Dailyhunt Logo
  • Light mode
    Follow system
    Dark mode
    • Play Story
    • App Story
ವಿಶ್ಲೇಷಣೆ: ಅಂತ್ಯವಲ್ಲ, ಅವಲೋಕನದ ಆರಂಭ

ವಿಶ್ಲೇಷಣೆ: ಅಂತ್ಯವಲ್ಲ, ಅವಲೋಕನದ ಆರಂಭ

ವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ-ಯುವಜನರ ಹೋರಾಟಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿರುವುದು ಭಾರತದ ಪ್ರಜಾಸತ್ತಾತ್ಮಕ ಚಳವಳಿಗಳ ಇತಿಹಾಸದಲ್ಲಿ ಮಹತ್ವದ ಘಟನೆ. ಈ ಐತಿಹಾಸಿಕ ಹೋರಾಟವು ಸಂವಿಧಾನದ 75(3)ನೇ ವಿಧಿ ಅನ್ವಯ ಚುನಾಯಿತ ಸರ್ಕಾರ, ನಿರ್ದಿಷ್ಟವಾಗಿ ಕೇಂದ್ರ ಮಂತ್ರಿಮಂಡಳ ಲೋಕಸಭೆಗೆ (ಜನರ ಸದನ) ಉತ್ತರದಾಯಿ ಆಗಿರಬೇಕೆಂಬ ಸಂವಿಧಾನಾತ್ಮಕ ತತ್ತ್ವವನ್ನು ಮರುಸ್ಥಾಪನೆಗೊಳಿಸಿದೆ.

ಶಿಕ್ಷಣ ಸಚಿವರ ರಾಜೀನಾಮೆಯಾಗಲಿ, ನಂದನ್‌ ನಿಲೇಕಣಿ ನೇತೃತ್ವದಲ್ಲಿ ಪರೀಕ್ಷಾ ಸುಧಾರಣೆ ಕಾರ್ಯಪಡೆಯಾಗಲಿ ಅಥವಾ ಕಳೆದ ವಾರ ಲೋಕಸಭೆಯಲ್ಲಿ ಮಂಡಿಸಿದ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ವಿಧಾನಗಳ ತಡೆ) ತಿದ್ದುಪಡಿ ಮಸೂದೆಯಾಗಲಿ, ಇಂದಿನ ಶಿಕ್ಷಣ ಕ್ಷೇತ್ರದ ಬಿಕ್ಕಟ್ಟಿಗೆ ಸಮಗ್ರ ಪರಿಹಾರವೆಂದು ಭಾವಿಸುವುದು ತಪ್ಪಾಗುತ್ತದೆ. ವಿದ್ಯಾರ್ಥಿಗಳ ತಕ್ಷಣದ ಬೇಡಿಕೆ ಸಚಿವರ ರಾಜೀನಾಮೆ ಹಾಗೂ ಪರೀಕ್ಷಾ ಸುಧಾರಣೆಯಾಗಿತ್ತು. ಆದರೆ, ಆ ಹೋರಾಟವು ಶಿಕ್ಷಣ ಕ್ಷೇತ್ರದ ಅಸಮಾನತೆ, ಶ್ರೇಣೀಕೃತ ವರ್ಗ ತಾರತಮ್ಯ, ಖಾಸಗೀಕರಣ, ವಾಣಿಜ್ಯೀಕರಣ, ಕೇಂದ್ರೀಕರಣ, ಮತ್ತು ಕಲಿಕೆಯ ಪಠ್ಯವನ್ನು ತರ್ಕಬದ್ಧವಾಗಿಸುವ ಹೆಸರಿನಲ್ಲಿ ಇತಿಹಾಸ, ರಾಜಕೀಯ ಶಾಸ್ತ್ರ ಮತ್ತು ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಕಡಿತ ಹಾಗೂ ಅಪ್ರಸ್ತುತ ವಿಷಯ ಸೇರ್ಪಡೆ, ಸೈದ್ಧಾಂತಿಕ ನೆಲೆಯಲ್ಲಿ ಶಿಕ್ಷಣದ ಅವೈಜ್ಞಾನೀಕರಣ- ಕೋಮುವಾದೀಕರಣ, ಕಲಿಕೆಗಿಂತ ಪರೀಕ್ಷೆಗಳಿಗೇ ಹೆಚ್ಚಿನ ಒತ್ತು, ಇತ್ಯಾದಿ ವಿಷಯಗಳ ಬಗ್ಗೆಯೂ ಮಹತ್ವದ ಪ್ರಶ್ನೆಗಳನ್ನು ಎತ್ತಿದೆ.

