಹುದು. ಇದು ಆತನನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುವ ಅಪಾಯಗಳಿವೆ' ಎಂದಿದ್ದಾರೆ.

'ವೈಭವ್ ಉತ್ತಮವಾಗಿ ಆಡುತ್ತಿದ್ದಾರೆ. ಇದರ ಜೊತೆಗೆ ಅವರ ದೌರ್ಬಲ್ಯವನ್ನು ಸುಧಾರಿಸಿಕೊಳ್ಳುವ ಕಡೆಗೂ ಗಮನವಹಿಸಬೇಕು. ಆಗ ಮಾತ್ರ ದೀರ್ಘಕಾಲದ ವರೆಗೆ ಆಟದಲ್ಲಿ ಉಳಿಯಲು ಸಾಧ್ಯವಾಗುತ್ತದೆ' ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani