'ನಮ್ಮ ಕಂಪನಿಯು ಮನುಷ್ಯನನ್ನು ಮೀರಿಸುವ ಬುದ್ಧಿಮತ್ತೆಯನ್ನು ಸೃಷ್ಟಿಸಲಿದೆ. ಇದು ಇಡೀ ಸಮಾಜದ ಚಹರೆಯನ್ನೇ ಬದಲಿಸುತ್ತದೆ' ಎಂದು 'ಓಪನ್‌ಎಐ' ಮುಖ್ಯಸ್ಥ ಸ್ಯಾಮ್ ಆಲ್ಟ್‌ಮನ್ ಒಂದು ವರ್ಷದ ಹಿಂದೆ ಭವಿಷ್ಯ ನುಡಿದಿದ್ದರು. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸೇರಿದಂತೆ ಜಗತ್ತಿನ ಪ್ರಮುಖರು ಈ ಕರಾಳ ಮುನ್ಸೂಚನೆಯನ್ನು ಕಂಡು ಆತಂಕಗೊಂಡಿದ್ದರು. ಆದರೆ, ಮನುಕುಲವನ್ನೇ ಆಳಬಲ್ಲ ಈ 'ತಾಂತ್ರಿಕ ದೇವರ' ಭ್ರಮೆಯನ್ನು ನೆಚ್ಚಿಕೊಂಡು ಬಿಲಿಯನ್‌ಗಟ್ಟಲೆ ಬಂಡವಾಳ ತಂತ್ರಜ್ಞಾನದ ಉದ್ದಿಮೆಗೆ ಹರಿದು ಬಂತು. ಎಐ ತಂತ್ರಜ್ಞಾನಕ್ಕೆ ಬೇಕಾದ ಮೂಲಸೌಕರ್ಯವನ್ನು ಒದಗಿಸುವುದಕ್ಕೆ ಹಲವಾರು ಬೃಹತ್ ಯೋಜನೆಗಳು ಆರಂಭವಾದವು.
ಆದರೆ, 2026ರ ವೇಳೆಗೆ ಈ ಕಾಲ್ಪನಿಕ ಆಲೋಚನೆಗಳ ಕೋಟೆಯಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಎಐ ಉದ್ಯಮವು ನಿರೀಕ್ಷಿತ ಪ್ರಮಾಣದಲ್ಲಿ ಹಣ ಗಳಿಸುವಲ್ಲಿ ವಿಫಲವಾಗಿದೆ. ಅತಿರಂಜಿತ ಕನಸು ಬಿತ್ತಿದ್ದ ಸ್ಯಾಮ್ ಆಲ್ಟ್‌ಮನ್ ಮತ್ತು ಬಳಗ ಮೆಲ್ಲನೆ ತಮ್ಮ ಭರವಸೆಗಳಿಂದ ಹಿಂದೆ ಸರಿಯುತ್ತಿದೆ.
ಸಾಮಾನ್ಯವಾಗಿ, ಗೂಗಲ್‌ನಂತಹ ಸಾಫ್ಟ್‌ವೇರ್ ಕಂಪನಿಗಳಿಗೆ ಗ್ರಾಹಕರ ಸಂಖ್ಯೆ ಹೆಚ್ಚಿದಂತೆ ಹಾಗೂ ಉದ್ದಿಮೆ ಬೆಳೆದಂತೆ ನಿರ್ವಹಣಾ ವೆಚ್ಚ ಕಡಿಮೆಯಾಗಿ, ಲಾಭ ಹೆಚ್ಚುತ್ತದೆ. ಆದರೆ, ಎಐ ಕಂಪನಿಗಳ ಕಥೆಯೇ ಬೇರೆ. ಇಲ್ಲಿ ಗ್ರಾಹಕರು ಹೆಚ್ಚಿದಂತೆಲ್ಲಾ ಕಂಪ್ಯೂಟಿಂಗ್ ಪವರ್ ಮತ್ತು ವಿದ್ಯುತ್ ಶಕ್ತಿಯ ಅವಶ್ಯಕತೆಯೂ ಅದೇ ಪ್ರಮಾಣದಲ್ಲಿ ಹೆಚ್ಚುತ್ತಾ ಹೋಗುತ್ತದೆ. ಅವು ಅಪಾರ ಬಂಡವಾಳ ಬೇಡುತ್ತವೆ. ಹಾಗಾಗಿ, ಉದ್ಯಮ ಬೆಳೆದಷ್ಟೂ ನಷ್ಟವೂ ಬೆಳೆಯುತ್ತಾ ಹೋಗುತ್ತದೆ! ಈ ವಿರೋಧಾಭಾಸವನ್ನೇ 'ಸ್ಕೇಲಿಂಗ್ ಪ್ಯಾರಡಾಕ್ಸ್' ಎನ್ನಲಾಗುತ್ತದೆ.
