ಮಹಾತ್ಮ ಗಾಂಧೀಜಿ ಹಂತಕನನ್ನು ರಾಷ್ಟ್ರನಾಯಕನಾಗಿ, ಮಹಾನ್ ಸಾಧಕನಾಗಿ ಕಾಣಿಸುವ ಪ್ರಯತ್ನಗಳು ಈಗೀಗ ತೀವ್ರಗತಿಯಲ್ಲಿದ್ದು, ರಂಗಭೂಮಿ ಮತ್ತು ಸಾಹಿತ್ಯದ ಮೂಲಕವೂ ಆ ಕಾರ್ಯ ಚುರುಕಾಗಿದೆ.
ಕಳೆದ ಅಕ್ಟೋಬರ್ 21ರ 'ಪಂಜಾಬ್ ಟುಡೇ' ಪತ್ರಿಕೆಯಲ್ಲಿ ಪ್ರಕಟಗೊಂಡ ವಿವರವೊಂದು ಗೋಡ್ಸೆಯನ್ನು ಆರಾಧಿಸುವ ಮನಃಸ್ಥಿತಿಯ ನಿಜರೂಪವನ್ನು ಅರಿಯಲು ಸಹಾಯಕವಾಗಿದೆ.
ನಾಥೂರಾಮ್ ಗೋಡ್ಸೆ ಮತ್ತು ಗಾಂಧಿ ಹತ್ಯೆಯಲ್ಲಿ ಆತನ ಸಹಾಯಕನಾಗಿದ್ದ ನಾರಾಯಣ ಆಪ್ಟೆ ಪೂನಾದಿಂದ 'ಅಗ್ರಣಿ'
ಎಂಬ ಮರಾಠಿ ಪತ್ರಿಕೆ ಪ್ರಕಟಿಸುತ್ತಿದ್ದರು. ಆ ಪತ್ರಿಕೆ
ಯನ್ನು ಪ್ರಕಟಿಸಲು ವಿ.ಡಿ. ಸಾವರ್ಕರ್ ಧನಸಹಾಯ
ನೀಡಿದ್ದರು. 'ಅಗ್ರಣಿ'ಯ 1945ರ ದಸರಾ ಸಂಚಿಕೆ
ಯಲ್ಲಿ ಪ್ರಕಟವಾಗಿರುವ ಒಂದು ಕಾರ್ಟೂನ್ನಲ್ಲಿ ಗಾಂಧೀಜಿಯನ್ನು ರಾವಣನಾಗಿ ಚಿತ್ರಿಸಲಾಗಿದೆ. ರಾವಣನ ಹತ್ತು ತಲೆಗಳಲ್ಲಿ ಒಂದು ತಲೆ ಗಾಂಧೀಜಿ
ಯದ್ದಾದರೆ, ಉಳಿದ ತಲೆಗಳಲ್ಲಿ ನೆಹರೂ, ಪಟೇಲ್, ನೇತಾಜಿ, ಮೌಲಾನಾ ಅಜಾದ್, ಅಂಬೇಡ್ಕರ್, ಗೋವಿಂದ ವಲ್ಲಭ ಪಂತ್, ರಾಜಗೋಪಾಲಾಚಾರಿ, ಕೃಪಲಾನಿ ಅವರ ತಲೆಗಳಿವೆ. ಇನ್ನೊಂದು ತಲೆ ಯಾರದ್ದೆಂದು ಸ್ಪಷ್ಟವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಗೋಡ್ಸೆ ಮತ್ತು ಗೋಡ್ಸೆ ಆರಾಧಕರ ಚಿಂತನೆಗಳು
ಮತ್ತು ಅದರಲ್ಲಿರುವ ಸುಳ್ಳುಗಳನ್ನು ಬಹಿರಂಗಪಡಿಸಲು ಈ ಕಾರ್ಟೂನ್ ಸಾಕಷ್ಟು ಮನೋವೈಜ್ಞಾನಿಕ ಸತ್ಯಗಳನ್ನು ಹೇಳಲು ಶಕ್ತವಾಗಿದೆ.
