ನವದೆಹಲಿ: 80ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನಾದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶವನ್ನು ಉದ್ದೇಶಿಸಿ, ವಿವಿಧ ವಿಷಯಗಳ ಕುರಿತು ಮಾತನಾಡಿದ್ದಾರೆ.
ವಿದ್ಯಾರ್ಥಿಗಳು 'ಭಾರತದ ಭವಿಷ್ಯದ ಶಿಲ್ಪಿಗಳು'. ಸಾರ್ವಜನಿಕ ಪರೀಕ್ಷೆಗಳು ಅವರಿಗೆ ಅವಕಾಶಗಳ ಬಾಗಿಲನ್ನು ತೆರೆಯುತ್ತದೆ.
ಹಾಗಾಗಿ, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ತಡೆಯಲು ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಈ ಮೂಲಕ ಪಾರದರ್ಶಕ, ಸುರಕ್ಷಿತ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ಪರೀಕ್ಷೆ ನಡೆಯಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ದೇಶದಾದ್ಯಂತ ಜೆನ್-ಝೀ ಯುವಜನರು ಪ್ರತಿಭಟನೆಗಳನ್ನು ನಡೆಸಿದ್ದರು.
ಯುವಜನರು ಕೆಲಸಕ್ಕಾಗಿ ಕಾಯುವ ಬದಲು, ಸ್ವ-ಉದ್ಯೋಗಿಗಳಾಗುವ ಮೂಲಕ ಉದ್ಯೋಗಗಳನ್ನು ಸೃಷ್ಟಿಸುವ ಸಂಪ್ರದಾಯ ಆರಂಭವಾಗಬೇಕು. ಯುವ ಉದ್ಯಮಿಗಳಿಂದ ದೇಶದಲ್ಲಿ 'ಸ್ಟಾರ್ಟ್ ಅಪ್' ವಾತಾವರಣ ನಿರ್ಮಾಣವಾಗುತ್ತದೆ. ಅಂತಹ ಸಾಧಕರಿಂದ ಭಾರತದ ಗೌರವು ಜಾಗತಿಕವಾಗಿ ಹೆಚ್ಚಾಗುತ್ತದೆ. ದೇಶದ ಉತ್ತಮ ಭವಿಷ್ಯದ ಕುರಿತು ನನಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ.
ಪಾಕ್ ಧ್ವಜದಿಂದ ತಿರಂಗಾ ಯಾತ್ರೆಯವರೆಗೆ: ಕಾಶ್ಮೀರದಲ್ಲಿ ಸ್ವಾತಂತ್ರ್ಯದ ಕಂಪುಯುವಜನರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆಯು ಅವಶ್ಯವಾಗಿದೆ. ಖೇಲೋ ಇಂಡಿಯಾವು ದೇಶದಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದೆ. ಇದರಿಂದ ಗ್ರಾಮೀಣ ಭಾಗದ ಪ್ರತಿಭೆಗಳು ಕೂಡ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಕೂಡ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಭಾರತೀಯ ಸಶಸ್ತ್ರ ಪಡೆಗಳ ಶೌರ್ಯವನ್ನು ಶ್ಲಾಘಿಸಿದ ರಾಷ್ಟ್ರಪತಿ ಮುರ್ಮು, 'ಆಪರೇಷನ್ ಸಿಂಧೂರ' ದೇಶದ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಅಲ್ಲದೆ, ಭಯೋತ್ಪಾದಕರು ಮತ್ತು ಅವರಿಗೆ ಬೆಂಬಲ ನೀಡುವವರು ಎಲ್ಲಿಯೇ ಅಡಗಿದ್ದರೂ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ದೃಢ ಸಂದೇಶವನ್ನೂ ಇದು ರವಾನಿಸಿದೆ ಎಂದು ಹೇಳಿದ್ದಾರೆ.
ವಿದೇಶಾಂಗ ನೀತಿಯ ಕುರಿತು ಮಾತನಾಡಿದ ಅವರು, 'ಶಾಂತಿ, ಸಂವಾದ, ಸಹಕಾರ ಮತ್ತು ವಸುಧೈವ ಕುಟುಂಬ ಎಂಬ ಆದರ್ಶಗಳು ಭಾರತದ ಅಂತರರಾಷ್ಟ್ರೀಯ ಸಂಬಂಧಗಳ ಮೂಲಾಧಾರಗಳಾಗಿವೆ. ದಕ್ಷಿಣ ರಾಷ್ಟ್ರಗಳ ನಡುವೆ ಭಾರತದ ವರ್ಚಸ್ಸು ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.
ಆರ್ಥಿಕ ಬೆಳವಣಿಗೆ, ಡಿಜಿಟಲ್ ಮೂಲಸೌಕರ್ಯ ಮತ್ತು ಯುವಜನತೆ ಮತ್ತು ಮಹಿಳೆಯರ ಬಲದೊಂದಿಗೆ 2047ರ ವೇಳೆಗೆ 'ವಿಕಸಿತ ಭಾರತ' ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.
ಇತಿಹಾಸದ ಪುಟದಲ್ಲಿ ಮರೆತುಹೋದ ಕರ್ನಾಟಕದ ಸ್ವಾತಂತ್ರ್ಯ ಯೋಧರು..
