Dailyhunt Logo
  • Light mode
    Follow system
    Dark mode
    • Play Story
    • App Story
ವಿಶ್ಲೇಷಣೆ: ನಿರಂಕುಶಾಧಿಪತ್ಯಕ್ಕೆ ಜನರೇ ಅಂಕುಶ

ವಿಶ್ಲೇಷಣೆ: ನಿರಂಕುಶಾಧಿಪತ್ಯಕ್ಕೆ ಜನರೇ ಅಂಕುಶ

ಡಳಿತ ಪಕ್ಷ ಬಯಸುವ ಫಲಿತಾಂಶವೇ ಖಾತರಿ ಎನ್ನುವ ಸ್ಥಿತಿಯಲ್ಲಿಯೂ ವಿರೋಧ ಪಕ್ಷಗಳು ಚುನಾವಣೆಗಳಿಗೆ ಬೆನ್ನುಹಾಕುವಂತಿಲ್ಲ. ಪ್ರಜಾಪ್ರಭುತ್ವದೊಂದಿಗೆ ಇರುವ ಬದ್ಧತೆಯ ರೂಪದಲ್ಲಿ ಚುನಾವಣೆಗಳನ್ನು ನೆಚ್ಚಿಕೊಳ್ಳಬೇಕಾಗಿದೆ ಹಾಗೂ ಎಲ್ಲ ರೀತಿಯ ತಿರುಚುವಿಕೆಗಳೂ ಚರಿತ್ರೆಯಲ್ಲಿ ಬುಡಮೇಲಾಗಿವೆ ಎಂಬುದನ್ನು ಮರೆಯಬಾರದು...

ಚುನಾವಣೆಗಳ ಕುರಿತು ಏಕೆ ತಲೆ ಕೆಡಿಸಿಕೊಳ್ಳ ಬೇಕು? ನ್ಯಾಯಸಮ್ಮತಿಯನ್ನು ಕಳೆದು ಕೊಳ್ಳುತ್ತಲೇ ಸಾಗಿರುವ ಈ ಪೈಪೋಟಿಯನ್ನು ಏಕೆ ಬಹಿಷ್ಕರಿಸಬಾರದು? ಈ ಪಿಸುನುಡಿ ಈಗ ಎಲ್ಲೆಡೆ ಕೇಳಿಬರುತ್ತಿದೆ. ಕಳಂಕದ ಲವಲೇಶವೂ ಇಲ್ಲದೆ ಈ ಪ್ರಶ್ನೆಯನ್ನು ಕೇಳಲು ಈಗ ಸಕಾಲ. ನೈತಿಕ ಆಕ್ರೋಶದ ಒತ್ತಡವಿಲ್ಲದೆ ಶಾಂತವಾಗಿ ಈ ಪ್ರಶ್ನೆಗೆ ಉತ್ತರಿಸುವುದಕ್ಕೂ ಇದು ಸಕಾಲ. ಈ ಕುರಿತ ಮುಕ್ತ ಮತ್ತು ಬಹಿರಂಗ ಸಂವಾದವು ಈ ಮುಂದಿನ ನಿರ್ಧಾರಕ್ಕೆ ನಮ್ಮನ್ನು ಒಯ್ಯಬಹುದು: ಸದ್ಯದ ಮಟ್ಟಿ ಗಂತೂ ಚುನಾವಣಾ ಬಹಿಷ್ಕಾರವು ಒಳ್ಳೆಯ ಪ್ರಶ್ನೆ. ಆದರೆ, ಅದರ ಉತ್ತರ ಅಷ್ಟೊಂದು ಒಳ್ಳೆಯದಿಲ್ಲ.