ಗಾಂಧಿ ಹತ್ಯೆಯ ನಂತರ ಗೋಡ್ಸೆ ನ್ಯಾಯಾಲಯದಲ್ಲಿ ಕೊಟ್ಟಿರುವ ಹೇಳಿಕೆಯಲ್ಲಿ, 1944ರಲ್ಲಿ ತಾನೇಕೆ ಗಾಂಧಿ ಹತ್ಯೆಗೆ ಯತ್ನಿಸಿದೆ ಎಂಬ ವಿವರಗಳಿಲ್ಲ. ಗಾಂಧಿ ಹತ್ಯೆಗೆ ಗೋಡ್ಸೆ ಕೊಟ್ಟ ಕಾರಣಗಳಾದ ಪಾಕಿಸ್ತಾನ ವಿಭಜನೆ, ಭಾರತದ ರಿಸರ್ವ್ ಬ್ಯಾಂಕಿನಲ್ಲಿದ್ದ ಭದ್ರತಾ ಠೇವಣಿಯ ಹಕ್ಕಿನ ಭಾಗವನ್ನು ಪಾಕಿಸ್ತಾನಕ್ಕೆ ಕೊಡಬೇಕೆಂದು ಗಾಂಧಿ ಹೇಳಿದ್ದು ಎಲ್ಲವೂ 1947ರ ನಂತರದ ಸಂಗತಿಗಳು. ಆದರೆ, ಗಾಂಧಿ ಹತ್ಯೆಗೆ ಗೋಡ್ಸೆ 1944ರಲ್ಲೇ ಪ್ರಯತ್ನಿಸಿದ್ದ! ಅಂದರೆ, ನ್ಯಾಯಾಲಯದಲ್ಲಿನ ಗೋಡ್ಸೆಯ ಹೇಳಿಕೆ ಪ್ರಾಮಾಣಿಕವಲ್ಲ.
ಸಾಯಲಿರುವ ವ್ಯಕ್ತಿ ಸತ್ಯವನ್ನು ಹೇಳುತ್ತಾನೆ ಎಂಬ ನಂಬಿಕೆಯನ್ನು ಬಳಸಿಕೊಂಡು ಗೋಡ್ಸೆ ಅಪ್ರಾಮಾಣಿಕ ಹೇಳಿಕೆಯನ್ನು ಕೊಟ್ಟಿದ್ದ. ಏಕೆಂದರೆ, ಆತ ಗತಿಸಿದ ನಂತರವೂ ಬಾಳಲಿರುವ ಸಿದ್ಧಾಂತವೊಂದರ ಪ್ರತಿನಿಧಿಯಾಗಿದ್ದ. ತಾನು ಸತ್ತು ಸಿದ್ಧಾಂತವನ್ನು ಉಳಿಸುವುದು ಅವನ ಉದ್ದೇಶವಾಗಿತ್ತು. ಆದ್ದರಿಂದಲೇ ಕೆಳ ನ್ಯಾಯಾಲಯ ವಿಧಿಸಿದ ಮರಣದಂಡನೆಯನ್ನು ಮೇಲಿನ ನ್ಯಾಯಾಲಯದಲ್ಲಿ ಆತ ಪ್ರಶ್ನಿಸುವುದಿಲ್ಲ. ಬದಲು ಆತನೊಂದಿಗೆ ಪಿತೂರಿಗಾರರು ಇದ್ದರು ಎಂದು ಕೆಳ ನ್ಯಾಯಾಲಯ ಹೇಳಿದ್ದನ್ನು ಪ್ರಶ್ನಿಸುತ್ತಾನೆ. ತಾನೊಬ್ಬನೇ ಗಾಂಧಿ ಹತ್ಯೆ ಮಾಡಿದ್ದೇನೆ ಎನ್ನುವುದು ಆತನ ವಾದವಾಗಿತ್ತು. ಮರಣದಂಡನೆಗೊಳಗಾದವನು ಅದರಿಂದ ಬಚಾವಾಗಲು ಬಯಸುತ್ತಾನೆಯೇ ಹೊರತು, ತಾನು ಮಾತ್ರ ತಪ್ಪಿತಸ್ಥ, ಉಳಿದವರೆಲ್ಲ ಪಿತೂರಿಯಲ್ಲಿ ಇಲ್ಲ ಎಂದು ಮೇಲ್ಮನವಿಗೆ ಹೋಗುವುದು ಅಸಹಜ.
