ಇಪ್ಪತ್ತೊಂದನೇ ಶತಮಾನದ ಅತ್ಯಂತ ಗಂಭೀರ ಜಾಗತಿಕ ಸವಾಲಾಗಿ ಪರಿಣಮಿಸಿರುವ ಹವಾಮಾನ ಬಿಕ್ಕಟ್ಟು, ಕೃಷಿ, ಅರ್ಥ ವ್ಯವಸ್ಥೆ ಮತ್ತು ಮಾನವನ ದಿನನಿತ್ಯದ ಬದುಕಿನ ಮೇಲೆ ಮಾತ್ರವಲ್ಲದೆ, ಜಗತ್ತಿನಾದ್ಯಂತ ಕೋಟ್ಯಂತರ ಜನರನ್ನು ರಂಜಿಸುವ ಮತ್ತು ಒಂದುಗೂಡಿಸುವ ಕ್ರೀಡಾ ಕ್ಷೇತ್ರದ ಮೇಲೂ ತೀವ್ರ ಪರಿಣಾಮ ಬೀರುತ್ತಿದೆ.
ಇತ್ತೀಚೆಗೆ ಕೊನೆಗೊಂಡ ವಿಶ್ವದ ದೊಡ್ಡ ಕ್ರೀಡಾ ಹಬ್ಬಗಳಲ್ಲೊಂದಾದ ಫಿಫಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯ ನಿದರ್ಶನವನ್ನೇ ನೋಡಿ. ಪಂದ್ಯಾವಳಿಯನ್ನು ಜಂಟಿಯಾಗಿ ನಡೆಸಿದ ಅಮೆರಿಕ,
ಮೆಕ್ಸಿಕೊ ಮತ್ತು ಕೆನಡಾ ದೇಶಗಳು ಪಂದ್ಯಾವಳಿ ಶುರುವಾದಾಗಿನಿಂದ ಮುಗಿಯುವವರೆಗೆ ಹವಾ
ಮಾನ ಏರುಪೇರಿನಿಂದ ಪಂದ್ಯಗಳು ರದ್ದಾಗದಿದ್ದರೆ ಸಾಕು ಎಂಬ ಆತಂಕದಲ್ಲೇ ಇದ್ದವು. ಆತಂಕಕ್ಕೆ ಕಾರಣವಿತ್ತು. ಪಂದ್ಯಗಳು ನಡೆಯುವಾಗ ತೀವ್ರವಾದ ಉಷ್ಣ ಗಾಳಿ ಬೀಸಿ ಆಟಗಾರರು ಹೈರಾಣಾಗಿದ್ದರು. ಹಲವು ಪಂದ್ಯಗಳ ವೇಳೆ ವಾತಾವರಣದ ಉಷ್ಣಾಂಶ 43 ಡಿಗ್ರಿ ಸೆಂಟಿಗ್ರೇಡ್ ತಲಪಿದ್ದರಿಂದ, ಪಂದ್ಯದ ನಡುವೆ 3 ನಿಮಿಷಗಳ ಕೂಲಿಂಗ್ ಬ್ರೇಕ್ ನೀಡಲಾಯಿತು! ಮೂರು ರಾಷ್ಟ್ರಗಳ ಹದಿನಾರು ಕ್ರೀಡಾಂಗಣಗಳಲ್ಲಿ ನಡೆದ ಪಂದ್ಯಗಳಿಗೆ ಹವಾಮಾನ ವೈಪರೀತ್ಯದ ಬಿಸಿ ನೇರವಾಗಿಯೇ ತಟ್ಟಿತ್ತು.
