Dailyhunt Logo
  • Light mode
    Follow system
    Dark mode
    • Play Story
    • App Story
ವಿದೇಶ ವಿದ್ಯಮಾನ: ರಾಜಕೀಯ ಅಸ್ಥಿರತೆ ಸುಳಿಯಲ್ಲಿ ಬ್ರಿಟನ್

ವಿದೇಶ ವಿದ್ಯಮಾನ: ರಾಜಕೀಯ ಅಸ್ಥಿರತೆ ಸುಳಿಯಲ್ಲಿ ಬ್ರಿಟನ್

ಬ್ರಿಟನ್‌ ಪ್ರಧಾನಿ ಕಿಯರ್ ಸ್ಟಾರ್ಮರ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ದೇಶದಲ್ಲಿ ಭಾರಿ ಬದಲಾವಣೆಗಳನ್ನು ತರುವ ಆಶಯದೊಂದಿಗೆ 2024ರಲ್ಲಿ ಸ್ಟಾರ್ಮರ್ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಅದು ಕೈಗೂಡದೇ ಅವರು ಪದತ್ಯಾಗ ಮಾಡುವುದಾಗಿ ಘೋಷಿಸಿದ್ದಾರೆ.
ಇದರಿಂದಾಗಿ ಬ್ರಿಟನ್ ಮತ್ತೆ ರಾಜಕೀಯ ಬಿಕ್ಕಟ್ಟು ಎದುರಿಸುವಂತಾಗಿದೆ. ಐರೋಪ‍್ಯ ಒಕ್ಕೂಟದಿಂದ ಹೊರಬಂದ ಹತ್ತು ವರ್ಷದಲ್ಲಿ ಬ್ರಿಟನ್ ಆರು ಮಂದಿ ಪ್ರಧಾನಿಗಳನ್ನು ಕಂಡಿದ್ದು, ಪದೇ ಪದೇ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದೆ

ಬ್ರಿಟನ್ ಪ್ರಧಾನಿ ಕಿಯರ್‌ ಸ್ಟಾರ್ಮರ್ ಅವರು ಪಕ್ಷದೊಳಗಿನ ಒತ್ತಡ ಮತ್ತು ಒತ್ತಾಯಕ್ಕೆ ಮಣಿದು ಹುದ್ದೆಯಿಂದ ಕೆಳಗಿಳಿಯುವ ಘೋಷಣೆ ಮಾಡಿದ್ದಾರೆ. ಇದರೊಂದಿಗೆ, ಸ್ಟಾರ್ಮರ್ ಅವರು ತಮ್ಮ ಹೊಸ ರಾಜಕೀಯ ಶೈಲಿಯಿಂದ ಬ್ರಿಟನ್‌ನಲ್ಲಿ ಸ್ಥಿರತೆ ಮತ್ತು ಬೆಳವಣಿಗೆಗೆ ಕಾರಣರಾಗುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಲೇಬರ್ ಪಕ್ಷದ ಅತಿ ಕಡಿಮೆ ಅವಧಿಯ ಪ್ರಧಾನಿ ಎನ್ನುವ ದಾಖಲೆಯೂ ಅವರದ್ದಾಗಿದೆ.

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ನೇತೃತ್ವದಲ್ಲಿ ಲೇಬರ್ ಪ‍ಕ್ಷವು ಪ್ರಚಂಡ ಗೆಲುವು ಸಾಧಿಸಿತ್ತು. ಹೌಸ್ ಆಫ್ ಕಾಮನ್ಸ್‌ನ 650 ಸ್ಥಾನಗಳ ಪೈಕಿ 411 ಸ್ಥಾನಗಳಲ್ಲಿ ಗೆದ್ದು 14 ವರ್ಷಗಳ ಕನ್ಸರ್ವೇಟಿವ್ ಪಕ್ಷದ ಆಡಳಿತವನ್ನು ಅಂತ್ಯಗೊಳಿಸಿತ್ತು. ಆದರೆ, ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ ಪಕ್ಷದ ಮತಪ್ರಮಾಣದಲ್ಲಿ ದಾಖಲೆಯ ಕುಸಿತ ಉಂಟಾಗಿತ್ತು.

