'ಪತ್ರಿಕಾ ಮಾಧ್ಯಮದ ಮೌಲ್ಯಗಳು ಕ್ಷಿಪ್ರವಾಗಿ ಪಲ್ಲಟಗೊಳ್ಳುತ್ತಿವೆ, ಅರೆಸತ್ಯ ಮತ್ತು ಸುಳ್ಳು ಸುದ್ದಿಗಳ ಹಾವಳಿ ಹೆಚ್ಚಾಗುತ್ತಿದೆ, ಯುವಜನರಲ್ಲಿ ಪತ್ರಿಕೆಗಳ ಮೇಲಿನ ಆಸಕ್ತಿ ಕೂಡ ಕಡಿಮೆ ಆಗುತ್ತಿದೆ' - ಇದು, ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಳಿಬಂದ ಭಾಷಣಗಳ ಒಟ್ಟು ತಿರುಳು. ಈ ಕೊರಗು ಕನ್ನಡಕ್ಕೆ ಮಾತ್ರ ಸೀಮಿತವಾದುದಲ್ಲ, ಸೀಮಾತೀತವಾಗಿ ಜಗತ್ತನ್ನೇ ಆವರಿಸಿರುವಂಥದ್ದು.
ಜಗತ್ತಿನಲ್ಲಿ, ಪತ್ರಿಕೆಯನ್ನೂ ಒಂದು ಉತ್ಪನ್ನ ವನ್ನಾಗಿ (ಪ್ರಾಡಕ್ಟ್) ನೋಡಲು ಆರಂಭಿಸಿದ ಕಾಲಘಟ್ಟವೆಂದರೆ ಅದು ಕಳೆದ ಶತಮಾನದ ಅರವತ್ತರ ದಶಕ. ಪತ್ರಿಕೆಗಳ ಪ್ರತಿಗಳನ್ನು ಹೆಚ್ಚು ಮಾರುವ ಏಕೈಕ ಉದ್ದೇಶದಿಂದ ರೋಚಕ ಸುದ್ದಿ
ಗಳನ್ನು ಪ್ರಕಟಿಸಲಾಗುತ್ತಿದೆ ಎಂಬ ದೂರಿಗೆ ಧ್ವನಿಬಂದ ಸಂದರ್ಭವೂ ಅದಾಗಿತ್ತು. ಉದಾರೀಕರಣದ ಬಳಿಕ ಪತ್ರಿಕಾ ಮಾಧ್ಯಮವು ಉದ್ಯಮವಾಗಿ ಲಗುಬಗೆಯಿಂದ ಹೆಜ್ಜೆ ಹಾಕಿತು ಮತ್ತು ಪತ್ರಿಕೋದ್ಯಮ ಎಂಬ ಹೆಸರಿನಿಂದಲೇ ಅದು ಗುರ್ತಿಸಿಕೊಂಡಿತು. ಆ ವೇಳೆಗಾಗಲೇ, ಪತ್ರಿಕೆಯನ್ನು 'ಪ್ರಾಡಕ್ಟ್' ಆಗಿ ಕಾಣುವುದರಲ್ಲಿ ಯಾವುದೇ ಮಡಿವಂತಿಕೆ ಉಳಿದಿರಲಿಲ್ಲ. ಪ್ರಸರಣದ ಸಂಖ್ಯೆ ಹೆಚ್ಚಿಸಿಕೊಳ್ಳುವುದೇ 'ಪತ್ರಿಕೋದ್ಯಮ'ದ ಪ್ರಮುಖ
ಧ್ಯೇಯವಾಗತೊಡಗಿತು. ಬರಬರುತ್ತಾ ಮುದ್ರಣದ ಮೂಲಕ ಹೆಚ್ಚು ಜನರನ್ನು ತಲಪಲು ಅಸಾಧ್ಯ ವಾದಾಗ ವೆಬ್ ವೀಕ್ಷಕರ ಸಂಖ್ಯೆಯನ್ನಾದರೂ ಹೆಚ್ಚಿಸಿಕೊಳ್ಳಬೇಕೆಂಬ ಯತ್ನ ಈಚಿನ ದಶಕಗಳಲ್ಲಿ ಶುರುವಾಯಿತು. ಅದಕ್ಕಾಗಿ ಅಲ್ಗಾರಿದಮ್‌ಗಳು, ಕೀ ವರ್ಡ್‌ಗಳು ಮತ್ತು ಸರ್ಚ್ ಎಂಜಿನ್‌ಗಳ ಗಾಳಕ್ಕೆ (ಎಸ್‌ಇಒ) ಲಬಕ್ಕನೆ ಸಿಕ್ಕಿ ಹಾಕಿಕೊಳ್ಳುವಂತಹ ಕ್ಲಿಕ್‌ಬೈಟ್‌ಗಳು - ಇಂತಹ ತರಹೇವಾರಿ ಡಿಜಿಟಲ್ ಆಯುಧಗಳು ಕೈಗೆ ಸಿಕ್ಕವು. ಮುಂದೇನಾಯಿತು?