ಕ್ರೀಡೆಯು ಬರೀ ದೈಹಿಕ ಸಾಮರ್ಥ್ಯದ ಪ್ರದರ್ಶನವಲ್ಲ; ಅದು ಹವಾಮಾನ ಮತ್ತು ಪರಿಸರದೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವ ಸೂಕ್ಷ್ಮ ಪ್ರಕ್ರಿಯೆ. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನದ ತೀವ್ರ ಏರಿಕೆ, ಅನಿರೀಕ್ಷಿತ ಮಳೆ, ಕರಗುತ್ತಿರುವ ಹಿಮ ಮತ್ತು ಹದಗೆಡುತ್ತಿರುವ ಗಾಳಿಯ ಗುಣಮಟ್ಟವು ಜಗತ್ತಿನ ಪ್ರಮುಖ ಕ್ರೀಡಾಕೂಟಗಳ ಭವಿಷ್ಯವನ್ನೇ ಪ್ರಶ್ನಿಸುವಂತೆ ಮಾಡಿದೆ. ಕ್ರೀಡಾಂಗಣಗಳು ಇಂದು ಆಟದ ಮೈದಾನಗಳಾಗಿಯಷ್ಟೇ ಉಳಿದಿಲ್ಲ, ಅವು ಹವಾಮಾನ ಬದಲಾವಣೆಯ ಪ್ರತ್ಯಕ್ಷ ಸಾಕ್ಷಿಗಳಾಗಿ ಬದಲಾಗುತ್ತಿವೆ.
ಕ್ರಿಕೆಟ್ ಅಂಗಳದಲ್ಲೂ ಹವಾಮಾನ ವೈಪರೀತ್ಯದ ಪ್ರಭಾವವು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆಸ್ಟ್ರೇಲಿಯಾದಲ್ಲಿ ನಡೆಯುವ ಪಂದ್ಯಾವಳಿಗಳ ವೇಳೆ ಅಲ್ಲಿನ ತೀವ್ರವಾದ ಬಿಸಿಲು ಮತ್ತು ಕಾಳ್ಗಿಚ್ಚಿನ ಹೊಗೆಯು ಆಟಗಾರರ ಆರೋಗ್ಯಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಇತ್ತೀಚಿನ ವರ್ಷಗಳಲ್ಲಿ ಮೆಲ್ಬರ್ನ್ ಮತ್ತು ಸಿಡ್ನಿಯಲ್ಲಿ ನಡೆದ ಪಂದ್ಯಗಳ ವೇಳೆ ಆಟಗಾರರು ಉಸಿರಾಟದ ತೊಂದರೆ ಮತ್ತು ನಿರ್ಜಲೀಕರಣದಿಂದ ಬಳಲಿದ್ದರು. ಭಾರತದಲ್ಲಿಯೂ ಅತಿಯಾದ ತಾಪಮಾನ ಮತ್ತು ವಾಯುಮಾಲಿನ್ಯದಿಂದಾಗಿ ಪಂದ್ಯಗಳನ್ನು ನಡೆಸಲು ಕ್ರೀಡಾ ಮಂಡಳಿಗಳು ಹೆಣಗಾಡುತ್ತಿವೆ. ದೆಹಲಿಯಲ್ಲಿ ನಡೆಯುವ ಅಂತರರಾಷ್ಟ್ರೀಯ ಪಂದ್ಯಗಳ ವೇಳೆ ಶ್ರೀಲಂಕಾ ಮತ್ತು ಇತರ ದೇಶಗಳ ಆಟಗಾರರು ಮಾಸ್ಕ್ ಧರಿಸಿ ಆಡಬೇಕಾದ ಅನಿವಾರ್ಯತೆ ಸೃಷ್ಟಿ ಆಗಿತ್ತು. ಇಂಗ್ಲೆಂಡ್‌ನಲ್ಲಿ ಅತಿಯಾದ ಮತ್ತು ಅಕಾಲಿಕ ಮಳೆಯಿಂದಾಗಿ ಪ್ರಮುಖ ಟೆಸ್ಟ್ ಪಂದ್ಯಗಳು ಒಂದು ಎಸೆತವೂ ಇಲ್ಲದೆ ರದ್ದಾಗುತ್ತಿರುವುದು ಕ್ರೀಡೆಯ ವಾಣಿಜ್ಯ ಮೌಲ್ಯಕ್ಕೆ ಮತ್ತು ಕ್ರೀಡಾಭಿಮಾನಿಗಳ ಉತ್ಸಾಹಕ್ಕೆ ತಣ್ಣೀರೆರಚುತ್ತಿದೆ. ಕಳೆದ ವರ್ಷವೊಂದರಲ್ಲೇ ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯಬೇಕಿದ್ದ 2 ಲಕ್ಷ ಫುಟ್‌ಬಾಲ್ ಪಂದ್ಯಗಳು ರದ್ದಾಗಿವೆ!
ಟೆನಿಸ್ ಜಗತ್ತಿನ ಪ್ರತಿಷ್ಠಿತ ಗ್ರಾಂಡ್ ಸ್ಲ್ಯಾಮ್ ಪಂದ್ಯಾವಳಿಯಾದ 'ಆಸ್ಟ್ರೇಲಿಯನ್ ಓಪನ್' ಪ್ರತಿವರ್ಷ ತಾಪಮಾನದ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಮೆಲ್ಬರ್ನ್‌ನ ಕಡು ಬೇಸಿಗೆಯಲ್ಲಿ ತಾಪಮಾನವು 45 ಡಿಗ್ರಿ ಸೆಂಟಿಗ್ರೇಡ್ ದಾಟಿದಾಗ, ಕೋರ್ಟ್ ಮೇಲಿನ ತಾಪಮಾನವು ಇನ್ನೂ ಹೆಚ್ಚಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆಟಗಾರರು ಕೋರ್ಟ್‌ನಲ್ಲೇ ಪ್ರಜ್ಞೆ ತಪ್ಪಿ ಬೀಳುವ ಘಟನೆಗಳು, ಚೆಂಡನ್ನು ಹೆಕ್ಕುವ ತರುಣ, ತರುಣಿಯರು ದಣಿವಿನಿಂದ ಕುಸಿಯುವ ದೃಶ್ಯಗಳು ಸಾಮಾನ್ಯವಾಗುತ್ತಿವೆ. ಬಿಸಿಲಿನ ತಾಪ ತಾಳಲಾರದೆ ಆಟಗಾರರು ಹಿಮದ ಬ್ಯಾಗ್‌ಗಳನ್ನು ತಲೆಯ ಮೇಲೆ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಭವಿಷ್ಯದಲ್ಲಿ ಹೊರಾಂಗಣ ಕ್ರೀಡೆಗಳನ್ನು ಹಗಲಿನ ವೇಳೆಯಲ್ಲಿ ಆಡುವುದು ಅಸಾಧ್ಯವಾಗಿ ಪರಿಣಮಿಸಬಹುದು.
ಬೇಸಿಗೆಯ ಕ್ರೀಡೆಗಳಲ್ಲದೆ, ಚಳಿಗಾಲದ ಒಲಿಂಪಿಕ್ಸ್ ಕೂಡ ಅಸ್ತಿತ್ವದ ಸಂಕಟವನ್ನು ಎದುರಿಸು
ತ್ತಿದೆ. ಯುರೋಪಿನ ಆಲ್ಫ್ಸ್ ಪರ್ವತ ಶ್ರೇಣಿಗಳಲ್ಲಿ ಮತ್ತು ಉತ್ತರ ಅಮೆರಿಕದಲ್ಲಿ ಹಿಮದ ಹೊದಿಕೆಯು ವರ್ಷದಿಂದ ವರ್ಷಕ್ಕೆ ವೇಗವಾಗಿ ಕರಗುತ್ತಿದೆ. ಇಟಲಿಯಲ್ಲಿ ಇತ್ತೀಚೆಗೆ ನಡೆದ ಚಳಿಗಾಲದ ಕ್ರೀಡಾಕೂಟಗಳ ಆಯೋಜಕರು ಯಂತ್ರರೂಪಿತ ಕೃತಕ ಹಿಮವನ್ನು ಆಶ್ರಯಿಸಬೇಕಾಗಿ ಬಂತು. ಚೀನಾ ಮತ್ತು ಕೆನಡಾಗಳಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್‌ನಲ್ಲಿಯೂ ನೂರಾರು ಮೈಲಿ ದೂರದಿಂದ ಕೃತಕ ಹಿಮವನ್ನು ತಂದು, ರಾಸಾಯನಿಕಗಳನ್ನು ಬಳಸಿ ಮೈದಾನವನ್ನು ಸಿದ್ಧಪಡಿಸಲಾಗಿತ್ತು. ಇದು ಕ್ರೀಡೆಯ ನೈಸರ್ಗಿಕ ಸೌಂದರ್ಯವನ್ನು ಕೆಡಿಸುವುದಲ್ಲದೆ, ಕೃತಕ ಹಿಮದ ಮೇಲಿನ ಆಟವು ಕ್ರೀಡಾಪಟುಗಳಿಗೆ ಗಾಯದ ಅಪಾಯಗಳನ್ನು ತಂದೊಡ್ಡುತ್ತದೆ. ಭವಿಷ್ಯದಲ್ಲಿ ಚಳಿಗಾಲದ ಒಲಿಂಪಿಕ್ಸ್ ಆಯೋಜಿಸಲು ಸೂಕ್ತವಾದ ಹಿಮಪಾತವಿರುವ ದೇಶಗಳ ಸಂಖ್ಯೆ ಬೆರಳೆಣಿಕೆಯಷ್ಟಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಆಟಗಾರರ ಸ್ವಾಸ್ಥ್ಯದ ರಕ್ಷಣೆಗಾಗಿ ಪಂದ್ಯದ ಮಧ್ಯೆ 'ಕೂಲಿಂಗ್ ಬ್ರೇಕ್' ನೀಡುವುದು ಇತ್ತೀಚೆಗೆ ಕಡ್ಡಾಯ ಎನ್ನುವಂತಾಗಿದೆ. ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ ಕತಾರ್‌ನಲ್ಲಿ ನಡೆದ ವಿಶ್ವಕಪ್ ಅನ್ನು ಜೂನ್-ಜುಲೈ ತಿಂಗಳ ಬದಲು, ಅಲ್ಲಿನ ವಿಪರೀತ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನವೆಂಬರ್-ಡಿಸೆಂಬರ್‌ನ ಚಳಿಗಾಲಕ್ಕೆ ಮುಂದೂಡಬೇಕಾಗಿ ಬಂತು. ಇದು ಜಾಗತಿಕ ಫುಟ್‌ಬಾಲ್ ಕ್ಲಬ್‌ಗಳ ವೇಳಾಪಟ್ಟಿಯನ್ನೇ ಸಂಪೂರ್ಣವಾಗಿ ಏರುಪೇರು ಮಾಡಿತು. ಬ್ರೆಜಿಲ್ ಮತ್ತು ಆಫ್ರಿಕನ್ ದೇಶಗಳಲ್ಲಿ ಸ್ಥಳೀಯ ಲೀಗ್ ಪಂದ್ಯಗಳ ವೇಳೆ ತೀವ್ರ ತಾಪಮಾನದಿಂದಾಗಿ ಆಟಗಾರರು ಮೈದಾನದಲ್ಲೇ ಹೃದಯಾಘಾತಕ್ಕೆ ಒಳಗಾದ ಘಟನೆಗಳೂ ವರದಿಯಾಗಿವೆ.
ಬೈಸಿಕಲ್ ರೇಸಿಂಗ್‌ನ ಅತ್ಯಂತ ಕಠಿಣ ಸ್ಪರ್ಧೆಯಾದ 'ಟೂರ್ ಡಿ ಫ್ರಾನ್ಸ್' ಫ್ರಾನ್ಸ್‌ನ ಕಡು ಬಿಸಿಲಿನಲ್ಲಿ ನಡೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಯುರೋಪ್ ಖಂಡವು ಹಿಂದೆಂದೂ ಕಾಣದ ಭೀಕರ ಉಷ್ಣಗಾಳಿಗೆ ತುತ್ತಾಗುತ್ತಿದ್ದು, ಸೈಕ್ಲಿಸ್ಟ್‌ಗಳು ರಸ್ತೆಯ ಡಾಂಬರು ಕರಗುವಂತಹ ತಾಪಮಾನದಲ್ಲಿ ನೂರಾರು ಕಿಲೋಮೀಟರ್ ಸೈಕಲ್ ಚಲಾಯಿಸಬೇಕಾಗಿದೆ. ಇದರಿಂದಾಗಿ ಕ್ರೀಡಾಪಟುಗಳ ದೇಹದ ಉಷ್ಣತೆ ಅಪಾಯಕಾರಿ ಮಟ್ಟಕ್ಕೆ ತಲಪಿ ಆಸ್ಪತ್ರೆಗೆ ದಾಖಲಾಗುವ ಪ್ರಸಂಗಗಳು ಹೆಚ್ಚುತ್ತಿವೆ. ಜಪಾನ್‌ನ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಮ್ಯಾರಥಾನ್ ಮತ್ತು ನಡಿಗೆ ಸ್ಪರ್ಧೆಗಳನ್ನು ತಾಪಮಾನದ ತೀವ್ರತೆಯಿಂದಾಗಿ ನಗರದಿಂದ ಉತ್ತರಕ್ಕಿರುವ ಸಪೋರೋ ನಗರಕ್ಕೆ ಸ್ಥಳಾಂತರಿಸಬೇಕಾಯಿತು. ಆದಾಗ್ಯೂ, ತೇವಾಂಶ ಮತ್ತು ಬಿಸಿಲಿನ ಕಾರಣದಿಂದಾಗಿ ಅನೇಕ ಅಥ್ಲೀಟ್‌ಗಳು ಸ್ಪರ್ಧೆಯನ್ನು ಪೂರ್ಣಗೊಳಿಸಲಾಗದೆ ಅರ್ಧದಲ್ಲೇ ಹಿಂದೆ ಸರಿದರು.