ಗೋಡ್ಸೆಯ ಆರಾಧಕರು ಇಂದೂ ಇದ್ದಾರೆ ಎನ್ನುವುದು ಗೋಡ್ಸೆ ಎನ್ನುವುದು ವ್ಯಕ್ತಿಯಲ್ಲ; ಒಂದು ಚಿಂತನೆ ಎನ್ನಲು ಸಾಕ್ಷಿಯಾಗಿದೆ. ಆ ಚಿಂತನೆಯು ಗಾಂಧಿ, ನೆಹರೂ ಇಬ್ಬರನ್ನು ಮಾತ್ರ ವಿರೋಧಿಸುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಪಟೇಲ್, ನೇತಾಜಿ, ಅಂಬೇಡ್ಕರ್ ಅವರನ್ನು ತಾವು ಆರಾಧಿಸುತ್ತಿರುವ ಹಾಗೆ ಗುಂಪು ವರ್ತಿಸುತ್ತಿದೆ. ಆದರೆ, ಈವರ್ತನೆ ಒಂದು ಠಕ್ಕು ಎನ್ನಲು 'ಅಗ್ರಣಿ' ಪತ್ರಿಕೆಯ ಕಾರ್ಟೂನ್ ಸಾಕ್ಷಿ ಒದಗಿಸುತ್ತದೆ. ಸ್ವತಃ ಗೋಡ್ಸೆಯೇ ಕೊಟ್ಟಿರುವ ನ್ಯಾಯಾಲಯದ ಹೇಳಿಕೆಯ ಪ್ರಕಾರ, ಅಹಿಂಸಾತತ್ತ್ವ ಹಿಂದೂಗಳಿಗೆ ವಿರುದ್ಧವಾಗಿದೆ. ಅಹಿಂಸಾವಾದಿ ಆಗಿದ್ದರಿಂದ ಗಾಂಧಿಯನ್ನು ತಾನು ಹತ್ಯೆ ಮಾಡಿದೆ ಎಂಬುದು ಗೋಡ್ಸೆ ಅಭಿಪ್ರಾಯ.
ಆದರೆ, ನೇತಾಜಿ ಅಹಿಂಸಾವಾದಿ ಆಗಿರಲಿಲ್ಲ. ಹಾಗೆಂದು ಗೋಡ್ಸೆ, ಬೋಸ್ ಅವರ ಅಭಿಮಾನಿಯಾಗಿರುತ್ತಿದ್ದರೆ, ಗಾಂಧೀಜಿಯ ಹತ್ತು ತಲೆಗಳಲ್ಲಿ ಒಂದು ತಲೆ ನೇತಾಜಿ ಅವರದ್ದಾಗಿ ಇರುತ್ತಿರಲಿಲ್ಲ.
