ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಅಧಿಕಾರ ವಹಿಸಿಕೊಂಡು ಆರು ತಿಂಗಳು ಪೂರೈಸಿದೆ. ಸರ್ಕಾರವು ತನ್ನ ಸಾಧನೆ ಕುರಿತು ಸಂಭ್ರಮಿಸಬೇಕಿತ್ತು. ಆದರೆ, ಪಕ್ಷದ ಇಬ್ಬರು ಶಾಸಕರ (ಉಪಸಭಾಪತಿ ಸೇರಿದಂತೆ) ನಡವಳಿಕೆಯಿಂದ ಉಂಟಾದ ಮುಜುಗರವನ್ನು ಸರಿಪಡಿಸುವಲ್ಲಿ ಮತ್ತು ದೀಪಾವಳಿ ಹಬ್ಬದ ವೇಳೆ ನಡೆದ ಸರಣಿ ಕೊಲೆಗಳ ನಂತರ ರಾಜ್ಯದ ಕಾನೂನು ಸುವ್ಯವಸ್ಥೆಯ ಕುರಿತು ಪರಿಶೀಲನಾ ಸಭೆ ನಡೆಸುವುದರಲ್ಲಿ ಸರ್ಕಾರದ ಉನ್ನತ ನಾಯಕತ್ವ ನಿರತವಾಗಿತ್ತು.
ಕಲ್ಲಕುರಿಚಿ ಶಾಸಕ ಅರುಳ್ ವಿಘ್ನೇಶ್ ಅವರು ಮಹಿಳಾ ಜಿಲ್ಲಾಧಿಕಾರಿಗೆ ಅಸಭ್ಯ ಸಂದೇಶ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರೆ, ಉಪಸಭಾಪತಿ ರವಿಶಂಕರ್ ಅವರು ಅಹವಾಲು ಹೇಳಿಕೊಳ್ಳಲು ಬಂದ ವ್ಯಕ್ತಿಯೊಬ್ಬರಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೆ, ಸಂತ್ರಸ್ತನ ಮೇಲೆ ಒತ್ತಡ ಹೇರಲು ಪೊಲೀಸರನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ವಿಜಯ್ ಪ್ರತಿಪಾದಿಸಿದ್ದರೂ, ಈ ಇಬ್ಬರು ಶಾಸಕರ ನಡವಳಿಕೆಯ ಬಗ್ಗೆ ಸರ್ಕಾರ ಮತ್ತು ಆಡಳಿತ ಪಕ್ಷ ಮೌನವಹಿಸಿದೆ.
ಏಳು ದಶಕಗಳ ನಂತರ ರಾಜ್ಯದಲ್ಲಿ ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುತ್ತಿರುವ ವಿಜಯ್, ಮೈತ್ರಿಕೂಟದ ಪಾಲುದಾರರಿಂದ ತೊಂದರೆ ಎದುರಾಗಬಹುದು ಎಂದು ನಿರೀಕ್ಷಿಸಿದ್ದರೇನೋ, ಆದರೆ ತಮ್ಮದೇ ಪಕ್ಷದ ಶಾಸಕರು ಸರ್ಕಾರಕ್ಕೆ ಇಂತಹ ಮುಜುಗರ ತಂದೊಡ್ಡುತ್ತಾರೆ ಎಂದು ಅವರು ಊಹಿಸಿರಲಿಕ್ಕಿಲ್ಲ.
ವಿಪಕ್ಷಗಳ ಟೀಕೆ: ಅರುಳ್ ವಿಘ್ನೇಶ್ ಮತ್ತು ರವಿಶಂಕರ್ ವಿರುದ್ಧ ತಕ್ಷಣದ ಕ್ರಮ ಕೈಗೊಳ್ಳದಿರುವುದು ವಿರೋಧ ಪಕ್ಷಗಳಿಗೆ ಟಿವಿಕೆ ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸಲು ಅಸ್ತ್ರ ನೀಡಿದಂತಾಗಿದೆ.