ಭಾರತದ ಇಂದಿನ ಶಿಕ್ಷಣ ಸಮಸ್ಯೆಯನ್ನು ಪರೀಕ್ಷಾ ನಿರ್ವಹಣೆ, ಸುಧಾರಣೆ ಮತ್ತು ಡಿಜಿಟಲೀಕರಣದ ಮೂಲಕ ತಾಂತ್ರಿಕ ಬಿಕ್ಕಟ್ಟಿನ ನಿವಾರಣೆ ಎಂದು ಅರ್ಥೈಸುವುದು ಮೂಲ ಸಮಸ್ಯೆಗೆ ಪರಿಹಾರ ಒದಗಿಸುವುದಿಲ್ಲ. ಬದಲಿಗೆ, ಸರ್ಕಾರ ಶಿಕ್ಷಣವನ್ನು ಸಾಮಾಜಿಕ ಒಳಿತಿನ ಪ್ರಶ್ನೆಯಾಗಿ ಪರಿಗಣಿಸಿದೆಯೆ? ಶಿಕ್ಷಣವನ್ನು ಎಲ್ಲರ ಮೂಲಭೂತ ಹಕ್ಕೆಂದು ಗುರ್ತಿಸಿ, ಗೌರವಿಸಿದೆಯೆ? ಇಂದಿನ ವ್ಯವಸ್ಥೆಯಲ್ಲಿ ಹೆಚ್ಚಿನ ಅವಕಾಶಗಳು ಯಾರಿಗಿವೆ? ಸಮಾಜದ ಯಾವೆಲ್ಲ ವರ್ಗಗಳು ವ್ಯವಸ್ಥೆಯ ಹೊರಗಿವೆ? ಸಾರ್ವಜನಿಕ ಶಿಕ್ಷಣಕ್ಕೆ ಸರ್ಕಾರ ತನ್ನ ಒಟ್ಟು ಆಂತರಿಕ ಉತ್ಪನ್ನದಲ್ಲಿ ಎಷ್ಟು ಖರ್ಚು ಮಾಡುತ್ತಿದೆ? ಜ್ಞಾನಕ್ಕೆ ಯಾವ ಮೌಲ್ಯಗಳನ್ನು ನೀಡಿದೆ? ಉದ್ಯೋಗ-ಸಾಮಾಜಿಕ ಸ್ಥಾನಮಾನಗಳ ಮತ್ತು ಆರ್ಥಿಕ ಪ್ರಗತಿಯಲ್ಲಿ ಶಿಕ್ಷಣ ಯಾವ ಪಾತ್ರ ವಹಿಸುತ್ತದೆ? ಎನ್ನುವಂಥ ಮೂಲ ಪ್ರಶ್ನೆಗಳು ಶಿಕ್ಷಣದ ರಾಜಕೀಯ ಅರ್ಥಶಾಸ್ತ್ರದ ಕೇಂದ್ರ ಬಿಂದುವಾಗುತ್ತವೆ. ಈ ಪ್ರಶ್ನೆಗಳನ್ನು ವಿಶದವಾಗಿ ನೋಡುವ ಮೂಲಕ ಸಮಗ್ರ ಬದಲಾವಣೆಯ ಬಗ್ಗೆ ಚಿಂತಿಸಬೇಕಿದೆ.