ಬೋಸರನ್ನು ದುಷ್ಟಶಕ್ತಿಯ ಒಂದು ತಲೆಯಾಗಿ ಚಿತ್ರಿಸಿದ್ದಾದರೂ ಯಾವಾಗ? ನಿರ್ದಿಷ್ಟ ಕಾರ್ಟೂನ್ ಪ್ರಕಟವಾದ ಪತ್ರಿಕೆಯ ದಿನಾಂಕ ಲಭ್ಯವಾಗಿಲ್ಲ. ಆದರೆ, ದಸರಾ ಸಂಚಿಕೆ ಎಂದು ಉಲ್ಲೇಖವಾಗಿದೆ. 1945ರ ಅಕ್ಟೋಬರ್ 16ರಂದು ವಿಜಯದಶಮಿ ಇತ್ತು. ಬೋಸರು ಪೂರ್ವ ಏಷ್ಯಾದಿಂದ ಕಣ್ಮರೆಯಾದದ್ದು 1945ರ ಆಗಸ್ಟ್ 18ರಂದು. ಅಂದರೆ, ಅವರು ಮರಣಿಸಿದ ಸುದ್ದಿ ಬಂದ ಆಸುಪಾಸಿನಲ್ಲೇ ಬೋಸರನ್ನು ರಾವಣನ ಹತ್ತು ತಲೆಗಳಲ್ಲಿ ಒಂದೆಂದು ತೋರಿಸಿದ ಕಾರ್ಟೂನ್ ಪ್ರಕಟವಾಗಿದೆ. ಒಬ್ಬ ದೇಶಭಕ್ತ ತಾನೇ ನಂಬಿದ್ದ ಸಶಸ್ತ್ರ ಹೋರಾಟದಲ್ಲಿ ಹುತಾತ್ಮ
ನಾದ ವ್ಯಕ್ತಿಯ ದುಃಖ ಮಾಯುವ ಮೊದಲೇ ಆತ ಒಂದು ದುಷ್ಟಶಕ್ತಿ ಎಂದು ತೋರಿಸಲು ಸಾಧ್ಯವಿದೆಯೆ?
ದೇಶ ವಿಭಜನೆ ಗಾಂಧಿ ಹತ್ಯೆಗೆ ಕಾರಣ ಎನ್ನುವ ಗೋಡ್ಸೆಯ ಹೇಳಿಕೆಯನ್ನು ಈಗಲೂ ನಂಬಿದವರು ಇದ್ದಾರೆ. ಸಾವರ್ಕರ್ ದೇಶ ವಿಭಜನೆಗೆ ಸಮ್ಮತಿಯ ಹೇಳಿಕೆಯನ್ನು ಕೊಟ್ಟದ್ದು 1937ರ ಡಿ. 30ರಿಂದ ಜ. 1ರವರೆಗೆ ನಡೆದ 19ನೇ ಹಿಂದೂ ಮಹಾಸಭಾ ಅಧಿವೇಶನದಲ್ಲಿ. ಮಹಮ್ಮದಾಲಿ ಜಿನ್ನಾ ದೇಶ ವಿಭಜನೆಯ ನಿರ್ಣಯವನ್ನು ತೆಗೆದುಕೊಂಡದ್ದು 1940ರ ಮಾರ್ಚ್ 22-24ರವರೆಗೆ ನಡೆದ ಲಾಹೋರ್ ಮುಸ್ಲಿಂ ಲೀಗ್ ಸಮಾವೇಶದಲ್ಲಿ. ದೇಶ ವಿಭಜನೆಗೆ ಕಾಂಗ್ರೆಸ್ ಒಪ್ಪಿದ್ದು 1947ರ ಜೂನ್ 15ರಂದು. 1946ರ ಏಪ್ರಿಲ್ 27ರಂದು ಕಾಂಗ್ರೆಸ್ ಲಿಖಿತವಾಗಿ ಕ್ಯಾಬಿನೆಟ್ ನಿಯೋಗಕ್ಕೆ ತಾನು ದೇಶ ವಿಭಜನೆಗೆ ಒಪ್ಪುವುದೇ ಇಲ್ಲ ಎಂದು ತಿಳಿಸಿತ್ತು. ಅಲ್ಲಿಯವರೆಗೆ ದೇಶ ವಿಭಜನೆಗೆ ಒಪ್ಪಲು ಸಾಧ್ಯವಿಲ್ಲ ಎನ್ನುವ ವಿಷಯದಲ್ಲಿ ಕಾಂಗ್ರೆಸ್ ಖಚಿತವಾಗಿತ್ತು. ಆದರೂ, 'ಅಗ್ರಣಿ'ಯ ಕಾರ್ಟೂನ್ನಲ್ಲಿ ದೇಶ ವಿಭಜನೆಗೆ ಒಪ್ಪದೆ ಇದ್ದ ಕಾಂಗ್ರೆಸ್ ನಾಯಕರು ರಾವಣರಾಗಿದ್ದಾರೆ, ವಿಭಜನೆಗೆ ಒಪ್ಪಿದ್ದ ಸಾವರ್ಕರ್ ರಾಮ ಆಗಿದ್ದಾರೆ. ದೇಶ ವಿಭಜನೆಯ ನಿರ್ಣಯ ಮಾಡಿದ್ದ ಜಿನ್ನಾ ದುಷ್ಟಶಕ್ತಿಯೇ ಅಲ್ಲ. ಬದಲಿಗೆ, ದೇಶ ವಿಭಜನೆಯನ್ನು ಕೊನೆಯತನಕ ವಿರೋಧಿಸಿದ್ದ ಮೌಲಾನಾ ಅವರು ರಾವಣನ ಒಂದು ತಲೆಯಾಗಿದ್ದಾರೆ. ಈ ಕಾರ್ಟೂನಿಗೆ ಸಂಬಂಧಿಸಿದಂತೆ ಸಾವರ್ಕರ್ ಪತ್ರಿಕೆ ಮಾಡಲು ಹಣ ಕೊಟ್ಟವರಾದ್ದರಿಂದ ಅವರ ಬಗ್ಗೆ ಆಕ್ಷೇಪ ಇದ್ದರೂ ಪತ್ರಿಕೆಯ ಪೋಷಕನೆಂಬ ನೆಲೆಯಲ್ಲಿ ಈ ರಿಯಾಯಿತಿ ಕೊಟ್ಟಿದ್ದಾರೆ ಎಂದು ಭಾವಿಸಬಹುದು. ಆದರೆ, ಜಿನ್ನಾ ಅವರ ಉದ್ದೇಶ-ಒತ್ತಾಯ ಖಚಿತವಾದ ಮೇಲೂ ಅವರು ದುಷ್ಟಶಕ್ತಿಯಾಗಿ ಕಾಣಿಸದೆ ಇದ್ದದ್ದು ಆಶ್ಚರ್ಯ.
ದೇಶ ವಿಭಜನೆಯಾದಾಗ ಹಿಂದೂ-ಮುಸ್ಲಿಂ ಜನರ ವಿನಿಮಯದ ಬಗ್ಗೆ ಅಂಬೇಡ್ಕರ್ ಹೇಳಿದ್ದರು, ಗಾಂಧಿ-ನೆಹರೂ ಒಪ್ಪಲಿಲ್ಲ ಎಂಬ ವಾದವನ್ನು ಪ್ರಸ್ತುತ ಪದೇ ಪದೇ ಮುಂದಿಡಲಾಗುತ್ತಿದೆ. ಅಂಬೇಡ್ಕರ್ ಈ ಸಾಧ್ಯತೆಯನ್ನು ಹೇಳಿದ್ದ, 'ಪಾಕಿಸ್ತಾನ್' ಪುಸ್ತಕ ಪ್ರಕಟವಾದದ್ದು 1940ರಲ್ಲಿ. ಅಂಬೇಡ್ಕರ್ ಅಲ್ಪಸಂಖ್ಯಾತರ ಪರಸ್ಪರ ವಿನಿಮಯದ ಬಗ್ಗೆ ಹೇಳಿದ ಮೇಲೆಯೂ ಅವರು ಕಾರ್ಟೂನಿಗೆ ಸೇರ್ಪಡೆಯಾದದ್ದು ಹೇಗೆ? ಮಿಕ್ಕುಳಿದವರಲ್ಲಿ ಪಟೇಲರನ್ನು ಪ್ರಸ್ತುತ ಪರಮ ರಾಷ್ಟ್ರವಾದಿಯಾಗಿ, ಕೆಲವೊಮ್ಮೆ ಹಿಂದುತ್ವದ ಐಕಾನ್ ಆಗಿ ಬಿಂಬಿಸಲಾಗುತ್ತಿದೆ. ಸಾಲದ್ದಕ್ಕೆ ಸೋಮನಾಥಪುರ ದೇವಾಲಯದ ಪುನರುಜ್ಜೀವನಕ್ಕಿಳಿದವರು. ಇಷ್ಟೆಲ್ಲ ಇದ್ದೂ ಅವರೂ ರಾವಣನ ಒಂದು ತಲೆಯೇ ಆದದ್ದು ಹೇಗೆ?