ಎಐ ರೇಸ್‌ನಲ್ಲಿ ತಾವೇ ಮುಂಚೂಣಿಯಲ್ಲಿ ಇರಬೇಕು ಎಂಬ ಹಟಕ್ಕೆ ಬಿದ್ದಿರುವ ಕಂಪನಿಗಳು, ಸೂಪರ್ ಕಂಪ್ಯೂಟರ್ ಹಾಗೂ ಬೃಹತ್ ಡೇಟಾ ಸೆಂಟರ್‌ಗಳ ನಿರ್ಮಾಣಕ್ಕೆ ನೀರಿನಂತೆ ಹಣ ಸುರಿಯು
ತ್ತಿವೆ. ಆದರೆ, ಸದ್ಯಕ್ಕೆ ಇವುಗಳಿಗೆ ಸ್ವಂತ ವ್ಯವಹಾರದಿಂದ ಆದಾಯ ಬರುತ್ತಿಲ್ಲ. ಚಾಟ್‌ಜಿಪಿಟಿ ಖ್ಯಾತಿಯ
ಓಪನ್‌ಎಐ ಇದಕ್ಕೆ ಉದಾಹರಣೆ. ಲಾಭ ಗಳಿಸಲು ಅದು ಮಾಡಿದ ಎಲ್ಲಾ ತಂತ್ರಗಳು ವಿಫಲವಾಗಿವೆ; ಕಂಪನಿ ಗಳಿಸುವ ಪ್ರತಿ 1 ಡಾಲರ್‌ಗೆ ಪ್ರತಿಯಾಗಿ 1.22 ಡಾಲರ್ ಕಳೆದುಕೊಳ್ಳುತ್ತಿದೆ. ಮೂರೇ ತಿಂಗಳಲ್ಲಿ ಕಂಪನಿಯು ಸುಮಾರು 6.9 ಬಿಲಿಯನ್ ಡಾಲರ್ ನಷ್ಟ ಮಾಡಿಕೊಂಡಿದೆ ಎನ್ನಲಾಗಿದೆ.
ಮಾರುಕಟ್ಟೆಯಲ್ಲಿ ಬದುಕಿ ಉಳಿಯಲು ಈ ಕಂಪನಿಗಳಿಗೆ ಈಗ ದೊಡ್ಡ ಪ್ರಮಾಣದ ಹಣದ ಅಗತ್ಯವಿದೆ. ಇದಕ್ಕಾಗಿ ಅವು ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಲು ತಮ್ಮ ಷೇರುಗಳನ್ನು ಮೊದಲ ಬಾರಿಗೆ ಮಾರುಕಟ್ಟೆಗೆ ಬಿಡುವ 'ಐಪಿಒ' (ಸಾರ್ವಜನಿಕರಿಗೆ ಷೇರು ಮಾರಾಟ) ದಾರಿ ಹಿಡಿದಿವೆ.