ಮೊದಲನೆಯದಾಗಿ, ಸರ್ಕಾರಗಳು ಶಿಕ್ಷಣ ಮಾನವನ ಮೂಲಭೂತ ಹಕ್ಕು ಮತ್ತು ಸಾರ್ವಜನಿಕ ಒಳಿತಿನ ಸಾಧನ ಎಂಬ ಧೃಢ ಸಂಕಲ್ಪದೊಂದಿಗೆ ನೀತಿ-ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಬೇಕಿದೆ. ಈವರೆಗಿನ ಎಲ್ಲ ಶಿಕ್ಷಣನೀತಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಂವಿಧಾನದ ಆಶಯಗಳಿಗನುಗುಣವಾಗಿ ಎಂಬ ಹಾರಿಕೆಯ ಅರ್ಥದಲ್ಲಿ ಉಲ್ಲೇಖಿಸಿರುವುದನ್ನು ಹೊರತುಪಡಿಸಿದರೆ, ಎಲ್ಲಿಯೂ ಶಿಕ್ಷಣ ಮಾನವನ ಮೂಲಭೂತ ಹಕ್ಕು ಮತ್ತು ಸಾರ್ವಜನಿಕ ಒಳಿತಿನ ಸಾಧನವೆಂದು ನಿಶ್ಚಿತವಾಗಿ ಹೇಳಿಲ್ಲ. ನೀತಿಗಳಲ್ಲಿನ ಈ ವೈಫಲ್ಯ, ಶಿಕ್ಷಣವನ್ನು ಖಾಸಗೀಕರಣ, ವ್ಯಾಪಾರೀಕರಣ ಮತ್ತು ವೈಯಕ್ತಿಕ ಲಾಭದ ಸಾಧನವನ್ನಾಗಿಸಿದೆ. ಸರ್ಕಾರಗಳು ಸಾರ್ವಜನಿಕ ಶಾಲೆ ಮತ್ತು ಕಾಲೇಜುಗಳನ್ನು ಬಲಪಡಿಸುವ ಕಾರ್ಯದಿಂದ ಕ್ರಮೇಣವಾಗಿ ಹಿಂದೆ ಸರಿದು, ಶಿಕ್ಷಣದ ಜವಾಬ್ದಾರಿಯನ್ನು ಖಾಸಗಿಯವರಿಗೆ, ಸ್ವಯಂ ಬಂಡವಾಳ ಹೂಡಿಕೆಯ ಉದ್ದಿಮೆದಾರರಿಗೆ, ದೈತ್ಯ ಎಡ್‌ಟೆಕ್ ಕಂಪನಿಗಳಿಗೆ ಮತ್ತು ಪರೀಕ್ಷಾ ತರಬೇತಿ ದಂಧೆಯಲ್ಲಿ ತೊಡಗಿರುವ ನಕಲಿ ಶಿಕ್ಷಣ ಕೇಂದ್ರಗಳಿಗೆ ಒಪ್ಪಿಸಿವೆ. ಇದರಿಂದ ಸಮಾನತೆಯ ನೆಲೆಯಲ್ಲಿ ಎಲ್ಲರಿಗೂ ಸಿಗಬೇಕಾದ ಶೈಕ್ಷಣಿಕ ಅವಕಾಶ ಕುಟುಂಬದ ಸಾಮಾಜಿಕ-ಆರ್ಥಿಕ ಸಾಮರ್ಥ್ಯದ ಆಧಾರದಲ್ಲಿ ನಿರ್ಧಾರವಾಗುತ್ತಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ನೀತಿಗಳನ್ನು ರೂಪಿಸಬೇಕಾದ ನೀತಿನಿರೂಪಕರೇ ದೊಡ್ಡ ದೊಡ್ಡ ಶಾಲಾಕಾಲೇಜುಗಳ ಮಾಲೀಕರಾಗಿರುವಾಗ, ಶಿಕ್ಷಣ ವ್ಯವಸ್ಥೆಯನ್ನು ಸಾರ್ವಜನಿಕ ಒಳಿತಾಗಿಸುವ ಬಗೆ ಹೇಗೆ ಎಂದು ಗಂಭೀರವಾಗಿ ಅವಲೋಕಿಸಬೇಕಿದೆ.