'ದಿ ನ್ಯೂಯಾರ್ಕ್ ಟೈಮ್ಸ್'ನ ಕಾರ್ಯನಿರ್ವಾಹಕ ಸಂಪಾದಕಿಯಾಗಿದ್ದ (ಆಕೆ, ಆ ಸ್ಥಾನಕ್ಕೇರಿದ ಮೊದಲ ಮಹಿಳೆ ಕೂಡ) ಜಿಲ್ ಅಬ್ರಾಮ್ಸನ್ ಅವರ
'ಮರ್ಚಂಟ್ಸ್ ಆಫ್ ಟ್ರೂತ್' (ಸತ್ಯದ ವ್ಯಾಪಾರಿಗಳು) ಕೃತಿಯನ್ನೊಮ್ಮೆ ನೀವು ಓದಬೇಕು. ಸತ್ಯದಿಂದ ಅರೆಸತ್ಯದವರೆಗೆ, (ಕೈಬರಹದ) ಕಾಪಿಯಿಂದ (ಮಲ್ಟಿಮೀಡಿಯಾ) ಕಂಟೆಂಟ್‌ವರೆಗೆ, ಮುದ್ರಣ ಮಾಧ್ಯಮದ ಸುವರ್ಣಯುಗದಿಂದ ಹಲವು ಸಾಧ್ಯತೆಗಳ ಡಿಜಿಟಲ್ ಯುಗದವರೆಗೆ ಪತ್ರಿಕೋದ್ಯಮ ಹಾಕಿದ ದಾಪುಗಾಲಿನ ದರ್ಶನವನ್ನು ಅದು ಮಾಡಿಸುತ್ತದೆ. 'ದಿ ನ್ಯೂಯಾರ್ಕ್ ಟೈಮ್ಸ್', 'ವಾಷಿಂಗ್ಟನ್ ಪೋಸ್ಟ್', 'ಬಜ್‌ಫೀಡ್' ಮತ್ತು 'ವೈಸ್' ಮಾಧ್ಯಮ ಸಂಸ್ಥೆಗಳ ಬೆಳವಣಿಗೆಗಳನ್ನು ವಿಶ್ಲೇಷಿಸುವ ಮೂಲಕ, ಪತ್ರಿಕೋದ್ಯಮದ ಪಲ್ಲಟಗಳನ್ನು ದಾಖಲಿಸುವಂತಹ ಕೆಲಸ ಜಿಲ್ ಅವರಿಂದ ಆಗಿದೆ. 'ಪ್ರಾಡಕ್ಟ್'ನ ಗರಿಷ್ಠ ಲಾಭ ಪಡೆಯುವುದಕ್ಕಾಗಿ, ಸತ್ಯ ಸಂಗತಿಗಳೇ ತುಂಬಿದ್ದ ಜಾಗದಲ್ಲಿ ಕೆಲವೊಮ್ಮೆ ಸುಳ್ಳು ಸುದ್ದಿ, ಶಿಕ್ಷಣದ ಜಾಗದಲ್ಲಿ ಮನರಂಜನೆ ಹೇಗೆ ಮುಖ್ಯವಾದವು ಎಂಬ ವಿವರಗಳು ಆ ಕೃತಿಯಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತವೆ.
