ಪ್ರಜಾವಾಣಿ ವಾರ್ತೆ
ಬೆಂಗಳೂರು: ವೈಟ್ ಟಾಪಿಂಗ್ ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೆ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಅಮೃತಹಳ್ಳಿ ಮುಖ್ಯರಸ್ತೆ, ರೈಲ್ವೆ ಮೇಲ್ಸೇತುವೆ ಜಕ್ಕೂರು ರಸ್ತೆ(ರೈತ ಸಂತೆ ರಸ್ತೆ), ಅಲ್ಲಾಳಸಂದ್ರ ರಸ್ತೆ, ಎಲ್ ಆಯಂಡ್ ಟಿ ರಸ್ತೆ, ರಾಜೀವ್ ಗಾಂಧಿ ನಗರ ರೈಲ್ವೆ ಸಮಾನಾಂತರ ರಸ್ತೆ ಹಾಗೂ ಸಹಕಾರನಗರ 20ನೇ ಅಡ್ಡರಸ್ತೆ ಕಾಮಗಾರಿ ಸ್ಥಳಗಳಿಗೆ ಶುಕ್ರವಾರ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು.
ಅಮೃತಹಳ್ಳಿ ಮುಖ್ಯರಸ್ತೆಯಲ್ಲಿ 800 ಮೀಟರ್ ಉದ್ದದ ವೈಟ್ ಟಾಪಿಂಗ್‌ನಲ್ಲಿ 400 ಮೀಟರ್ ಉದ್ದದ ಕಾಮಗಾರಿ ನಡೆದಿದೆ. ಉಳಿದ ಕಾಮಗಾರಿಯನ್ನು ಶೀರ್ಘ ಪೂರ್ಣಗೊಳಿಸಬೇಕು. ಆರ್.ಎಫ್.ಪಿ ಷರತ್ತುಗಳಂತೆ ಅನುಭವಿ ಪಿಎಂಸಿ ಪ್ರಮುಖ ಸಿಬ್ಬಂದಿ ಕಾಮಗಾರಿ ನಡೆಯುವ ಅವಧಿಯಲ್ಲಿ ಸ್ಥಳದಲ್ಲಿಯೇ ಹಾಜರಿರುವುದನ್ನು ಖಚಿತಪಡಿಸಬೇಕು. ಅಲ್ಲದೆ, ರಸ್ತೆ ಜಂಕ್ಷನ್‌ಗಳು ಹಾಗೂ ತಿರುವುಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯವಾದ ಟರ್ನಿಂಗ್ ರೇಡಿಯಸ್ ಒದಗಿಸುವಂತೆ ಸೂಚಿಸಿದರು.
ಕಾಮಗಾರಿಗಳ ಮೇಲ್ವಿಚಾರಣೆಗಾಗಿ ಎಲ್ಲಾ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಹಾಗೂ ಅರ್ಕಾವತಿ ರಸ್ತೆಯ ಡಾಂಬರೀಕರಣಕ್ಕೆ ಸಂಬಂಧಿಸಿದಂತೆ ಬಿಡಿಎಗೆ ಅಧಿಕೃತ ಪತ್ರ ಕಳುಹಿಸಲು ನಿರ್ದೇಶನ ನೀಡಿದರು.
ಜಕ್ಕೂರು ರೈತ ಸಂತೆ ರಸ್ತೆಯಲ್ಲಿ ಬಹುತೇಕ ಎಲ್ಲಾ ಕಾಮಗಾರಿಗಳು ಮುಗಿದಿದ್ದು ಲೈನ್ ಮಾರ್ಕಿಂಗ್ ಕೈಗೊಳ್ಳಬೇಕು. ಅಲ್ಲಾಳಸಂದ್ರದ ವೈಟ್ ಟಾಪಿಂಗ್ ಕಾಮಗಾರಿಯು ಪ್ರಗತಿಯಲ್ಲಿದೆ. ಕೇಬಲ್‌ಗಳಿಗೆ ಹಾನಿಯಾಗುತ್ತಿದ್ದು ಯಂತ್ರಗಳ ಬದಲು ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಮಣ್ಣು ಅಗೆಯುವಂತೆ ಸೂಚಿಸಿದರು.