ರಾಜೇಂದ್ರ ಪ್ರಸಾದ್ ಅವರನ್ನು ಸೋಮನಾಥಪುರ ದೇವಾಲಯ ಉದ್ಘಾಟನೆಗೆ ಹೋಗಲು ನೆಹರೂ ತಡೆದರು ಎಂದು ಹೇಳಲಾಗುತ್ತಿದೆ. ರಾಜೇಂದ್ರ ಪ್ರಸಾದ್ ಸಂಪ್ರದಾಯವಾದಿಯೂ ಆಗಿದ್ದವರು. ಆದರೆ, ಅವರಿಗೂ ರಾವಣನ ತಲೆಯ ಸ್ಥಾನಮಾನವೇ! ಗೋವಿಂದ ವಲ್ಲಭ ಪಂತ್ ಸಂಪ್ರದಾಯವಾದಿ ಕಾಂಗ್ರೆಸ್ಸಿಗ. ಅವರಿಗೂ ದುಷ್ಟಶಕ್ತಿಯ ಸ್ಥಾನಮಾನ. ರಾಜಗೋಪಾಲಾಚಾರಿ
ಯವರು ಉದಾರವಾದಿಯೂ, ಸಂಪ್ರದಾಯವಾದಿಯೂ ಹಾಗೂ ಮುಕ್ತ ಮಾರುಕಟ್ಟೆಯ ಬೆಂಬಲಿಗರೂ ಆಗಿದ್ದರು. ದೇಶ ವಿಭಜನೆಯ ಬಗ್ಗೆ ಏನಾದರೊಂದು ರಾಜಿಸೂತ್ರಕ್ಕೆ ಬರಲಿಕ್ಕಾಗಿ 1944ರಲ್ಲಿ ಜಿನ್ನಾ ಅವರೊಂದಿಗೆ ಮಾತುಕತೆ ನಡೆಸಿದ
ವರು. ಇಷ್ಟೆಲ್ಲ ಆಗಿಯೂ ದುಷ್ಟಶಕ್ತಿಯಾಗಿ ಕಾಣಿಸಿಕೊ
ಳ್ಳುವುದರಿಂದ ಅವರಿಗೆ ತಪ್ಪಿಸಿಕೊಳ್ಳಲು ಆಗಲಿಲ್ಲ.