ಎರಡನೆಯದಾಗಿ, ಸಾರ್ವಜನಿಕ ಶಿಕ್ಷಣವನ್ನು ಬಲವರ್ಧನೆಗೊಳಿಸಲು ಶಿಕ್ಷಣಕ್ಕೆ ಖರ್ಚು ಮಾಡುತ್ತಿರುವ ಹಣ, ಶಿಕ್ಷಣ ಆಯೋಗ (1966) ಶಿಫಾರಸು ಮಾಡಿದ ಶೇ 6ರ ಗುರಿಗಿಂತ ಬಹಳ ಕೆಳಗಿದೆ. ದೆಹಲಿಯ ಬಜೆಟ್ ಮತ್ತು ಆಡಳಿತ ಹೊಣೆಗಾರಿಕೆ ಕೇಂದ್ರವು ಬಜೆಟ್ ದಾಖಲೆಗಳನ್ನು ಆಧರಿಸಿ ಮಾಡಿರುವ ವಿಶ್ಲೇಷಣೆಯ ಪ್ರಕಾರ, 2014-15ರಲ್ಲಿ ಕೇಂದ್ರ ಸರ್ಕಾರದ ಶಿಕ್ಷಣ ವೆಚ್ಚ ಜಿಡಿಪಿಯ ಶೇ 0.55 ಮತ್ತು ಒಟ್ಟು ಕೇಂದ್ರ ಬಜೆಟ್‌ನ ಶೇ 4.1ರಷ್ಟಿತ್ತು. 2024-25ರಲ್ಲಿ ಇದು ಶೇ 0.37 ಮತ್ತು ಶೇ 2.5ಕ್ಕೆ ಇಳಿದಿದೆ. ಅಂದರೆ, ಕಳೆದ ಒಂದು ದಶಕದಲ್ಲಿ ಭಾರತದ ಜಿಡಿಪಿಯಲ್ಲಿ ಶಿಕ್ಷಣದ ಪಾಲು
ಶೇ 0.55ರಿಂದ ಶೇ 0.37ಕ್ಕೆ ಹಾಗೂ ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಮೀಸಲಿಟ್ಟ ಹಣ ಶೇ 4.1ರಿಂದ ಶೇ 2.5ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ದೇಶದ ಜಿಡಿಪಿ ಮತ್ತು ಕೇಂದ್ರ ಬಜೆಟ್‌ನ ಗಾತ್ರ ವಿಸ್ತರಿಸಿದ್ದರೂ, ಶಿಕ್ಷಣದ ಪಾಲು ಮಾತ್ರ ಕಡಿಮೆಯಾಗಿದೆ. ಕೇಂದ್ರದ ಶಿಕ್ಷಣ ವೆಚ್ಚ ಕುಸಿದ ಕಾರಣ, ಶಿಕ್ಷಣದ ಹೊಣೆಯನ್ನು ರಾಜ್ಯ ಸರ್ಕಾರಗಳು ಮತ್ತು ಕುಟುಂಬಗಳು ಹೊರುವ ಪರಿಸ್ಥಿತಿ ಎದುರಾಗಿದೆ. ಕೇಂದ್ರ ಸರ್ಕಾರ ತನ್ನ ಜಿಡಿಪಿಯಲ್ಲಿ ಕನಿಷ್ಠ ಶೇ 6ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡದೆ, ಸಮಾನತೆ ಹಾಗೂ ಸಾಮಾಜಿಕ ನ್ಯಾಯ ಸಾಧ್ಯವೆ ಎಂಬ ಪ್ರಶ್ನೆಯನ್ನು ಅವಲೋಕಿಸಬೇಕಿದೆ.

ಮೂರನೆಯದಾಗಿ, ಇಂದಿನ ಶಿಕ್ಷಣ ವ್ಯವಸ್ಥೆ ಪ್ರತಿಭೆಯ ಹೆಸರಿನಲ್ಲಿ ಸಾಮಾಜಿಕ ಅಸಮಾನತೆ ಹಾಗೂ ತಾರತಮ್ಯವನ್ನು ನ್ಯಾಯಸಮ್ಮತ ಆಗಿಸುತ್ತಿದೆ. 'ಎನ್‌ಎಸ್‌ಎಸ್‌' 80ನೇ ಸುತ್ತಿನ (2025) ಭಾಗವಾಗಿ ನಡೆದ ಸಮೀಕ್ಷೆ ಪ್ರಕಾರ, ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯ ಕುಟುಂಬ ಮಾಡುವ ಶೈಕ್ಷಣಿಕ ವರ್ಷದ ಸರಾಸರಿ ವೆಚ್ಚ ₹2,863. ಖಾಸಗಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಯ ಕುಟುಂಬದ ವೆಚ್ಚ ₹25,002. ಇದು ಸುಮಾರು 8.7 ಪಟ್ಟು ಹೆಚ್ಚು. ಹೆಚ್ಚುವರಿ ಕೋಚಿಂಗಿಗೆ ಪ್ರತಿ ವಿದ್ಯಾರ್ಥಿಯ ಸರಾಸರಿ ವಾರ್ಷಿಕ ಕುಟುಂಬ ವೆಚ್ಚ ನಗರದಲ್ಲಿ ₹3,988 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ₹1,793. ಈ ವೆಚ್ಚ ಉನ್ನತ ಪ್ರೌಢಶಾಲಾ ಹಂತದಲ್ಲಿ ಕ್ರಮವಾಗಿ ₹9,950 ಮತ್ತು ₹4,548 ಆಗಿದೆ. ಈ ವ್ಯತ್ಯಾಸ ಶಾಲೆ ಅಥವಾ ಭೌಗೋಳಿಕ ಪ್ರದೇಶದ ಕುಟುಂಬ ವೆಚ್ಚದ ಅಂತರ ಮಾತ್ರವಲ್ಲ; ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ಪ್ರವೇಶ ಪಡೆಯುವಲ್ಲಿ ವರ್ಗ, ಜಾತಿ, ಲಿಂಗ, ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವಿನ ಅವಕಾಶಗಳ ಅಸಮಾನತೆ, ಮೂಲಸೌಕರ್ಯದ ಕೊರತೆ, ಡಿಜಿಟಲ್ ಸಾಧನಗಳ ಲಭ್ಯತೆ, ಇತ್ಯಾದಿಗಳು ನಿರ್ಣಾಯಕವಾಗುತ್ತವೆ. ವೃತ್ತಿಪರ ಶಿಕ್ಷಣದ ತರಬೇತಿಯನ್ನು ಹಣ ಕೊಟ್ಟು ಪಡೆಯುವ ವಿದ್ಯಾರ್ಥಿಗಳಿಗೂ, ಶಿಕ್ಷಕರ ಹಾಗೂ ಮೂಲಸೌಕರ್ಯದ ತೀವ್ರ ಕೊರತೆ ಹೊಂದಿರುವ ಸಾರ್ವಜನಿಕ ಶಾಲೆಯನ್ನೇ ಅವಲಂಬಿಸಿರುವ ಮಕ್ಕಳಿಗೂ ಒಂದೇ ಪರೀಕ್ಷೆಯನ್ನು ನಡೆಸಿ, ಅದನ್ನು 'ಮೆರಿಟ್' ಎಂದು ಕರೆಯುವುದು ಸಾಮಾಜಿಕ ನ್ಯಾಯ, ಸಮಾನತೆಯ ವ್ಯಂಗ್ಯವಾಗಿದೆ.

