ಕೋಟ್ಯಂತರ ಹಿಂದೂಗಳಂತೆ ನಾನು ಕೂಡ ಶ್ರೀರಾಮಚಂದ್ರನ ಪ್ರಾಮಾಣಿಕತೆ, ಕರ್ತವ್ಯತತ್ಪರತೆ ಹಾಗೂ ನೈತಿಕಶಕ್ತಿಯ ಬಗೆಗಿನ ರಾಮಾಯಣದ ಕಥೆಗಳನ್ನು ಹರಿಕಥಾ ಪ್ರಸಂಗಗಳ ಮೂಲಕ ಕೇಳಿ ನೋಡಿ ತಿಳಿದವನು. ನಂತರದ ವರ್ಷಗಳಲ್ಲಿ, ಮಹಾಕವಿ ಕುವೆಂಪು ವಿರಚಿತ 'ಶ್ರೀರಾಮಾಯಣ ದರ್ಶನಂ' ಮಹಾಕಾವ್ಯ ಕೃತಿಯನ್ನೂ ಓದಿದವನು.
ಬಹಳಷ್ಟು ಭಾರತೀಯರಿಗೆ ರಾಮನು ಶಾಸ್ತ್ರಗ್ರಂಥ ಗಳನ್ನು ಮೀರಿದ ವ್ಯಕ್ತಿತ್ವ. ಆತ ನಮ್ಮ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗ. ಆ ಕಾರಣದಿಂದಲೇ, ಇತ್ತೀಚೆಗೆ ಅಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆಗೆ ಕನ್ನ ಹಾಕಿರುವ ವಿದ್ಯಮಾನವು ಹಲವು ಅಹಿತಕರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಾಣಿಕೆ ಕಳವು ಹಗರಣವು ಬೃಹದಾಕಾರವಾಗಿ ಬೆಳೆಯು ತ್ತಿದೆ. ಸಣ್ಣಪುಟ್ಟ ನುಂಗಪ್ಪಗಳನ್ನು ಹರಕೆಯ ಕುರಿ ಗಳನ್ನಾಗಿ ಮಾಡಲಾಗಿದ್ದು, ತಿಮಿಂಗಿಲಗಳು ತಪ್ಪಿಸಿಕೊಂಡಿವೆ ಎಂಬ ವದಂತಿ ದಟ್ಟವಾಗುತ್ತಿದೆ.
ಬಿಜೆಪಿ ಹಾಗೂ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಮಾಡುತ್ತಿರುವ ಆರೋಪಗಳು ವಿರೋಧಾಭಾಸದಿಂದ ಕೂಡಿರುವುದು ಮಾತ್ರವಲ್ಲ, ಆತಂಕಕಾರಿಯೂ ಆಗಿವೆ. ಈ ಹಗರಣದ ಹಿನ್ನೆಲೆಯಲ್ಲಿ ನಾವು ಕೇಳಿಕೊಳ್ಳಲೇಬೇಕಾದ ಪ್ರಶ್ನೆ: ಅಯೋಧ್ಯೆಯ ಶ್ರೀರಾಮನ ದೇವಸ್ಥಾನವು ಈ ದೇಶದ ಇನ್ನೊಂದು ಶ್ರದ್ಧಾಕೇಂದ್ರ ಮಾತ್ರವೇ ಅಥವಾ ಭಾರತದ ಸಮಕಾಲೀನ ಸಾರ್ವಜನಿಕ ಬದುಕಿನಲ್ಲಿ ಅದು ಅಪರೂಪದ ಸ್ಥಾನ ಗಳಿಸಿಕೊಂಡಿದೆಯೇ?
ಇದು ನಂಬಿಕೆಗೆ ಸಂಬಂಧಿಸಿದ ಪ್ರಶ್ನೆಯಲ್ಲ. ನಂಬಿಕೆ ಎನ್ನುವುದು ವ್ಯಕ್ತಿಗತವಾದುದು. ಇದು, ಅಯೋಧ್ಯೆಗೆ ಸಂಬಂಧಿಸಿದ ಕಾನೂನು ಸಂಘರ್ಷದ ವಿದ್ಯಮಾನ ಅಲ್ಲವೇ ಎಂಬ ಪ್ರಶ್ನೆಯೂ ಅಲ್ಲ. ಯಾಕೆಂದರೆ, ಸಾಂವಿಧಾನಿಕ ಪ್ರಕ್ರಿಯೆಗಳನ್ನು ದಾಟಿ ಮುನ್ನಡೆದು, ಭಾರತದಲ್ಲಿ ಸ್ವೀಕೃತ ವಾಸ್ತವವಾಗಿ ಅಯೋಧ್ಯೆಯ ರಾಮ ಪಡಿಮೂಡಿದ್ದಾನೆ. ಹಾಗಾಗಿ, ಈ ಪ್ರಶ್ನೆ ಉತ್ತರದಾಯಿತ್ವಕ್ಕೆ ಸಂಬಂಧಿಸಿದ್ದು.
