ರೋಣ: 'ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲಿನ ದಾಳಿಗಳು ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವ ಮೂಲಕ ವಕೀಲರಿಗೆ ರಕ್ಷಣೆ ನೀಡಬೇಕು' ಎಂದು ರೋಣ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಜಿ.ಮತ್ತಿಕಟ್ಟಿ ಆಗ್ರಹಿಸಿದರು.
ಇತ್ತೀಚೆಗೆ ಹೆಚ್ಚಾಗುತ್ತಿರುವ ವಕೀಲರ ಮೇಲೆ ದೌರ್ಜನ್ಯ, ಹಲ್ಲೆ ಖಂಡಿಸಿ ವಕೀಲರ ಸಂಘ, ಕರ್ನಾಟಕ ರಾಜ್ಯ ವಕೀಲರ ಪರಿಷತ್, ಬೆಂಗಳೂರು ವಕೀಲರ ಸಂಘದ ಕರೆಯ ಮೇರೆಗೆ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
'ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸರ್ಕಾರ ಈ ಕುರಿತು ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ. ವಕೀಲರ ಗೌರವ, ಘನತೆ, ಸ್ವಾಭಿಮಾನಕ್ಕೆ ಪ್ರತಿದಿನ ರಾಜ್ಯದ ಹಲವೆಡೆ ಧಕ್ಕೆಯಾಗುತ್ತಿದ್ದು, ವಕೀಲ ವೃತ್ತಿ ನಡೆಸುವುದೇ ಕಠಿಣವಾಗಿದೆ. ಗೌರಿಬಿದನೂರಿನಲ್ಲಿ ನಡೆದ ಘಟನೆ ಮತ್ತೆ ರಾಜ್ಯದ ಯಾವುದೇ ಭಾಗದಲ್ಲಿ ನಡೆಯದಂತೆ ಸೂಕ್ತ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು' ಎಂದು ಮನವಿ ಮಾಡಿದರು.
ವಕೀಲರ ಸಂಘದ ರೋಣ ತಾಲ್ಲೂಕು ಘಟಕದ ಉಪಾಧ್ಯಕ್ಷ ವಿ.ಎಸ್.ಮಠದ, ಕಾರ್ಯದರ್ಶಿ ಎಂ.ಎಚ್.ಮುಲ್ಲಾ ಸೇರಿದಂತೆ ಸದಸ್ಯರಾದ ಉಮೇಶ ಸಂಗನಾಳಮಠ, ಬಿ.ಎ.ಸಜ್ಜನ, ಕುಮಾರ ಚಿತ್ರಗಾರ, ಸಿ.ಬಿ.ಕೊಪ್ಪದ, ವಿ.ಡಿ.ಪಾವಸ್ಕರ, ಎಸ್.ಎಮ್.ಡಂಬಳ, ಜಿ.ಎಂ.ಹೆಬ್ಬಳ್ಳಿಮಠ, ಎಲ್.ಬಿ.ಹಿರೇಗೌಡ್ರ, ಎಸ್.ಆರ್.ಕಿರೇಸೂರ, ಬಿ.ಆರ್.ದೊಡ್ಡಮನಿ, ಎಲ್.ಎನ್.ಬಾಣದ ಇದ್ದರು.
ಲಕ್ಷ್ಮೇಶ್ವರ: ರಾಜ್ಯದಲ್ಲಿ ಮೇಲಿಂದ ಮೇಲೆ ವಕೀಲರ ಮೇಲೆ ಹಲ್ಲೆಗಳು ನಡೆಯುತ್ತಿವೆ. ವಕೀಲರ ರಕ್ಷಣಾ ಕಾಯ್ದೆಯನ್ನು ಇನ್ನಷ್ಟು ಬಲಪಡಿಸುವ ಮೂಲಕ ಅವರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ಕ್ಷ್ಮೇಶ್ವರ ವಕೀಲರ ಸಂಘದ ಅಧ್ಯಕ್ಷ ವಿ.ಬಿ. ನೇಕಾರ ಹಾಗೂ ನಿಕಟಪೂರ್ವ ಅಧ್ಯಕ್ಷ ಬಸವರಾಜ ಬಾಳೆಶ್ವರಮಠ ನೇತೃತ್ವದಲ್ಲಿ ತಹಶೀಲ್ದಾರ್ ಎಂ.ಧನಂಜಯ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಅಧ್ಯಕ್ಷ ಬಿ.ವಿ. ನೇಕಾರ, 'ಜನರಿಗೆ ನ್ಯಾಯ ಒದಗಿಸಲು ವಕೀಲರು ಹೋರಾಟ ಮಾಡುತ್ತಾರೆ. ಆದರೆ ರಾಜ್ಯದ ಅನೇಕ ಕಡೆ ದುಷ್ಟರಿಂದ ಹಲ್ಲೆ, ಕೊಲೆ ಯತ್ನ ನಡೆಯುತ್ತಿವುದು ಖಂಡನೀಯ. ಈಚೆಗೆ ಅನ್ನಪೂರ್ಣೇಶ್ವರಿ ನಗರದ ವಕೀಲ ಮಂಜುನಾಥ ಹಾಗೂ ವೈಟ್ಫೀಲ್ಡ್ ಶ್ರೀರಾಮ್ ಅವರ ಬರ್ಬರ ಹತ್ಯೆ ಹಾಗೂ ಗೌರಿಬಿದನೂರಿನ ವಕೀಲ ವೆಂಕಟರಮಣ ಸನ್ನಕಿ ಅವರ ಮೇಲೆ ನಡೆದ ಹತ್ಯೆಯ ಪ್ರಯತ್ನದ ಘಟನೆಗಳು ಇಡೀ ವಕೀಲ ಸಮುದಾಯದಲ್ಲಿ ಭಯ ಮೂಡುವಂತೆ ಮಾಡಿವೆ. ವೃತ್ತಿ ನಿರ್ವಹಣೆಯಲ್ಲಿ ವಕೀಲರಿಗೆ ಸೂಕ್ತ ಭದ್ರತೆ ನೀಡಬೇಕು' ಎಂದು ಆಗ್ರಹಿಸಿದರು.
ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದರು.
261104-23-325011866

