ಮಲೆನಾಡಿನ ಬಹುತೇಕ ಟಾರು ರಸ್ತೆಗಳು ಅಲ್ಲಲ್ಲಿ ಬಣ್ಣ ಬದಲಿಸಿ ಇಂಕು ಚೆಲ್ಲಿದಂತೆ ನೀಲಿಯಾಗಿದ್ದವು. ಲಕ್ಷಾಂತರ ನೇರಳೆ ಹಣ್ಣುಗಳ ಮೇಲೆ ವಾಹನಗಳು ಹರಿದು ಹೋದ ಕಾರಣಕ್ಕೆ ರಸ್ತೆಗಳು ಕಡುನೀಲಿ ಬಣ್ಣಕ್ಕೆ ತಿರುಗಿದ್ದವು. ರಸ್ತೆಯ ಪಕ್ಕದಲ್ಲಿದ್ದ ನೇರಳೆ ಹಣ್ಣನ್ನು ತಿನ್ನಲು ಬರುವ ಬಾವಲಿಗಳು ವಿದ್ಯುತ್ ತಂತಿಗೆ ಸಿಕ್ಕಿ ಸಾಯುತ್ತಿರುವ ದೃಶ್ಯವನ್ನೂ ಕಾಣಬಹುದಿತ್ತು.
ಸುಲಭಕ್ಕೆ ಹಣ್ಣು ಬಿಡದ ಕಾಡಿನ ಮರಗಳು ಸಹ ಈ ಬಾರಿ ಹಣ್ಣಿನಿಂದ ಕಂಗೊಳಿಸುತ್ತಿದ್ದವು. ಈ ಫಲವೃಷ್ಟಿಗೆ ಏನು ಕಾರಣ? ಮಳೆ ಕೊರತೆಯ ದಿನಗಳಲ್ಲೂ ಮರಗಳ ಫಲ ಸಮೃದ್ಧಿಗೆ ಕಾರಣವೇನು? ಇದಕ್ಕೆ ಎಲ್ ನಿನೊ ವಿದ್ಯಮಾನವೇ ಕಾರಣ ಇರಬಹುದೆನ್ನುವುದು ಅಚ್ಚರಿಯಾದರೂ ಸತ್ಯ.
ಕೆಲವು ಸಂದರ್ಭಗಳಲ್ಲಿ ಎಲ್ ನಿನೊ ರೀತಿಯ ಹವಾಮಾನ ವೈಪರೀತ್ಯಗಳು ಸಾಮೂಹಿಕ ಫಲಧಾರಣೆಗೆ ಪೂರಕವಾಗಬಹುದು. ಇದಕ್ಕೆ 'ಮಾಸ್ಟ್ ಫ‍್ರೂಟಿಂಗ್' ಅಥವಾ ಮಾಸ್ಟಿಂಗ್ ವಿದ್ಯಮಾನ ಎನ್ನಲಾಗುತ್ತದೆ. ತೀವ್ರವಾದ ಎಲ್ ನಿನೊ ವರ್ಷಗಳಲ್ಲಿ ಈ ಮಾದರಿ ಹಲವು ಬಾರಿ ತಾಳೆಯಾಗುತ್ತದೆಯೆಂದು ಪನಾಮಾದ ಬ್ಯಾರೊ ಕೊಲೊರಾಡೊ ದ್ವೀಪದಲ್ಲಿ ದಶಕಗಳ ಕಾಲ ನಡೆದ ದೀರ್ಘಕಾಲೀನ ಅಧ್ಯಯನಗಳು ತೋರಿಸಿವೆ.
ಎಲ್ ನಿನೊ ಅವಧಿಯಲ್ಲಿ ಮೋಡರಹಿತ ದಿನಗಳು ಹೆಚ್ಚಾಗುವುದರಿಂದ, ಉಷ್ಣವಲಯದ ಕೆಲವು ಕಾಡುಗಳಲ್ಲಿ ಮರಗಳಿಗೆ ಸೂರ್ಯನ ಬೆಳಕು ಹೆಚ್ಚು ದೊರೆಯಬಹುದು. ಇದರಿಂದ ಅವು ಹೆಚ್ಚು ಪಿಷ್ಟ ಸಂಗ್ರಹಿಸಿ, ಆ ಶಕ್ತಿಯನ್ನು ನಂತರದ ಹೂಬಿಡುವಿಕೆ ಮತ್ತು ಫಲಧಾರಣೆಗೆ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.