'ಚುನಾವಣೆ ಕುರಿತು ಏಕೆ ತಲೆ ಕೆಡಿಸಿಕೊಳ್ಳಬೇಕು' ಎಂಬ ಪ್ರಶ್ನೆಯಿಂದ ಸಂವಾದ ಶುರು ಮಾಡಬಹುದು. ನಮ್ಮ ಕಾಲದ ಮಹತ್ವದ ಪ‍್ರಜಾಪ್ರಭುತ್ವವಾದಿ ಚಿಂತಕರಲ್ಲಿ ಒಬ್ಬರಾಗಿರುವ ಆಯಡಂ ಪ್ರಿವೊರಸ್ಕಿ ಅವರ ಇದೇ ಹೆಸರಿನ ಪ್ರಜಾಸತ್ತಾತ್ಮಕ ಚುನಾವಣೆಯ ಹಿಂದಿನ ತರ್ಕವನ್ನು ವ್ಯಾಖ್ಯಾನಿಸುವ ಕೃತಿಯಲ್ಲಿ ಇದೇ
ಪ್ರಶ್ನೆಯನ್ನು ಕೇಳಲಾಗಿದೆ. ನಾವು ಸಾಮಾನ್ಯವಾಗಿ ಪ್ರಜಾಪ್ರಭುತ್ವದೊಂದಿಗೆ ಗುರ್ತಿಸುವ ಉತ್ತಮ ಆಡಳಿತ, ನ್ಯಾಯಸಮ್ಮತ ಪ್ರಾತಿನಿಧ್ಯ ಅಥವಾ ಸಾಮಾಜಿಕ ಸಾಮರಸ್ಯದಂತಹ ಸದ್ಗುಣಗಳು ಸ್ಪರ್ಧಾತ್ಮಕ ಚುನಾವಣೆಯಲ್ಲಿ ಕಾಣಿಸದೇ ಇರಬಹುದು ಎಂಬುದನ್ನು ಪ್ರಿವೊರಸ್ಕಿ ಅತ್ಯಂತ ವಾಸ್ತವಿಕವಾಗಿ ವಿವರಿಸುತ್ತಾರೆ. ಗಾಢವಾಗಿ ಛಿದ್ರಗೊಂಡಿರುವ ಸಮಾಜಗಳು ಪರಸ್ಪರ ಸಂಘರ್ಷ ವಿಲ್ಲದೆ ಒಟ್ಟಾಗಿ ಇರಲು ಈ ಚುನಾವಣೆಗಳು ಅವಕಾಶ ಒದಗಿಸುವುದರಿಂದ ಈ ಕುರಿತು ತಲೆಕೆಡಿಸಿಕೊಳ್ಳುವುದು ಅರ್ಥಪೂರ್ಣವೇ ಹೌದು. ಅಧಿಕಾರದಲ್ಲಿ ಇರುವವರು ಅಧಿಕಾರ ಕಳೆದು ಕೊಳ್ಳುವ ಅಪಾಯವನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಚುನಾವಣೆಯು ಅವಕಾಶ ಒದಗಿಸುವುದರಿಂದ ಅಥವಾ ಈ ಅವಕಾಶವನ್ನು ಮುಕ್ತವಾಗಿ ಇರಿಸುವುದರಿಂದ ಸೋತವರು ಸೋಲನ್ನು ಒಪ್ಪಿಕೊಳ್ಳುತ್ತಾರೆ. ತುರ್ತುಪರಿಸ್ಥಿತಿಯ ನಿರಂಕುಶಾಧಿಪತ್ಯದ ಬಳಿಕವೂ 1977ರ ಚಾರಿತ್ರಿಕ ಚುನಾವಣೆಯಲ್ಲಿ ಭಾರತದಲ್ಲಿ ಇದು ಸಾಧ್ಯವಾಯಿತು. ಭಾರತದಲ್ಲಿ ಈಗ ಆಗಿರುವಂತೆ, ಚುಣಾವಣಾ ಪ್ರಾಮಾಣಿಕತೆಯು ತನ್ನ ಮಿತಿಯನ್ನು ಮೀರದಿದ್ದಾಗ ಮಾತ್ರ ಇದು ಸಾಧ್ಯ.

