Dailyhunt Logo
  • Light mode
    Follow system
    Dark mode
    • Play Story
    • App Story
ವಿಬಿ-ಜಿ ರಾಮ್‌ ಜಿ: ಜುಲೈ 1ರಿಂದ ಜಾರಿ:  ಸಚಿವ ಈಶ್ವರ ಖಂಡ್ರೆ ಮಾಹಿತಿ

ವಿಬಿ-ಜಿ ರಾಮ್‌ ಜಿ: ಜುಲೈ 1ರಿಂದ ಜಾರಿ: ಸಚಿವ ಈಶ್ವರ ಖಂಡ್ರೆ ಮಾಹಿತಿ

ಬೆಂಗಳೂರು: ಎರಡು ದಶಕಗಳಿಂದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕ ಕುಟುಂಬಗಳಿಗೆ ಉದ್ಯೋಗವನ್ನು ಖಾತ್ರಿಪಡಿಸುತ್ತಾ ಬಂದಿದ್ದ ನರೇಗಾ ಯೋಜನೆಯ ಬದಲಾದ ಸ್ವರೂಪ 'ವಿಬಿ-ಜಿ ರಾಮ್‌ ಜಿ' ಜುಲೈ 1ರಿಂದ ಆರಂಭವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ನರೇಗಾ ಯೋಜನೆಯನ್ನು ಬದಲಾಯಿಸಿದ್ದರಿಂದ ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತದೆ. ಹಾಗಾಗಿ, ಯೋಜನೆಯನ್ನು ಮೊದಲಿದ್ದಂತೆ ಕೇಂದ್ರ-ರಾಜ್ಯಗಳ ಪಾಲು 90:10ರ ಅನುಪಾತದಲ್ಲಿ ಮುಂದುವರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈಗಿರುವ ನಿಯಮದ ಪ್ರಕಾರ ಕೇಂದ್ರ-ರಾಜ್ಯಗಳು 60:40ರ ಅನುಪಾತದಲ್ಲಿ ವೆಚ್ಚ ಭರಿಸಬೇಕಾಗಿದೆ. ರಾಜ್ಯ ಸರ್ಕಾರಕ್ಕೆ ಹೊರೆಯಾದರೂ ಗ್ರಾಮೀಣ ಜನರು, ಮಹಿಳೆಯರು, ದುರ್ಬಲರ ಹಿತಾಸಕ್ತಿ ಕಾಪಾಡಲು ಯೋಜನೆ ಜಾರಿಗೆ ಸಮ್ಮತಿಸಲಾಗಿದೆ. ನರೇಗಾ ಅಡಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 7,000ಕ್ಕೂ ಹೆಚ್ಚು ಸಿಬ್ಬಂದಿಯ ಜೀವನೋಪಾಯಕ್ಕೆ ತೊಂದರೆ ಆಗದ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ' ಎಂದರು.

2006ರಿಂದ 2026ರವರೆಗೆ ಕೇಂದ್ರ ಸರ್ಕಾರ ನರೇಗಾ ಯೋಜನೆಗೆ ₹56,492 ಕೋಟಿ ಭರಿಸಿದ್ದರೆ, ರಾಜ್ಯ ಸರ್ಕಾರ ₹4,821 ಕೋಟಿ ಭರಿಸಿದೆ. ಸುಮಾರು 182 ಕೋಟಿ ಮಾನವ ದಿನಗಳ ಉದ್ಯೋಗ ಸೃಜಿಸಿತ್ತು. ಆದರೆ ಈಗ ಒಂದೇ ವರ್ಷಕ್ಕೆ ₹3,806 ಕೋಟಿ ವೆಚ್ಚ ಭರಿಸಬೇಕಿದೆ. 2026-27ನೇ ಸಾಲಿಗೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ₹5,709 ಕೋಟಿ ಹಂಚಿಕೆ ಮಾಡಿದೆ. ಯಾವ ರಾಜ್ಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಕೇಂದ್ರದ ಈ ನಿರ್ಧಾರವನ್ನು ಸುಪ್ರೀಂಕೋರ್ಟ್‌ನಲ್ಲೂ ಪ್ರಶ್ನಿಸಲಾಗಿದೆ. ತಕ್ಷಣಕ್ಕೆ 80:20ರ ಅನುಪಾತ ನಿಗದಿ ಮಾಡಲು ಒತ್ತಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬೇಸಾಯದ ಸಮಯದಲ್ಲಿ 60 ದಿನಗಳು ಉದ್ಯೋಗ ನೀಡದಿರುವಂತೆ ನಿಯಮ ರೂಪಿಸಲಾಗಿದೆ. ಈಗ ಅತ್ಯಾಧುನಿಕ ಕೃಷಿ ಯಂತ್ರೋಪಕರಣ ಬಂದಿದ್ದು, ಗ್ರಾಮೀಣ ಕುಟುಂಬಗಳಿಗೆ ಬೇಸಾಯದ ಸಮಯದಲ್ಲೂ ಕೃಷಿ ಉದ್ಯೋಗ ಲಭಿಸುವುದಿಲ್ಲ. ಈ ಹಿಂದೆ ಇದ್ದಂತೆ ಬೇಡಿಕೆ ಆಧಾರದಲ್ಲಿ ಉದ್ಯೋಗ ನೀಡಬೇಕು ಎನ್ನುವುದು ರಾಜ್ಯ ಸರ್ಕಾರದ ಬೇಡಿಕೆ. ಈಗಾಗಲೇ ರಾಜ್ಯ ಸರ್ಕಾರ ₹375 ಕೂಲಿ ನಿಗದಿ ಮಾಡಿದೆ. ಕೇಂದ್ರವೂ ಕನಿಷ್ಠ ಕೂಲಿ ದರ ಹೆಚ್ಚಳ ಮಾಡಬೇಕು.

Dailyhunt
Disclaimer: This content has not been generated, created or edited by Dailyhunt. Publisher: Prajavani