Dailyhunt Logo
  • Light mode
    Follow system
    Dark mode
    • Play Story
    • App Story
ವೈಜ್ಞಾನಿಕ ಪದ್ಧತಿಯಲ್ಲಿ ಮೀನು ಸಾಕಾಣಿಕೆ: ಆದಾಯ ಹೆಚ್ಚು

ವೈಜ್ಞಾನಿಕ ಪದ್ಧತಿಯಲ್ಲಿ ಮೀನು ಸಾಕಾಣಿಕೆ: ಆದಾಯ ಹೆಚ್ಚು

ತ್ಯಾಗರ್ತಿ: 'ರೈತರು ವೈಜ್ಞಾನಿಕ ಪದ್ಧತಿಯಲ್ಲಿ ಮೀನು ಸಾಕಾಣಿಕೆ ಕೈಗೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯ ಗಳಿಸಿ ಆರ್ಥಿಕ ಪ್ರಗತಿ ಸಾಧಿಸಬಹುದು' ಎಂದು ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಶಾಮರಾವ ಜಾಗೀರದಾರ ಹೇಳಿದರು.

ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಇರುವಕ್ಕಿ ಕೃಷಿ ಆವರಣದಲ್ಲಿ ಆಯೋಜಿಸಿದ್ದ ಮೀನು ಕೃಷಿ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

'ರೈತರು ಹಾಗೂ ಆಸಕ್ತರು ವಿಶ್ವವಿದ್ಯಾಲಯದ ತಜ್ಞರ ಮಾರ್ಗದರ್ಶನ ಪಡೆದು ವೈಜ್ಞಾನಿಕ ವಿಧಾನದಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಮೀನು ಸಾಕಾಣಿಕೆ ಕೈಗೊಂಡು ಸ್ವಯಂ ಉದ್ಯೋಗದ ಜೊತೆಗೆ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಮೀನುಗಾರಿಕೆ ತಂತ್ರಜ್ಞಾನವನ್ನು ರೈತರಿಗೆ ಪರಿಚಯಿಸುವ ಕಾರ್ಯವನ್ನು ವಿ.ವಿ ನಿರಂತರವಾಗಿ ನಡೆಸುತ್ತಿದೆ' ಎಂದು ತಿಳಿಸಿದರು.

'ಮೀನುಕೃಷಿ ರೈತರಿಗೆ ಹಾಗೂ ಗ್ರಾಮೀಣ ಯುವಕರಿಗೆ ಉತ್ತಮ ಆದಾಯ ತರುವ ಉದ್ಯಮವಾಗಿ ಬೆಳೆಯುತ್ತಿದೆ. ವೈಜ್ಞಾನಿಕ ಮೀನು ಸಾಕಾಣಿಕೆ ವಿಧಾನಗಳು, ಗುಣಮಟ್ಟದ ಮೀನು ಮರಿಗಳ ಆಯ್ಕೆ, ಸಮರ್ಪಕ ಆಹಾರ ನಿರ್ವಹಣೆ ಹಾಗೂ ರೋಗ ನಿಯಂತ್ರಣ ಕ್ರಮಗಳನ್ನು ಅನುಸರಿಸುವ ಮೂಲಕ ಗರಿಷ್ಠ ಉತ್ಪಾದನೆ ಮತ್ತು ಹೆಚ್ಚಿನ ಲಾಭ ಗಳಿಸಬಹುದು' ಎಂದು ಮೀನುಗಾರರ ಸಂಘದ ರಾಷ್ಟ್ರೀಯ ಘಟಕದ ಅಧ್ಯಕ್ಷ ದೇವಿ ಪ್ರಸಾದ್ ಹೆಜ್ಮಾಡಿ ಹೇಳಿದರು.

ವಿಸ್ತರಣಾ ನಿರ್ದೇಶಕ ರಾಘವೇಂದ್ರ ಕೆ. ಮೇಸ್ತ ಮಾತನಾಡಿದರು. ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಬಿ.ಡಿ. ರವಿಕುಮಾರ್, ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ರಾಮಕೃಷ್ಣ ಹೆಗಡೆ, ಸಹಾಯಕ ಪ್ರಾಧ್ಯಾಪಕರಾದ ಶಾಂತನಗೌಡ, ಸಹಾಯಕ ನಿರ್ದೇಶಕ ರಾಘವೇಂದ್ರ ಕೆ.ಎಸ್., ಕೃಷ್ಣಾ ರೆಡ್ಡಿ, ಸಹ ವಿಸ್ತರಣಾ ನಿರ್ದೇಶಕ ಬಿ.ಸಿ ಹನುಮಂತ ಸ್ವಾಮಿ ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು, ವಿವಿಧ ವಿಭಾಗಗಳ ಸಿಬ್ಬಂದಿ ಉಪಸ್ಥಿತರಿದ್ದರು.

ರೈತರು, ಮೀನು ಕೃಷಿಕರು ತರಬೇತಿಯಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260723-42-1190004929

Dailyhunt
Disclaimer: This content has not been generated, created or edited by Dailyhunt. Publisher: Prajavani