ಮಹಿಳಾ ಮೀಸಲಾತಿ ಹೆಸರಿನಲ್ಲಿ ಚುನಾವಣಾ ನಕಾಶೆಯನ್ನು ತಿರುಚುವ ಸಿನಿಕ ನಡೆಗೆ ಸೋಲಾಗಿರುವ ಕುರಿತು ಇರುವ ನಿರಾಳಭಾವ ಸಮಂಜಸವೇ ಆಗಿದೆ. ಹಾಗಿದ್ದರೂ ಅಪಾಯ ಇನ್ನೂ ಇದೆ. ಈ ಪ್ರಹಸನದಂತಹ ಚರ್ಚೆಯಲ್ಲಿ ಒಳಗೊಂಡಿರುವ ಹೆಚ್ಚು ಗಾಢ ಮತ್ತು ಗಂಭೀರವಾದ ಸಮಸ್ಯೆಗಳನ್ನು ಬಹುಕಾಲ ಮುಂದೂಡಲು ಸಾಧ್ಯವಿಲ್ಲ ಎಂಬುದನ್ನು ನಾವು ಮರೆತುಬಿಡಬಹುದು. ಸುಹಾಸ್ ಪಲ್ಶೀಕರ್ ಅವರು ಸರಿಯಾಗಿಯೇ ಹೇಳುವಂತೆ- ಇಲ್ಲಿ ಒಕ್ಕೂಟವಾದ, ರಾಷ್ಟ್ರೀಯತಾವಾದ ಮತ್ತು ಭಾರತ ಎಂಬ ಪರಿಕಲ್ಪನೆಯು ಅಪಾಯದಲ್ಲಿದೆ.
ಸರಳವಾಗಿ ಹೇಳುವುದಾದರೆ, ಭಾರತ ಒಕ್ಕೂಟಕ್ಕೆ ಒಂದು ಹೊಸ ಒಡಂಬಡಿಕೆಯ ಅಗತ್ಯ ಇದೆ. ಇದು ಸಾಂಪ್ರದಾಯಿಕ ಪಾಶ್ಚಿಮಾತ್ಯ ಶೈಲಿಯ ಒಕ್ಕೂಟದ ಸಂವಿಧಾನದಲ್ಲಿ ವಿವರಿಸಲಾದ ಒಡಂಬಡಿಕೆ ಆಗಬೇಕಾಗಿಲ್ಲ. ಅಮೆರಿಕದಂತಹ 'ಒಟ್ಟಿಗೆ ಸೇರುವ' ಒಕ್ಕೂಟದಂತೆ (ಕೇಂದ್ರದ ಹಾಗೆ ರಾಜ್ಯಗಳಿಗೂ ಸಮಾನ ಅಧಿಕಾರ) ಅಲ್ಲದೆ, ಭಾರತದ 'ರಾಜ್ಯಗಳ ಒಕ್ಕೂಟ'ವು ಒಂದು ದೇಶದೊಳಗಿನ ರಾಜಕೀಯ ಘಟಕಗಳನ್ನು 'ಹಿಡಿದಿರಿಸಿಕೊಳ್ಳುವ ವ್ಯವಸ್ಥೆ'ಯಾಗಿದೆ (ರಾಜ್ಯಗಳಿಗಿಂತ ಪ್ರಬಲವಾದ ಕೇಂದ್ರ). ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿಯೇ ನಮ್ಮಲ್ಲಿ ಸೈದ್ಧಾಂತಿಕ ಸಹಮತ ಏರ್ಪಟ್ಟಿತ್ತು ಮತ್ತು ನಮ್ಮ ಸಂವಿಧಾನದಲ್ಲಿ ಈ ಕುರಿತ ಅಲಿಖಿತ ಒಡಂಬಡಿಕೆಯ ಇಂಗಿತವು ಇದೆ. ಈ ಒಡಂಬಡಿಕೆಯನ್ನು ಈಗ ಪರಿಷ್ಕರಿಸಬೇಕಿದೆ.
