ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಮೋದಿ ಸರ್ಕಾರ ದೇಶದ ಶತ್ರುಗಳಂತೆ ನಡೆಸಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
ದೇಶದ ಶಿಕ್ಷಣ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಅಧೋಗತಿಗೆ ತಳ್ಳಿದೆ ಎಂದು ಆರೋಪಿಸಿರುವ ಅವರು, ವಿದ್ಯಾರ್ಥಿಗಳು ಮೋದಿ ಆಡಳಿತದ ಸುಳ್ಳನ್ನು ಬಯಲು ಮಾಡಿದ್ದಾರೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಪರವಾಗಿ ನಿಲ್ಲುವುದು ಮತ್ತು ಅವರ ಭವಿಷ್ಯವನ್ನು ರಕ್ಷಿಸುವುದು ನೈತಿಕ, ರಾಜಕೀಯ ಹಾಗೂ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು 'ಶಿಕ್ಷಣ ವ್ಯವಸ್ಥೆಯ ಕುಸಿತ, ಯುವ ಭಾರತದ ಆಘಾತ' ಎಂಬ ಶೀರ್ಷಿಕೆಯಡಿ 'ದಿ ಹಿಂದೂ' ಪ್ರತಿಕೆಯಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ ಅವರು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವರ ನೇರ ಅಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ನಡೆಸಿರುವ 'ದೌರ್ಜನ್ಯ'ವು ಈ ಆಡಳಿತಕ್ಕೆ ಹೊಸದೇನಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
'2020ರಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಪ್ರತಿಭಟನೆಗಳ ಸಂದರ್ಭದಲ್ಲಿ ಸಶಸ್ತ್ರ ಪೊಲೀಸರು ಮತ್ತು ಅರೆಸೇನಾ ಪಡೆಗಳು ವಿಶ್ವವಿದ್ಯಾಲಯದ ಆವರಣಗಳನ್ನು ಹೇಗೆ ಧ್ವಂಸಗೊಳಿಸಿದವು ಎಂಬುದು ನಮಗೆಲ್ಲರಿಗೂ ಸ್ಪಷ್ಟವಾಗಿ ನೆನಪಿದೆ. ಭಾರತದ ಮಹಿಳಾ ಕುಸ್ತಿಪಟುಗಳ ವಿರುದ್ಧ ನಡೆದ ಒಪ್ಪಿಕೊಳ್ಳಲಾಗದ ಅತಿರೇಕದ ವರ್ತನೆಯನ್ನು ನಮ್ಮ ನೆನಪಿನಿಂದ ಎಂದಿಗೂ ಅಳಿಸಲು ಸಾಧ್ಯವಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಮೋದಿ ಸರ್ಕಾರವು ಭಾರತದ ಶಿಕ್ಷಣ ಕ್ಷೇತ್ರವನ್ನು ಅಧೋಗತಿಗೆ ತಳ್ಳುವುದು ಮಾತ್ರವಲ್ಲದೆ, ಯಾವುದೇ ಭಯವಿಲ್ಲದೇ ವರ್ತಿಸುವುದನ್ನು ರೂಢಿಸಿಕೊಂಡಿದೆ' ಎಂದು ಆರೋಪಿಸಿದ್ದಾರೆ.
'ವಿದ್ಯಾರ್ಥಿಗಳ ಬೇಡಿಕೆಗಳು ನೇರ ಹಾಗೂ ಸ್ಪಷ್ಟವಾಗಿವೆ. ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಅವರು ಹೋರಾಡುತ್ತಿದ್ದಾರೆ. ನರೇಂದ್ರ ಮೋದಿ ಸರ್ಕಾರವು ಅವರ ಧೈರ್ಯಕ್ಕೆ ಹೇಡಿತನ ಮತ್ತು ಕ್ರೂರತೆಯಿಂದ ಪ್ರತಿಕ್ರಿಯಿಸಿದೆ. ಅವರನ್ನು ಭವಿಷ್ಯದ ವಾರಸುದಾರರಂತೆ ನೋಡದೆ ದೇಶದ ಶತ್ರುಗಳಂತೆ ನಡೆಸಿಕೊಂಡಿದೆ' ಎಂದು ಆಕ್ರೋಶ ಹೊರಹಾಕಿದ್ದಾರೆ.