ಸರ್ಕಾರದಲ್ಲಿ ದಿಕ್ಕು ದೆಸೆ ಇಲ್ಲವಾಗಿದೆ ಮತ್ತು ಮಿತ್ರಪಕ್ಷಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲು ವಿಧಾನಸಭೆಯಲ್ಲಿ ಸ್ವಂತ ಬಲದ ಮೇಲೆ 118ರ ಮ್ಯಾಜಿಕ್ ಸಂಖ್ಯೆಯನ್ನು ತಲುಪುವುದರತ್ತ ಮಾತ್ರ ಸರ್ಕಾರ ಗಮನಹರಿಸುತ್ತಿದೆ ಎಂದು ವಿಪಕ್ಷಗಳು ದೂರಿವೆ.
ಅಶಿಸ್ತನ್ನು ಸಹಿಸುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಿದ್ದರೂ, ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರವು ಅತ್ಯಲ್ಪ ಬಹುಮತ ಹೊಂದಿರುವ ಕಾರಣದಿಂದಲೇ ವಿಜಯ್ ಅವರು ತಮ್ಮ ಶಾಸಕರನ್ನು ನಿಯಂತ್ರಿಸಲು ಹಿಂಜರಿಯುತ್ತಿದ್ದಾರೆಯೇ ಎಂಬ ಪ್ರಶ್ನೆಗಳನ್ನೂ ವಿಪಕ್ಷಗಳು ಎತ್ತಿವೆ.
ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದ ವಿಚಾರವನ್ನೇ ಪ್ರಮುಖ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡು ಅದನ್ನು ಸರಿಪಡಿಸುವ ಭರವಸೆಯನ್ನು ಟಿವಿಕೆ ಸರ್ಕಾರ ನೀಡಿತ್ತು. ಆದರೆ, ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳು ಮತ್ತು ಜೈಲಿನಿಂದ ಕೈದಿಗಳು ಪರಾರಿಯಾಗುತ್ತಿರುವ ಘಟನೆಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಟಿವಿಕೆ ಪಕ್ಷವನ್ನು ಸ್ಥಾಪಿಸಿದ ಎರಡೇ ವರ್ಷಗಳಲ್ಲಿ ಅಂದರೆ ಮೇ 10ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ವಿಜಯ್, ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ಮತ್ತು ಪಾರದರ್ಶಕ ಆಡಳಿತದ ಭರವಸೆಯೊಂದಿಗೆ ಸಕಾರಾತ್ಮಕವಾಗಿ ಹೆಜ್ಜೆ ಇಟ್ಟಿದ್ದರು.
ವಿಜಯ್ ಸಾರ್ವಜನಿಕ ವರ್ಚಸ್ಸು ಅಬಾಧಿತ
ಆಡಳಿತ ವೈಫಲ್ಯದ ಕುರಿತು ವಿರೋಧ ಪಕ್ಷಗಳ ಆರೋಪಗಳ ನಡುವೆಯೂ ವಿಜಯ್ ಅವರ ಸಾರ್ವಜನಿಕ ವರ್ಚಸ್ಸು ಹಾಗೆಯೇ ಉಳಿದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುವ ರೋಡ್ಶೋಗಳಿಗೆ ಸೇರುವ ಜನಸಾಗರವೇ ಅವರ ಜನಪ್ರಿಯತೆಗೆ ಸಾಕ್ಷಿ.