ಈ ಅಲಿಖಿತ ಒಡಂಬಡಿಕೆಗೆ ಮೂರು ತತ್ತ್ವಗಳು ಆಧಾರವಾಗಿವೆ. ಮೊದಲನೆಯದು, ಯಜಮಾನಿಕೆ ಇಲ್ಲದಿರುವುದು. ಅಂದರೆ, ಇದು ರಾಜ್ಯಗಳ ಜೊತೆಗೆ ಕೇಂದ್ರದ ಸಂಬಂಧ ಮತ್ತು ರಾಜ್ಯಗಳ ನಡುವೆ ಪರಸ್ಪರ ಸಂಬಂಧಕ್ಕೆ ಅನ್ವಯವಾಗುತ್ತದೆ. ಈ ಕೇಂದ್ರೀಯ ತತ್ತ್ವದ ಭಾಗವಾಗಿ ಇನ್ನೂ ಎರಡು ತತ್ತ್ವಗಳಿವೆ: ಭಾರತ ಒಕ್ಕೂಟದ ಘಟಕಗಳ ನಡುವೆ ಮತ್ತು ಘಟಕಗಳ ಒಳಗೆ ನ್ಯಾಯಯುತ ನಡವಳಿಕೆ ಮತ್ತು ಸ್ಥಳೀಯ ಪದ್ಧತಿಗಳು, ಆಚರಣೆಗಳು ಮತ್ತು ಅಗತ್ಯಗಳಿಗೆ ಗೌರವ.
ಹೊಸ ಒಡಂಬಡಿಕೆಯನ್ನು ಎಲ್ಲ ಆಯಾಮಗಳಲ್ಲಿಯೂ ಈ ಮೂರು ತತ್ತ್ವಗಳು ರೂಪಿಸಬೇಕು. ಈಗ ಕೈಬಿಡಲಾಗಿರುವ ಕ್ಷೇತ್ರ ಮರುವಿಂಗಡಣೆ ಚರ್ಚೆಯು ಒಂದು ಆಯಾಮವನ್ನು ಮಾತ್ರ ಹೊಂದಿದೆ. ಅದೆಂದರೆ, ಭಾರತ ಒಕ್ಕೂಟದ ರಾಜ್ಯಗಳ ನಡುವೆ ರಾಜಕೀಯ ಅಧಿಕಾರ ಹಂಚಿಕೆ. ಇಲ್ಲಿ
ಇನ್ನೂ ಎರಡು ಆಯಾಮಗಳನ್ನು ಸೇರಿಸಿಕೊಳ್ಳಲೇಬೇಕಿದೆ, ಅವುಗಳೆಂದರೆ- ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಸಾಂಸ್ಕೃತಿಕ ಅಸ್ಮಿತೆಗೆ ಗೌರವ. ಈ ಎಲ್ಲ ಆಯಾಮಗಳನ್ನು ಒಳಗೊಂಡಿರುವ ಸಮಗ್ರ
ವಾದ ಮತ್ತು ಒಂದೇ ಬಾರಿಗೆ ಎಲ್ಲವನ್ನು ಇತ್ಯರ್ಥಪಡಿಸುವ ವ್ಯವಸ್ಥೆ ನಮಗೆ ಬೇಕಾಗಿದೆ. ಶಶಿ ತರೂರ್ ಅವರು ಸರಿಯಾಗಿಯೇ ಗುರ್ತಿಸಿರುವಂತೆ ಇದಕ್ಕಾಗಿ 'ಮಹಾನ್ ರಾಷ್ಟ್ರೀಯ ಸಮಾಲೋಚನೆ' ಅಂದರೆ, ಎಲ್ಲೆಡೆಗಳಿಂದಲೂ ಕೊಡು-ಕೊಳುವಿಕೆ ಇರುವ ಸುದೀರ್ಘ ಸಂಧಾನವು ಬೇಕಾಗಿದೆ. ಇಂತಹ
ಒಡಂಬಡಿಕೆ ಹೇಗಿರಬೇಕೆಂಬ ಸಲಹೆಯೊಂದು ಇಲ್ಲಿದೆ. ಎಲ್ಲರಿಗಾಗಿಯೂ ಕೊಡು-ಕೊಳುವಿಕೆ ಇರುವ ನ್ಯಾಯಯುತ ಮತ್ತು ಸುಸ್ಥಿರವಾದ ಚೌಕಾಶಿ ಇದು.
ರಾಜಕೀಯ ಪ್ರಾತಿನಿಧ್ಯದ ಕುರಿತು ಹೇಳುವುದಾದರೆ, ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಪ್ರಾಮಾಣಿಕತೆಯು ಎಳ್ಳಷ್ಟೂ ಇರಲಿಲ್ಲ. ಗೃಹ ಸಚಿವರು ಎರಡು ವಿರೋಧಾಭಾಸಕರ ವಿಚಾರಗಳ ನಡುವೆ ಓಲಾಡುತ್ತಿದ್ದರು. ಅವುಗಳೆಂದರೆ, ವಿವಿಧ ರಾಜ್ಯಗಳ ಕ್ಷೇತ್ರಗಳ ಪಾಲನ್ನು ಬದಲಾಯಿಸಬೇಕಾದ ಅಗತ್ಯ ಇದೆ ಮತ್ತು ಈಗ ಇರುವ ಅನುಪಾತವನ್ನು ಉಳಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಲೋಕಸಭಾ ಕ್ಷೇತ್ರಗಳ ಮರುಹಂಚಿಕೆಯ ಪರವಾಗಿರುವ ವಾದವು ಇಂತಹ ಯಾವುದೇ ದ್ವಂದ್ವಗಳಿಲ್ಲದೆ ನೇರವಾಗಿ ಮತ್ತು ಪ್ರಾಮಾಣಿಕವಾಗಿ ಇರಬೇಕು. ಸಂವಿಧಾನದಲ್ಲಿ ಉಲ್ಲೇಖಿತವಾಗಿರುವ 'ಒಂದು ವ್ಯಕ್ತಿಗೆ ಒಂದು ಮತ ಮತ್ತು ಒಂದೇ ಮೌಲ್ಯ' ಎಂಬ ಪ್ರಜಾಸತ್ತಾತ್ಮಕ ತತ್ತ್ವವು ರಾಜ್ಯಗಳ ಕ್ಷೇತ್ರಗಳ ಸಂಖ್ಯೆ ಬದಲಾವಣೆಯಲ್ಲಿ ಜನಸಂಖ್ಯೆಯಲ್ಲಿನ ಬದಲಾವಣೆಗೆ ಅನುಗುಣವಾಗಿ ಪ್ರತಿಫಲಿಸಬೇಕು. ಈ ತತ್ತ್ವವು ಮೌಲಿಕವೇ ಅಲ್ಲವೇ ಎಂಬುದು ಇಲ್ಲಿನ ಪ್ರಶ್ನೆ ಅಲ್ಲ. ಈಗಿನ ಸಂದರ್ಭದಲ್ಲಿ ಈ ಒಂದು ತತ್ತ್ವ ಮಾತ್ರ ಮೌಲಿಕವೇ ಎಂಬುದು ನಿಜವಾದ ಪ್ರಶ್ನೆಯಾಗಿದೆ.
ಈ ತತ್ತ್ವವನ್ನು ಅನುಸರಿಸಿದರೆ, ಜನಸಂಖ್ಯಾ ಹೆಚ್ಚಳದ ಪ್ರಮಾಣವು ಕಡಿಮೆ ಇರುವ ಮತ್ತು ಕುಟುಂಬ ಯೋಜನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ರಾಜ್ಯಗಳಿಗೆ ಶಿಕ್ಷೆ ನೀಡಿದಂತಾಗುತ್ತದೆ ಎಂಬ ಸುಲಭ ಮತ್ತು ಲೋಪದಿಂದ ಕೂಡಿದ ವಾದಕ್ಕೆ ವಿರೋಧ ಪಕ್ಷಗಳು ಜೋತುಬಿದ್ದವು. ವಾಸ್ತವಿಕವಾಗಿ ಇದು ದುರ್ಬಲ ವಾದ. ಏಕೆಂದರೆ, ಸರ್ಕಾರದ ನೀತಿಯು ಜನಸಂಖ್ಯೆ ಹೆಚ್ಚಳವನ್ನು ನಿರ್ಧರಿಸುವುದಿಲ್ಲ. ಇದಲ್ಲದೆ, ಯಾವುದೇ ಪ್ರದೇಶ ಅಥವಾ ಸಾಮಾಜಿಕ ಗುಂಪಿನ ಜನಸಂಖ್ಯೆಯ ವೇಗದ ಬೆಳವಣಿಗೆಯು ರಾಷ್ಟ್ರೀಯ ಹೊರೆ ಎಂದು ಪರಿಗಣಿಸುವುದು ಸಾಮಾಜಿಕ ನ್ಯಾಯದ ತತ್ತ್ವಕ್ಕೆ ವಿರುದ್ಧವಾದುದಾಗಿದೆ.
ಯಾರ ಮೇಲೆಯೂ ಯಜಮಾನಿಕೆ ಇಲ್ಲ ಎಂಬ ವಾದವು ಸರಳ ಮತ್ತು ಹೆಚ್ಚು ಪ್ರಾಮಾಣಿಕ.
ಹಿಂದಿ ಭಾಷಿಕ ಪ್ರದೇಶಗಳು ಸಂಸತ್ತಿನಲ್ಲಿ ಈಗ ಹೊಂದಿರುವ ಪಾಲು ಅತಿಯಾಗಿದೆ. ಕ್ಷೇತ್ರಗಳ ಪಾಲಿ
ನಲ್ಲಿ ಇನ್ನಷ್ಟು ಹೆಚ್ಚಳವಾದರೆ, ಸರಳ ಬಹುಮತಕ್ಕೆ ಹತ್ತಿರ ಬಂದಂತೆ ಆಗಬಹುದು ಮತ್ತು ರಾಜಕೀಯ
ವಾಗಿ ಹಿಂದಿ ಭಾಷಿಕವಲ್ಲದ ಪ್ರದೇಶಗಳು ಅಪ್ರಸ್ತುತ ಆಗುತ್ತವೆ. ಇದರಿಂದಾಗಿ, ಭಾರತ ಒಕ್ಕೂಟದ ಅಲಿಖಿತ ಸಾಮಾಜಿಕ ಒಡಂಬಡಿಕೆಯನ್ನು ಕಡೆಗಣಿಸಿದಂತಾಗುತ್ತದೆ. ಹಾಗಾಗಿಯೇ ಈಗಿನ ಸನ್ನಿವೇಶದಲ್ಲಿ
ಯಜಮಾನಿಕೆ ಇಲ್ಲ ಎಂಬ ತತ್ತ್ವದ ಮೂಲಕ ಸಾಮಾನ್ಯ ಪ್ರಜಾಸತ್ತಾತ್ಮಕ ತತ್ತ್ವವನ್ನು ಹಿಮ್ಮೆಟ್ಟಿಸ
ಬೇಕು. 2001ರ ವಾಜಪೇಯಿ ಸೂತ್ರವನ್ನು ಕಾಯಂ ವ್ಯವಸ್ಥೆ ಎಂದು ಅಳವಡಿಸಿಕೊಂಡು ಜಾರಿಗೆ
ತರಬಹುದು. ಇತ್ತೀಚಿನ ಜನಗಣತಿಗೆ ಅನುಗುಣವಾಗಿ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಗಡಿಗಳನ್ನು ಹೊಂದಿಸಿಕೊಳ್ಳುವಾಗ ಪ್ರತಿ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಅಥವಾ ಕನಿಷ್ಠ ಪಕ್ಷ ಅದರ ಅನುಪಾತವನ್ನು ಕಾಯಂ ಆಗಿ ಸ್ಥಗಿತಗೊಳಿಸಬೇಕು.
ಈ ಚೌಕಾಶಿಯ ಎರಡನೇ ಭಾಗ ಆರ್ಥಿಕ ಸಂಪನ್ಮೂಲಗಳ ಹಂಚಿಕೆ. ದೇವೇಶ್ ಕಪೂರ್ ಮತ್ತು ಅರವಿಂದ್ ಸುಬ್ರಮಣ್ಯನ್ ಅವರು ಅಂತರ ರಾಜ್ಯ ಆರ್ಥಿಕ ಅಸಮಾನತೆಯು ಹೇಗೆ ಬೆಳೆದಿದೆ ಮತ್ತು ಅದರಲ್ಲೂ ವಿಶೇಷವಾಗಿ ಭಾರತದ ಆರ್ಥಿಕತೆಯನ್ನು 'ಉದಾರೀಕರಣ'ಗೊಳಿಸಿದ ನಂತರ ಅಸಮಾನತೆ ಹೇಗೆ ಉಂಟಾಗಿದೆ ಎಂಬುದನ್ನು ಅದ್ಭುತವಾಗಿ ದಾಖಲಿಸಿದ್ದಾರೆ. ಗುಜರಾತ್‌ನ ತಲಾ ಆದಾಯವು ಬಿಹಾರಕ್ಕೆ ಹೋಲಿಸಿದರೆ 6 ಪಟ್ಟು ಹೆಚ್ಚು. 'ರಾಜಕೀಯ ಅಧಿಕಾರ ಮತ್ತು ಬಹುಸಂಖ್ಯಾತ ಜನಸಮುದಾಯ ಆರ್ಥಿಕವಾಗಿ ವಂಚಿತವಾಗಿರುವ ಪ್ರದೇಶ'ದಲ್ಲಿ ನೆಲಸಿದ ದೊಡ್ಡ ದೇಶ ಭಾರತ ಮಾತ್ರ ಆಗಿರಬಹುದು' ಎಂದು ರಥಿನ್ ರಾಯ್ ಗುರ್ತಿಸಿದ್ದಾರೆ.