ಕರಾಳ ದಿನ:
ಜುಲೈ 20 ಅನ್ನು ಕರಾಳ ದಿನ ಎಂದು ಕರೆದ ಸೋನಿಯಾ, ಅಂದು ದೆಹಲಿ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ಲಾಠಿ ಪ್ರಹಾರ ಮಾಡುವ ಮೂಲಕ ಹಿಂಸಾಚಾರದ ಮೂಲಕ ವಿದ್ಯಾರ್ಥಿಗಳನ್ನು ಹತ್ತಿಕ್ಕಲು ಯತ್ನಿಸಿದ್ದವು' ಎಂದು ಹೇಳಿದ್ದಾರೆ.
'ಪೆಲೆಟ್ಗಳಿಂದ ಯುವಕರ ದೇಹದ ಮೇಲೆ ಗಾಯಗಳಾಗಿರುವ ದೃಶ್ಯಗಳು ಹರಿದಾಡುತ್ತಿವೆ. ಇದರ ಬಳಕೆಗೆ ಖಂಡಿತವಾಗಿಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಅನುಮೋದನೆ ನೀಡಿರುತ್ತಾರೆ' ಎಂದು ಆರೋಪಿಸಿದ್ದಾರೆ.
ಮೋದಿ ಸರ್ಕಾರವು ಮಾತುಕತೆಗಿಂತ ಹಿಂಸಾಚಾರವನ್ನೇ ನಿರಂತರವಾಗಿ ಆಯ್ಕೆ ಮಾಡಿಕೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಳೆಯ 'ಟೂಲ್ಕಿಟ್' ಪ್ರಯೋಗ:
ಭವಿಷ್ಯದ ವೈದ್ಯರು, ಇಂಜಿನಿಯರ್ಗಳು, ಶಿಕ್ಷಕರು, ನಾಗರಿಕ ಸೇವಕರು, ಉದ್ಯಮಿಗಳು ಮತ್ತು ದೇಶದ ನಿರ್ಮಾತೃಗಳನ್ನು ಸಹಾನುಭೂತಿಯಿಂದ ತಲುಪುವ ಬದಲು, ಅವರ ಮೇಲೆ ದಮನಕಾರಿ ಶಕ್ತಿಯನ್ನು ಪ್ರಯೋಗಿಸಿತು. ಇದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಭಿನ್ನಾಭಿಪ್ರಾಯವನ್ನು ದೇಶದ್ರೋಹ ಎಂದು ಬಿಂಬಿಸುವ ಸರ್ಕಾರದ ಹಳೆಯ 'ಟೂಲ್ಕಿಟ್' ಅನ್ನು ವಿದ್ಯಾರ್ಥಿ ಪ್ರತಿಭಟನೆಗಳನ್ನು ದುರ್ಬಲಗೊಳಿಸಲು ಮತ್ತೆ ಬಳಸಲಾಗುತ್ತಿದೆ.
ಪ್ರತಿಭಟನೆಗೆ ಪ್ರೇರಣೆ ನೀಡಿದ ತನ್ನ ನೀತಿಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದ್ದ ಮೋದಿ ಸರ್ಕಾರವು, ಅದರ ಬದಲು ಆಪಾದನೆಗಳನ್ನು ಮಾಡಲು ಮತ್ತು ಪಿತೂರಿಗಳನ್ನು ನಡೆಸಲು ತನ್ನ ತಂತ್ರಗಳ ಚೀಲದಿಂದ ಹಳೆಯ ಉಪಾಯಗಳನ್ನು ಹೊರತೆಗೆದಿದೆ ಎಂದು ಹೇಳಿದ್ದಾರೆ.
ಖಾಸಗಿ ಶಾಲೆ: ಆರ್ಆರ್ಎಸ್ ಪಾಲು ಹೆಚ್ಚು
ಈ ಸರ್ಕಾರ ಶಾಲೆ ಶಿಕ್ಷಣದ ಮೇಲಿನ ಒಟ್ಟು ಬಜೆಟ್ ವೆಚ್ಚದ ಪಾಲನ್ನು ಶೇ 50 ರಷ್ಟು ಮತ್ತು ಉನ್ನತ ಶಿಕ್ಷಣದ ಮೇಲಿನ ವೆಚ್ಚವನ್ನು ಶೇ 33 ರಷ್ಟು ಅದು ಕಡಿತಗೊಳಿಸಿದೆ ಎಂದು ತಿಳಿಸಿದ್ದಾರೆ.
'ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರವು ಸುಮಾರು ಒಂದು ಲಕ್ಷ ಸರ್ಕಾರಿ ಶಾಲೆಗಳನ್ನು ಮುಚ್ಚಿದೆ. ಅದೇ ಸಮಯದಲ್ಲಿ 43,000 ಖಾಸಗಿ ಶಾಲೆಗಳನ್ನು ತೆರೆಯಲು ಕಾರಣವಾಗಿದೆ. ಇದರಲ್ಲಿ ಬಹುದೊಡ್ಡ ಪಾಲನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ನಡೆಸುತ್ತಿದೆ. ಈ ಸಂಘಟನೆ ಮತ್ತು ಅದರ ಅಂಗಸಂಸ್ಥೆಗಳು ಭಾರತದಲ್ಲಿ ಅತಿ ದೊಡ್ಡ ಖಾಸಗಿ ಶಾಲಾ ಜಾಲದ ನೇತೃತ್ವ ವಹಿಸಿವೆ ಎಂಬುದು ಗಮನಾರ್ಹ' ಎಂದಿದ್ದಾರೆ.
ಉತ್ತಮ ಗುಣಮಟ್ಟದ, ಕೈಗೆಟುಕುವ ಸಾರ್ವಜನಿಕ ಶಿಕ್ಷಣ ಲಭ್ಯವಿಲ್ಲದ ಕಾರಣ, ಭಾರತದಲ್ಲಿ ಕುಟುಂಬಗಳು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೇಬಿನಿಂದಲೇ ಹಣ ಖರ್ಚು ಮಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
12 ವರ್ಷಗಳಲ್ಲಿ152 ಪ್ರಶ್ನೆಪತ್ರಿಕೆ ಸೋರಿಕೆ
'ಎನ್ಟಿಎ ಸಂಸ್ಥೆಯು ಸ್ವತಃ ಅಸಹಾಯಕವಾಗಿದ್ದು, ತೀವ್ರ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಇದು ಪರೀಕ್ಷೆಗಳನ್ನು ನಡೆಸಲು ಸಂಪೂರ್ಣವಾಗಿ ಖಾಸಗಿ ಗುತ್ತಿಗೆದಾರರನ್ನು ಅವಲಂಬಿಸಿದೆ. ಎನ್ಟಿಎ ನಿಯೋಜಿಸಿರುವ ಪ್ರಶ್ನೆಪತ್ರಿಕೆ ಸಿದ್ಧಪಡಿಸುವವರು, ಅನುವಾದಕರು ಮತ್ತು ತಜ್ಞರು ಭಾರತದ ಪ್ರಮುಖ ಸಂಸ್ಥೆಗಳ ಪ್ರಖ್ಯಾತ ಶಿಕ್ಷಣ ತಜ್ಞರಲ್ಲ, ಬದಲಿಗೆ ಬಹುಮಟ್ಟಿಗೆ ರಾಜಕೀಯ ನಂಟು ಹೊಂದಿರುವ ಸಾಧಾರಣ ವ್ಯಕ್ತಿಗಳು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ' ಎಂದು ಹೇಳಿದ್ದಾರೆ.
ಕಳೆದ 12 ವರ್ಷಗಳಲ್ಲಿ ದೇಶದಾದ್ಯಂತ 152 ಪ್ರಶ್ನೆಪತ್ರಿಕೆ ಸೋರಿಕೆಯಾಗಿವೆ. 2017ರಲ್ಲಿ ಎನ್ಟಿಎ ರಚನೆಯಾದಾಗಿನಿಂದ ಸ್ವತಃ ಅದರ ಅಡಿಯಲ್ಲೇ ಒಂಬತ್ತು ಸೋರಿಕೆಗಳು ನಡೆದಿವೆ.
ಆರ್ಥಿಕತೆಯ ಹೆಚ್ಚುತ್ತಿರುವ ಏಕಸ್ವಾಮ್ಯದ ಕಾರಣದಿಂದಾಗಿ ಇಂದು ಪದವಿಯ ನಂತರ ಉತ್ತಮ ವೇತನದ ಉದ್ಯೋಗಾವಕಾಶಗಳು ಅಪರೂಪವಾಗಿವೆ ಎಂದು ಸೋನಿಯಾ ವಾದಿಸಿದ್ದಾರೆ.
'ಶಿಕ್ಷಣದ ಕುರಿತು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮತ್ತು ಪ್ರಾಮಾಣಿಕ ಚರ್ಚೆಗಳನ್ನು ತಪ್ಪಿಸುವ ಮೋದಿ ಸರ್ಕಾರದ ನೀತಿಯು ಈ ವ್ಯವಸ್ಥೆಯ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಯಾಗಿದೆ' ಎಂದಿದ್ದಾರೆ.