ಇಲಾನ್ ಮಸ್ಕ್ ಒಡೆತನದ 'ಸ್ಪೇಸ್‌ಎಕ್ಸ್' ಮಾರುಕಟ್ಟೆಯಿಂದ ಬರೋಬ್ಬರಿ 75 ಬಿಲಿಯನ್ ಡಾಲರ್ ಸಂಗ್ರಹಿಸಲು ಯೋಜಿಸುತ್ತಿದ್ದು, ಕಂಪನಿಯ ಒಟ್ಟು ಮೌಲ್ಯವನ್ನು 1.75 ಟ್ರಿಲಿಯನ್ ಡಾಲರ್ ದಾಟಿಸಲು ಯೋಜಿಸುತ್ತಿದೆ. ಮತ್ತೊಂದು ಪ್ರಮುಖ ಎಐ ಕಂಪನಿ 'ಆಂಥ್ರೋಪಿಕ್' ಕೂಡ ಐಪಿಒ ಮೂಲಕ ಹಣ ಸಂಗ್ರಹಿಸಲು ಸಿದ್ಧವಾಗುತ್ತಿದೆ. ಗೂಗಲ್‌ನ ಮಾತೃಸಂಸ್ಥೆ 'ಆಲ್ಫಾಬೆಟ್' ಎಐ ಮೂಲಸೌಕರ್ಯಕ್ಕಾಗಿ 80 ಬಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸುತ್ತಿದೆ.
ಒಟ್ಟಾರೆಯಾಗಿ, ಈ ಬೃಹತ್ ಕಂಪನಿಗಳು ಒಟ್ಟು 4 ಟ್ರಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಮಾರುಕಟ್ಟೆಗೆ ಬಿಡಲು ಸಜ್ಜಾಗಿವೆ. ಇದು ಅಮೆರಿಕದಲ್ಲಿ ಕಳೆದ 45 ವರ್ಷಗಳಲ್ಲಿ ಐಪಿಒಗಳ ಮೂಲಕ ಒಟ್ಟಾರೆಯಾಗಿ ಸಂಗ್ರಹವಾದ ಬಂಡವಾಳದ ಮೂರನೇ ಒಂದರಷ್ಟಾಗುತ್ತದೆ! ಅಂದರೆ, ಮಾರುಕಟ್ಟೆಯ ಬಹುದೊಡ್ಡ ಹಣವನ್ನು ಈ ಕೆಲವೇ ಕಂಪನಿಗಳು ದೋಚುತ್ತಿವೆ.
ಬೇಸರದ ಸಂಗತಿಯೆಂದರೆ, ಈ ಅಪಾಯದ ವ್ಯವಹಾರಕ್ಕೆ ಹಣಕಾಸು ನಿಯಂತ್ರಕರೇ ಬೆಂಬಲ ನೀಡುತ್ತಿದ್ದಾರೆ. ಅಮೆರಿಕದ ಪ್ರಮುಖ ಸೂಚ್ಯಂಕಗಳಾದ 'ಎಸ್ ಆಯಂಡ್ ಪಿ 500' ಮತ್ತು 'ನಾಸ್ಡಾಕ್' ಸೇರಲು ಕನಿಷ್ಠ ಒಂದು ವರ್ಷ ಕಾಯಬೇಕಿತ್ತು. ಮತ್ತು ಇಂತಿಷ್ಟು ಲಾಭ ಇರಬೇಕು ಎಂಬ ನಿಯಮವಿತ್ತು. ಈಗ ಆ ನಿಯಮಗಳನ್ನೇ ಬದಲಾಯಿಸಲು ಸಂಚು ನಡೆಯುತ್ತಿದೆ. ಇದರಿಂದಾಗಿ, ಜನರ ನಿವೃತ್ತಿ ವೇತನವನ್ನು ನಿರ್ವಹಿಸುವ ಪೆನ್ಷನ್ ಫಂಡ್‌ಗಳಂತಹ ಹೂಡಿಕೆದಾರರು ಅನಿವಾರ್ಯವಾಗಿ ತಮ್ಮ ಹಣವನ್ನು ಈ ನಷ್ಟದಲ್ಲಿರುವ ಎಐ ಕಂಪನಿಗಳ ಮೇಲೆ ಹೂಡಿಕೆ ಮಾಡಬೇಕಾಗುತ್ತದೆ.
