ನವದೆಹಲಿ (ಪಿಟಿಐ): ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿ ₹20 ಸಾವಿರ ಕೋಟಿಯಷ್ಟು ಬೃಹತ್ ದಂಡದ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವ ಕುರಿತು ಗಮನಿಸಿರುವ ಸುಪ್ರೀಂಕೋರ್ಟ್, ಮೊತ್ತವನ್ನು ಮರುಪಡೆಯಲು ದಂಡದ ಚಲನ್‌ಗಳನ್ನು ವಿದ್ಯುತ್ ಶುಲ್ಕದ ಜೊತೆಗೆ ಸೇರಿಸಿ, ಸಂಗ್ರಹಿಸುವಂತೆ ಸಲಹೆ ನೀಡಿದೆ.
ನ್ಯಾಯಮೂರ್ತಿ ಜೆ.ಬಿ.ಪಾರ್ದಿವಾಲಾ, ಕೆ.ವಿ.ವಿಶ್ವನಾಥನ್ ನೇತೃತ್ವದ ನ್ಯಾಯಪೀಠ, ದೊಡ್ಡ ಸಂಖ್ಯೆಯ ಸಂಚಾರ ದಂಡದ ಚಲನ್ ನೀಡಿದ್ದರೂ, ಕಡಿಮೆ ಸಂಖ್ಯೆಯಲ್ಲಿ ದಂಡ ಸಂಗ್ರಹಿಸಲಾಗಿದೆ. ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ, ಕೇವಲ ಇ-ಚಲನ್‌ಗಳನ್ನು ನೀಡಿದರೆ ಮುಗಿಯುವುದಿಲ್ಲ, ದಂಡದ ಮೊತ್ತವನ್ನು ಸಂಗ್ರಹಿಸುವುದು ಮುಖ್ಯವಾಗಿದೆ' ಎಂದು ತಿಳಿಸಿದೆ.
'ಜನರು ದಂಡ ಪಾವತಿಸದಿದ್ದರೆ, ಬಾಕಿ ಮೊತ್ತವನ್ನು ವಿದ್ಯುತ್ ಶುಲ್ಕದೊಂದಿಗೆ ಸೇರ್ಪಡೆ ಮಾಡಿ. ಒಂದೊಮ್ಮೆ ವಿದ್ಯುತ್ ಶುಲ್ಕ ಪಾವತಿಸದಿದ್ದರೆ, ಅವರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ, ಇದನ್ನು ಒಮ್ಮೆ ಪ್ರಯತ್ನಿಸಿ. ಈ ದೇಶದಲ್ಲಿ ನೀವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು' ಎಂದು ಪೀಠವು ಸಲಹೆ ನೀಡಿದೆ.
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ₹45 ಸಾವಿರ ಕೋಟಿಯಷ್ಟು ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರ ಮೇಲೆ ದಂಡ ವಿಧಿಸಲಾಗಿತ್ತು, ಈ ಪೈಕಿ ಇದುವರೆಗೆ ₹25 ಸಾವಿರ ಕೋಟಿಯಷ್ಟು ಸಂಗ್ರಹಿಸಿರುವುದನ್ನು ಗಮನಿಸಿದ ಪೀಠವು ಈ ಅಭಿಪ್ರಾಯಪಟ್ಟಿದೆ.
'ದಂಡ ಪಾವತಿಸದ ವಾಹನಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು, ಪರಿವಹನ್ ಪೋರ್ಟಲ್‌ನಲ್ಲಿ ಮಾಲೀಕತ್ವದ ಬದಲಾವಣೆಯನ್ನು ತಡೆಹಿಡಿಯಬೇಕು' ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
'ಸಂಬಂಧಿಸಿದ ಅಧಿಕಾರಿಗಳು ಕೆಳಹಂತದಲ್ಲಿ ಕೆಲಸ ಮಾಡಬೇಕು. ವಾಹನಗಳನ್ನು ದಿಢೀರ್ ಪರಿಶೀಲನೆ ನಡೆಸಿ, ಅವುಗಳಿಂದ ದಂಡ ಸಂಗ್ರಹಿಸಬೇಕು, ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಬೇಕು' ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

