ನೀಟ್-ಯುಜಿ ಪರೀಕ್ಷೆಯು ಅಕ್ರಮಗಳಿಂದಾಗಿ ರದ್ದಾಯಿತು.
ಇದರಿಂದ ನೊಂದ ಹಲವು ಮಕ್ಕಳು ಆತ್ಮಹತ್ಯೆ ಮಾಡಿಕೊಂಡರು. ಲಕ್ಷಾಂತರ ವಿದ್ಯಾರ್ಥಿಗಳು ಒತ್ತಡಗಳಿಗೆ ಬಲಿಯಾದರು. ಆದರೆ, ಜವಾಬ್ದಾರಿ ಹೊತ್ತ ಸರ್ಕಾರಕ್ಕೆ ಏನೂ ಅನ್ನಿಸಲಿಲ್ಲ. ಈ ಹಗರಣ ಖಂಡಿಸಿ ದೇಶದಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದರು. ಶಿಕ್ಷಣ ಮಂತ್ರಿಗಳ ರಾಜೀನಾಮೆಗೆ ಒತ್ತಡ ಹೆಚ್ಚಾಯಿತು. ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುತ್ತಲೇ ಪ್ರಧಾನಿಗಳು 'ತಪ್ಪಿತಸ್ಥರನ್ನು ಶಿಕ್ಷಿಸುವುದಾಗಿ' ಆಶ್ವಾಸನೆ ನೀಡಿದ್ದಾರೆ. ಅವರಿಗೆ ಶಿಕ್ಷಣ ಮಂತ್ರಿಗಳ ರಾಜೀನಾಮೆ ಪಡೆಯುವಷ್ಟು ಧೈರ್ಯ ಇದೆಯೆ?
ಭಾರತದಲ್ಲಿ ಈಚೆಗೆ ನಡೆಯುತ್ತಿರುವ ನೂರಾರು ಘಟನೆಗಳು ದಿಗ್ಭ್ರಮೆ ಹುಟ್ಟಿಸುತ್ತಿವೆ. ಚುನಾವಣಾ ಆಯೋಗದ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ'ಯು ಕೋಟ್ಯಂತರ ಜನರನ್ನು ಮತದಾನದ ಪ್ರಕ್ರಿಯೆಯಿಂದಲೇ ಹೊರಗಿಡುತ್ತಿದೆ. ರಾಮಮಂದಿರದಲ್ಲಿ ನಡೆದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಅನೇಕರು 'ರಾಮನ ಭಕ್ತರು ಮಾತ್ರ ಮಂದಿರದ ಅವ್ಯವಹಾರಗಳ ಬಗ್ಗೆ ಮಾತಾಡಬೇಕು, ಉಳಿದವರು ಮಾತಾಡುವ ಅಗತ್ಯವಿಲ್ಲ' ಎಂದು ವಾದಿಸಿದರು. 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯಲ್ಲಿ ಯಾರೂ ಸತ್ತಿಲ್ಲ ಎಂದು ಹೇಳಿದ ಸರ್ಕಾರವೇ ನಂತರ ಪ್ರಾಣ ಕಳೆಕೊಂಡವರ ಹೆಸರು ಬಿಡುಗಡೆ ಮಾಡಿತು. ಆರ್‌ಎಸ್‌ಎಸ್ 'ತನಗೆ ನೋಂದಣಿಯ ಅಗತ್ಯವೇ ಇಲ್ಲ'ವೆಂದು ವಾದಿಸಿತು. ಇವೆಲ್ಲವುಗಳನ್ನು ನಾಚಿಕೆಯಿಲ್ಲದೆ ಸಮರ್ಥಿಸುವವರು ಇರುವುದರಿಂದ ಸರ್ಕಾರವೂ ಆರಾಮವಾಗಿದೆ.