ಇನ್ನೊಂದೆಡೆ, ಇಲಾನ್ ಮಸ್ಕ್‌ನಂತಹ ಬಿಲಿಯನೇರ್‌ಗಳು ಕಾರ್ಪೊರೇಟ್ ನಿಯಮಗಳನ್ನು ತಮಗೆ ಬೇಕಾದಂತೆ ಬಳಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುತ್ತಿದ್ದಾರೆ. ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್, ಮಂಗಳ ಗ್ರಹದಲ್ಲಿ ವಸಾಹತು ಮುಂತಾದ ಅತಿರಂಜಿತ ಕನಸುಗಳನ್ನು ಮಾರುವ ಇವರು, ಮತದಾನದ ಹಕ್ಕನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
ಗೂಗಲ್‌ನ 'ಡ್ಯುಯಲ್ ಕ್ಲಾಸ್' ಷೇರು ವ್ಯವಸ್ಥೆಯಂತೆ, ಸ್ಪೇಸ್‌ಎಕ್ಸ್‌ನಲ್ಲಿ ಇಲಾನ್ ಮಸ್ಕ್ ಬಳಿ ಶೇ 85ರಷ್ಟು ಮತದಾನದ ಹಕ್ಕಿದೆ. ಅಂದರೆ, ಮಾಸ್ಕ್ ಸ್ವತಃ ತಾವೇ ರಾಜೀನಾಮೆ ನೀಡದ ಹೊರತು, ಆ ಕಂಪನಿಯಿಂದ ಅವರನ್ನು ತೆಗೆದುಹಾಕಲು ಯಾರಿಂದಲೂ ಸಾಧ್ಯವಿಲ್ಲ!
ಹಿಂದೆ 2000 ಇಸವಿಯ ಆಸುಪಾಸಿನಲ್ಲಿ ಇಂಟರ್ನೆಟ್ ಅಲೆಯನ್ನು ನೆಚ್ಚಿಕೊಂಡು ತಂತ್ರಜ್ಞಾನ ಕಂಪನಿಗಳ ಮೌಲ್ಯ ವಿಪರೀತ ಏರಿ, ನಂತರ ಆದಾಯ ಬಾರದೇ ಸಾವಿರಾರು ಕಂಪನಿಗಳು ದಿವಾಳಿಯಾಗಿದ್ದವು. ಅದನ್ನು 'ಡಾಟ್ ಕಾಮ್ ಬಬಲ್' ಎನ್ನಲಾಗುತ್ತದೆ. ಈಗ ಎಐ ಕ್ಷೇತ್ರದಲ್ಲೂ ಅಂತಹುದೇ ಆರ್ಥಿಕ ಗುಳ್ಳೆ ಸೃಷ್ಟಿಯಾಗುತ್ತಿದೆ ಎಂದು ಹಲವು ತಜ್ಞರು ಎಚ್ಚರಿಸುತ್ತಿದ್ದಾರೆ. ಅಂದು ಹಣಕಾಸು ತಂತ್ರಜ್ಞಾನದ ಅಪಾಯಗಳ ಬಗ್ಗೆ ಮುನ್ಸೂಚನೆ ನೀಡಿದ್ದ ಆರ್‌ಬಿಐ ಮಾಜಿ ಗವರ್ನರ್ ಹಾಗೂ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್, ಇಂದು ಎಐ ತಂತ್ರಜ್ಞಾನದ ಅತಿ ಆಶಾವಾದದ ಬಗ್ಗೆಯೂ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ರಘುರಾಮ್ ರಾಜನ್ ಹೇಳುವಂತೆ, ಎಐ ಓಟಕ್ಕೆ ಹಲವು ತಾಂತ್ರಿಕ, ರಾಜಕೀಯ ಮತ್ತು ಸಂಪನ್ಮೂಲದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಕಾಣುತ್ತಿವೆ. ಹಾಗೆಯೇ ಜನರ ವಿರೋಧವೂ ತೀವ್ರವಾಗಬಹುದು. ಎಐ ಡೇಟಾ ಸೆಂಟರ್‌ಗಳು ಭಾರೀ ಪ್ರಮಾಣದ ವಿದ್ಯುತ್ ಮತ್ತು ನೀರನ್ನು ಬಳಸಿಕೊಳ್ಳುತ್ತಿವೆ. ಇದರಿಂದ ಸಾಮಾನ್ಯ ಜನರಿಗೆ ಸಂಪನ್ಮೂಲದ ಕೊರತೆಯುಂಟಾಗಿ, ಅವುಗಳು ದುಬಾರಿಯಾಗುತ್ತವೆ. ಈಗಾಗಲೇ ಇದರ ವಿರುದ್ಧ ಸಾರ್ವಜನಿಕ ಅಸಮಾಧಾನ ಹೆಚ್ಚುತ್ತಿದ್ದು, ಡೇಟಾ ಸೆಂಟರ್‌ಗಳನ್ನು ಬೇರೆ ದೇಶಗಳಿಗೆ ವರ್ಗಾಯಿಸುವ ಒತ್ತಡ ಶುರುವಾಗಿದೆ.
ಹ್ಯಾಕರ್‌ಗಳಿಂದ ಎಐ ದುರ್ಬಳಕೆ ವಿಪರೀತವಾಗುತ್ತಿದೆ. ಮಕ್ಕಳ ಮೇಲೆ ಇದರ ಪರಿಣಾಮದ ಬಗ್ಗೆಯೂ ಆತಂಕಗಳು ವ್ಯಕ್ತವಾಗುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಉದ್ಯೋಗ ನಷ್ಟದ ಆತಂಕ ತೀವ್ರವಾಗುತ್ತಿದೆ. ಆತಂಕ ಆಕ್ರೋಶಕ್ಕೆ ತಿರುಗಿದಾಗ ಸರ್ಕಾರಗಳಿಗೆ ಎಐ ಕಂಪನಿಗಳ ಮೇಲೆ ಕಠಿಣ ನಿಯಂತ್ರಣ ಹೇರುವುದು ಅನಿವಾರ್ಯವಾಗುತ್ತದೆ. ಇದರಿಂದ ಕಂಪನಿಯ ಬೆಳವಣಿಗೆಯ ವೇಗಕ್ಕೆ ತಡೆ ಬೀಳುತ್ತದೆ.
ಸಮೀಕ್ಷೆಗಳ ಪ್ರಕಾರ, ಶೇ 55ಕ್ಕೂ ಹೆಚ್ಚು ಜನರಲ್ಲಿ ಎಐನಿಂದ ಒಳಿತಿಗಿಂತ ಕೆಡುಕೇ ಜಾಸ್ತಿಯೆನ್ನುವ ಭಾವನೆಯಿದೆ. ಮೆಟಾ ಕಂಪನಿಯು 1,400 ಜನರನ್ನು ಕೆಲಸದಿಂದ ತೆಗೆದುಹಾಕಿದ ಸಮಯದಲ್ಲಿ, ಮಾರ್ಕ್ ಜುಕರ್‌ಬರ್ಗ್ ತಮ್ಮ ಐಷಾರಾಮಿ ಬೋಟ್‌ನಲ್ಲಿ ವಿಹರಿಸುತ್ತಿದ್ದ ಚಿತ್ರಗಳು ಕಾಣಿಸಿಕೊಂಡಾಗ ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆ ಆಕ್ರೋಶ ಈಗ ಹಿಂಸಾತ್ಮಕ ಬೆದರಿಕೆಗಳಾಗಿ ಬದಲಾಗುತ್ತಿದ್ದು, ಟೆಕ್ ಸಿಇಒಗಳು ತಮ್ಮ ವೈಯಕ್ತಿಕ ಭದ್ರತೆಗೆ ಕೋಟಿಗಟ್ಟಲೆ ಖರ್ಚು ಮಾಡುವಂತಾಗಿದೆ.