ಕಿಯರ್ ಸ್ಟಾರ್ಮರ್ ಹಿಂದಿನ ಲೇಬರ್ ನಾಯಕರಂತಿರಲಿಲ್ಲ. ಪ್ರಖ್ಯಾತ ವಕೀಲರಾಗಿದ್ದ ಅವರು ತಡವಾಗಿ, ತಮ್ಮ 50ನೇ ವಯಸ್ಸಿನ ನಂತರ, ರಾಜಕೀಯ ಪ್ರವೇಶಿಸಿದ್ದರು. ಸಹಜವಾಗಿಯೇ ರಾಜಕೀಯ ನೈಪುಣ್ಯ ಮತ್ತು ಗುಂಪುಗಳನ್ನು ಸಂಭಾಳಿಸುವ ಕಲೆ ಅವರಿಗೆ ಸಿದ್ಧಿಸಿರಲಿಲ್ಲ. ಹೀಗಾಗಿ ಇವರು ರಾಜಕಾರಣಕ್ಕೆ ಎಷ್ಟರಮಟ್ಟಿಗೆ ಸಲ್ಲುತ್ತಾರೆ ಎನ್ನುವ ಅನುಮಾನ ಪಕ್ಷದಲ್ಲಿಯೇ ಇತ್ತು. ಅನನುಭವವೇ ತಮಗೆ ವರವಾಗಲಿದೆ ಎಂದು ಅವರು ಪ್ರತಿಪಾದಿಸಿದ್ದರು.

ಗಂಭೀರ ಸ್ವಭಾವದ ಅವರು, ಆಡಳಿತದಲ್ಲಿ ಕಠಿಣ ನಿಯಮಗಳನ್ನು ಅಳವಡಿಸಿಕೊಂಡರು. ಆದರೆ, ಯಾವುದೂ ಅವರ ಕೈಹಿಡಿಯಲಿಲ್ಲ. ಪ್ರಧಾನಿ ಪಟ್ಟವೇರಿದ ಕೆಲವೇ ದಿನಗಳಲ್ಲಿ ಲೇಬರ್ ಪಕ್ಷದ ಸೈದ್ಧಾಂತಿಕತೆ ಇಲ್ಲದ ಆಡಳಿತ ವೈಖರಿ, ಅವರ ತಣ್ಣನೆಯ ಶೈಲಿ, ಅವರು ತೆಗೆದುಕೊಂಡ ತಪ್ಪು ನಿರ್ಧಾರಗಳು ಅವರ ಬಗ್ಗೆ ಪಕ್ಷದವರೇ ಭ್ರಮನಿರಸನಗೊಳ್ಳುವಂತೆ ಮಾಡಿದವು.

ಕನ್ಸರ್ವೇಟಿವ್ ಪಕ್ಷದ 14 ವರ್ಷಗಳ ಆಡಳಿತದಿಂದ ದೇಶದ ಆರ್ಥಿಕತೆ ತೀವ್ರವಾಗಿ ಕುಸಿದಿತ್ತು. ಅದನ್ನು ಹಳಿಗೆ ತರುವ ಜವಾಬ್ದಾರಿ ಸ್ಟಾರ್ಮರ್ ಸರ್ಕಾರದ್ದಾಗಿತ್ತು. ಆರ್ಥಿಕತೆ ಸರಿದಾರಿಗೆ ತರುವ ಪ್ರಯತ್ನದ ಭಾಗವಾಗಿ ಅವರು ಹಲವು ತಪ್ಪು ನಿರ್ಧಾರಗಳನ್ನು ಕೈಗೊಂಡರು. ಆರಂಭದಲ್ಲೇ ಅವರ ಆಡಳಿತದ ಬಗ್ಗೆ ಜನರು ಭರವಸೆ ಕಳೆದುಕೊಂಡರು. ಎಪ್‌ಸ್ಟೈನ್ ಫೈಲ್ಸ್‌ನಲ್ಲಿ ಹೆಸರು ಉಲ್ಲೇಖವಾಗಿದ್ದ ಪೀಟರ್‌ ಮ್ಯಾಂಡೆಲ್‌ಸನ್ ಮತ್ತು ಉಪಪ್ರಧಾನಿ ಏಂಜಲಾ ರೇನರ್ ರಾಜೀನಾಮೆಗೆ ಅವರು ಜವಾಬ್ದಾರಿ ಹೊರಬೇಕಾಯಿತು. ಅವರ ಆಯ್ಕೆಗಳ ಬಗ್ಗೆ ಜನರಲ್ಲಿ ಅಸಮಾಧಾನ ಮೂಡಿತು. ಸ್ಟಾರ್ಮರ್ ಜನಪ್ರಿಯತೆ ಕುಸಿಯತೊಡಗಿತು. ನಂತರ ತಮ್ಮ ತಪ್ಪಿನ ಅರಿವಾಗಿ ಸರಿಪಡಿಸಿಕೊಳ್ಳಲು ಪ್ರಯತ್ನಿಸಿದರಾದರೂ, ಅದು ಮತ್ತಷ್ಟು ಗೊಂದಲದ ಸ್ಥಿತಿಗೆ ಕಾರಣವಾಯಿತು.