ಕ್ರೀಡೆಯು ಹವಾಮಾನ ವೈಪರೀತ್ಯದ ಬಲಿಪಶುವಷ್ಟೇ ಅಲ್ಲ, ಪರಿಸರ ಮಾಲಿನ್ಯಕ್ಕೂ ಕಾರಣವಾಗು
ತ್ತಿದೆ ಎಂಬುದು ಕಹಿ ಸತ್ಯ. ಜಾಗತಿಕ ಕ್ರೀಡಾ ಉದ್ಯಮವು ಪ್ರತಿ ವರ್ಷ ಕೋಟ್ಯಂತರ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ. ಕ್ರೀಡಾಕೂಟ ವೀಕ್ಷಿಸಲು ಲಕ್ಷಾಂತರ ಅಭಿಮಾನಿಗಳು ವಿಮಾನ ಮತ್ತು ಇತರ ವಾಹನಗಳಲ್ಲಿ ಪ್ರಯಾಣಿಸುವುದು, ಕ್ರೀಡಾಂಗಣಗಳ ನಿರ್ಮಾಣ, ರಾತ್ರಿಯ ಪಂದ್ಯಗಳಿಗಾಗಿ ಬಳಕೆ ಆಗುವ ಅಪಾರ ಪ್ರಮಾಣದ ವಿದ್ಯುತ್ ಮತ್ತು ಕ್ರೀಡಾಂಗಣಗಳಲ್ಲಿ ಸೃಷ್ಟಿಯಾಗುವ ಟನ್‌ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರ ನಾಶಕ್ಕೆ ಕಾರಣ ಆಗುತ್ತಿವೆ. ಪ್ಯಾರಿಸ್ ಒಲಿಂಪಿಕ್ಸ್‌ನಂತಹ ಕೆಲವು ಕ್ರೀಡಾಕೂಟಗಳು ಪರಿಸರಸ್ನೇಹಿ ಆಗುವ ಮತ್ತು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ಭರವಸೆಯನ್ನು ನೀಡಿದ್ದರೂ, ಅದನ್ನು ಬೇರೆ ಬೇರೆ ಭೂಭಾಗಗಳಲ್ಲಿ ಸಂಪೂರ್ಣವಾಗಿ ಕಾರ್ಯಗತಗೊಳಿಸುವುದು ದೊಡ್ಡ ಸವಾಲಾಗಿದೆ.
ಭಾರತದಲ್ಲೀಗ ಕ್ರೀಡಾಸಕ್ತಿಯ ಯುವಜನರ ಸಂಖ್ಯೆ ಹೆಚ್ಚಾಗುತ್ತಿದೆ. ಲಕ್ಷಾಂತರ ಯುವಕರು ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಪಿ.ವಿ. ಸಿಂಧು, ಮೇರಿ ಕೋಮ್, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಧೋನಿ, ಮೀರಾಬಾಯಿ ಚಾನು, ಸೈನಾ ನೆಹ್ವಾಲ್, ಪಂಕಜ್ ಅಡ್ವಾಣಿ, ಸುನಿಲ್ ಚೆಟ್ರಿ ಮುಂತಾದವರು ಭಾರತೀಯ ಕೀಡಾಪಟುಗಳಿಗೆ ಮಾದರಿಗಳಾಗಿದ್ದಾರೆ. ಈ ಜನಪ್ರಿಯತೆಯು ಉತ್ತರದಾಯಿತ್ವವಾಗಿ ಬದಲಾಗಬೇಕಾಗಿದೆ.