ಕೊನೆಯದಾಗಿ, ಶಿಕ್ಷಣ ಸಂವಿಧಾನದ ಸಮವರ್ತಿ ಪಟ್ಟಿಯ ವಿಷಯ. ಭಾರತದ ಭಾಷಾ, ಸಾಂಸ್ಕೃತಿಕ ಮತ್ತು ಸಾಮಾಜಿಕ ವೈವಿಧ್ಯವನ್ನು ಗಮನಿಸಿದರೆ, ರಾಜ್ಯಗಳಿಗೆ ಹೆಚ್ಚಿನ ಶೈಕ್ಷಣಿಕ ಸ್ವಾಯತ್ತತೆ ಅತ್ಯಗತ್ಯವಾಗಿದೆ. ಆದರೆ, ವಾಸ್ತವದಲ್ಲಿ ಕೇಂದ್ರ ಸರ್ಕಾರದ ಅತಿಯಾದ ಕೇಂದ್ರೀಕರಣವು, ಅನಗತ್ಯ ರಾಷ್ಟ್ರೀಯ ಪರೀಕ್ಷೆಗಳು, ಕೇಂದ್ರೀಕೃತ ಪ್ರವೇಶ, ಪಠ್ಯಕ್ರಮ ಚೌಕಟ್ಟು, ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳು ಮತ್ತು ಡಿಜಿಟಲ್ ಡೇಟಾ ವ್ಯವಸ್ಥೆಗಳ ಮೂಲಕ ಎಲ್ಲವನ್ನೂ ಮೇಲಿನಿಂದ ಕೆಳಗೆ ನಿಯಂತ್ರಿಸುವ ವ್ಯವಸ್ಥೆಯನ್ನಾಗಿಸಿದೆ. ಇದು ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತತೆಗೆ ದೊಡ್ಡ ಸವಾಲನ್ನು ಒಡ್ಡಿದೆ.

ಕೇಂದ್ರೀಕರಣದ ಮೂಲಕ ಏಕರೂಪತೆ ಸಾಧ್ಯವಿಲ್ಲ, ಅದು ಸಮಾನತೆಯೂ ಅಲ್ಲ. ತಾಯ್ನುಡಿಯಲ್ಲಿ ಕಲಿಕೆ, ಸ್ಥಳೀಯ ಇತಿಹಾಸ, ಪ್ರಾದೇಶಿಕ ಅಗತ್ಯ, ವೈವಿಧ್ಯ, ಜ್ಞಾನ ಪರಂಪರೆ ಮತ್ತು ರಾಜ್ಯದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಹಿನ್ನೆಲೆಯನ್ನು ಗೌರವಿಸುವ ಸಮಗ್ರ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕಿದೆ. 'ಒಂದು ದೇಶ, ಒಂದು ನೀತಿ, ಒಂದು ಭಾಷೆ, ಒಂದು ಪರೀಕ್ಷೆ'ಯೆಂಬ ಮಾದರಿ ಭಾರತದ ವೈವಿಧ್ಯವನ್ನು ನಾಶಗೊಳಿಸುತ್ತದೆ. ರಾಜ್ಯಗಳ ಸ್ವಾಯತ್ತತೆಯನ್ನು ಎತ್ತಿ ಹಿಡಿಯುವುದು ಒಕ್ಕೂಟ ವ್ಯವಸ್ಥೆಯ ರಾಜಧರ್ಮವಾಗಿದೆ.

ಒಟ್ಟಾರೆ, ಜಂತರ್ ಮಂತರ್‌ ಹೋರಾಟ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಖಾಸಗೀಕರಣ, ವ್ಯಾಪಾರೀಕರಣ, ಕೇಂದ್ರೀಕರಣ ಮತ್ತು ರಾಜಕೀಯ ಲಾಭದ ಸೈದ್ಧಾಂತಿಕ ನಿಯಂತ್ರಣದಿಂದ ಮುಕ್ತಗೊಳಿಸಿ, ಸಂವಿಧಾನಾತ್ಮಕ ಹಕ್ಕುಗಳನ್ನು ಸಾರ್ವಜನಿಕ ಒಳಿತಾಗಿ ಮರುಸ್ಥಾಪಿಸಬೇಕೆಂದು ಬಯಸಿದೆ. ಎಲ್ಲರಿಗೂ ಧರ್ಮನಿರಪೇಕ್ಷ, ವೈಜ್ಞಾನಿಕ, ಗುಣಾತ್ಮಕ ಹಾಗೂ ಸಮಾನ ಸಾರ್ವಜನಿಕ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಸಮಗ್ರ ರಾಚನಿಕ ಬದಲಾವಣೆ ಸಾಧ್ಯವಾಗಬೇಕಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani