Dailyhunt Logo
  • Light mode
    Follow system
    Dark mode
    • Play Story
    • App Story
ವಿಶ್ಲೇಷಣೆ | ಹೊಣೆಗಾರಿಕೆ: ಪ್ರಶ್ನೆಗಳಿವೆ ಎಲ್ಲರಿಗೆ!

ವಿಶ್ಲೇಷಣೆ | ಹೊಣೆಗಾರಿಕೆ: ಪ್ರಶ್ನೆಗಳಿವೆ ಎಲ್ಲರಿಗೆ!

ಕೇಂದ್ರ ಸರ್ಕಾರದ ಶಿಕ್ಷಣ ನೀತಿಯನ್ನು ವಿರೋಧಿಸಿ ನಡೆದ ಯುವಜನರ ಹೋರಾಟ ಹಾಗೂ ಗೆಲುವನ್ನು ಪ್ರಜಾತಂತ್ರದ ಗೆಲುವೆಂದು ದೇಶ ಸಂಭ್ರಮಿಸುತ್ತಿದೆ. ಖಂಡಿತ ವಾಗಿಯೂ ಸಂಭ್ರಮಿಸಬೇಕಾದ ಬೆಳವಣಿಗೆಯೇ ಇದು. ಆದರೆ, ಈ ಸಂಭ್ರಮದಲ್ಲಿ ಕೆಲವೊಂದು ವಾಸ್ತವಗಳನ್ನು ಮರೆಯಬಾರದು.

ಈ ಸರ್ಕಾರದ ವಿರುದ್ಧ ಇದು ಮೂರನೇ ಗೆಲುವು. 2019ರ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧದ ಚಳವಳಿ ಮತ್ತು 2020-21ರಲ್ಲಿ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ನಡೆದ ರೈತ ಹೋರಾಟಗಳು ಗೆಲುವು ಕಂಡ ಮೊದಲೆರಡು ಹೋರಾಟಗಳು. ಆದರೆ, ಈ ಗೆಲುವು ಸಾಧಿಸ ಬೇಕಾದರೆ ಈ ದೇಶದ ಜನಸಾಮಾನ್ಯರು ಬಲುದೊಡ್ಡ ಬೆಲೆ ತೆತ್ತಿದ್ದಾರೆ. ದೊಡ್ಡ ಪ್ರಮಾಣದ ಕಷ್ಟನಷ್ಟಗಳನ್ನು, ಸಾವುನೋವುಗಳನ್ನು ಅನುಭವಿಸಿದ್ದಾರೆ.

'ಈ ಸರ್ಕಾರ' ಎನ್ನುವಾಗ ಹಿಂದಿನ ಸರ್ಕಾರ ಇಂತಹ ಹೋರಾಟಗಳಿಗೆ ತಕ್ಷಣ ಸ್ಪಂದಿಸುತ್ತಿತ್ತೇ ಎನ್ನುವ ಪ್ರಶ್ನೆ ಹುಟ್ಟುವುದು ಸಹಜ. ಈ ಪ್ರಶ್ನೆಗೆ ಅಣ್ಣಾ ಹಜಾರೆಯ ಹೋರಾಟಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಸ್ಪಂದನದ ಉದಾಹರಣೆ ನೀಡಿ, ಇಂದಿನ ಸರ್ಕಾರಕ್ಕಿಂತ ಉತ್ತಮವಿತ್ತೆಂದು ಉತ್ತರಿಸಬಹುದು. ಆದರೆ, ಇದು ಸರಿಯಾದ ಉತ್ತರವಲ್ಲ. ಏಕೆಂದರೆ, ಹಿಂದಿನವರ ಸ್ಪಂದನಕ್ಕೂ ಮತ್ತು ಇಂದಿನವರ ನಿರ್ಲಕ್ಷ್ಯಕ್ಕೂ ಬೇರೆ ಕಾರಣಗಳಿವೆ. ಹಿಂದೆ ಪ್ರಜಾಪ್ರಭುತ್ವದ ಎಲ್ಲ ಅಂಗಗಳು ಸಂವಿಧಾನದ ಆಶಯಗಳನ್ನು ಅರೆಬರೆಯಾದರೂ ಜಾರಿಗೆ ತರುತ್ತಿದ್ದವು. ಟೀವಿ, ಪೇಪರ್‌ಗಳಲ್ಲಿ ದಿನನಿತ್ಯ ಸರ್ಕಾರದ ನೀತಿಗಳ ಟೀಕೆ-ಟಿಪ್ಪಣಿಗಳಿರುತ್ತಿದ್ದವು. ಕೋರ್ಟ್‌ಗಳು ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ತೀರ್ಪು ನೀಡಲು ಭಯಪಡುತ್ತಿರಲಿಲ್ಲ. ಚುನಾವಣಾ ಆಯೋಗ ಪಕ್ಷಪಾತಿಯಾಗಿರಲಿಲ್ಲ. ಸಿಬಿಐ, ಇಡಿ ಮುಂತಾದ ಸಂಸ್ಥೆಗಳು ಅಧಿಕಾರ ದಲ್ಲಿರುವ ಪಕ್ಷದ ಎಂಪಿ, ಎಂಎಲ್‌ಎಗಳನ್ನು ಕಟೆಕಟೆ ಯಲ್ಲಿ ನಿಲ್ಲಿಸಲು ಹಿಂಜರಿಯುತ್ತಿರಲಿಲ್ಲ. ಆದರೆ, ಇವತ್ತು ಇವು ಯಾವುವೂ ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ. ಇವೆಲ್ಲವೂ ವಿರೋಧ ಪಕ್ಷಗಳನ್ನು ಸದೆಬಡಿಯಲು ಮತ್ತು ಸರ್ಕಾರದ ನೀತಿಗಳನ್ನು ಸಮರ್ಥಿಸಲು ಬಳಕೆಯಾಗುತ್ತಿವೆ. ಇದು ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ಇಂದಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳ ನಡುವಿನ ಮುಖ್ಯ ವ್ಯತ್ಯಾಸ.

ಸ್ವಾಯತ್ತ ಸಂಸ್ಥೆಗಳ (ನ್ಯಾಯಾಂಗ, ಮಾಧ್ಯಮ, ಸೆಂಟ್ರಲ್ ಏಜೆನ್ಸಿ ಮುಂತಾದವುಗಳ) ಮೇಲೆ ಕೇಂದ್ರ ಸರ್ಕಾರ ಹತೋಟಿ ಸಾಧಿಸಿರುವುದರಿಂದ, ಅವು ಜನಪರ ಹೊಣೆಗಾರಿಕೆ ತೋರಿಸುವ ಬದಲು ಸರ್ಕಾರದ ಪರ ನಿಲುವು ತಾಳುತ್ತಿವೆ. ಈ ನಡೆಯನ್ನು ನ್ಯಾಯಾಂಗದಲ್ಲೂ ಢಾಳಾಗಿ ಕಾಣಬಹುದು. ಸುಪ್ರೀಂ ಕೋರ್ಟ್‌ನ ಹಲವು ತೀರ್ಮಾನಗಳು ನೇರವಾಗಿಯೇ ಸರ್ಕಾರದ ಸಮರ್ಥನೆಗೆ ನಿಂತಿವೆ. ಉದಾಹರಣೆಗೆ, 'ಚುನಾವಣಾ ಬಾಂಡ್‌' ತೀರ್ಮಾನವನ್ನು ನೋಡಿ. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ರಹಸ್ಯ ಪದ್ಧತಿಯನ್ನು 2018ರಲ್ಲಿ ಕೇಂದ್ರ ಸರ್ಕಾರ 'ಚುನಾವಣಾ ಬಾಂಡ್‌' ಹೆಸರಿನಲ್ಲಿ ಜಾರಿಗೆ ತಂದಿತ್ತು.
ಆ ಸ್ಕೀಮ್‌ ಕಾನೂನುಬಾಹಿರವೆಂದು 2024ರಲ್ಲಿ ಸುಪ್ರೀಂ ಕೋರ್ಟ್ ತೀರ್ಮಾನಿಸಿತ್ತು. ಇಂತಹ ಕಾನೂನುಬಾಹಿರ ಸ್ಕೀಮ್‌ನ ಹೆಸರಿನಲ್ಲಿ 2019 ಮತ್ತು 2024ರ ನಡುವೆ ವ್ಯಕ್ತಿ ಹಾಗೂ ಕಂಪನಿಗಳು ಸುಮಾರು ₹12,156 ಕೋಟಿ ಮೊತ್ತದ 'ಚುನಾವಣಾ ಬಾಂಡ್‌' ಖರೀದಿಸಿ ರಾಜಕೀಯ ಪಕ್ಷಗಳಿಗೆ ನೀಡಿದ್ದಾರೆ. ಇದರಲ್ಲಿ ಸಿಂಹಪಾಲು (₹6,061 ಕೋಟಿ) ಬಿಜೆಪಿ ಪಾಲಾಗಿದೆ. 2019 ಮತ್ತು 2024ರ ಲೋಕಸಭೆ ಹಾಗೂ 14 ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿನಲ್ಲಿ ಈ ಹಣದ ಬಳಕೆ ಆಗಿರಲೇ ಬೇಕು. ಕಾನೂನುಬಾಹಿರ ಹಣದಿಂದ ಗೆದ್ದ ಚುನಾವಣೆಗಳು ಮತ್ತು ಅಧಿಕಾರಕ್ಕೆ ಬಂದ ಪಕ್ಷ ಜಾರಿಗೆ ತರುವ ಕಾನೂನುಗಳು ನ್ಯಾಯಸಮ್ಮತ ಆಗುತ್ತವೆಯೇ ಎನ್ನುವ ಪ್ರಶ್ನೆಗೆ ಕೋರ್ಟ್ ಉತ್ತರಿಸಿಲ್ಲ.

ವ್ಯಕ್ತಿಯೊಬ್ಬರ ನಡವಳಿಕೆಯನ್ನು ಕಾನೂನು ಬಾಹಿರವೆಂದು ತೀರ್ಮಾನಿಸಿದ ಬಳಿಕ ಯಾವುದೇ ಶಿಕ್ಷೆ ನೀಡದೆ ಕೋರ್ಟ್ ಸುಮ್ಮನಿರುತ್ತದೆಯೆ? ಜನಸಾಮಾನ್ಯರ ವಿಚಾರದಲ್ಲಿ ಕೋರ್ಟ್ ಸುಮ್ಮನಿರುವುದು ಬಿಡಿ, ಅಪರಾಧ ಏನೆಂದು ತೀರ್ಮಾನವಾಗುವ ಮೊದಲೇ ಹಲವಾರು ವರ್ಷಗಳ ಸಜೆ ನೀಡುತ್ತಿದೆ. ಇದಕ್ಕೆ ನಮ್ಮ ದೇಶದಲ್ಲಿರುವ ವಿಚಾರಣಾಪೂರ್ವ ಕೈದಿಗಳ ಸಂಖ್ಯೆಯೇ ಸಾಕ್ಷಿ. 2025ರ ವೇಳೆಗೆ ದೇಶದ ವಿವಿಧ ಜೈಲುಗಳಲ್ಲಿರುವ ಒಟ್ಟು 5,31,949 ಕೈದಿಗಳಲ್ಲಿ ಶೇ 75ರಷ್ಟು ವಿಚಾರಣಾಪೂರ್ವ ಕೈದಿಗಳೇ ಇದ್ದಾರೆ. ಇದೇ ರೀತಿ ಮಾಧ್ಯಮಗಳು ಸರ್ಕಾರದ ನೀತಿಗಳನ್ನು ವಿಮರ್ಶಿಸುವ ಬದಲು ವಿರೋಧಪಕ್ಷಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಸ್ಪರ್ಧಿಸುತ್ತಿವೆ. ಇವು ಬರೀ ವಿರೋಧ ಪಕ್ಷಗಳನ್ನು ಸದೆಬಡಿಯಲು ಮಾತ್ರ ಬಳಕೆಯಾಗುತ್ತಿಲ್ಲ; ಸರ್ಕಾರದ ವಿರುದ್ಧದ ಟೀಕೆ, ಟಿಪ್ಪಣಿ, ವಿಮರ್ಶೆಗಳನ್ನು ಹಾಗೂ ಆಡಳಿತದ ವಿರುದ್ಧ ನಡೆಯುವ ಹೋರಾಟಗಳನ್ನು ಸದೆಬಡಿಯಲು ಬಳಕೆಯಾಗುತ್ತಿವೆ.

ನ್ಯಾಯಾಂಗ, ಮಾಧ್ಯಮ, ಸೆಂಟ್ರಲ್ ಏಜೆನ್ಸಿಗಳ ಮೇಲೆ ಹತೋಟಿ ಸಾಧಿಸಿದರೂ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸರ್ಕಾರ ರಚನೆಗೆ ಅಗತ್ಯವಾದಷ್ಟು ಸ್ಥಾನಗಳನ್ನು ಗೆಲ್ಲಲಾಗಲಿಲ್ಲ. ಆ ಸೋಲನ್ನು ಸರಿಪಡಿಸಲು ಚುನಾವಣಾ ಆಯೋಗವನ್ನು ಬಳಸಿಕೊಳ್ಳಲಾಗುತ್ತಿದೆ. ಹಲವು ರಾಜ್ಯಗಳ ಚುನಾವಣೆಗಳಲ್ಲಿನ ಬಿಜೆಪಿ ಗೆಲುವಿನಲ್ಲಿ ಆಯೋಗದ ಪಾತ್ರವಿದೆಯೆಂದು ವಿರೋಧ ಪಕ್ಷಗಳು ಪುರಾವೆ ಸಮೇತ ಆರೋಪ ಮಾಡುತ್ತಿವೆ. ಹಾಗೆಂದು ಆಯೋಗ ತನ್ನ ಧೋರಣೆ ಬದಲಾಯಿಸಿಕೊಂಡಿಲ್ಲ. ದೇಶವ್ಯಾಪಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಆರಂಭಿಸಿದೆ. ಈಗಾಗಲೇ ಎಸ್‌ಐಆರ್ ನಡೆದ 13 ರಾಜ್ಯಗಳಲ್ಲಿ ದಾಖಲಾತಿಗಳನ್ನು ಹೊಂದಿಸಲಾಗದೆ ಐದು ಕೋಟಿ
ಗಿಂತಲೂ ಹೆಚ್ಚಿನ ಜನರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಇನ್ನುಳಿದ ರಾಜ್ಯಗಳ ಎಸ್‌ಐಆರ್ ಮುಕ್ತಾಯಗೊಂಡ ನಂತರ ಮತದಾನದ ಹಕ್ಕನ್ನು ಕಳೆದುಕೊಂಡವರ ಸಂಖ್ಯೆ ಹತ್ತು ಕೋಟಿ ದಾಟುವ ಸಾಧ್ಯತೆಗಳಿವೆ. ಹಾಗೆಂದು ಆಯೋಗದ ಅಧಿಕಾರಿಗಳಿಂದ ಎಸ್‌ಐಆರ್‌ ನಿಲ್ಲಿಸುವ ಅಥವಾ ಸರಳೀಕರಿಸುವ ಭರವಸೆ ಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಜಾಪ್ರಭುತ್ವವನ್ನು ಚುನಾವಣೆಗೆ ಸೀಮಿತಗೊಳಿಸಲು ಹಿಂದಿನಿಂದಲೇ ನಡೆಯುತ್ತಿದ್ದ ಪ್ರಕ್ರಿಯೆಯನ್ನು ಬಿಜೆಪಿ ಪೂರ್ಣಗೊಳಿಸಿದೆ. ಚುನಾವಣೆಗಳಲ್ಲೂ ಪಕ್ಷದ ಗೆಲುವು ಮತದಾರರ ಮೇಲೆ ನಿಂತಿರುವುದರಿಂದ, ತನ್ನನ್ನು ಸೋಲಿಸುವ ಮತದಾರರನ್ನು ದೂರವಿರಿಸಲು ಎಸ್‌ಐಆರ್ ಮೂಲಕ ಸರ್ಕಾರ ಪ್ರಯತ್ನಿಸುತ್ತಿದೆ ಎನ್ನುವ ಆರೋಪವಿದೆ. ಇದೂ ಸಾಲದೆಂದು 2026ರ ಮತಕ್ಷೇತ್ರಗಳ ಮರು ವಿಂಗಡಣೆಯನ್ನು (ಡಿಲಿಮಿಟೇಶನ್‌) ತನ್ನ ಮೂಗಿನ ನೇರಕ್ಕೆ ನಡೆಸಲು ಪ್ರಯತ್ನಿಸುತ್ತಿದೆ. ಆ ಪ್ರಯತ್ನದ ಭಾಗವಾಗಿ, ಸಂವಿಧಾನದ ತಿದ್ದುಪಡಿಗೆ ಅವಶ್ಯವಿರುವ ಮೂರನೇ ಎರಡರಷ್ಟು ಬಹುಮತ ಗಳಿಸಲು ವಿವಿಧ ಮಾರ್ಗಗಳಲ್ಲಿ ವಿರೋಧ ಪಕ್ಷಗಳ ಸಂಸದರನ್ನು ಪ್ರತ್ಯೇಕಿಸುತ್ತಿದೆ. ಒಂದು ವೇಳೆ ಬಿಜೆಪಿ ಈ ಪ್ರಯತ್ನದಲ್ಲಿ ಯಶಸ್ಸು ಕಂಡರೆ, ಈಗಾಗಲೇ ದುರ್ಬಲಗೊಂಡಿರುವ ನಮ್ಮ ಗಣತಂತ್ರ ವ್ಯವಸ್ಥೆ ಇನ್ನೂ ದುರ್ಬಲಗೊಳ್ಳಬಹುದು. ಅಷ್ಟುಮಾತ್ರವಲ್ಲ, ಮುಂದೆ ನಮ್ಮ ಚುನಾವಣೆಗಳು ಸ್ಪರ್ಧೆಯಿಲ್ಲದೆ ಬರೀ ಒಂದೇ ಒಂದು ಕುದುರೆ ರೇಸ್ ಮೈದಾನದಲ್ಲಿ ಓಡಿ ಪಂದ್ಯವನ್ನು ಗೆಲ್ಲುವ ಏಕಪಕ್ಷೀಯ ರೇಸ್ ತರಹ ಆಗಬಹುದು.

‌ಪ್ರಜಾಪ್ರಭುತ್ವದ ಎಲ್ಲ ಅಂಗಗಳ ಮೇಲಿನ ಸರ್ಕಾರದ ಹಿಡಿತದ ಜೊತೆಗೆ ಬಿಜೆಪಿಯ 'ಹಿಂದುತ್ವ ಐಡಿಯಾಲಜಿ' ಹಿಂದೂಗಳನ್ನು ಓಟುಬ್ಯಾಂಕ್ ರೂಪದಲ್ಲಿ ನೋಡುತ್ತಿದೆ. ತನ್ನ ಓಟುಬ್ಯಾಂಕ್ ರಕ್ಷಣೆಗಾಗಿ ಜನರ ಉಣ್ಣುವ, ಪ್ರೀತಿಸುವ, ಪೂಜಿಸುವ ಸ್ವಾತಂತ್ರ್ಯವನ್ನು ಹರಣಗೊಳಿಸಲು ಕೊಡುವ ಆದ್ಯತೆಯ ಒಂದಂಶವನ್ನೂ ಶಿಕ್ಷಣ, ಆರೋಗ್ಯ, ಉದ್ಯೋಗಗಳ ಗುಣಮಟ್ಟ ಸುಧಾರಣೆಗೆ ನೀಡುತ್ತಿಲ್ಲ. ಇಂತಹ ಸ್ಥಿತಿಗೆ ನಾವು ತಲಪಲು ಬಿಜೆಪಿ ಎಷ್ಟು ಕಾರಣವೋ, ಅದಕ್ಕಿಂತಲೂ ಹೆಚ್ಚು ನಮ್ಮ ಶಿಕ್ಷಣ, ಸಮಾಜ, ಸಂಸ್ಕೃತಿಯಲ್ಲಿರುವ ಕೆಲವು ಗುಣಗಳೂ ಕಾರಣ. ಯಾವುದನ್ನಾದರೂ ಸತ್ಯವೆಂದು ನಂಬುವ ಮೊದಲು ಪ್ರಶ್ನಿಸುವ, ಪರೀಕ್ಷಿಸುವ, ವಿಮರ್ಶಿಸುವ ತರಬೇತಿ ನೀಡಲು ನಮ್ಮ ಶಿಕ್ಷಣ ವ್ಯವಸ್ಥೆ ಸೋತಿದೆ. ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ, ಆದುದರಿಂದ ಇದು ಸತ್ಯ; ಶತಮಾನಗಳಿಂದ ಆಚರಣೆಯಲ್ಲಿ ಇರುವುದರಿಂದ ಸತ್ಯ ಎಂದು ಬಹುತೇಕರು ನಂಬುತ್ತಾರೆ. ಅಧಿಕಾರಸ್ಥರು ಹೇಳಿರುವುದರಿಂದ ಅದು ಸತ್ಯ ಎಂದು ನಂಬುವವರೂ ಹೆಚ್ಚಾಗಿದ್ದಾರೆ.

ವಿಮರ್ಶತ್ಮಾಕ ದೃಷ್ಟಿಕೋನದ ಕೊರತೆಯಿಂದ
ಜಾತಿ-ಧರ್ಮಗಳ ಮಿತಿಗಳನ್ನು ಮೀರಿ ಜನಪ್ರತಿನಿಧಿ ಗಳನ್ನು ಚುನಾಯಿಸಲು ಸಾಧ್ಯವಾಗುತ್ತಿಲ್ಲ. ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ ನೀಡಿ ನಮ್ಮ ಬದುಕಿನ ಗುಣಮಟ್ಟವನ್ನು ನಿರ್ಧರಿಸಬೇಕಾದ ಲೋಕಸಭೆ, ವಿಧಾನಸಭೆಗಳಿಗೆ ಕ್ರಿಮಿನಲ್‌ಗಳನ್ನು ಚುನಾಯಿಸಿ, ನೆಮ್ಮದಿಯ ಬದುಕಿಗೆ ದೇವರಲ್ಲಿ ಮೊರೆ ಇಡುವ ಸ್ಥಿತಿ ನಿರ್ಮಾಣವಾಗಿದೆ. ಇವೆಲ್ಲವನ್ನು ಮೀರಲು, ಬದಲಾಯಿಸಲು ಸಾಧ್ಯವೆಂದು ಚಳವಳಿಗಳು ತೋರಿಸಿವೆ. ಇತ್ತೀಚಿನ ಯುವಜನರ ಚಳವಳಿ ಮತ್ತು ಹಿಂದೆ ನಡೆದ ರೈತ ಹಾಗೂ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧದ ಚಳವಳಿಗಳು ಕೂಡ ಜಾತಿ-ಧರ್ಮಗಳ ಸಂಕೋಲೆಯಿಂದ ಬಿಡುಗಡೆಗೊಂಡು ಒಗ್ಗೂಡಿದ ಕಾರಣ ಯಶಸ್ಸು ಕಂಡಿವೆ. ಈ ಒಗ್ಗಟ್ಟನ್ನು ಸಮಸ್ಯೆ ಬಂದಾಗ ಪರಿಹರಿಸಲು ಬಳಸುವುದಕ್ಕಿಂತ ಜನಪರ ಹೊಣೆಗಾರಿಕೆ ಇರುವ ಸರ್ಕಾರಗಳನ್ನು ಚುನಾಯಿಸಲು ಬಳಸಿದರೆ ನಮ್ಮ ಪ್ರಜಾಪ್ರಭುತ್ವ ಉಸಿರಾಡಬಹುದು.

Dailyhunt
Disclaimer: This content has not been generated, created or edited by Dailyhunt. Publisher: Prajavani