ಆರ್ಥಿಕ ಸಂಕಷ್ಟದ ನಡುವೆಯೂ ಟಿವಿಕೆ ಸರ್ಕಾರ ಹಂತ ಹಂತವಾಗಿ ತನ್ನ ಚುನಾವಣಾ ಭರವಸೆಗಳನ್ನು ಈಡೇರಿಸಲು ಮುಂದಡಿ ಇಟ್ಟಿದೆ. ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಸಂಸ್ಥೆ 'ಟಾಸ್ಮ್ಯಾಕ್' ಸುಧಾರಣೆಗೆ ಸರ್ಕಾರ ಮುಂದಾಗಿದ್ದು, ಹಿಂದಿನ ಸರ್ಕಾರಗಳು ಟೆಂಡರ್ ಮತ್ತು ದೊಡ್ಡ ಯೋಜನೆಗಳಲ್ಲಿ ಕಮಿಷನ್ ರೂಪದಲ್ಲಿ ಸಂಗ್ರಹಿಸುತ್ತಿದ್ದ ಪಕ್ಷದ ನಿಧಿ ಪದ್ಧತಿಯನ್ನು ನಿಲ್ಲಿಸಿರುವುದಾಗಿ ಹೇಳಿಕೊಂಡಿದೆ.
ಹಿಂದಿನ ಡಿಎಂಕೆ ಆಡಳಿತದಲ್ಲಿ ಕರೆಯಲಾಗಿದ್ದ ದುಬಾರಿ ದರದ ನೂರಾರು ಟೆಂಡರ್ಗಳನ್ನು ರದ್ದುಗೊಳಿಸಲಾಗಿದೆ. ಶಿಸ್ತುಕ್ರಮದ ಭಯದಿಂದ ಅಧಿಕಾರಿಗಳು ಕೆಲಸ ಮಾಡುತ್ತಿರುವುದರಿಂದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಕಡಿಮೆಯಾಗುತ್ತಿರುವುದು ಗೋಚರಿಸುತ್ತಿದೆ.
ಜಾತಿ ಪ್ರಮಾಣಪತ್ರ, ಪಟ್ಟಾ ವರ್ಗಾವಣೆ, ವಿದ್ಯುತ್ ಸಂಪರ್ಕ ವರ್ಗಾವಣೆ ಸೇರಿದಂತೆ ಇತರೆ ಮೂಲಭೂತ ಸೇವೆಗಳಿಗೆ ಸಂಬಂಧಿಸಿದ ಕಡತಗಳು ವೇಗವಾಗಿ ವಿಲೇವಾರಿಯಾಗುತ್ತಿವೆ. ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಸಾಮಾನ್ಯ ಜನರಿಗೆ ಅಧಿಕಾರಿಗಳಿಂದ ಗೌರವ ಸಿಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೆಲಸ ಮಾಡಿಸಿಕೊಳ್ಳಲು ಅಧಿಕಾರಿಗಳಿಗೆ ಲಂಚ ನೀಡಬೇಡಿ, ನಾನು ನಿಮ್ಮ ಬೆನ್ನಿಗೆ ನಿಲ್ಲುತ್ತೇನೆ ಎಂದು ವಿಜಯ್ ಸ್ವತಃ ಜನರಿಗೆ ಭರವಸೆ ನೀಡಿದ್ದಾರೆ.
ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಮತ್ತು ಆಡಳಿತವನ್ನು ಜನರಿಗೆ ಹತ್ತಿರವಾಗಿಸುವ ಉತ್ತಮ ಉದ್ದೇಶ ವಿಜಯ್ ಸರ್ಕಾರದ್ದು. ಆದರೆ, ಆ ವೇಗವನ್ನು ಕಾಯ್ದುಕೊಳ್ಳಲು ಜನಪ್ರತಿನಿಧಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಹಿರಿಯ ಪತ್ರಕರ್ತ ಮಾಲನ್ ನಾರಾಯಣನ್ ಅಭಿಪ್ರಾಯಪಟ್ಟಿದ್ದಾರೆ.