ಶತಮಾನಗಳ ಕಾಲ ದಾನಿಗಳ ಪೋಷಣೆ, ಯಾತ್ರಾರ್ಥಿಗಳ ಭೇಟಿ ಹಾಗೂ ಸ್ಥಳೀಯರ ಪೂಜೆಗಳಿಂದ ನಿಧಾನವಾಗಿ ಜನಮಾನಸದಲ್ಲಿ ಗುರುತಾಗಿರುವ ಭಾರತದ ಬಹುತೇಕ ಪ್ರಾಚೀನ ದೇವಾಲಯ ಗಳಿಗಿಂತಲೂ ಅಯೋಧ್ಯೆಯ ರಾಮಮಂದಿರ ಭಿನ್ನವಾದುದು. ಸ್ವತಂತ್ರ ಭಾರತದ ಪ್ರಮುಖ ರಾಜಕೀಯ ಚಳವಳಿಯೊಂದರ ಪರಿಣಾಮದಿಂದ ಹೊರಹೊಮ್ಮಿ ರುವ ದೇವಸ್ಥಾನವಿದು. ವಿವಾದಿತ ಜಾಗದಿಂದ ಶುರುವಾದ ಈ ವಿದ್ಯಮಾನವು ಭವ್ಯಮೂರ್ತಿ ಪ್ರತಿಷ್ಠಾಪನೆ ಆಗುವವರೆಗೆ ಮುಂದುವರಿದಿದೆಯೇ ಹೊರತು, ಧಾರ್ಮಿಕ ನಂಬಿಕೆಯಿಂದಷ್ಟೇ ಅಲ್ಲ. ರಾಜಕೀಯ ಇಚ್ಛಾಶಕ್ತಿಯ ಪ್ರಚಾರ, ಸಾರ್ವಜನಿಕ ಆಂದೋಲನಗಳು, ನ್ಯಾಯಾಲಯದ ವಿಚಾರಣೆ ಗಳು, ಸರ್ಕಾರದ ಕ್ರಿಯಾಶೀಲತೆ ಹಾಗೂ ತೀವ್ರವಾದ ರಾಷ್ಟ್ರೀಯ ಸಂವಾದದ ಫಲ, ಇವೆಲ್ಲವೂ ಈ ದೇಗುಲ ನಿರ್ಮಾಣದ ಪ್ರಯತ್ನವನ್ನು ಸಾಕಾರಗೊಳಿಸಿವೆ.
ರಾಮಮಂದಿರ ನಿರ್ಮಾಣದ ಪಯಣವನ್ನು ಕೆಲವರು ಶ್ಲಾಘಿಸಬಹುದು, ಮತ್ತೆ ಕೆಲವರು ಟೀಕಿಸ ಬಹುದು. ಆದರೆ, ಅದರ ರಾಜಕೀಯ ಸ್ವರೂಪವನ್ನು ಉಪೇಕ್ಷಿಸುವುದು ಖಂಡಿತ ಸಾಧ್ಯವಿಲ್ಲ. ಈ ರಾಜಕೀಯ ಪಾತ್ರವು ವಿಶೇಷ ಉತ್ತರದಾಯಿತ್ವವನ್ನು ಹೇರಿದೆ ಎಂದು ಹೇಳಬಹುದು.
