ಹೈದರಾಬಾದ್: ವಿದ್ಯಾಭ್ಯಾಸಕ್ಕೆಂದು ಅಮೆರಿಕಕ್ಕೆ ತೆರಳಿದ್ದ ತೆಲಂಗಾಣದ ಯುವತಿಯೊಬ್ಬರು ಬಾಸ್ಟನ್‌ನಲ್ಲಿ ಕಾಣೆಯಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಶ್ರೀಜಾ ಕೋಯಾ (23) ಹೈದರಾಬಾದ್ ನಿವಾಸಿ. ಬಾಸ್ಟನ್‌ನಲ್ಲಿ ನವೆಂಬರ್ 2ರಂದು ವಿಹಾರಕ್ಕೆ ತೆರಳಿದ್ದಾಗ ಕಾಣೆಯಾಗಿದ್ದಾರೆ.
'10 ದಿನಗಳಿಂದ ಮಗಳ ಕುರಿತು ಯಾವುದೇ ಸುಳಿವು ಸಿಗುತ್ತಿಲ್ಲ. ಆರಂಭದಲ್ಲಿ ಮಗಳನ್ನು ಅಮೆರಿಕ ಕಳುಹಿಸಲು ಇಷ್ಟವಿರಲಿಲ್ಲ. ಆದರೆ ಅಮೆರಿಕದಲ್ಲಿ ಪದವಿ ಪಡೆಯಬೇಕೆಂಬ ಅವಳ ಆಸೆಗೆ ಮಣಿದಿದ್ದೇವು. ಅಲ್ಲದೇ ಅವಳಿಗೆ ಪ್ರವೇಶ ಮತ್ತು ವೀಸಾ ಎರಡು ದೊರೆತಿತ್ತು' ಎಂದು ತಂದೆ ಯಾದಗಿರಿ ರೆಡ್ಡಿ ಅವರು 'ಪ್ರಜಾವಾಣಿ'ಗೆ ಬುಧವಾರ ತಿಳಿಸಿದ್ದಾರೆ.
ದಂಪತಿಗೆ ಶ್ರೀಜಾ ಏಕೈಕ ಪುತ್ರಿ. ಮಗಳು ಕಾಣೆಯಾದ ವಿಷಯ ತಿಳಿದು ತಾಯಿ ರೂಪ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
'ಪದವಿ ಪಡೆದ ಬಳಿಕ ಅಮೆರಿಕದಲ್ಲೇ ನೆಲಸಲು ಶ್ರೀಜಾ ಯೋಜಿಸಿರಲಿಲ್ಲ. ಭಾರತದಲ್ಲೇ ಉತ್ತಮ ಉದ್ಯೋಗ ಪಡೆಯುವ ಗುರಿಯನ್ನು ಹೊಂದಿದ್ದಳು. ಇದು ಹೇಗೆ ಮತ್ತು ಏಕೆ ಸಂಭವಿಸಿದೆ ಎಂದು ನಮಗೆ ತಿಳಿದಿಲ್ಲ. ವಿದೇಶಿಯರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಅಮೆರಿಕ ಏಕೆ ವೀಸಾ ನೀಡುತ್ತದೆ?' ಎಂದು ರೆಡ್ಡಿ ಅವರು ತಿಳಿಸಿದ್ದಾರೆ.
ಕಳೆದ ವರ್ಷ ಅಮೆರಿಕಕ್ಕೆ ತೆರಳಿದ್ದ ಶ್ರೀಜಾ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು.