'ಚುನಾವಣಾ ಪ್ರಾಮಾಣಿಕತೆ'ಯನ್ನು ಅಳೆಯುವುದಕ್ಕೆ ವಸ್ತುನಿಷ್ಠವಾದ ಅಳತೆಗೋಲು ಇಲ್ಲ. ಪಿಪ್ಪಾ ನೋರಿಸ್‌, ರಿಚರ್ಡ್‌ ಡಬ್ಲ್ಯು ಫ್ರಾಂಕ್‌ ಮತ್ತು ಫೆರೆನ್‌ ಮಾರ್ಟಿನೆಜ್‌ ಐ ಕೊಮಾ ಅವರು 2014ರಲ್ಲಿ ಪ್ರಕಟಿಸಿದ ಪ್ರಬಂಧವೊಂದರಲ್ಲಿ, ಯಾವುದೇ ದೇಶದ ಚುನಾವಣೆಯ ಪೂರ್ಣ ಪ್ರಕ್ರಿಯೆಯ ‍ಪ್ರಾಮಾಣಿಕತೆಯನ್ನು ಅಳೆಯಲು ನೆರವಾಗುವ 11 ಆಯಾಮಗಳ ಪಟ್ಟಿಯೊಂದನ್ನು ಕೊಟ್ಟಿದ್ದಾರೆ. ಭಾರತದ ಚುನಾವಣೆಯು ಪ್ರಚಾರ ವೆಚ್ಚದ ಒಂದು ಆಯಾಮದಲ್ಲಿ ಸದಾ ಅಂಚಿನಲ್ಲಿಯೇ ಇರುತ್ತದೆ.

2014ರ ನಂತರದಲ್ಲಿ, ನಮ್ಮ ಚುನಾವಣೆಗಳು ಮತ್ತೆ ಮೂರು ಆಯಾಮಗಳಲ್ಲಿ ಸ್ವೀಕಾರಾರ್ಹತೆಯ ಹಂತವನ್ನು ದಾಟಿ ಕೆಳಕ್ಕೆ ಕುಸಿದಿವೆ: ಅವುಗಳೆಂದರೆ, ತಟಸ್ಥ ಚುನಾವಣಾ ಪ್ರಾಧಿಕಾರ, ಪಾರದರ್ಶಕ ಪ್ರಕ್ರಿಯೆಗಳು ಮತ್ತು ಪ್ರಚಾರ ಮಾಧ್ಯಮದ ನ್ಯಾಯಸಮ್ಮತ ಲಭ್ಯತೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಮತ್ತು ಕ್ಷೇತ್ರ ವಿಂಗಡಣೆಯು ಮತ್ತೆ ಮೂರು ಮಾನದಂಡಗಳು ಕುಸಿಯುವಂತೆ ಮಾಡಿವೆ: ಅವುಗಳೆಂದರೆ, ಸಾರ್ವತ್ರಿಕ ಮತದಾರರ ನೋಂದಣಿ, ಪಕ್ಷ ಮತ್ತು ಅಭ್ಯರ್ಥಿಯ ಅನಿರ್ಬಂಧಿತ ನೋಂದಣಿ ಮತ್ತು ಕ್ಷೇತ್ರಗಳ ನ್ಯಾಯಸಮ್ಮತ ಗಡಿಗಳು. ನಮ್ಮಲ್ಲಿ ಈಗ ಬಾಕಿ ಉಳಿದಿರುವುದು ನ್ಯಾಯಸಮ್ಮತ ಚುನಾವಣೆಯ ಔಪಚಾರಿಕತೆ ಮಾತ್ರ: ಅವುಗಳೆಂದರೆ, ನ್ಯಾಯಸಮ್ಮತ ಚುನಾವಣಾ ಕಾನೂನುಗಳು, ಪ್ರಮಾಣೀಕೃತ ಮತದಾನ ಪ್ರಕ್ರಿಯೆ ಮತ್ತು ಮತ ಎಣಿಕೆ ಪ್ರಕ್ರಿಯೆಗಳು ಹಾಗೂ ಘೋಷಿತ ಫಲಿತಾಂಶಗಳಿಗೆ ಬದ್ಧತೆ.