ರಾಜಕೀಯ ಮುಖಂಡರು, ಸರ್ಕಾರಿ ಹಾಗೂ ಸಾರ್ವಜನಿಕ ಸಂಸ್ಥೆಗಳು ಧಾರ್ಮಿಕ ಯೋಜನೆ ಯೊಂದರ ಸಮೀಪವರ್ತಿಗಳಾಗಿ ಗುರ್ತಿಸಿಕೊಂಡಾಗ, ಅವರ ಹೊಣೆಗಾರಿಕೆಯು ತಥಾಕಥಿತ ಸಾಮಾನ್ಯ ಆಡಳಿತದ ಚೌಕಟ್ಟನ್ನು ಸಹಜವಾಗಿಯೇ ಮೀರುತ್ತದೆ. ಭಕ್ತರು ನೀಡಿದ ಪ್ರತಿಯೊಂದು ರೂಪಾಯಿ ದೇಣಿಗೆಯು ಬರೀ ಹಣವಷ್ಟೇ ಆಗಿರದೆ, ಭಕ್ತಿ ಹಾಗೂ ನಂಬಿಕೆಯ ಸಂಕೇತವಾಗಿರುತ್ತದೆ. ಇಂಥ ಸಂದರ್ಭದಲ್ಲಿ, ಎಲ್ಲ ಆಡಳಿತಾತ್ಮಕ ನಿರ್ಣಯಗಳೂ ಸಾರ್ವಜನಿಕ ಮಹತ್ವ ಪಡೆದುಕೊಳ್ಳುತ್ತದೆ. ತಪ್ಪುಗಳು ಸಂಭವಿಸಿದಾಗ, ಅದಕ್ಕೆ ಕಾರಣರಾದ ವ್ಯಕ್ತಿಗಳ ಕುರಿತು ಮಾತ್ರ ಪ್ರಶ್ನೆಗಳು ಮೂಡುವು ದಿಲ್ಲ, ಸಾರ್ವಜನಿಕ ನಂಬಿಕೆಯನ್ನು ರಕ್ಷಿಸಲು ರೂಪಿಸಲಾದ ಇಡೀ ವ್ಯವಸ್ಥೆಯ ಪ್ರಾಮಾಣಿಕತೆ ಕುರಿತು ಶಂಕೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ, ಅಯೋಧ್ಯೆಯಲ್ಲಿನ ಕಾಣಿಕೆ ಕಳವು ವಿದ್ಯಮಾನವು ಹಣದ ಸಂಗತಿಯನ್ನೂ ಮೀರಿದ್ದು ಯಾಕೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.
ದಶಕಗಳ ಕಾಲ ಕೋಟ್ಯಂತರ ಜನರು ಅಯೋಧ್ಯೆ ಚಳವಳಿಗೆ ಹಣದ ಕಾಣಿಕೆಯನ್ನಷ್ಟೇ ನೀಡಿರಲಿಲ್ಲ, ಭಾವನಾತ್ಮಕ ಬೆಂಬಲವನ್ನೂ ನೀಡಿದ್ದರು. ತ್ಯಾಗ, ದೃಢ ನಂಬಿಕೆಯನ್ನು ಚಳವಳಿಗೆ ಧಾರೆ ಎರೆದಿದ್ದರು. ಗ್ರಾಮೀಣ ಪ್ರದೇಶಗಳಲ್ಲೂ ಹಲವರು ತಂತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಾಣಿಕೆ ನೀಡಿದ್ದಾರೆ, ದೇಣಿಗೆ ಸಂಗ್ರಹಿಸಿದ್ದಾರೆ. ಇನ್ನು ಕೆಲವರು ಪ್ರಚಾರ ಸಭೆಗಳಲ್ಲಿ ಭಾಗವಹಿಸಲು ದೂರದೂರುಗಳಿಗೆ ಪಯಣಿಸಿ, ತೀರ್ಥಯಾತ್ರಿಗಳಲ್ಲಿ, ಸಾರ್ವಜನಿಕರಲ್ಲಿ ತಮ್ಮ ಪ್ರಯತ್ನದ ಉದ್ದೇಶವನ್ನು ಪ್ರಚಾರ ಮಾಡಿದ್ದಾರೆ. ಹೀಗಾಗಿಯೇ ಅಯೋಧ್ಯೆ ದೇವಸ್ಥಾನವು ಲೆಕ್ಕದ ಪುಸ್ತಕಗಳಿಗೂ ಮಿಗಿಲಾದ ಸಂಚಿತ ನೈತಿಕ ಹೂಡಿಕೆಯೊಂದರಿಂದ ರೂಪಿತವಾಗಿದೆ. ದೇಣಿಗೆ ನಿರ್ವಹಣೆಯ ಕುರಿತು ಮೂಡಿರುವ ಪ್ರಶ್ನೆಗಳು, ಹಣಕಾಸು ನಿರ್ವಹಣೆ ಸರಿಯಿಲ್ಲ ಎನ್ನುವುದನ್ನೂ ಮೀರಿದ್ದಾಗಿದೆ ಹಾಗೂ ತಲೆಮಾರುಗಳಿಂದ ಕಟ್ಟಿದ ಸಾರ್ವಜನಿಕ ನಂಬಿಕೆಯ ಅಣೆಕಟ್ಟೆಯಲ್ಲಿ ಬಿರುಕು ಮೂಡಿದೆಯಲ್ಲ ಎಂಬ ಆತಂಕವನ್ನು ಒಳಗೊಂಡಿದೆ.