ಭಾರತದಲ್ಲಿನ ಸುದೀರ್ಘ ಇತಿಹಾಸವನ್ನು ಆಕ್ರಮಿಸಿಕೊಂಡಿರುವುದು ರಾಜಪ್ರಭುತ್ವ ಮತ್ತು ಶ್ರೇಣೀಕೃತ ಜಾತಿ ಸಮಾಜ. ಇವುಗಳಿಂದ ನಮಗೆ ಬಿಡುಗಡೆ ದೊರಕಿದ್ದು 1947ರಲ್ಲಿ. 1950ರಲ್ಲಿ ಭಾರತವು ಗಣರಾಜ್ಯವಾದಾಗ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂತು. 1950ರ ದಶಕದಲ್ಲಿ ಬ್ರಿಟನ್ನೂ ಸೇರಿ ದಂತೆ ಅನೇಕ ದೇಶಗಳು ಭಾರತದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ ಎಂದೇ ನಂಬಿದ್ದವು. ಎಲ್ಲರ ಊಹೆಯನ್ನು ಮೀರಿ ಮೊದಲ ಏಳು ದಶಕಗಳಲ್ಲಿ ಭಾರತದ ಪ್ರಜಾಪ್ರಭುತ್ವವು ಹೆಚ್ಚು ಸ್ಥಿರವಾಗಿ ಮತ್ತು ವಿಸ್ತಾರವಾಗಿ ಬೆಳೆಯಿತು. ವೈವಿಧ್ಯಮಯ ಭಾರತದಲ್ಲಿ ಸಂಸದೀಯ ವ್ಯವಸ್ಥೆ, ಜಾತ್ಯತೀತತೆ ಮತ್ತು ಸಾರ್ವತ್ರಿಕ ಮತದಾನದ ಹಕ್ಕನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ ಆಧುನಿಕ ಪ್ರಜಾಸತ್ತಾತ್ಮಕ ಭಾರತಕ್ಕೆ ನೆಹರೂ ಬುನಾದಿ ಹಾಕಿದರು.
ವಿರೋಧ ಪಕ್ಷಗಳನ್ನು ಮತ್ತು ಭಿನ್ನಾಭಿಪ್ರಾಯ ಗಳನ್ನು ಗೌರವಿಸುತ್ತಿದ್ದ ಅವರು, ಸಂಸತ್ತಿನ ಚರ್ಚೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ತಮ್ಮ ಆಡಳಿತಾವಧಿಯಲ್ಲಿ ನೆಹರೂ ಭಾರತದ ಬಹುಪಕ್ಷೀಯ ಸ್ಪರ್ಧೆಗಳನ್ನು ಪ್ರಜಾಸತ್ತಾತ್ಮಕ ವಾಗಿಯೇ ಎದುರಿಸಿದರು. ಔಪಚಾರಿಕ ರಾಜಕೀಯ ಜೀವನದಲ್ಲಿ ಮಹಿಳೆಯರು ಮತ್ತು ಇತರ ಸಾಮಾಜಿಕ ಗುಂಪುಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಿದರು.
ನೆಹರೂ ನಂತರ ಭಾರತದ ಪ್ರಜಾಪ್ರಭುತ್ವವು ಎರಡು ಸಲ ಗಮನಾರ್ಹವಾಗಿ ಕುಸಿಯಿತು. ಮೊದಲನೆಯದು, ಜೂನ್ 1975ರ ತುರ್ತು ಪರಿಸ್ಥಿತಿ ಅವಧಿ. ಎರಡನೆಯದು, 2014ರಲ್ಲಿ ನರೇಂದ್ರ ಮೋದಿಯವರ ಚುನಾವಣಾ ವಿಜಯದೊಂದಿಗೆ ಆರಂಭವಾದ ಪ್ರಜಾಪ್ರಭುತ್ವದ ಸಮಕಾಲೀನ ಕುಸಿತ. ಮೋದಿ ಅಧಿಕಾರಾವಧಿಯಲ್ಲಿ, ಪ್ರಜಾಪ್ರಭುತ್ವದ ಪ್ರಮುಖ ಅಂಗಗಳೆಲ್ಲವೂ ಶಾಸಕಾಂಗದ ಕೈವಶವಾಗಿ ಸಾಂಸ್ಥಿಕ ಸ್ವಾಯತ್ತತೆ ಕಳಕೊಂಡಿವೆ. ಪ್ರಮುಖ ತನಿಖಾ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಬಳಸಿಕೊಳ್ಳಲಾಗಿದೆ. ಚುನಾವಣಾ ಆಯೋಗದ ಆಯುಕ್ತರ ನೇಮಕಾತಿಯಲ್ಲಿ ಸರ್ಕಾರವು ನೇರ ಹಸ್ತಕ್ಷೇಪವನ್ನು ಹೊಂದಿತು. ಭಾರತೀಯ ರಿಸರ್ವ್ ಬ್ಯಾಂಕ್‌ನ ಸ್ವಾಯತ್ತತೆಯಲ್ಲಿ ಕೇಂದ್ರ ಸರ್ಕಾರ ಕೈ ಆಡಿಸುತ್ತಿರುವುದಕ್ಕೆ ನೋಟು ರದ್ದತಿಯಂತಹ ಏಕಪಕ್ಷೀಯ ನಿರ್ಧಾರವೇ ಉದಾಹರಣೆ.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ಕಾರ ಮತ್ತು ನ್ಯಾಯಾಂಗದ ನಡುವೆ ನಿರಂತರ ಸಂಘರ್ಷ ನಡೆಯುತ್ತಿದ್ದು, ಸರ್ಕಾರದ ಕೈ ಮೇಲಾಗಿದೆ. ಸರ್ಕಾರದ ಪರ ತೀರ್ಪು ನೀಡಿದ ನ್ಯಾಯಮೂರ್ತಿಗಳು ನಿವೃತ್ತಿಯ ನಂತರ ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ. ಸಂಸತ್ತಿನಲ್ಲಿ ಪ್ರಮುಖ ಮಸೂದೆಗಳನ್ನು ಚರ್ಚೆಯಿಲ್ಲದೆ ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ. ಮಾಧ್ಯಮ ಸಂಸ್ಥೆಗಳ ಮೇಲೆ ಪರೋಕ್ಷ ಒತ್ತಡಗಳನ್ನು ಹೇರಲಾಗಿದೆ. ವಿದೇಶಿ ವರದಿಗಳ ಔಚಿತ್ಯಗಳನ್ನೇ ಪ್ರಶ್ನಿಸಲಾಗಿದೆ. ಇಂಥ ಆರೋಪಗಳನ್ನು ಕೇಂದ್ರ ಸರ್ಕಾರವು ತಳ್ಳಿಹಾಕುತ್ತಲೇ ಇದೆಯಾದರೂ, ನಡೆಯುತ್ತಿರುವ ಘಟನೆಗಳು ವಾಸ್ತವವಾಗಿ ಪ್ರಜಾಸತ್ತೆ ಕುಸಿಯುತ್ತಿರುವುದನ್ನು ಧ್ವನಿಸುತ್ತಿವೆ.
ಇಂದಿರಾ ಗಾಂಧಿಯವರು ಚುನಾವಣೆಗಳನ್ನು ನಿಷೇಧಿಸುವುದು, ರಾಜಕೀಯ ವಿರೋಧಿಗಳನ್ನು ಬಂಧಿಸುವುದು, ನಾಗರಿಕ ಸ್ವಾತಂತ್ರ‍್ಯಗಳನ್ನು ಹರಣ ಮಾಡುವುದು, ಸ್ವತಂತ್ರ ಮಾಧ್ಯಮಗಳನ್ನು ನಿರ್ಬಂಧಿಸುವುದು, ನ್ಯಾಯಾಲಯಗಳ ಅಧಿಕಾರವನ್ನು ದುರ್ಬಲಗೊಳಿಸುವುದೇ ಮೊದಲಾದ ಕೆಲಸಗಳನ್ನು ಮಾಡಿದರು. ಆದರೆ, ಜನರು ಚುನಾವಣೆಯಲ್ಲಿ ಅವರನ್ನು ಸೋಲಿಸಿದರು. ನ್ಯಾಯಪೀಠವು ಅವರನ್ನು ದಂಡಿಸಿತು. ಇವತ್ತು ಅವನ್ನೆಲ್ಲ ನಿರೀಕ್ಷಿಸುವಂತಿಲ್ಲ.
ಪ್ರಜಾಪ್ರಭುತ್ವದ ಪರವಾಗಿರುವ ಕೆಲವರು ಇಂದು ಭಾರತವು ಪೂರ್ಣ ಪ್ರಜಾಪ್ರಭುತ್ವ ಮತ್ತು ಪೂರ್ಣ ನಿರಂಕುಶಾಧಿಕಾರದ ನಡುವಿನ ಅಸ್ಪಷ್ಟ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳುತ್ತಾರೆ. ತಜ್ಞರು ಇದನ್ನು 'ಹೈಬ್ರಿಡ್ ಆಡಳಿತ' ಎಂದೂ ಕರೆಯುತ್ತಾರೆ. ಇವತ್ತಿನ ಭಾರತದ್ದು ಪೂರ್ಣ ಪ್ರಜಾಪ್ರಭುತ್ವವೂ ಅಲ್ಲ, ಪೂರ್ಣ ನಿರಂಕುಶಾಧಿ ಕಾರವೂ ಅಲ್ಲ. 2021ರಲ್ಲಿ ಫ್ರೀಡಂ ಹೌಸ್ ಭಾರತದ ರೇಟಿಂಗ್ ಅನ್ನು 'ಸ್ವಾತಂತ್ರ‍್ಯ'ದಿಂದ 'ಪಾರ್ಶ್ವಿಕ ಸ್ವಾತಂತ್ರ‍್ಯ'ಕ್ಕೆ ಇಳಿಸಿತು. ಅದೇ ವರ್ಷ, ವೆರೈಟೀಸ್ ಆಫ್ ಡೆಮಾಕ್ರಸಿ ಸಂಸ್ಥೆಯು ಭಾರತವನ್ನು 'ಚುನಾವಣಾ ನಿರಂಕುಶಾಧಿಕಾರ'ದ ಸ್ಥಾನಕ್ಕೆ ಇಳಿಸಿತು. ಎಕನಾಮಿಸ್ಟ್ ಇಂಟೆಲಿಜೆನ್ಸ್ ಘಟಕವು ಭಾರತವನ್ನು 'ದೋಷಪೂರಿತ ಪ್ರಜಾಪ್ರಭುತ್ವ' ಎಂದು ಘೋಷಿಸಿತು. ಭಾರತ ಇಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿದೆಯೇ ಎಂಬ ಪ್ರಶ್ನೆಗೆ ನಾವು ಕಂಡುಕೊಳ್ಳುವ ಉತ್ತರಗಳು ದೇಶದ ರಾಜಕೀಯ ಭವಿಷ್ಯವನ್ನು ನಿರ್ಧರಿಸುತ್ತವೆ. ಅದೇನಿದ್ದರೂ ಈ ದೇಶದ ಪ್ರಜಾಪ್ರಭುತ್ವದ ಅವನತಿಗೆ ಕಾರಣ ಆದವರು ಮಾತ್ರ ಪಾಶ್ಚಾತ್ಯ ವಿಮರ್ಶೆಗಳನ್ನು 'ದಾರಿ ತಪ್ಪಿಸುವ ಹುನ್ನಾರ' ಎಂದು ಕರೆದು ತಮ್ಮ ಕೃತ್ಯಗಳನ್ನು ಮುಂದುವರಿಸಿಕೊಂಡೇ ಬರುತ್ತಿದ್ದಾರೆ. ತಿದ್ದಿಕೊಳ್ಳಲು ಅವಕಾಶವಿದ್ದಾಗಲೂ ತಿದ್ದಿಕೊಳ್ಳಲಾಗದವರು ಅಧಿಕಾರದಲ್ಲಿದ್ದಾರೆ.