ಸ್ಟಾರ್ಮರ್ ಅವರ ತಂದೆ ಒಬ್ಬ ಕಾರ್ಮಿಕ, ತಾಯಿ ನರ್ಸ್. 'ನನಗೆ ಜನಸಾಮಾನ್ಯರ ಕಷ್ಟ ಗೊತ್ತಿದೆ, ಉತ್ತಮ ಆಡಳಿತ ನೀಡುತ್ತೇನೆ' ಎಂದಿದ್ದರು. ಆದರೆ, ಅವರಿಗೆ ರಾಜಕಾರಣ ಗೊತ್ತಿರಲಿಲ್ಲ. ಜತೆಗೆ, ಅವರು ಪ್ರಧಾನಿಯಾಗಿದ್ದ ಕಾಲಮಾನವೂ ಸವಾಲಿನದಾಗಿತ್ತು. ಬ್ರಿಟನ್‌ ರಾಜಕೀಯವಾಗಿ, ಆರ್ಥಿಕವಾಗಿ ಅನೇಕ ಸಮಸ್ಯೆ-ಸವಾಲು ಎದುರಿಸುತ್ತಿತ್ತು. ರಾಜಕಾರಣದ ಬಗ್ಗೆ ಜನರ ವಿಶ್ವಾಸ ಮರುಕಳಿಸುವಂತೆ ಮಾಡುವುದಾಗಿ, ಸ್ಥಿರ ಸರ್ಕಾರ ನೀಡುವುದಾಗಿ ಚುನಾವಣಾ ಗೆಲುವಿನ ಸಮಯದಲ್ಲಿ ವಾಗ್ದಾನ ನೀಡಿದ್ದ ಕಿಯರ್ ಸ್ಟಾರ್ಮರ್ ನಡುಹಾದಿಯಲ್ಲೇ ನಿರ್ಗಮಿಸಿದ್ದಾರೆ. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದ ಹತ್ತು ವರ್ಷಗಳ ನಂತರ ಅದೇ ದಿನ ಪ್ರಧಾನಿ ಹುದ್ದೆಗೆ ಸ್ಟಾರ್ಮರ್ ರಾಜೀನಾಮೆ ಘೋಷಿಸಿರುವುದು ವಿಶೇಷವಾಗಿದೆ. 10 ವರ್ಷದಲ್ಲಿ ಆರು ಮಂದಿ ಪ್ರಧಾನಿಗಳನ್ನು ಕಂಡಿರುವ, ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಬ್ರಿಟನ್ ಜನರು, ಏಳನೆಯ ಪ್ರಧಾನಿಯ ಆಗಮನಕ್ಕಾಗಿ ಎದುರು ನೋಡುತ್ತಿದ್ದಾರೆ.

ಸ್ಟಾರ್ಮರ್‌ಗೆ ರಾಜೀನಾಮೆ ಅನಿವಾರ್ಯವಾಗಿದ್ದೇಕೆ?

ಆಯಂಡಿ ಬರ್ನ್‌ಹಮ್‌ ಗೆಲುವು: ಮೇಕರ್‌ಫೀಲ್ಡ್‌ ಕ್ಷೇತ್ರಕ್ಕೆ ಕಳೆದ ತಿಂಗಳು ನಡೆದ ಉಪ ಚುನಾವಣೆಯಲ್ಲಿ ಆಯಂಡಿ ಬರ್ನ್‌ಹಮ್‌ ಅವರು ಗೆಲುವು ಸಾಧಿಸಿದ್ದು, ಪಕ್ಷದ ಒಳಗಡೆ ಸಂಚಲನ ಸೃಷ್ಟಿಸಿತ್ತು. ಯುಕೆ ರಿಫಾರ್ಮ್‌ ಪಕ್ಷದ ಅಭ್ಯರ್ಥಿಯ ವಿರುದ್ಧ ಆಯಂಡಿ ಜಯ ಸಾಧಿಸಿದ್ದರು. ಇದಕ್ಕೂ ಮೊದಲು ಅವರು ಗ್ರೇಟರ್‌ ಮ್ಯಾಂಚೆಸ್ಟರ್‌ ಮೇಯರ್‌ ಆಗಿದ್ದರು. ಪಕ್ಷದಲ್ಲಿ ಅಪಾರ ಬೆಂಬಲಿಗರನ್ನೂ ಅವರು ಹೊಂದಿದ್ದಾರೆ