ಪ್ರಖ್ಯಾತ ಹಿಂದಿ ಕವಿ ಕೃಷ್ಣ ಬಿಹಾರಿ ನೂರ್ ಅವರ ಒಂದು ಅರ್ಥಪೂರ್ಣ ಗಜಲ್ ಹೀಗೆ ಹೇಳುತ್ತದೆ: 'ಸತ್ಯವು ತನ್ನ ಸ್ಥಾನದಿಂದ ಒಂಚೂರು ಕದಲಿದರೂ ಅದು ಸತ್ಯವಾಗಿ ಉಳಿಯುವುದಿಲ್ಲ; ಆದರೆ, ಸುಳ್ಳಿಗೆ ಮಿತಿಯೇ ಇಲ್ಲ'. ಸತ್ಯವನ್ನು ಕದಲಿಸಿ ಹೇಳುವುದರಲ್ಲಿ, ಅಂದರೆ ಸುಳ್ಳು ಸುದ್ದಿ ಹರಡುವುದರಲ್ಲಿ, ಎಲೆಕ್ಟ್ರಾನಿಕ್ ಮಾಧ್ಯಮದ್ದು ನಾಗಾಲೋಟವಾದರೆ, ಕೆಲವು ಅಪವಾದಗಳನ್ನು ಹೊರತುಪಡಿಸಿ, ಮುದ್ರಣ ಮಾಧ್ಯಮ ಕೂಡ ಈ ಓಟದಲ್ಲಿದೆ. 'ಆಪರೇಷನ್ ಸಿಂಧೂರ'ದ ಸಮಯದಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್, ಲಾಹೋರ್, ರಾವಲ್ಪಿಂಡಿ ನಗರ ಗಳನ್ನೆಲ್ಲ 'ಧ್ವಂಸ ಮಾಡಿದ' ಪತ್ರಿಕಾ ವರದಿಗಳನ್ನು ಈ ಮಾತಿಗೆ ಸಾಕ್ಷ್ಯವಾಗಿ ಪರಿಗಣಿಸಬಹುದು. ಸುದ್ದಿ ಮೂಲದ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳು ವುದಕ್ಕಿಂತಲೂ ರಂಜನೀಯ ಸುದ್ದಿಗಳ ಬೆನ್ನು ಬೀಳುವುದೇ ಬಹುಪಾಲು ಪತ್ರಕರ್ತರಿಗೆ ಮುಖ್ಯವಾಗಿ ಕಂಡಿದೆ. ಸಾಕ್ಷಿಪ್ರಜ್ಞೆಯನ್ನು ಕಾಪಾಡುವ ತನ್ನ ಹೆಗಲ ಮೇಲಿನ ನೊಗವೀಗ ಪತ್ರಿಕಾ ಮಾಧ್ಯಮದ ಪಾಲಿಗೆ ಭಾರವಾದಂತಿದೆ.
ಜಾಹೀರಾತುಗಳೇ ಚಾಲಕ ಶಕ್ತಿಯಾಗಿರುವ ಮಾಧ್ಯಮದಲ್ಲಿ ಸುದ್ದಿಯ ಹೂರಣ ಅಳ್ಳಕವಾಗಿರು ವುದು ಢಾಳಾಗಿ ಕಾಣುತ್ತಿದೆ. ಜೆನ್ ಝೀ ತರಹದ ಹೊಸ ತಲೆಮಾರಿಗೆ ಗಂಭೀರ ಹೂರಣ ಎಲ್ಲಿ ಬೇಕಾಗಿದೆ ಎಂಬ ಪ್ರಶ್ನೆಯೂ ಇದೆ. ಸುದ್ದಿ ಮತ್ತು ಜಾಹೀರಾತಿನ ಮಧ್ಯದ ಗೆರೆ ದಿಟ್ಟಿಸಿದರೂ ಕಾಣದಷ್ಟು ತೆಳುವಾಗಿದೆ. ನೀವು ತತ್ತ್ವಾದರ್ಶಗಳ ಪ್ರಶ್ನೆ ಎತ್ತಿದ್ದಾದರೆ, ಉನ್ನತ ಮೌಲ್ಯಗಳನ್ನು, ಆದರ್ಶಗಳನ್ನು ಅಪ್ಪಿಕೊಳ್ಳಲು ಇಷ್ಟವಿದೆಯಾದರೂ ಉದ್ಯಮದಲ್ಲಿ ಮೊದಲು ನಾವು ಉಳಿಯಬೇಕಲ್ಲ ಎಂಬ ಮರುಪ್ರಶ್ನೆಯೂ ಎದುರಾದೀತು. ಓದುಗಪರ ಇರಬೇಕಾಗಿದ್ದ ಪತ್ರಿಕೆಗಳು