ಆಡಳಿತದಲ್ಲಿ ಪಾರದರ್ಶಕತೆ ಮತ್ತು ಯೂಟರ್ನ್: ವಿಧಾನಸಭಾ ಕಲಾಪಗಳ ನೇರ ಪ್ರಸಾರದಿಂದ ಹಿಡಿದು, ನಾಗರಿಕ ಸಮಾಜವು ತಪ್ಪುಗಳನ್ನು ಎತ್ತಿ ತೋರಿಸಿದಾಗ ಅವುಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳುವವರೆಗೆ ಹಾಗೂ ಹಿಂದಿನ ಸರ್ಕಾರದ ಜನಪರ ಕಲ್ಯಾಣ ಯೋಜನೆಗಳ ಹೆಸರನ್ನು ಬದಲಾಯಿಸಿ ಮುಂದುವರಿಸುವವರೆಗೆ ಸರ್ಕಾರವು ಪಾರದರ್ಶಕತೆಯ ಮಾತನ್ನು ಸ್ವಲ್ಪಮಟ್ಟಿಗೆ ಉಳಿಸಿಕೊಂಡಿದೆ.
ಆದರೆ, ವಿಜಯ್ ಅವರ ರಾಜಕೀಯ ತಂತ್ರಜ್ಞ ಜಾನ್ ಅರಿಕೋಸ್ವಾಮಿ ಮತ್ತು ಆಪ್ತ ಸ್ನೇಹಿತ ವಿಷ್ಣು ರೆಡ್ಡಿ ಅವರನ್ನು ಮುಖ್ಯಮಂತ್ರಿಗಳ ಸಲಹೆಗಾರರನ್ನಾಗಿ ನೇಮಕ ಮಾಡಿರುವುದನ್ನು ಸಾರ್ವಜನಿಕಗೊಳಿಸಲು ಸರ್ಕಾರ ನಿರಾಕರಿಸಿದ್ದರಿಂದ ಪಾರದರ್ಶಕತೆಯ ಭರವಸೆಗೆ ಪೆಟ್ಟು ಬಿದ್ದಿದೆ. ನಿವೃತ್ತ ಅಧಿಕಾರಿಗಳು ಅಥವಾ ಪೊಲೀಸ್ ಅಧಿಕಾರಿಗಳನ್ನು ಅವಲಂಬಿಸಿದ್ದ ಹಿಂದಿನ ಸರ್ಕಾರಗಳಿಗಿಂತ ಭಿನ್ನವಾಗಿ, ಟಿವಿಕೆ ಸರ್ಕಾರವು ಖಾಸಗಿ ವ್ಯಕ್ತಿಗಳನ್ನು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ.
ಸಂಪುಟ ಸಭೆಯಲ್ಲಿ ಜಾನ್, ವಿಷ್ಣು ರೆಡ್ಡಿ ಅವರಿಗೆ ಭಾಗವಹಿಸಲು ಮುಖ್ಯಮಂತ್ರಿ ವಿಜಯ್ ಅವಕಾಶ ಕಲ್ಪಿಸಿದ್ದಾರೆ. ಸರ್ಕಾರದಲ್ಲಿ ಅವರ ಸ್ಥಾನಮಾನದ ಕುರಿತಂತೆ ಗೊಂದಲಗಳು ಮುಂದುವರಿದಿವೆ.
ಅತ್ಯಂತ ಸೂಕ್ಷ್ಮವಾದ ಸಾರ್ವಜನಿಕ (ಕಾನೂನು ಮತ್ತು ಸುವ್ಯವಸ್ಥೆ) ಇಲಾಖೆಯನ್ನು ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಯಿಂದ ಹೊರಗಿಟ್ಟು ಹೊರಡಿಸಿದ್ದ ಆದೇಶವನ್ನು ತೀವ್ರ ವಿರೋಧದ ನಂತರ ತಕ್ಷಣವೇ ಹಿಂಪಡೆದಾಗ ಪಾರದರ್ಶಕತೆಯ ನಿಲುವು ಮತ್ತಷ್ಟು ಮುಗ್ಗರಿಸಿತು. ಆರು ತಿಂಗಳಲ್ಲಿ ಹೊಸ ಸರ್ಕಾರ ತೆಗೆದುಕೊಂಡ ಹಲವು ಯೂಟರ್ನ್ಗಳು ಆಡಳಿತದಲ್ಲಿನ ಸಮನ್ವಯದ ಕೊರತೆಯನ್ನು ಎತ್ತಿ ತೋರಿಸಿದ್ದಲ್ಲದೆ, ಯುವ ಸಚಿವ ಸಂಪುಟದ ಅನುಭವದ ಕೊರತೆಯನ್ನು ಬಯಲು ಮಾಡಿವೆ.
