Dailyhunt Logo
  • Light mode
    Follow system
    Dark mode
    • Play Story
    • App Story
ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ಸಿಂಧನೂರು: ವಕೀಲರ ರಕ್ಷಣೆ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಕೀಲರ ಪರಿಷತ್ ಹಾಗೂ ಬೆಂಗಳೂರು ವಕೀಲರ ಸಂಘ ನಡೆಸುತ್ತಿರುವ ಹೋರಾಟಕ್ಕೆ ಸಿಂಧನೂರು ತಾಲ್ಲೂಕು ವಕೀಲರ ಸಂಘ ಬೆಂಬಲಿಸಿ ಮಂಗಳವಾರ ತುರ್ತು ಸಭೆ ನಡೆಸಿ ಕಾರ್ಯಕಲಾಪ ಬಹಿಷ್ಕರಿಸಿ ನ್ಯಾಯಾಲಯದ ಆವರಣದಿಂದ ಗಾಂಧಿ ವೃತ್ತದ ಮೂಲಕ ಮಿನಿವಿಧಾನಸೌಧವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.

ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಭೀಮನಗೌಡ ಮಾತನಾಡಿ, 'ಇತ್ತೀಚಿನ ದಿನಗಳಲ್ಲಿ ರಾಜ್ಯದ ಎಲ್ಲ ಕಡೆಯ ನ್ಯಾಯಾಲಯಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ವಕೀಲರ ಮೇಲೆ ಹಲ್ಲೆ, ಕೊಲೆ, ಸುಳ್ಳು ಕ್ರಿಮಿನಲ್ ಪ್ರಕರಣ ದಾಖಲು ನಡೆಯುತ್ತಿವೆ. ಸರ್ಕಾರ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳದೆ ತೀವ್ರ ನಿರ್ಲಕ್ಷ್ಯ ವಹಿಸಿದೆ. ಇದರಿಂದ ವಕೀಲರು ಭಯದ ವಾತಾವರಣದಲ್ಲಿ ಬದುಕುವ ದುಸ್ಥಿತಿ ನಿರ್ಮಾಣವಾಗಿದೆ' ಎಂದು ಕಳವಳ ವ್ಯಕ್ತಪಡಿಸಿದರು.

'ವಕೀಲರ ಮೇಲೆ ಹಲ್ಲೆ, ಕೊಲೆ ಘಟನೆಗಳು ಮರುಕಳಿಸದಂತೆ ದಿಟ್ಟ ಕ್ರಮ ಕೈಗೊಳ್ಳಬೇಕು ಮತ್ತು ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಘಟನೆಯಲ್ಲಿ ನೊಂದ ವಕೀಲರ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು. ವಕೀಲರ ರಕ್ಷಣೆ ಕಾಯ್ದೆ ಸೂಕ್ತ ರೀತಿಯಲ್ಲಿ ಜಾರಿಯಾಗುವಂತೆ ಕ್ರಮ ವಹಿಸಬೇಕು ಮತ್ತು ಈಗಿರುವ ಕಾಯ್ದೆಯನ್ನು ತಿದ್ದುಪಡಿ ಮಾಡಿ ಬಿಗಿಗೊಳಿಸಬೇಕು. ರಾಜ್ಯ ಸರ್ಕಾರ ಹಿಂದೆ ವಕೀಲರ ಸಂಘಗಳಿಗೆ ವರ್ಷಕ್ಕೆ ಅನುದಾನ ನೀಡುತ್ತಿತ್ತು. ಈಗ ಅದನ್ನು ಸರ್ಕಾರ ಕೊಡುವುದನ್ನು ನಿಲ್ಲಿಸಿದೆ. ಆ ಅನುದಾನ ಪುನರ್ ನೀಡುವ ಪ್ರಕ್ರಿಯೆ ಆರಂಭಿಸಬೇಕು. ಕಿರಿಯ ವಕೀಲರಿಗೆ ನೀಡುವ ಗೌರವಧನ ಹೆಚ್ಚಿಸಬೇಕು' ಎಂದು ಆಗ್ರಹಿಸಿದರು.

'ಮಹಿಳಾ ವಕೀಲರಿಗೆ ನ್ಯಾಯಾಲಯ ಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ವಕೀಲರ ಕಲ್ಯಾಣಕ್ಕಾಗಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಮತ್ತು ಸರ್ಕಾರದಿಂದ ವಕೀಲರ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ ಅನುದಾನ ಮೀಸಲಿಡಬೇಕು. ಎಸ್‌ಸಿ, ಎಸ್‌ಟಿ ವಕೀಲರಿಗೆ ಸ್ವಂತ ಕಚೇರಿಗಾಗಿ ಸರ್ಕಾರ ದಿಂದ ₹10 ಲಕ್ಷ ವಿಶೇಷ ಅನುದಾನ ನೀಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದರು.

ಮಸ್ಕಿ ವಕೀಲರ ಸಂಘದ ಅಧ್ಯಕ್ಷ ಎಚ್. ವೀರಭದ್ರಪ್ಪ ಅವರು, ತಹಶೀಲ್ದಾರ್ ಅರುಣ್ ಎಚ್. ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು.

ವಕೀಲರ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಕೆ. ಜಗದೀಶ, ಕಾರ್ಯದರ್ಶಿ ದುರುಗೇಶ ನಾಯಕ, ಸಹ ಕಾರ್ಯದರ್ಶಿ ಹೀನಾ ಅಮ್ರೀನ್, ಖಜಾಂಚಿ ಶೇಖರಪ್ಪ ಗಡೇದ್, ವಕೀಲ ಜಿಎಸ್‌ಆರ್‌ಕೆ ರೆಡ್ಡಿ, ಡಿ.ಎಸ್. ಕಲ್ಮಠ, ಕೆ.ವೀರನಗೌಡ, ಎಚ್. ಪಂಪಾಪತಿ, ಪ್ರಹ್ಲಾದಗುಡಿ, ಜೆ. ರಾಯಪ್ಪ, ಶೇಖರಪ್ಪ ಧುಮತಿ, ಭೀಮರಾಯಪ್ಪ, ಲಕ್ಷ್ಮಣ ನಾಯಕ, ವೀರೇಶ ಗದ್ರಟಗಿ, ಶರಣಬಸವ ಉಮಲೂಟಿ, ಸೈಯ್ಯದ್ ರಬ್ಬಾನಿ ಜಾಗೀರದಾರ, ಕೃಷ್ಣ ಎಂ., ಪ್ರಾಣೇಶ ದೇಶಪಾಂಡೆ, ಸಿದ್ದಲಿಂಗಯ್ಯಸ್ವಾಮಿ, ಲಲಿತಾ ಚೆಲ್ಲಾ, ಅಮರೇಶ ಹಾಜರಿದ್ದರು.

261104-32-1071750635

Dailyhunt
Disclaimer: This content has not been generated, created or edited by Dailyhunt. Publisher: Prajavani