ದುರುಪಯೋಗವಾದ ಹಣದ ಮೊತ್ತವೆಷ್ಟು ಎನ್ನುವುದು ಸಮಸ್ಯೆಯ ಕೇಂದ್ರ ಅಲ್ಲ. ಸರ್ಕಾರಿ ಇಲಾಖೆಗಳು, ಕಾರ್ಪೊರೇಷನ್‌ಗಳು, ದತ್ತಿ ಸಂಸ್ಥೆಗಳು ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಹಣಕಾಸು ಅವ್ಯವಹಾರಗಳು ಏಕಪ್ರಕಾರವಾಗಿ ನಡೆಯುತ್ತವೆ. ಮನುಷ್ಯನ ದೌರ್ಬಲ್ಯವನ್ನು ತಡೆಯಲು ದೇವಸ್ಥಾನಗಳಿಗೂ ಸಾಧ್ಯವಿಲ್ಲ. ಧನ, ಪ್ರಭಾವ ಹಾಗೂ ಪ್ರತಿಷ್ಠೆಗಳು ಜಮೆಯಾದಷ್ಟೂ ಉದ್ರೇಕಭಾವ ಉಲ್ಬಣಿಸುತ್ತದೆ.
ಈ ವಿದ್ಯಮಾನಕ್ಕೆ ಸಂಬಂಧಿಸಿದಂತೆ ನಿಜವಾದ ಪರೀಕ್ಷೆ ಇರುವುದು ಬೇರೆಡೆಯಲ್ಲಿ. ಅಕ್ರಮಗಳನ್ನು ಪತ್ತೆ ಹಚ್ಚುವ ಮೇಲ್ವಿಚಾರಣೆ ವ್ಯವಸ್ಥೆಯು ಸಾಕಷ್ಟುಶಕ್ತಿಯುತವಾಗಿದೆಯೆ? ತನಿಖೆಗಳನ್ನು ಪಾರದರ್ಶಕ ವಾಗಿ ನಡೆಸಲಾಗುತ್ತಿದೆಯೆ? ತಪ್ಪಿತಸ್ಥರನ್ನು ಸಂಭವಿಸಿದ ಲೋಪಗಳಿಗೆ ಹೊಣೆಗಾರರನ್ನಾಗಿ ಮಾಡಲಾಗು ತ್ತದೆಯೆ? ತಮ್ಮ ದೇಣಿಗೆ ಸುರಕ್ಷಿತವಾಗಿದೆ ಎಂಬ ಖಾತರಿಯನ್ನು ಭಕ್ತರಿಗೆ ನೀಡುವುದು ಸಾಧ್ಯವೆ?
ಭಾರತದ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಾನು ಕಲಿತ ಪಾಠ ಹೀಗಿದೆ. ಸಂಸ್ಥೆಯೊಂದರ ದಕ್ಷತೆಯನ್ನು ಅಲ್ಲಿ ಸಂಭವಿಸುವ ಪ್ರಮಾದಗಳಿಂದ ಅಳೆಯದೆ, ಬಿಕ್ಕಟ್ಟು ಎದುರಾದಾಗ ಅದನ್ನು ಬಗೆಹರಿಸಲು ಎಷ್ಟು ತ್ವರಿತವಾಗಿ ಕ್ರಮ ತೆಗೆದುಕೊಳ್ಳ ಲಾಗುತ್ತದೆ ಎನ್ನುವುದರ ಮೇಲೆ ಗುಣಮಟ್ಟ ನಿರ್ಣಯಿಸಲಾಗುತ್ತದೆ. ಪರಿಪೂರ್ಣತೆ ಅಸಾಧ್ಯವೇ ಇರ ಬಹುದು. ಎಚ್ಚರಿಕೆ ಮತ್ತು ಜಾಗರೂಕತೆ ಸಾಧ್ಯವಿದೆ.
