ರಾಜ್ಯ
ವಿಧಾನ ಪರಿಷತ್ ಸಭಾಪತಿ- ಉಪ ಸಭಾಪತಿ ಯಾರೆಂಬ ಕುತೂಹಲಕ್ಕೆ ತೆರೆ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಜೆಡಿಎಸ್ನಿಂದ ಬಸವರಾಜ ಹೊರಟ್ಟಿ ಹೆಸರು ಅಂತಿಮಗೊಳಿಸಲಾಗಿದ್ದು, ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ ನಡೆಯುವ ಸಭೆಯಲ್ಲಿ ಜೆಡಿಎಸ್ಗೆ ಅವಕಾಶ ನೀಡುವ ಬಗ್ಗೆ ಪರಿಷತ್‌ನ ಬಿಜೆಪಿ ಸದಸ್ಯರು ತೀರ್ಮಾನಕ್ಕೆ ಬರಲಿದ್ದಾರೆ.
ಸಂಜೆ 6 ಗಂಟೆಗೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮುಂದಿನ ಸಭಾಪತಿ ಹಾಗೂ ಉಪಸಭಾಪತಿ ಯಾರಾಗಬಹುದೆಂಬ ಕುತೂಹಲಕ್ಕೆ ತೆರೆಬೀಳಲಿದೆ.
'ವಿಧಾನ ಪರಿಷತ್ ಸಭಾಪತಿ ಸ್ಥಾನದ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ವಿಚಾರದಲ್ಲಿ ಪಕ್ಷದ ನಡೆ ಏನು. ಜೆಡಿಎಸ್ ಬೇಡಿಕೆಯಂತೆ ಸಭಾಪತಿ ಸ್ಥಾನವನ್ನು ಅವರಿಗೆ ಬಿಟ್ಟುಕೊಟ್ಟು, ಉಪಸಭಾಪತಿ ಸ್ಥಾನವನ್ನು ಪಡೆದುಕೊಳ್ಳುವ ಬಗ್ಗೆ ಬಿಜೆಪಿ ಸದಸ್ಯರ ಅಭಿಪ್ರಾಯ, ಸಭಾಪತಿ ಸ್ಥಾನ ಬಿಜೆಪಿಗೇ ಬೇಕು ಎನ್ನುವುದಾದರೆ ಅನುಸರಿಸಬೇಕಾದ ಕಾರ್ಯತಂತ್ರ ಅಥವಾ ಉಪಸಭಾಪತಿ ಸ್ಥಾನಕ್ಕೆ ಯಾರಿಗೆ ಅವಕಾಶ ನೀಡಬೇಕು ಎಂಬ ಕುರಿತು ಪರಿಷತ್ ಸದಸ್ಯರ ಜೊತೆ ಮುಖ್ಯಮಂತ್ರಿ ಚರ್ಚೆ ನಡೆಸಲಿದ್ದಾರೆ.
ಬಿಜೆಪಿ ವರಿಷ್ಠರು, ಹೊರಟ್ಟಿ ಬಗ್ಗೆ ರಾಜ್ಯ ಘಟಕದಿಂದ ಮಾಹಿತಿ ಪಡೆದಿದ್ದು, ರಾಜ್ಯ ಘಟಕ ಕೂಡಾ ಪಕ್ಷದ ಹಿರಿಯ ನಾಯಕರಿಗೆ ಸಕಾರಾತ್ಮಕವಾಗಿ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.