ಸ್ಥಳೀಯ ಚುನಾವಣೆಯಲ್ಲಿ ಹೀನಾಯ ಸೋಲು: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಜಯಭೇರಿ ಬಾರಿಸಿದ್ದ ಸ್ಟಾರ್ಮರ್‌ ನೇತೃತ್ವದ ಲೇಬರ್‌ ಪಕ್ಷವು ಸ್ಥಳೀಯ ಚುನಾವಣೆಗಳಲ್ಲಿ ಹೀನಾಯ ಪ್ರದರ್ಶನ ನೀಡಿತ್ತು. ಪಕ್ಷದ ಪ್ರಾಬಲ್ಯ ಹೆಚ್ಚು ಇರುವ ಸ್ಕಾಟ್ಲೆಂಡ್‌ ಮತ್ತು ವೇಲ್ಸ್‌ ಸೇರಿದಂತೆ ಬ್ರಿಟನ್‌ನಾದ್ಯಂತ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಿದ್ದರು. ಕಳೆದ ವಾರ ಇಂಗ್ಲೆಂಡ್‌ನಾದ್ಯಂದ ನಡೆದ ಸ್ಥಳೀಯ ಚುನಾವಣೆಗಳಲ್ಲಿ 1,498 ಕೌನ್ಸಿಲರ್‌ಗಳು ಸೋಲು ಕಂಡಿದ್ದರು. 31 ಕೌನ್ಸಿಲ್‌ಗಳಲ್ಲಿ ಬಹುಮತವನ್ನೂ ಕಳೆದುಕೊಂಡಿತ್ತು

ಕುಸಿದ ಜನಪ್ರಿಯತೆ: ದೇಶದಲ್ಲಿ ಕಿಯರ್‌ ಸ್ಟಾರ್ಮರ್‌ ಮತ್ತು ಲೇಬರ್‌ ಪಕ್ಷದ ಜನಪ್ರಿಯತೆ ಕುಸಿಯುತ್ತಿದೆ. ನೈಜೆಲ್‌ ಫಾರಜೆ ನೇತೃತ್ವದ, ಬಲಪಂಥೀಯ ವಿಚಾರಧಾರೆಯನ್ನು ಹೊಂದಿರುವ ರಿಫಾರ್ಮ್‌ ಯುಕೆ ಪಕ್ಷವು ಹೆಚ್ಚು ಜನಪ್ರಿಯವಾಗುತ್ತಿದೆ. ಸ್ಥಳೀಯ ಚುನಾವಣೆಗಳಲ್ಲಿ ಅದು ಲೇಬರ್‌ ಪಕ್ಷವನ್ನು ಹಿಂದಿಕ್ಕಿತ್ತು

ಮ್ಯಾಂಡಲ್ಸನ್‌ ನೇಮಕ ತಂದ ಮುಜುಗರ: ಸ್ಟಾರ್ಮರ್‌ ಅವರು ಪೀಟರ್‌ ಮ್ಯಾಂಡಲ್ಸನ್‌ ಅವರನ್ನು ಅಮೆರಿಕಕ್ಕೆ ಬ್ರಿಟನ್‌ನ ರಾಯಭಾರಿಯಾಗಿ 2024ರಲ್ಲಿ ನೇಮಕ ಮಾಡಿದ್ದರು. ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್‌ ಅವರೊಂದಿಗೆ ಮ್ಯಾಂಡಲ್ಸನ್‌ ಸಂಪರ್ಕ ಹೊಂದಿದ್ದ ವಿಷಯ ಬಹಿರಂಗವಾಗಿತ್ತು. ಆ ನಂತರ ಅದು ವಿವಾದ ಸೃಷ್ಟಿಸಿತ್ತು. ಪ್ರಕರಣವು ಲೇಬರ್‌ ಪಕ್ಷ ಮತ್ತು ಸ್ಟಾರ್ಮರ್‌ ಅವರಿಗೂ ಮುಜುಗರ ತಂದಿತ್ತು