ಒಂದು ಕಾಲದಲ್ಲಿ ದೇಶದ ಹೆಮ್ಮೆ ಮತ್ತು ನೆರೆಯವರ ಅಸೂಯೆಗೆ ಪಾತ್ರವಾಗಿದ್ದ ಭಾರತದ ಚುನಾವಣೆ ಈಗ ಚುನಾವಣಾ ಪ್ರಾಮಾಣಿಕತೆಯ ಸ್ವೀಕಾರಾರ್ಹತೆಯ ಕನಿಷ್ಠ ಹಂತದಿಂದಲೂ ಕೆಳಕ್ಕೆ ಕುಸಿದಿದೆ. ಆಡಳಿತ ಪಕ್ಷವು ತಾನು ಚುನಾವಣೆ ಗೆಲ್ಲಬಲ್ಲೆ ಮತ್ತು ಗೆಲ್ಲಲೇಬೇಕು ಎಂದು ಭಾವಿಸಿದರೆ ಹಾಗೆಯೇ ಆಗುತ್ತದೆ ಎಂಬುದು ಈಗಿನ ಪರಿಸ್ಥಿತಿ. ಹಾಗಾಗಿಯೇ, ವಿರೋಧ ಪಕ್ಷಗಳ ನಾಯಕರು ಅಸ್ತಿತ್ವದ ಪ್ರಶ್ನೆಯನ್ನು ಎದುರಿಸುತ್ತಿದ್ದಾರೆ: ಪೂರ್ವ ನಿಶ್ಚಿತ ಪೈಪೋಟಿಯಲ್ಲಿ (ಫಿಕ್ಸೆಡ್‌ ಮ್ಯಾಚ್‌) ಭಾಗ ವಹಿಸಬೇಕಾದ ಅಗತ್ಯ ಇದೆಯೆ? ನಿಮ್ಮ ಉತ್ತರ ಏನೇ ಆಗಿರಲಿ, ಅದೊಂದು ನಿಜವಾದ ದ್ವಂದ್ವ. ಇದು ಒಳ್ಳೆಯ ಪ್ರಶ್ನೆಯೂ ಹೌದು.

ಭಾರತದ ವಿಪಕ್ಷಗಳು ಸಂಪೂರ್ಣ ಹಿಂದಕ್ಕೆ ಸರಿಯುವುದು ಅಥವಾ ಪೂರ್ಣವಾಗಿ ಚುನಾವಣೆ ಬಹಿಷ್ಕರಿಸುವುದು ಈಗಿನ ಮಟ್ಟಿಗೆ ಒಳ್ಳೆಯ ಉತ್ತರ ಅಲ್ಲ. ಈ ಹಂತದಲ್ಲಿ ಇಂತಹ ಯಾವುದೇ ಪ್ರಸ್ತಾವವನ್ನು ತಿರಸ್ಕರಿಸಲು ಮೂರು ಕಾರಣಗಳಿವೆ.

ಮೊದಲನೆಯದು, ನೈತಿಕವಾದ ಪ್ರತಿಪಾದನೆ. ಪ್ರತಿ ಚುನಾವಣೆಯೂ ಅಕ್ರಮವೇ ಎಂದು ಗೊತ್ತಿ ದ್ದರೂ ಚುನಾವಣೆಯಲ್ಲಿ ಭಾಗವಹಿಸಬೇಕೇ ಎಂಬ ವಾದವೇ ಪ್ರಜಾಸತ್ತಾತ್ಮಕವಾದುದಲ್ಲ. ಸಂವಹನಾತ್ಮಕ ನೈತಿಕತೆಯೇ ಇಲ್ಲಿನ ಪ್ರತಿಪಾದನೆ. ಪ್ರಜಾಪ್ರಭುತ್ವ ದೊಂದಿಗೆ ಇರುವ ಬದ್ಧತೆಯು ಜನರ ಜೊತೆಗೆ ಸಂವಹನ ನಡೆಸುವ ಅಗತ್ಯವೊಂದನ್ನು ನಮ್ಮ ಮೇಲೆ ಹೇರುತ್ತದೆ. ಚುನಾವಣೆಗಳಲ್ಲಿ ಅಕ್ರಮ ನಡೆಸಲಾಗು ತ್ತಿದೆ ಎಂದು ವಿರೋಧ ಪಕ್ಷಗಳು ಭಾವಿಸಿದ್ದರೆ, ಜನರಿಗೆ ಅದನ್ನು ಮನವರಿಕೆ ಮಾಡಿಕೊಡಲೇಬೇಕು. ಕಾಂಗ್ರೆಸ್‌ ಪಕ್ಷವು ನಡೆಸಿದ 'ವೋಟ್‌ ಚೋರಿ' ಅಭಿಯಾನವು ಸಾರ್ವಜನಿಕ ಮನೋಭಾವದ ಮೇಲೆ ಮಾಡಿದ ಪರಿಣಾಮವು ಭಾವಿಸಿದ್ದಕ್ಕಿಂತ ಹೆಚ್ಚೇ ಇದೆ. ಆದರೆ, ಅಕ್ರಮ ನಡೆಯುವುದಕ್ಕೆ ಮುಂಚೆಯೇ ಸಾರ್ವಜನಿಕರು ಅದನ್ನು ಪ್ರಶ್ನಿಸುವವರೆಗೆ, ಸಾರ್ವಜನಿಕ ಅಭಿಪ್ರಾಯ ರೂಪಿಸುವುದು ಪ್ರಜಾಸತ್ತಾತ್ಮಕ ನೈತಿಕತೆಯಾಗಿದೆ.