ಆಡಳಿತದಲ್ಲಿರುವ ಬಹುತೇಕ ಶಾಸಕರು ಹೊಸಬರಾಗಿದ್ದು, ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟಪಡುತ್ತಿದ್ದಾರೆ. ಕೆಲಸದ ರೀತಿಯನ್ನು ಕಲಿಯಲು ಆರು ತಿಂಗಳು ಉತ್ತಮ ಅವಧಿಯಾಗಿದೆ ಮತ್ತು ಸರ್ಕಾರವು ಕಾನೂನು ಸುವ್ಯವಸ್ಥೆಯತ್ತ ಹೆಚ್ಚಿನ ಗಮನ ಹರಿಸಬೇಕು. ಪೊಲೀಸರ ಮೇಲೆಯೇ ಹಲ್ಲೆ ನಡೆದ ಘಟನೆಗಳನ್ನೂ ನಾವು ನೋಡಿದ್ದೇವೆ ಎಂದು ನಾರಾಯಣನ್ ಹೇಳಿದ್ದಾರೆ.
ಪದೇ ಪದೇ ವಿದ್ಯುತ್ ಕಡಿತ, ವಿದ್ಯುತ್ ದರ ಏರಿಕೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಂತಹ ವಿಷಯಗಳ ಬಗ್ಗೆಯೂ ಸರ್ಕಾರವು ಜನರಿಂದ ತೀವ್ರ ಪ್ರಶ್ನೆಗಳನ್ನು ಎದುರಿಸುತ್ತಿದೆ.
ಟಿವಿಕೆ ಸರ್ಕಾರವು ರಾಜ್ಯದ ಹಕ್ಕುಗಳ ವಿಷಯದಲ್ಲಿ ರಾಜಿ ಮಾಡಿಕೊಂಡಿದೆ ಎಂದು ಡಿಎಂಕೆ ಆರೋಪಿಸುತ್ತಿದ್ದರೂ, ವಿಜಯ್ ನೇತೃತ್ವದ ಸರ್ಕಾರವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಯ್ದುಕೊಳ್ಳುತ್ತಲೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಮತ್ತು ತ್ರಿಭಾಷಾ ಸೂತ್ರವನ್ನು ವಿರೋಧಿಸುವುದನ್ನು ಮುಂದುವರಿಸಿದೆ. ಆಡಳಿತಾತ್ಮಕ ವಿಷಯಗಳಲ್ಲಿ ಬಿಜೆಪಿಯೊಂದಿಗೆ ಮತ್ತು ರಾಜಕೀಯವಾಗಿ ಕಾಂಗ್ರೆಸ್ನೊಂದಿಗೆ ಕೆಲಸ ಮಾಡುವ ಮೂಲಕ ರಾಜಕೀಯ ಮತ್ತು ಆಡಳಿತದ ನಡುವೆ ಸಮತೋಲನ ಕಾಯ್ದುಕೊಳ್ಳಬಲ್ಲೆ ಎಂಬ ಸ್ಪಷ್ಟ ಸಂದೇಶವನ್ನು ವಿಜಯ್ ಈ ಆರು ತಿಂಗಳಲ್ಲಿ ರವಾನಿಸಿದ್ದಾರೆ.