ದೇಶದ ಯಾವುದೇ ದೊಡ್ಡ ಸಾರ್ವಜನಿಕ ಟ್ರಸ್ಟ್‌ಗೆ ಇರುವಂತಹ ಸಮರ್ಥ ಆಡಳಿತ ವ್ಯವಸ್ಥೆ ಅಯೋಧ್ಯೆಯ ರಾಮಮಂದಿರಕ್ಕೂ ಅಗತ್ಯ; ಆಡಳಿತದ ಕಠಿಣ ಮಾನದಂಡಗಳೂ ಅನ್ವಯಗೊಳ್ಳ ಬೇಕು. ಆರೋಪಗಳು ಎದುರಾದಾಗ, ಪಾರದರ್ಶಕ ಲೆಕ್ಕಪತ್ರ ವ್ಯವಸ್ಥೆ, ಸ್ಪಷ್ಟ ಹೊಣೆಗಾರಿಕೆ ಮತ್ತು ವಿಳಂಬವಿಲ್ಲದ ತನಿಖೆಯನ್ನು ಅನುಮಾನವೆಂದು ಭಾವಿಸಿ ಉಪೇಕ್ಷಿಸಬಾರದು. ಆರೋಪಗಳು ಎದುರಾದಾಗ ನಡೆಸುವ ತನಿಖೆ ಕೋಟ್ಯಂತರ ಭಕ್ತರ ನಂಬಿಕೆಗೆ ತೋರಿಸುವ ಗೌರವದ ಅಭಿವ್ಯಕ್ತಿ ಆಗಿರುತ್ತದೆ.
ಮಂದಿರದಲ್ಲಿ ನಗ-ನಗದು ದುರುಪಯೋಗದ ಆರೋಪಗಳ ಕುರಿತು ಸಮರ್ಪಕ ತನಿಖೆ ನಡೆಸ ಬೇಕೆಂಬ ವಾದವನ್ನು ದೇವಸ್ಥಾನದ ಮೇಲಿನ ದಾಳಿ ಎಂದು ಕೆಲವರು ಹೇಳಬಹುದು. ಆದರೆ, ನಾನು ಇದನ್ನು ಬೇರೆ ರೀತಿಯಲ್ಲಿ ನೋಡುತ್ತೇನೆ. ಪವಿತ್ರವಾದುದು ಬೇರೆ, ಪವಿತ್ರವಾದುದರ ವ್ಯವಸ್ಥೆ ನೋಡಿಕೊಳ್ಳುವವರು ಬೇರೆ. ರಾಮದೇವರಿಗೆ ಮನುಷ್ಯರಿಂದ ರಕ್ಷಣೆಯೇನೂ ಬೇಕಿಲ್ಲ. ಆದರೆ, ಅವನ ಹೆಸರಿನಲ್ಲಿ ಸೃಷ್ಟಿಸಿದ ಸಂಸ್ಥೆಗಳಿಗೆ ಪ್ರಾಮಾಣಿಕ ವ್ಯವಸ್ಥೆಯ ಅಗತ್ಯವಿದೆ.
ನಿರ್ಭೀತಿಯಿಂದ ಪ್ರಶ್ನಿಸುವ ಅವಕಾಶ ಇದ್ದಾಗಷ್ಟೇ ಪ್ರಜಾಪ್ರಭುತ್ವದ ನಿರ್ವಹಣೆ ಶ್ರೇಷ್ಠ ರೀತಿಯಲ್ಲಿ ಆಗುತ್ತದೆ. ಪ್ರಶ್ನೆ ಕೇಳುವವರನ್ನೇ ವಿಧ್ವಂಸಕರು ಎಂದುಬಿಟ್ಟರೆ ಕಷ್ಟ. ಉತ್ತರದಾಯಿತ್ವ ಬೇಕೆನ್ನುವುದು ನಂಬಿಕೆ ಧ್ವಂಸ ಮಾಡಿದಂತೆ ಅಲ್ಲ. ಸರಿಯಾಗಿ ಅರ್ಥ ಮಾಡಿಕೊಂಡರೆ, ನಂಬಿಕೆ ರಕ್ಷಿಸುವ ಮಾರ್ಗವಿದು.