ಭಾರತದ ಪ್ರಜಾಪ್ರಭುತ್ವ ಕುಸಿಯುತ್ತಿರುವುದನ್ನು ಯಾವ ಮಾನದಂಡಗಳನ್ನು ಬಳಸಿ ಹೇಳುತ್ತೀರಿ? ನಿಮ್ಮ ಅಭಿಪ್ರಾಯದಲ್ಲಿ ಪ್ರಜಾಪ್ರಭುತ್ವ ಅಂದರೆ ಏನು? ಎಂದು ಹಲವರು ಕೇಳುತ್ತಾರೆ. ಇಂಥ ಪ್ರಶ್ನೆಗಳಿಗೆ ಉತ್ತರಿಸುವವರಿಗೆ ಪ್ರಜಾಪ್ರಭುತ್ವ ಅಂದರೇನು ಎಂದು ಹೇಳಲು ಗೊತ್ತಿರಬೇಕು. ಅಬ್ರಹಾಂ ಲಿಂಕನ್ ಅವರು ಪ್ರಜಾಪ್ರಭುತ್ವವು 'ಜನರಿಂದ, ಜನರಿಗಾಗಿ ಜನರೇ ನಡೆಸುವ' ಒಂದು ಸರ್ಕಾರಿ ವ್ಯವಸ್ಥೆ ಎಂದು ವಿವರಿಸಿದರು. ನಂತರದ ವಿದ್ವಾಂಸರು 'ಒಂದು ದೇಶವನ್ನು ಪ್ರಜಾಪ್ರಭುತ್ವವಾದೀ ರಾಷ್ಟ್ರ' ಎನ್ನಲು ಮುಖ್ಯವಾದ ಸಂಸ್ಥೆಗಳನ್ನು ಗುರ್ತಿಸಿದ್ದಾರೆ. ಅವುಗಳೆಂದರೆ: ಶಾಸಕಾಂಗದ ಚುನಾವಣೆಗಳು, ರಾಜಕೀಯ ಸ್ಪರ್ಧೆಯ ಉಪಸ್ಥಿತಿ, ನಾಗರಿಕ ಸ್ವಾತಂತ್ರ‍್ಯ ಮತ್ತು ಕೆಲಸಗಳ ಮೌಲ್ಯಮಾಪನಗಳು. ದೇಶದಲ್ಲಿ ಇವೆಲ್ಲವೂ ಯಾಂತ್ರಿಕವಾಗಿ ನಡೆಯುತ್ತಿವೆಯೇ ವಿನಾ ಅವಕ್ಕೆ ವಿಶೇಷವಾದ ಅರ್ಥ ಉಳಿದಂತಿಲ್ಲ. ಪ್ರಜಾಪ್ರಭುತ್ವದ ಅವನತಿಯು ಅದರ ಸಂಸ್ಥೆಗಳನ್ನು ದುರ್ಬಲಗೊಳಿಸುವಿಕೆಯಲ್ಲಿ ಆಕಾರ ಪಡೆಯುತ್ತಿದೆ. ಪ್ರಜಾಪ್ರಭುತ್ವಗಳು ಈಗ ಛಿದ್ರವಾಗುವುದಿಲ್ಲ, ಬದಲು ಸವೆದುಹೋಗುತ್ತಿವೆ.
ನೀಟ್ ಅಕ್ರಮಗಳನ್ನು ವಿರೋಧಿಸಿದ ಯುವ ಜನರನ್ನು ಕೇಂದ್ರ ಸರ್ಕಾರ ನಡೆಸಿಕೊಂಡ ರೀತಿಯೇ ಪ್ರಜಾಪ್ರಭುತ್ವದ ಕುಸಿತದ ಲಕ್ಷಣವಾಗಿದೆ. ಇಲ್ಲಿ ವಿರೋಧಗಳನ್ನು ದುರ್ಬಲಗೊಳಿಸಲು ಕಾನೂನು ಸೇರಿದಂತೆ, ಲಭ್ಯವಿರುವ ಎಲ್ಲ ಶಕ್ತಿಗಳನ್ನೂ ಬಳಸಿ ಕೊಳ್ಳಲಾಗಿದೆ. ಸಮಕಾಲೀನ ಪ್ರಜಾಪ್ರಭುತ್ವವು ಕತ್ತಲು ಬೆಳಗಾಗುವುದರೊಳಗೆ ನಿರಂಕುಶ ಪ್ರಭುತ್ವಗಳಾಗಿ ರೂಪಾಂತರಗೊಳ್ಳುವುದಿಲ್ಲ. ಬದಲು ಅವು ನಿಧಾನವಾಗಿ ಸಾಯುವಂತೆ ಮಾಡುತ್ತವೆ.