ಎರಡನೇ ಪ್ರತಿಪಾದನೆಯು ಕಾರ್ಯತಂತ್ರಕ್ಕೆ ಸಂಬಂಧಿಸಿದ್ದಾಗಿದೆ. ಚುನಾವಣೆಗಳು ನ್ಯಾಯ ಸಮ್ಮತವಾಗಿ ಇಲ್ಲದೇ ಇದ್ದರೂ ಅದರಿಂದ ದೂರ ಇರುವುದಕ್ಕಿಂತ ಅದರಲ್ಲಿ ಭಾಗವಹಿಸುವುದೇ ಹೆಚ್ಚು ಸಮಂಜಸವಾಗಿದೆ. ಒಂದೆಡೆ, ಚುನಾವಣೆಯನ್ನು ಬಹಿಷ್ಕರಿಸಿದ ಕಾರಣಕ್ಕೆ ಮತದಾನದ ಪ್ರಮಾಣವು ಗಮನಾರ್ಹವಾಗಿ ಕಡಿಮೆ ಆಗದೇ ಇದ್ದರೆ ಅದು ನಿರಂಕುಶಾಧಿಕಾರಿಗಳ ವಿರುದ್ಧದ ಹೋರಾಟದಲ್ಲಿ ಪರಿಣಾಮಕಾರಿ ಅಲ್ಲ ಎಂಬುದಕ್ಕೆ ಜಾಗತಿಕ ಮಟ್ಟದಲ್ಲಿ ಸಾಕ್ಷ್ಯಗಳಿವೆ. ಅದಲ್ಲದೆ, ಜನರ ಬೆಂಬಲ ಪಡೆದುಕೊಳ್ಳುವ ಸ್ಪರ್ಧೆಯಿಂದ ವಿರೋಧ ಪಕ್ಷಗಳು ಪಲಾಯನ ಮಾಡಿವೆ ಎಂದು ಅಧಿಕಾರದಲ್ಲಿ ಇರುವವರು ಹೇಳಿಕೊಳ್ಳಬಹುದು. ಇನ್ನೊಂದೆಡೆ, ಚುನಾವಣೆಗಳೆಂದರೆ ಅವಕಾಶಗಳ ಲಭ್ಯತೆ. ಚುನಾವಣಾ ನಿರಂಕುಶಾಧಿಕಾರಿಗಳು ಕೂಡ ನ್ಯಾಯಸಮ್ಮತಿಯ ತೋರಿಕೆಗಾಗಿಯಾದರೂ ಸ್ವಲ್ಪ ಅವಕಾಶವನ್ನು ವಿರೋಧ ಪಕ್ಷಗಳಿಗೆ ಬಿಟ್ಟುಕೊಡಬೇಕಾಗುತ್ತದೆ. ಫಲಿತಾಂಶ ಏನೇ ಇದ್ದರೂ ಕಾರ್ಯಕರ್ತರನ್ನು ನೇಮಿಸಲು, ದೇಣಿಗೆ ಸಂಗ್ರಹಿಸಲು, ಪಕ್ಷ ಸಂಘಟನೆಯನ್ನು ಸಕ್ರಿಯವಾಗಿ ಉಳಿಸಿಕೊಳ್ಳಲು, ಬೆಂಬಲಿಗರನ್ನು ಗುರ್ತಿಸಲು ಮತ್ತು ಭವಿಷ್ಯದ ನಾಯಕರನ್ನು ರೂಪಿಸಲು ಚುನಾವಣೆಯು ಅವಕಾಶ ಒದಗಿಸುತ್ತದೆ. ಜನರಲ್ಲಿ ಜಾಗೃತಿ ಮೂಡಿ ಸಲು, ಚುನಾವಣಾ ಅಕ್ರಮಗಳ ಮೇಲೆ ಬೆಳಕು ಚೆಲ್ಲಲು, ಚುನಾವಣಾ ಅಕ್ರಮವನ್ನು ದಾಖಲಿಸಲು ವ್ಯವಸ್ಥೆಗೆ ಬಿಸಿ ಮುಟ್ಟಿಸಿ ಒತ್ತಡ ಹೇರಲು ಮತ್ತು ಭವಿಷ್ಯದ ಪ್ರಜಾಸತ್ತಾತ್ಮಕ ಪ್ರತಿರೋಧಕ್ಕೆ ಸಜ್ಜಾಗಲು ಚುನಾವಣಾ ಭಾಗವಹಿಸುವಿಕೆಯು ಎಲ್ಲ ಮಿತಿಗಳ ನಡುವೆಯೂ ಅವಕಾಶ ಒದಗಿಸುತ್ತದೆ. ಇಂತಹ ಅವಕಾಶವನ್ನು ಕೈಚೆಲ್ಲುವುದು ಬುದ್ಧಿವಂತಿಕೆ ಅಲ್ಲ.

ಸುದೀರ್ಘ ಕಾಲದಿಂದ ಪ್ರಜಾಸತ್ತೆಯ ಪಾಠ ಗಳನ್ನು ನಾವು ದಕ್ಷಿಣ ಜಗತ್ತಿಗೆ ಕಳುಹಿಸಿಕೊಡುತ್ತಲೇ ಇದ್ದೇವೆ. ಈಗ, ಇತರೆಡೆಗಳ ನಿರಂಕುಶ ಮತ್ತು ಅರೆ ನಿರಂಕುಶ ದೇಶಗಳಿಂದ ಪ್ರಜಾಪ್ರಭುತ್ವದ ವಿವೇಕವೊಂದಷ್ಟನ್ನು ಪಡೆದುಕೊಳ್ಳುವ ಕಾಲ ಬಂದಿದೆ. ಬೆಲರೂಸ್‌ನ 2020ರ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆಯನ್ನು ಆಧಾರವಾಗಿಟ್ಟು ನಡೆಸಿದ ಅಧ್ಯಯನದಲ್ಲಿ ಅಲೀನಾ ಬತೂರ ಹೀಗೆ ನಿರ್ಧಾರಕ್ಕೆ ಬರುತ್ತಾರೆ: 'ಆಡಳಿತವನ್ನು ಬದಲಾಯಿಸಲು ವಿರೋಧ ಪಕ್ಷಕ್ಕೆ ಸಾಧ್ಯವಾಗಲಿಲ್ಲ, ಆದರೆ, ಸಾರ್ವಜನಿಕ ಅಭಿಪ್ರಾಯದ ಕುರಿತ ವಿಶ್ವಾಸಾರ್ಹ ಮಾಹಿತಿಯು ಅವರಿಗೆ ಸಿಕ್ಕಿತು, ಪ್ರಜಾಸತ್ತಾತ್ಮಕ ಪೌರರನ್ನು ಅವರು ನೇಮಿಸಿದರು ಮತ್ತು ತರಬೇತಿಗೊಳಿಸಿದರು, ಅಕ್ರಮದ ವ್ಯವಸ್ಥೆ ಯನ್ನು ಬಯಲಾಗಿಸಿದರು ಮತ್ತು ಆಡಳಿತದ ಕುರಿತು ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ಇದ್ದ ನ್ಯಾಯಸಮ್ಮತಿಯ ಹುಸಿತನಕ್ಕೆ ಬೆಳಕು ಚೆಲ್ಲಿದರು (ಹೌ ಟು ಕಾಂಪೀಟ್‌ ಇನ್‌ ಅನ್‌ಫೇರ್‌ ಎಲೆಕ್ಷನ್ಸ್‌, ಜರ್ನಲ್‌ ಆಫ್‌ ಡೆಮಾಕ್ರಸಿ, 2022 ಅಕ್ಟೋಬರ್‌). ಬಹಿಷ್ಕಾರದ ಕುರಿತು ಚಿಂತಿಸುವಾಗ ಯಾವ ಪ್ರಮಾಣದಲ್ಲಿ ಅಕ್ರಮ ನಡೆಯುತ್ತಿದೆ ಎಂಬುದಕ್ಕಿಂತ ಇದನ್ನು ಬಯಲಿಗೆಳೆಯಲು ಎಷ್ಟು ಅವಕಾಶ ಸಿಗಲಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳುವುದು ಮುಖ್ಯ.