ವಿಜಯ್ ಅಧಿಕಾರ ಚಲಾಯಿಸಬೇಕು: ದ್ರಾವಿಡ ದಿಗ್ಗಜರಾದ ಸಿ.ಎನ್. ಅಣ್ಣಾದೊರೈ ಮತ್ತು ಎಂ.ಜಿ. ರಾಮಚಂದ್ರನ್ ಅವರ ಜೀವನ ಚರಿತ್ರೆಕಾರ ಆರ್. ಕಣ್ಣನ್ ಮಾತನಾಡಿ, 'ಮುಖ್ಯಮಂತ್ರಿಗಳು (ವಿಜಯ್) ಏಕೆ ತಮ್ಮ ಅಧಿಕಾರವನ್ನು ದೃಢವಾಗಿ ಚಲಾಯಿಸುತ್ತಿಲ್ಲ ಮತ್ತು ಏಕೆ ಹಿಂಜರಿಕೆಯಿಂದ ಆಡಳಿತ ನಡೆಸುತ್ತಿರುವಂತೆ ಸಂಕೇತಗಳನ್ನು ನೀಡುತ್ತಿದ್ದಾರೆ ಎಂಬುದು ತಮಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಟಿವಿಕೆ ಶಾಸಕರಲ್ಲಿ ಬಹುತೇಕರು ರಾಜಕೀಯಕ್ಕೆ ಹೊಸಬರಾಗಿದ್ದರೂ ಮತ್ತು ಅಧಿಕಾರದ ಪ್ರಭಾವವು ಬೆರಗುಗೊಳಿಸುವಂತಿದ್ದರೂ, ತಮಿಳುನಾಡಿನಲ್ಲಿ ವಿಜಯ್ ಅವರು ನಟನಿಂದ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಬದಲಾದ ಮೂರನೇ ವ್ಯಕ್ತಿಯಾಗಿದ್ದಾರೆ. ಅವರು ಏಕೆ ತಮ್ಮನ್ನು ತಾವು ದೃಢವಾಗಿ ಪ್ರತಿಪಾದಿಸಿಕೊಳ್ಳುತ್ತಿಲ್ಲ ಎಂಬುದು ಸ್ಪಷ್ಟವಾಗಿಲ್ಲ ಎಂದು ಕಣ್ಣನ್ ಹೇಳಿದ್ದಾರೆ.
'ದಿ ಡಿಎಂಕೆ ಇಯರ್ಸ್' ಎಂಬ ಪುಸ್ತಕವನ್ನು ಬರೆದಿರುವ ಕಣ್ಣನ್, ವಿಜಯ್ ಅವರು ಶಾಸಕರ ಕುರಿತಾದ ಭಯವನ್ನು ಬಿಡಬೇಕು. ಒಂದು ವೇಳೆ ಸರ್ಕಾರ ಬಿದ್ದರೂ ಚುನಾವಣೆ ಎದುರಿಸಲು ಸಿದ್ಧರಾಗಬೇಕು ಎಂದು ಸಲಹೆ ನೀಡಿದ್ದಾರೆ.
ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸುವಾಗ ವಿಜಯ್ ಹೇಗೆ ಚುನಾವಣಾ ಪ್ರಚಾರದ ಉತ್ಸಾಹದಲ್ಲಿರುತ್ತಾರೋ, ಆಡಳಿತದಲ್ಲೂ ಅದೇ ರೀತಿ ಇರಬೇಕು. ಅವರು ಕಟ್ಟುನಿಟ್ಟಾಗಿ ಆಡಳಿತ ನಡೆಸಬೇಕು. ಜನರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಅವರು ಈ ಅಲೆಯನ್ನು ಬಳಸಿಕೊಂಡು ಕೆಲಸ ಮಾಡಿ ತೋರಿಸಬೇಕು ಎಂದು ಕಣ್ಣನ್ ಹೇಳಿದ್ದಾರೆ.