ಜಗತ್ತಿನ ಶೇ 90ಕ್ಕಿಂತಲೂ ಹೆಚ್ಚು ಅತ್ಯಾಧುನಿಕ ಎಐ ಚಿಪ್‌ಗಳು ತಯಾರಾಗುವುದು ತೈವಾನ್‌ನ 'ಟಿಎಸ್‌ಎಂಸಿ' ಕಂಪನಿಯಲ್ಲಿ. ಒಂದು ವೇಳೆ ಚೀನಾ ಮತ್ತು ತೈವಾನ್ ನಡುವೆ ಸಂಘರ್ಷ ತೀವ್ರವಾದರೆ, ಇಡೀ ಜಗತ್ತಿನ ಎಐ ಉದ್ಯಮಕ್ಕೆ ಹೊಡೆತ ಬೀಳುತ್ತದೆ.
ಕೃತಕ ಬುದ್ಧಿಮತ್ತೆ ಎನ್ನುವುದು ಇವತ್ತಿನ ಜಾಗತಿಕ ರಾಜಕೀಯದಲ್ಲಿ ತೈಲಕ್ಕಿಂತಲೂ ದೊಡ್ಡ ಶಕ್ತಿಯಾಗಿ ಮಾರ್ಪಡುತ್ತಿದೆ. ಆದರೆ, ಅದರ ತಾಂತ್ರಿಕತೆಯ ಒಳಹೊರಗು ತಿಳಿಯದೆ, ಮಿಲಿಟರಿ ಮತ್ತು ರಾಷ್ಟ್ರದ ಸಾರ್ವಭೌಮತ್ವದಂತಹ ಸೂಕ್ಷ್ಮ ವಿಷಯಗಳಿಗೂ ವಿದೇಶಿ ಎಐ ಅನ್ನು ಕುರುಡಾಗಿ ಅವಲಂಬಿಸುವುದು ಅತ್ಯಂತ ಅಪಾಯಕಾರಿ.
ಎಐ ಆರ್ಥಿಕ ಗುಳ್ಳೆ ಒಡೆಯುವ ಮುನ್ನ ಜಾಗತಿಕ ಹೂಡಿಕೆದಾರರು ಮತ್ತು ನಿಯಂತ್ರಕರು ಎಚ್ಚತ್ತುಕೊಳ್ಳಬೇಕಾಗಿದೆ. ಇಲ್ಲದಿದ್ದರೆ, ಜಗತ್ತಿನ ಬೆರಳೆಣಿಕೆಯ ಮಹಾ ಶ್ರೀಮಂತರನ್ನು ಸೃಷ್ಟಿಸುವ ಹಪಹಪಿಗೆ, ಇಡೀ ಜಗತ್ತಿನ ಸಾಮಾನ್ಯ ಜನತೆ ಮತ್ತು ಹಿರಿಯ ನಾಗರಿಕರು ತಮ್ಮ ಜೀವಮಾನದ ಉಳಿತಾಯವನ್ನು ಬಲಿಗೊಟ್ಟು, ಮತ್ತೊಂದು ಭೀಕರ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ತಂತ್ರಜ್ಞಾನದ ಓಟದಲ್ಲಿ ಮನುಷ್ಯನ ನಿಜವಾದ ಗುರಿ ಏನು ಎಂಬುದನ್ನು ನಾವಿಂದು ಗಂಭೀರವಾಗಿ ಯೋಚಿಸಬೇಕಾಗಿದೆ. ಅದಕ್ಕೆ ತಕ್ಕಂತೆ ಕೃತಕ ಬುದ್ದಿಮತ್ತೆಯ ಹಾದಿಯನ್ನು ರೂಪಿಸುವುದಕ್ಕೆ ಒತ್ತಡ ತರಬೇಕಾಗಿದೆ.