ಅಂತಿಮವಾಗಿ, ನಾವು ಚಾರಿತ್ರಿಕ ಪ್ರತಿಪಾದನೆ ಯನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಸಾಮೂಹಿಕ ಬಂಡಾಯದ ಮುಂದೆ ಬಹುಪಾಲು ತಿರುಚುವಿಕೆಗಳು ಕುಸಿದುಬೀಳುತ್ತವೆ. ಈಗಿನ 21ನೇ ಶತಮಾನದಲ್ಲಿ ಪ್ರತಿಯೊಬ್ಬ ಆಡಳಿತದಾರನೂ ಜನಸಮ್ಮತಿಯ ತೋರಿಕೆಯನ್ನು ಸಂರಕ್ಷಿಸಿಕೊಳ್ಳಲೇಬೇಕು. ಚುನಾವಣಾ ಅಕ್ರಮದ ಸ್ವರೂಪ ಮತ್ತು ಪ್ರಮಾಣದ ಮುಂದೆ ಈ ತೋರಿಕೆಯು ತೊಡಕಾಗಿ ಕಾಡುತ್ತದೆ. ಪ್ರಸಕ್ತ ಮತ್ತು ಬಹಳ ಕೆಳಮಟ್ಟದಲ್ಲಿರುವ ಭಾರತದ ಚುನಾವಣಾ ಪ್ರಾಮಾಣಿಕತೆಯು ಮಾಮೂಲಿ ಆಡಳಿತವಿರೋಧಿ ಅಲೆಗಳಿಂದ ಆಳುವವರನ್ನು ರಕ್ಷಿಸಬಹುದು. ಆದರೆ, ಜನಾಕ್ರೋಶದ ಅಲೆಯಿಂದ ರಕ್ಷಿಸುವುದು ಸಾಧ್ಯವಿಲ್ಲ. ಹಂಗೆರಿಯಲ್ಲಿ ನಾವು ಇತ್ತೀಚೆಗೆ ನೋಡಿದಂತೆ, ಇಂತಹ ಅಲೆಯು ಸುರಕ್ಷಿತ ವಾಗಿದ್ದ ಚುನಾವಣಾ ನಿರಂಕುಶಾಧಿಪತ್ಯವನ್ನು ಉರುಳಿಸಿತು. ಎಷ್ಟೇ ಅಸಂಭವನೀಯ ಎಂದು ಈಗ ಕಾಣಿಸಿದರೂ ಅಚ್ಚರಿದಾಯಕವಾದ ಫಲಿತಾಂಶವು ಸಾಧ್ಯವಾಗಬಹುದು ಎಂಬುದನ್ನು ಅಲ್ಲಗಳೆಯ ಲಾಗದು ಎಂಬುದರ ನಿದರ್ಶನವಾಗಿ 1977ರಲ್ಲಿ ಇಂದಿರಾ ಗಾಂಧಿ ಅವರ ಸೋಲು ನಮ್ಮ ಮುಂದಿದೆ.

 ಯೋಗೇಂದ್ರ ಯಾದವ್‌
Dailyhunt
Disclaimer: This content has not been generated, created or edited by Dailyhunt. Publisher: Prajavani