ಕೇಂದ್ರವು ತನ್ನ ವಿಮರ್ಶಕರನ್ನು ಮೌನ ಗೊಳಿಸಲು ಎರಡು ರೀತಿಯ ಕಾರ್ಯಸೂಚಿಗಳನ್ನು ಜಾರಿಯಲ್ಲಿಟ್ಟಿದೆ. ಒಂದು, ವಸಾಹತುಶಾಹಿಯುಗದ ದೇಶದ್ರೋಹದ ಕಾನೂನುಗಳನ್ನು (ಯುಎಪಿಎ) ನಿರ್ದಾಕ್ಷಿಣ್ಯವಾಗಿ ಜಾರಿ ಮಾಡುವುದು. ಎರಡನೆಯದಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ಭಿನ್ನಾಭಿಪ್ರಾಯ
ವ್ಯಕ್ತಪಡಿಸಿದ ವ್ಯಕ್ತಿಗಳ ಚಾರಿತ್ರ‍್ಯಹನನ ಮಾಡುವುದು. ಭಯೋತ್ಪಾದಕ ಸಂಘಟನೆಗಳೊಂದಿಗೆ ಯಾವುದೇ ಸಂಬಂಧವಿಲ್ಲದೆ ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಹೆಸರಿಸಲು ಸರ್ಕಾರಕ್ಕೆ ಅವಕಾಶ ನೀಡಲು 2019ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. 'ಬೆದರಿಕೆ ಹಾಕುವ', 'ಜನರಲ್ಲಿ ಭಯೋತ್ಪಾದನೆ ಉಂಟು ಮಾಡುವ' ಯಾವುದೇ ಕೃತ್ಯ ಎಸಗುವ ವ್ಯಕ್ತಿಗಳನ್ನು ಗುರಿಯಾಗಿಸಲು ಇದನ್ನು ಬಳಸಬಹುದು.
2015-2019ರ ನಡುವೆ, ಯುಎಪಿಎ ಅಡಿಯಲ್ಲಿ ನಡೆದ ಬಂಧನಗಳು ಶೇ 72ರಷ್ಟು ಹೆಚ್ಚಿವೆ. ಬಂಧಿತರಲ್ಲಿ ಶೇ 98ರಷ್ಟು ಜನರು ಜಾಮೀನು ಇಲ್ಲದೆ ಜೈಲಿನಲ್ಲಿ ಉಳಿದಿದ್ದಾರೆ. ಇಂಥ ಘಟನೆಗಳು ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳದಂತೆ ಮಾಡುವ ಚಾಣಾಕ್ಷ ನಡೆಗಳಾಗಿವೆ. ಜನಸಂಖ್ಯೆಯ ಶೇ 14ರಷ್ಟಿರುವ ಭಾರತದ ಮುಸ್ಲಿಮರನ್ನು ಸಾರ್ವಜನಿಕವಾಗಿ ರಾಕ್ಷಸೀಕರಿಸುವ ಮತ್ತು ಅಪರಾಧೀಕರಿಸುವ ಪ್ರವೃತ್ತಿ ಹೆಚ್ಚುತ್ತಲೇ ಇದೆ. ಇದರಿಂದಾಗಿ ಮುಸ್ಲಿಂ ಸಮುದಾಯವು ನಾಗರಿಕ ಸ್ವಾತಂತ್ರ‍್ಯದಲ್ಲಿ ಕುಸಿತವನ್ನು ಅನುಭವಿಸಿದೆ.
ಭಾರತದಲ್ಲಿ ಪ್ರಜಾಪ್ರಭುತ್ವವು ಮಿಲಿಟರಿ ದಂಗೆ ಅಥವಾ ವಿರೋಧಿಗಳ ಸಂಘಟಿತ ಹೋರಾಟಗಳಿಂದ ಸಾಯುತ್ತಿಲ್ಲ. ಬದಲಾಗಿ ನಿರಂಕುಶಾಧಿಕಾರಿಗಳು ಪ್ರಜಾಸತ್ತಾತ್ಮಕವಾಗಿ ಮಾತಾಡಲು ಕಲಿತದ್ದರಿಂದ ಸಾಯುತ್ತಿವೆ.