ಕಾರ್ಟೂನ್ ಹೇಳುತ್ತಿರುವಂತೆ ದಹನಕ್ಕೆ ಒಳಗಾಗಲಿರುವವರು ಯಾರು ಎನ್ನುವುದನ್ನು ಗಮನಿಸಬೇಕು. ಕಾರ್ಟೂನ್ನಲ್ಲಿ ರಾಮ-ಲಕ್ಷ್ಮಣರಾಗಿ ಗಾಂಧಿಯವರ ಹತ್ತು ತಲೆಗಳಿಗೆ ಬಾಣ ಬಿಡುತ್ತಿರುವವರು ಸಾವರ್ಕರ್ ಮತ್ತು ಶ್ಯಾಮಪ್ರಸಾದ್ ಮುಖರ್ಜಿ. ರಾಮಾಯಣದಲ್ಲಿ ಲಕ್ಷ್ಮಣನದ್ದು ಅಣ್ಣನಿಗೆ ಜೊತೆಯಾಗಿರುವ ಪಾತ್ರ. ಆದ್ದರಿಂದ ಮುಖರ್ಜಿ ಪ್ರಧಾನ ನಾಯಕ ಅಲ್ಲ. ರಾಮನ ಸ್ಥಾನದಲ್ಲಿರುವುದು ಸಾವರ್ಕರ್. ಅಂದರೆ, ಪತ್ರಿಕೆ ಸಂಪಾದಕನಾದ ಗೋಡ್ಸೆ, ಸಾವರ್ಕರ್ ಅವರನ್ನು ಸಂಪೂರ್ಣವಾಗಿ ಒಪ್ಪಿರಲೇಬೇಕು. ಸಾವರ್ಕರ್ರನ್ನು ಒಪ್ಪಿದವನು ಮತೀಯ ದೇಶ ವಿಭಜನೆಯ ವಿರೋಧಿಯಾಗಿರಲು ಸಾಧ್ಯವಿಲ್ಲ.
ಧರ್ಮ ಆಧಾರಿತ ದೇಶ ವಿಭಜನೆಯನ್ನು ಮೊದಲು ಒಪ್ಪಿದವರು ಸಾವರ್ಕರ್ ಅವರೇ ಆಗಿದ್ದರು. ಸರ್ದಾರ್ ಪಟೇಲ್, ರಾಜೇಂದ್ರ ಪ್ರಸಾದ್, ರಾಜಗೋಪಾಲಾಚಾರಿ ಇವರೆಲ್ಲರ ಹಿಂದುತ್ವ ಹಿಂದೂ ಧಾರ್ಮಿಕ ನಂಬಿಕೆಗಳಿಂದ ಬಂದದ್ದು. ಸಾವರ್ಕರ್ ಒಬ್ಬರು ಮಾತ್ರ ಅಪ್ರಜಾಸತ್ತಾತ್ಮಕ ರಾಜಕೀಯ ಹಿಂದುತ್ವದವರು. ಸಶಸ್ತ್ರ ಬಂಡಾಯದ ಬೋಸ್, ಅಹಿಂಸಾವಾದಿಗಳಾದ ಗಾಂಧಿ ಮತ್ತು ಅಂಬೇಡ್ಕರ್, ಹಿಂದೂ ಧೋರಣೆಯ ಪಟೇಲ್, ರಾಜೇಂದ್ರ ಪ್ರಸಾದ್, ಗಾಂಧಿ ಪ್ರಣೀತ ಸಮಾಜವಾದಿ ಕೃಪಲಾನಿ, ಹೆಗೆಲಿಯನ್ ಸಮಾಜವಾದಿ ನೆಹರೂ ರಾವಣನ ತಲೆಗಳಾಗಿ ಕಂಡು, ಸಾವರ್ಕರ್ ರಾಮನಾಗಿ ಕಾಣಬೇಕಾದರೆ ಕಾರ್ಟೂನಿನ ಹಿಂದಿರುವುದು ಅಪ್ರಜಾಸತ್ತಾತ್ಮಕ ಮನೋಭಾವ ಮಾತ್ರ. ಏಕೆಂದರೆ 'ಅಗ್ರಣಿ'ಗೆ ರಾವಣನ ತಲೆಯಾಗಿ ಕಂಡವರೆಲ್ಲ ಪ್ರಜಾಪ್ರಭುತ್ವದ ಪರ ಇದ್ದವರು. ಈ ವಿರೋಧಾಭಾಸ ವರ್ತಮಾನದ ಚರ್ಚೆಗಳು ಹಾಗೂ ಕ್ರಿಯೆಗಳಲ್ಲೂ ಸ್ಪಷ್ಟವಾಗಿ ಕಾಣಿಸುತ್ತಿದೆ.
ಅರವಿಂದ ಚೊಕ್ಕಾಡಿ