ಜಾನ್‌ ಹೀಲಿ ರಾಜೀನಾಮೆ: ಸ್ಟಾರ್ಮರ್‌ ಅವರ ಆಪ್ತ ಮತ್ತು ರಕ್ಷಣಾ ಕಾರ್ಯದರ್ಶಿಯಾಗಿದ್ದ ಜಾನ್‌ ಹೀಲಿ ಅವರು ಜೂನ್‌ 11ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಕ್ಕೂ ಮೊದಲು ಸಶಸ್ತ್ರ ಪಡೆಗಳ ಸಚಿವರಾಗಿದ್ದ ಎಎಲ್‌ ಕಾರ್ನ್ಸ್‌ ಅವರು ಕೂಡ ರಾಜೀನಾಮೆ ನೀಡಿದ್ದರು. ರಕ್ಷಣಾ ಕ್ಷೇತ್ರಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಬಜೆಟ್‌ ಅನುದಾನ ನೀಡದ ಕಾರಣದಿಂದ ಇಬ್ಬರೂ ಹುದ್ದೆ ತ್ಯಾಗ ಮಾಡಿದ್ದರು. ಈ ಬೆಳವಣಿಗೆ ಕೂಡ ಸ್ಟಾರ್ಮರ್‌ ಅವರಿಗೆ ಹಿನ್ನಡೆ ಉಂಟು ಮಾಡಿತ್ತು

ಸುಧಾರಣೆ ಕಾಣದ ಜೀವನ ಮಟ್ಟ: ಅಧಿಕಾರಕ್ಕೆ ಏರುವ ಮೊದಲು ಅವರು ದೇಶದ ಆರ್ಥಿಕ ಸ್ಥಿತಿ ಸುಧಾರಿಸುವುದು, ಜೀವನ ವೆಚ್ಚವನ್ನು ಕಡಿಮೆಗೊಳಿಸುವುದು ಸೇರಿದಂತೆ ಜನರ ಬದುಕನ್ನು ಸುಧಾರಿಸುವ ದಿಸೆಯಲ್ಲಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಎರಡು ವರ್ಷಗಳು ಕಳೆದರೂ ಪರಿಣಾಮಕಾರಿಯಾದ ಕ್ರಮಗಳು ಜಾರಿಗೆ ಬಂದಿರಲಿಲ್ಲ. ಇದು ಜನರಲ್ಲಿ ಮತ್ತು ಪಕ್ಷದ ಒಳಗೆ ಅಸಹನೆಯನ್ನು ಸೃಷ್ಟಿಸಿತ್ತು

 ಮೇಕರ್‌ಫೀಲ್ಡ್ ಸಂಸದ ಮತ್ತು ಮ್ಯಾಂಚೆಸ್ಟರ್ ಮಾಜಿ ಮೇಯರ್ ಆಯಂಡಿ ಬರ್ನ್‌ಹಮ್ ಅವರು ಲೇಬರ್ ಪಕ್ಷದ ಸರ್ಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ. ಉಪಚುನಾವಣೆಯಲ್ಲಿ ಗೆದ್ದಿರುವ ಅವರು ಈಗಷ್ಟೇ ಸಂಸದರಾಗಿ ಹೌಸ್ ಆಫ್ ಕಾಮನ್ಸ್ ಪ್ರವೇಶಿಸಿದ್ದಾರೆ. ಸುಸ್ಥಿರ ಆಡಳಿತ ನೀಡುವ ಉದ್ದೇಶದಿಂದ ದೇಶದ ಪ್ರಧಾನಿಯಾಗುವ ತಮ್ಮ ಇಚ್ಛೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಸ್ಪರ್ಧೆಯಲ್ಲಿದ್ದ ವೆಸ್ ಸ್ಟ್ರೀಟಿಂಗ್ ಅವರು ಕೂಡ ಆಯಂಡಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.ಬರ್ನ್‌ಹಮ್‌ಗೆ ಪಟ್ಟ?

ಆಧಾರ: ರಾಯಿಟರ್ಸ್, ಬಿಬಿಸಿ, ಟೈಮ್, ದಿ ಇಂಡಿಪೆಂಡೆಂಟ್‌

Dailyhunt
Disclaimer: This content has not been generated, created or edited by Dailyhunt. Publisher: Prajavani