ಎಡ ಪರ-ಬಲ ಪರವಾಗಿ ನಿಂತು ವಕಾಲತ್ತು ವಹಿಸಿಕೊಂಡಿರುವುದನ್ನು ಸೂಕ್ಷ್ಮ ಮನಸ್ಸಿನ ಯಾರೂ ಗುರ್ತಿಸಬಲ್ಲರು. ಜಾತಿವಾದ, ಕೋಮುವಾದದ ವಿರುದ್ಧ ಗಟ್ಟಿ ನಿಲುವು ತಳೆಯುವುದು ಒತ್ತಟ್ಟಿಗಿರಲಿ, ಪತ್ರಿಕಾ ಮಾಧ್ಯಮದ ಒಂದು ವಲಯವೇ ಅವುಗಳಿಗೆ ಕಾವು ಕೊಡುವ ಕುಲುಮೆಯಾಗಿಬಿಟ್ಟಿದೆ ಎಂಬುದನ್ನೂ ಅವರು ಬಲ್ಲರು. ಹೌದು, ಸಾಮಾಜಿಕ ಕಾಳಜಿ, ಒಳನೋಟ, ಗುಣಮಟ್ಟ, ಗಾಂಭೀರ್ಯ, ವಿವೇಕ, ಧೈರ್ಯವನ್ನೊಳಗೊಂಡ ಪತ್ರಿಕಾಧರ್ಮವು ಈಗ ಅಳಿವಿನಂಚಿನ ಪ್ರಭೇದವಾಗಿದೆ.
ಪತ್ರಿಕೆಗಳ ಪ್ರಸರಣದ ಗಾತ್ರ ಕುಗ್ಗುತ್ತಾ ಹೋದಂತೆ ಹೊಸ ಹೊಸ ಆದಾಯದ ಮೂಲಗಳನ್ನು ಮಾಧ್ಯಮ ಕ್ಷೇತ್ರ ಹೇಗೆ ಹಿಗ್ಗಿಸಿಕೊಳ್ಳುತ್ತಾ ಹೋಯಿತು ಎಂಬುದನ್ನು 'ಮರ್ಚಂಟ್ಸ್ ಆಫ್ ಟ್ರೂತ್' ಕೃತಿ ದಾಖಲಿಸಿದೆ. ಕೋವಿಡ್ ನಂತರದ ಕಾಲಘಟ್ಟದಲ್ಲಿ ಪ್ರಸರಣ ಸಂಖ್ಯೆ, ಜಾರುಬಂಡೆಯಲ್ಲಿ ಜಾರಿದಂತೆ, ಸರ‍್ರನೆ ಜಾರಿಹೋಗಿದ್ದ ಕಹಿನೆನಪು ಪತ್ರಿಕಾ ಮಾಧ್ಯಮವನ್ನು ಇನ್ನೂ ಕಾಡುತ್ತಿದೆ. ಆಗ ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಅದು ಈಗಲೂ ತಡಕಾಡುತ್ತಲೇ ಇದೆ. ಮಲ್ಟಿ ಮೀಡಿಯಾ ವೇದಿಕೆಗಳ ಮೂಲಕ ಓದುಗನನ್ನು ತಲಪಲು ಅಮೆರಿಕದಲ್ಲಿ ದಶಕಗಳ ಹಿಂದೆ ಶುರುವಾದ ಪ್ರಯತ್ನಗಳು ಈಗ ಜಗತ್ತಿನಾದ್ಯಂತ ವಿಸ್ತರಣೆ ಆಗಿವೆ. ಸುದ್ದಿ ರೂಪದ ಜಾಹೀರಾತುಗಳಿಗಾಗಿ ಕಂಪನಿಗಳು ಬೇಡಿಕೆಯಿಟ್ಟ ಪರಿಣಾಮವಾಗಿ 'ನೇಟಿವ್ ಕಂಟೆಂಟ್' ಗಳ ಉಗಮವೂ ಆಗಿದೆ. ಪತ್ರಿಕಾ ಮಾಧ್ಯಮವು ತನ್ನ ಆರ್ಥಿಕ ಚೇತನವನ್ನು ಕಾಪಾಡಿಕೊಳ್ಳಲು ನಡೆಸಿದ ಯತ್ನಗಳಲ್ಲಿ ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಸುದ್ದಿ ನೀಡುವ ಉಪಕ್ರಮವೂ ಒಂದು. 'ದಿ ನ್ಯೂಯಾರ್ಕ್ ಟೈಮ್ಸ್'ನ ಸಿಇಒ ಆಗಿದ್ದ ಮಾರ್ಕ್ ಥಾಮ್ಸನ್, 'ಪಕ್ಷ, ಪಂಥಗಳ ಆಧಾರದಲ್ಲಿ ಜನರ ಧ್ರುವೀಕರಣಕ್ಕೆ ಕಾರಣವಾಗುವ ಫೇಸ್‌ಬುಕ್, ಪ್ರಜಾಪ್ರಭುತ್ವಕ್ಕೆ ಒಂದು ಕಂಟಕ' ಎಂದು ಕಟುವಾಗಿ ಟೀಕಿಸಿದರೂ ಅದೇ ಮಾಧ್ಯಮದ ಮೂಲಕ ಅವರು ಸುದ್ದಿಯ ಹರಿವಿಗೆ ಉತ್ತೇಜಿಸಿದ್ದನ್ನೂ ಜಿಲ್ ದಾಖಲಿಸಿದ್ದಾರೆ.