ರಾಷ್ಟ್ರೀಯ ಸಂಪನ್ಮೂಲಗಳ ದೊಡ್ಡ ಭಾಗವನ್ನು ಬಡತನ ಹೆಚ್ಚು ಇರುವ ರಾಜ್ಯಗಳಿಗೆ ಹಂಚಿಕೆ ಮಾಡುವುದಕ್ಕೆ ಈವರೆಗೆ ರಾಜಕೀಯ ಸಹಮತ ಇತ್ತು. ಇತ್ತೀಚೆಗೆ ಈ ನೀತಿಯ ಕುರಿತು ಆಕ್ಷೇಪಗಳು ಬಂದಿವೆ. ಕೇಂದ್ರದ ನಿಧಿಗಳನ್ನು ರಾಜ್ಯದಿಂದ ಸಂಗ್ರಹವಾಗುವ ತೆರಿಗೆಯ ವರಮಾನದ ಪಾಲಿಗೆ ಅನುಗುಣವಾಗಿ ಸಮತೋಲನದಿಂದ ಹಂಚಿಕೆ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಹೀಗಾದರೆ, ಶ್ರೀಮಂತ ರಾಜ್ಯಗಳಿಗೆ ಹೆಚ್ಚಿನ ನಿಧಿ ದೊರೆಯುತ್ತದೆ. ಇಂತಹ ಬೇಡಿಕೆಯು ನ್ಯಾಯತತ್ತ್ವಕ್ಕೆ ವಿರುದ್ಧವಾದುದು. ಈ ನೀತಿಯನ್ನು ಅನುಸರಿಸಿದರೆ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಅಗ್ಗದ ದರದಲ್ಲಿ ಕಾರ್ಮಿಕರು ದೊರೆಯುತ್ತಾರೆ ಮತ್ತು ಇತರ ರಾಜ್ಯಗಳಲ್ಲಿ ಮುಕ್ತ ಮಾರುಕಟ್ಟೆ ದೊರೆಯುತ್ತದೆ ಎಂಬುದನ್ನು ಇಲ್ಲಿ ನಿರ್ಲಕ್ಷಿಸಲಾಗಿದೆ. ಹಾಗೆಯೇ ಕನಿಷ್ಠ ಬೆಂಬಲ ಬೆಲೆ ಮತ್ತು ಸರಕು ಸಾಗಾಟ ಸಹಾಯಧನದ ರೂಪದಲ್ಲಿಯೂ ಹಣ ದೊರೆಯುತ್ತದೆ. ಹಾಗಾಗಿ, ಹೊಸ ಒಡಂಬಡಿಕೆಯ ಎರಡನೇ ಭಾಗದಲ್ಲಿ, ಮುಂದಿನ ಯಾವುದೇ ಹಣಕಾಸು ಆಯೋಗವು ನಿಧಿ ಹಂಚಿಕೆಗೆ ಜನಸಂಖ್ಯೆ ಮತ್ತು ಅಭಿವೃದ್ಧಿಯ ಪ್ರಮಾಣವನ್ನು ಪ್ರಮುಖ ಮಾನದಂಡವಾಗಿ ಉಳಿಸಿಕೊಳ್ಳಬೇಕು ಎಂಬ ಈಗಿನ ನೀತಿ ಎತ್ತಿ ಹಿಡಿಯುವ ಕಾನೂನನ್ನು ರಚಿಸಬೇಕು.