ಕಳೆದ ವರ್ಷ ದೆಹಲಿಯಲ್ಲಿ ಜರುಗಿದ ಕ್ಲೈಮೇಟ್ ಶೃಂಗಸಭೆಯಲ್ಲಿ 'ತಾಪಮಾನ ನಿಯಂತ್ರಣದ ಯೋಜನೆಗಳಿಗೆ ನಾವು ಬದ್ಧ' ಎಂದು ಲಡಾಖ್ ಫುಟ್‌ಬಾಲ್ ಕ್ಲಬ್ ಸಹ ಸಂಸ್ಥಾಪಕ ಶಮೀಮ್ ಮೆರಾಜ್ ಘೋಷಿಸಿದ್ದಾರೆ. ಹೀಗೆ ಘೋಷಿಸಿದ ಮೊದಲ ಕೀಡಾ ಪ್ರಾಧಿಕಾರ ನಮ್ಮದು ಎಂದು ಹೇಳಿರುವ ಅವರು, ವಿಶ್ವದ ದೈತ್ಯ ಕ್ರೀಡಾ ಪ್ರಾಧಿಕಾರಗಳಿಗೇಕೆ ಇದು ಸಾಧ್ಯವಾಗದು ಎಂದು ಪ್ರಶ್ನಿಸಿದ್ದಾರೆ. ಲಡಾಖ್ ಫುಟ್‌ಬಾಲ್ ಕ್ಲಬ್ ಇತರ ಕ್ರೀಡಾಸಂಸ್ಥೆಗಳಿಗೂ ಮಾದರಿಯಾಗಬೇಕಿದೆ.
ಹವಾಮಾನ ವೈಪರೀತ್ಯವು ಕ್ರೀಡಾಲೋಕಕ್ಕೆ ಗಂಭೀರ ಎಚ್ಚರಿಕೆಯಾಗಿದೆ. ಪಂದ್ಯಗಳು ರದ್ದಾಗುವುದು, ಕ್ರೀಡಾಪಟುಗಳು ತೀವ್ರ ಆಯಾಸಕ್ಕೆ ಒಳಗಾಗುವುದು ಮತ್ತು ಕೃತಕ ಪರಿಸರದಲ್ಲಿ ಕ್ರೀಡೆಗಳನ್ನು ನಡೆಸುವುದು ಇನ್ನು ಮುಂದೆ ಅಪರೂಪದ ಘಟನೆಗಳಾಗಿ ಉಳಿಯುವುದಿಲ್ಲ. ಜಾಗತಿಕ ಕ್ರೀಡಾಸಂಸ್ಥೆಗಳು, ಕ್ರೀಡಾಪಟುಗಳು ಮತ್ತು ಪ್ರಾಯೋಜಕರು ಈಗಲೇ ಎಚ್ಚತ್ತುಕೊಂಡು ಪರಿಸರ ಸಂರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ, ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸದಿದ್ದರೆ ಮತ್ತು ನವೀಕರಿಸಬಹುದಾದ ಇಂಧನಗಳ ಬಳಕೆಗೆ ಒತ್ತು ನೀಡದಿದ್ದರೆ, ಭವಿಷ್ಯದ ಪೀಳಿಗೆಗೆ ನಾವು ಪ್ರೀತಿಸುವ ಕ್ರೀಡೆಗಳು ಅತಿ ದುರ್ಬಲ ರೂಪದಲ್ಲಿ ಉಳಿಯಬಹುದು. ಅಥವಾ, ಇತಿಹಾಸದ ಪುಟಗಳಲ್ಲಿ ಅಥವಾ ಇಂಟರ್ನೆಟ್‌ನ ವಿಡಿಯೊಗಳಲ್ಲಿ ಮಾತ್ರ ಕಾಣಸಿಗಬಹುದು. ಕ್ರೀಡೆಯ ಭವಿಷ್ಯವು ನಾವು ಇಂದು ಪರಿಸರವನ್ನು ಹೇಗೆ ರಕ್ಷಿಸುತ್ತೇವೆ ಎಂಬುದನ್ನು ಅವಲಂಬಿಸಿದೆ.
ಗುರುರಾಜ್ ಎಸ್. ದಾವಣಗೆರೆ