ಎಲ್ಲ ತಲೆಮಾರುಗಳ- ಬೇಬಿ ಬೂಮರ್ಸ್, ಜೆನ್ ಎಕ್ಸ್, ಮಿಲೇನಿಯಲ್ಸ್, ಜೆನ್ ಝೀ ಮತ್ತು ಜೆನ್ ಆಲ್ಫಾ- ಓದುಗರಿಗೆ ಪತ್ರಿಕೆಗಳಿಗಿಂತಲೂ ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳೇ ಈಗೀಗ ಸುದ್ದಿಯ ಮೂಲಗಳಾಗಿವೆ. ಆದರೆ, ವಾಸ್ತವದಿಂದ ಕೂಡಿದ, ಸತ್ಯ ಸುದ್ದಿಗಳಷ್ಟೇ ಅವರಿಗೆ ಸಿಗುತ್ತಿವೆಯೇ? ಸತ್ಯದ ವ್ಯಾಪಾರಿಗಳು ಅಲ್ಲಿಯೂ ಇದ್ದಾರೆ. ಪತ್ರಿಕೆಗಳಿಗಿಂತಲೂ ವೇಗವಾಗಿ ಸುಳ್ಳು ಸುದ್ದಿಗಳು ಅಲ್ಲಿ ಹರಡುತ್ತಿವೆ. ಅಲ್ಲವೇ ಮತ್ತೆ, ಸುಳ್ಳು ಸುದ್ದಿಯ ಬ್ರಹ್ಮರಾಕ್ಷಸನೀಗ ಬಾಟಲಿಯಿಂದ ಹೊರಬಂದು, ದೈತ್ಯಾಕಾರವಾಗಿ ಬೆಳೆದು ನಿಂತಿದ್ದಾನೆ.
ಸುದ್ದಿ ಮನೆಗಳಲ್ಲಿ ಪಳಗಿದ ಪತ್ರಕರ್ತರಲ್ಲಿ ಹಲವರು ಅಧಿಕಾರಸ್ಥರ ತಂಡಗಳನ್ನು ಸೇರಿದ್ದಾರೆ. ಅವರವರಿಗೆ ಬೇಕಾದ ಸುದ್ದಿಗಳು, ಅವರವರಿಗೆ ಬೇಕಾದ ಸ್ವರೂಪದಲ್ಲಿ ಸೀದಾ ವರದಿಗಾರರ ವಾಟ್ಸ್‌ಆಯಪ್ ಗುಂಪುಗಳಿಗೆ ಬಂದು ಬೀಳುತ್ತಿವೆ. ಯಾವ ಪತ್ರಿಕೆಯ ಪುಟ ತಿರುವಿದರೂ ಅಂತಹ ಸುದ್ದಿಯ ಸಾಲುಗಳು ಒಂದೇ ವಿಧ. ಪತ್ರಕರ್ತರ ವೃತ್ತಿಪರತೆ ಮತ್ತು ಸ್ಪರ್ಧಾ ಮನೋಭಾವಗಳು ಈಗ ಹಿಂದಿನ ಸೀಟು ಹಿಡಿದಿವೆ. ಸುದ್ದಿ ಮನೆಗಳು ದಿನದಿಂದ ದಿನಕ್ಕೆ ಬೌದ್ಧಿಕ ನಿರ್ವಾತದತ್ತ ಜಾರುತ್ತಿವೆ ಎನ್ನುವುದು ಆ ಮನೆಗಳ ಜಗಲಿಗಳಲ್ಲಿ ಕುಳಿತ ಹಿರಿತಲೆಗಳು ಹೇಳುವ ಮಾತು. ಮಾಧ್ಯಮದಲ್ಲಿ ಮೊದಲಿನಂತೆ ಹೊಸ ನೀರು ಹರಿಯುತ್ತಿಲ್ಲ ಎಂಬುದೂ ನಿಜ. ಜರ್ನಲಿಸಂ ಕಾಲೇಜುಗಳೂ ಈಗೀಗ ಖಾಲಿ ಹೊಡೆಯುತ್ತಿವೆ. ಈ ಲಕ್ಷಣಗಳು ಯಾವುದರ ದ್ಯೋತಕಗಳಾಗಿವೆ?