ಅಸಂಖ್ಯ ಭಕ್ತರು ಅಯೋಧ್ಯೆಯನ್ನು ದೀರ್ಘಾವಧಿ ನಾಗರಿಕತೆಯ ಕನಸು ಎಂದೇ ಭಾವಿಸಿದ್ದಾರೆ. ಉಳಿದವರು ರಾಜಕೀಯ ಹೋರಾಟದಿಂದ ಭಾರತದ ಸಾರ್ವಜನಿಕ ಬದುಕಿನಲ್ಲಿ ಬದಲಾವಣೆ ತಂದ ವಿದ್ಯಮಾನ ಎಂದುಕೊಂಡಿದ್ದಾರೆ. ಮತ್ತೆ ಕೆಲವರು, ದೇಶದ ಜಾತ್ಯತೀತ ವ್ಯವಸ್ಥೆ ಹಾಗೂ ಬಹುತ್ವದ ಮೇಲೆ ಇದರ ಪರಿಣಾಮಗಳೇನು ಎಂದು ವಿಶಾಲ ದೃಷ್ಟಿಕೋನದಲ್ಲಿ ವಿಶ್ಲೇಷಿಸುತ್ತಿದ್ದಾರೆ.
'ಕಣ್ತೆರೆದು ನೋಡು, ನಿನ್ನ ದೇವರು ನಿನ್ನ ಮುಂದಿಲ್ಲ/ ಗಟ್ಟಿನೆಲವನ್ನು ಹದಗೊಳಿಸುವ ರೈತ ಇರುವೆಡೆ ಅವನಿದ್ದಾನೆ' ಎಂದು ರವೀಂದ್ರನಾಥ ಟ್ಯಾಗೋರ್ ಅವರು ಬರೆದ ಸಾಲುಗಳು ಕಾಡುತ್ತವೆ.ಎಚ್ಚರ ಎನ್ನುವುದು ಪೂಜಿಸುವವನನ್ನು ತಿರಸ್ಕರಿಸುವ ನಡೆಯಲ್ಲ, ಅವಮಾನ ಮೀರಲು ಅಗತ್ಯವಿರುವ ಕರೆ. ಯಾವುದೇ ಸಂಸ್ಥೆಯ ಗುಣಮಟ್ಟವು ಅದರ ಅದ್ಭುತ ರಚನೆಯಿಂದ ಮಾತ್ರ ನಿರ್ಧರಿತವಾಗುವುದಿಲ್ಲ; ಅಳವಡಿಸಿಕೊಳ್ಳುವ ಮೌಲ್ಯಗಳಿಂದ ನಿರ್ಧರಿತ ವಾಗುತ್ತದೆ. ಇದು ಅಯೋಧ್ಯೆಯ ರಾಮಮಂದಿರಕ್ಕೂ ಅನ್ವಯವಾಗುವ ಸಂಗತಿ.
ಅಯೋಧ್ಯೆಯ ರಾಮಮಂದಿರವು ಭಾರತದ ಇತರ ಪ್ರಮುಖ ದೇವಾಲಯಗಳಿಗಿಂತ ರಾಜಕೀಯ ದೊಂದಿಗೆ ಹೆಚ್ಚು ನಿಕಟವಾಗಿ ಹೆಣೆದುಕೊಂಡಿದೆ. ಈ ಸತ್ಯವು ಅಯೋಧ್ಯೆಯ ದೇವಾಲಯದ ಆಡಳಿತಕ್ಕೆ ವಿಶೇಷ ಹೊಣೆಗಾರಿಕೆಯನ್ನೂ ನೀಡುತ್ತದೆ.
ಅಯೋಧ್ಯೆಯ ಭವ್ಯ ಮಂದಿರ, ಅಲ್ಲಿಗೆ ಭೇಟಿ ನೀಡುವ ದೊಡ್ಡ ಸಂಖ್ಯೆಯ ಭಕ್ತರಿಂದ ಅದರ ಯಶಸ್ಸನ್ನು ಅಳೆಯಕೂಡದು. ಅದರ ರಚನೆಯ ಹಿಂದೆ ಅಡಕವಾಗಿರುವ ಸತ್ಯ, ಕರ್ತವ್ಯಪರತೆ, ಋಜುತ್ವ, ಪಾರದರ್ಶಕತೆ ಹಾಗೂ ಸಮಗ್ರತೆ ಎನ್ನುವ ಮೌಲ್ಯಗಳು ಪ್ರತಿದಿನದ ಆಡಳಿತದಲ್ಲಿ ಬಿಂಬಿತವಾಗಬೇಕು. ರಾಮನಿಗೆ ಸಲ್ಲಿಸಬಹುದಾದ ನಿಜವಾದ ಗೌರವ ಅದೇ ಆಗಿದೆ.