ಅಂತಿಮವಾಗಿ, ಗಾಢವಾದ ಸಾಂಸ್ಕೃತಿಕ ವೈವಿಧ್ಯಗಳನ್ನು ಒಪ್ಪಿ ಗೌರವಿಸುವ ಸ್ವಾತಂತ್ರ್ಯ ಹೋರಾಟ ಕಾಲದ ಸಹಮತವನ್ನು ಹೊಸ ಒಡಂಬಡಿಕೆಯು ಪುನರುಚ್ಚರಿಸಬೇಕು. ಅಂದರೆ, ಹಿಂದಿ ಹೇರಿಕೆ ಇಲ್ಲವಾಗಬೇಕು ಮತ್ತು ಎಂಟನೇ ಪರಿಚ್ಛೇದದಲ್ಲಿ ಇರುವ ಎಲ್ಲ ಭಾಷೆಗಳಿಗೆ ಸಮಾನ ಗೌರವ ದೊರೆಯಬೇಕು ಹಾಗೂ ಈ ಪರಿಚ್ಛೇದದಲ್ಲಿ ಇಲ್ಲದ ಎಲ್ಲ ಭಾಷೆಗಳಿಗೂ ರಕ್ಷಣೆ ದೊರೆಯಬೇಕು ಎಂಬ ದೃಢವಾದ ಭರವಸೆ ನೀಡಬೇಕು. ಹಿಂದಿ ಹೇರಿಕೆ ಇಲ್ಲ ಎನ್ನುವುದರ ಅರ್ಥ ಇಂಗ್ಲಿಷ್ ಹೇರಿಕೆ ಎಂದಲ್ಲ. ಬದಲಿಗೆ, ನಮ್ಮ ನಾಗರಿಕತೆಯನ್ನು ಪ್ರತಿಬಿಂಬಿಸುವ ಬಹುಭಾಷಿಕತೆಗೆ ಆಯಾ ರಾಜ್ಯಗಳು ಮನ್ನಣೆ ನೀಡುವಂತಿರಬೇಕು. ಭಾಷಾನೀತಿ ಮಾತ್ರವಲ್ಲದೆ, ಶಿಕ್ಷಣನೀತಿಯಲ್ಲಿಯೂ ಇದು ಒಳಗೊಳ್ಳಬೇಕಾದ ಅಗತ್ಯ ಇದೆ. ಈಗ, ಭಾರತ ದೇಶದ ಎಲ್ಲ ಲಾಂಛನಗಳೂ ಅಧಿಕಾರಯುತ ಮತ್ತು ಕೃತಕವಾದ ಹಿಂದಿಯತ್ತ ವಾಲಿವೆ.
ಈ ದಿಸೆಯಲ್ಲಿ ಒಂದು ಹೊಸ ಒಡಂಬಡಿಕೆಯು ಐಚ್ಛಿಕ ಆಯ್ಕೆ ಆಗಿ ಉಳಿದಿಲ್ಲ. ಗಾಢವಾಗಿ ಅತಿಯಾದ ವೈವಿಧ್ಯಗಳನ್ನು ಹೊಂದಿದ್ದೂ ಏಕೀಕೃತ ರಾಜಕೀಯ ಒಕ್ಕೂಟವಾಗಿ ಉಳಿದಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದು ಎಂಬುದನ್ನು ನಾವು ಮರೆಯಬಾರದು. ನಮ್ಮಲ್ಲಿ ಮೂರು ಬಿರುಕುಗಳನ್ನು ಗುರ್ತಿಸಬಹುದು: ಭೌಗೋಳಿಕ, ಭಾಷಿಕ ಮತ್ತು ಈಗ ಆರ್ಥಿಕ. ಇವು ಬಹುವಾಗಿ ಒಂದರ ಮೇಲೆ ಒಂದು ವ್ಯಾಪಿಸಿವೆ. ಈಗಾಗಲೇ ಇರುವ ಬಿರುಕುಗಳ ಜೊತೆಗೆ ನಾಲ್ಕನೆಯದಾದ ರಾಜಕೀಯ ಬಿರುಕು ಸುಮ್ಮನೆ ಬಂದು ಸೇರಿಕೊಳ್ಳಲು ನಾವು ಅವಕಾಶ ಕೊಡಬಾರದು. ಭಾರತ ಒಕ್ಕೂಟಕ್ಕೆ ಹೊಸದೊಂದು ಒಡಂಬಡಿಕೆಯನ್ನು ನಾವು ಮುಂದೂಡಿಕೊಂಡು ಹೋಗಬಾರದು.