ಶತಮಾನದ ಹಿಂದೆ 'ಮಂಗಳೂರ ಸಮಾಚಾರ' ಪತ್ರಿಕೆಯನ್ನು ಆರಂಭಿಸಿದ್ದ ಹರ್ಮನ್ ಮೊಗ್ಲಿಂಗ್, 'ಸತ್ಯವಲ್ಲದ ಸಂಗತಿಗಳು ಹಾಗೂ ಗಾಳಿಮಾತುಗಳು ಹರಡುವುದನ್ನು ತಡೆಯಲು, ಜನರಿಗೆ ಖಚಿತ ಮಾಹಿತಿ ಸಿಗುವಂತೆ ಆಗಲು, ನಾವು ಈ ಪತ್ರಿಕೆಗೆ ಸೂಕ್ತಬೆಲೆ ನಿಗದಿ ಮಾಡಿ ಪ್ರಕಟಿಸುತ್ತಿದ್ದೇವೆ' ಎಂದು ಹೇಳಿದ್ದರು. ಆದರೆ, ಸತ್ಯ ಸಂಗತಿಯನ್ನು ಹೊತ್ತುತರುವ ಪತ್ರಿಕೆಗಳಿಗೆ ಸೂಕ್ತ ಮೌಲ್ಯ ನೀಡುವ ಓದುಗವರ್ಗ ಈಗ ಎಲ್ಲಿದೆ? ಮಾಧ್ಯಮದ ಮೇಲೆ ಮೌಲ್ಯಗಳ ಹೊಣೆ ಹೊರೆಸುವ ಸಮಾಜ, ಅದನ್ನು ಗೌರವಿಸುವ, ಪೋಷಿಸುವ ತನ್ನ ಹೊಣೆಯನ್ನು ನಿಭಾಯಿಸಲು ಮಾತ್ರ ತಯಾರಿಲ್ಲ. ಒಂದು ಕಪ್ ಕಾಫಿಗೆ ಮೂವತ್ತು ರೂಪಾಯಿ ಕೊಡುವವರು ಪತ್ರಿಕೆಗೆ ಅದರ ಮೂರನೇ ಒಂದು ಭಾಗದಷ್ಟೂ ವ್ಯಯಿಸಲು ಮನಸ್ಸು ಮಾಡುತ್ತಿಲ್ಲ. ಮುದ್ರಣ ಮಾಧ್ಯಮದ ಕುರಿತು ಏನೇ ದೂರು, ಕೊರಗುಗಳಿದ್ದರೂ ಮೌಲ್ಯಗಳನ್ನು ಉಸಿರಾಡುವ ಕೆಲವು ಪತ್ರಿಕೆಗಳಾದರೂ ನಮ್ಮ ನಡುವೆ ಈಗಲೂ ಇವೆ ಎನ್ನುವುದು ಸುಳ್ಳಲ್ಲ. ಆದರೆ, ಭವಿಷ್ಯದ ಭರವಸೆಯ ಹಣತೆಯನ್ನು ಬೆಳಗಲು ಅಷ್ಟೇ ಸಾಕೆ?