ಪ್ರತಿ ಸಸ್ಯದಲ್ಲೂ ಸಾವಿರಾರು ಜೀನ್‌ಗಳಿರುತ್ತವೆ. ಜೀನ್‌ಗಳು ಸೂಚನೆಗಳನ್ನು ಹೊತ್ತಿರುವ ಆನುವಂಶಿಕ ಮಾಹಿತಿಯ ಘಟಕಗಳು. ಆದರೆ, ಎಲ್ಲ ಜೀನ್‌ಗಳೂ ಯಾವಾಗಲೂ ಸಕ್ರಿಯವಾಗಿರುವುದಿಲ್ಲ. ಬೆಳಕು, ತಾಪಮಾನ, ಮಳೆ ಮತ್ತು ನೀರಿನ ಲಭ್ಯತೆಯಂತಹ ಪರಿಸರದ ವಿದ್ಯಮಾನಗಳಿಗೆ ಪ್ರತಿಕ್ರಿಯೆಯಾಗಿ ಕೆಲವು ಜೀನ್‌ಗಳು ಸಕ್ರಿಯಗೊಂಡು ಹೂಬಿಡುವಿಕೆ ಮತ್ತು ಫಲಧಾರಣೆಯನ್ನು ನಿಯಂತ್ರಿಸುತ್ತವೆ. ಸಾಮೂಹಿಕ ಫಲಧಾರಣೆಯ ಹಿಂದೆ ಇದೇ ರೀತಿಯ ಜೀನ್‍ಗಳ ಅಭಿವ್ಯಕ್ತಿ ಮತ್ತು ಪರಿಸರ ಪ್ರಮುಖ ಪಾತ್ರವಹಿಸುತ್ತದೆ ಎಂಬುದು ವಿಜ್ಞಾನಿಗಳ ನಂಬಿಕೆ. ಈ ವಿದ್ಯಮಾನದಲ್ಲಿ ಹವಾಮಾನ, ಸಂಪನ್ಮೂಲ ಸಂಗ್ರಹ, ಸಸ್ಯ ಹಾರ್ಮೋನುಗಳು ಹಾಗೂ ಇತರ ಜೈವಿಕ ಅಂಶಗಳೂ ಪಾತ್ರವಹಿಸುತ್ತವೆ.
ನಿರ್ದಿಷ್ಟ ಕಾಲದಲ್ಲಿ ಬೀಜಭಕ್ಷಕ ಪ್ರಾಣಿಗಳು ತಿಂದು ಮುಗಿಸಲಾಗದಷ್ಟು ಅಪಾರ ಪ್ರಮಾಣದ ಹಣ್ಣು-ಬೀಜ ಉತ್ಪಾದನೆಯಾಗುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಬೀಜಗಳು ಮೊಳಕೆಯೊಡೆಯಲು ಕಾರಣವಾಗುತ್ತದೆ. ಇದಕ್ಕೆ ಪ್ರಿಡೇಟರ್ ಸ್ಯಾಟಿಯೇಷನ್ ಎಂದು ಹೇಳಲಾಗುತ್ತದೆ. ಬೀಜಭಕ್ಷಕ ಸಂತೃಪ್ತೀಕರಣವೆಂದು ನಾವು ಕರೆಯಬಹುದು. ಇದು ತನ್ನ ಸಂತತಿ ಅಳಿದುಹೋಗಲಿದೆ ಎಂದು ಗ್ರಹಿಸಿ ಸಸ್ಯಗಳು ನಡೆಸುವ ಪ್ರಜ್ಞಾಪೂರ್ವಕ ಪ್ರಕ್ರಿಯೆಯಲ್ಲ, ಲಕ್ಷಾಂತರ ವರ್ಷಗಳಿಂದ ನೈಸರ್ಗಿಕ ಆಯ್ಕೆಯಿಂದ ರೂಪುಗೊಂಡ ಜೈವಿಕ ವಿಧಾನವಿದು. ವಿಕಾಸ ಪ್ರಕ್ರಿಯೆಯಲ್ಲಿ ಅದೆಷ್ಟು ನಿಗೂಢಗಳಿವೆಯೊ?
ಅನುಭವಜನ್ಯ ವಿಕಾಸವಾದದ ಮೂಸೆಯಲ್ಲಿ ಪ್ರಕೃತಿ ತನ್ನ ಸಂತತಿಯನ್ನು ಉಳಿಸಿಕೊಳ್ಳಲು ಲಕ್ಷಾಂತರ ವರ್ಷಗಳಲ್ಲಿ ಜೈವಿಕ ತಂತ್ರಗಳನ್ನು ರೂಪಿಸಿಕೊಂಡಿದೆ. ಆದರೆ, ಮಾನವ ಸಮಾಜವು ವನ್ಯಜೀವಿಗಳನ್ನು ಅಳಿವಿನಂಚಿಗೆ ತಳ್ಳುತ್ತಿರುವ ಈ ಕಾಲದಲ್ಲಿ, ಅವುಗಳನ್ನು ರಕ್ಷಿಸಲು ವಿಜ್ಞಾನವೂ ಹೊಸ ಹೊಸ ತಂತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಜಗತ್ತಿನ ಅತಿದೊಡ್ಡ ಬಿಳಿ ಘೇಂಡಾಮೃಗಗಳ ಆವಾಸಸ್ಥಾನ ದಕ್ಷಿಣ ಆಫ್ರಿಕಾ. ಕಳೆದ ಒಂದು ದಶಕದಲ್ಲಿ ಜಗತ್ತಿನಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಘೇಂಡಾಮೃಗಗಳು ಕಳ್ಳಬೇಟೆಗೆ ತುತ್ತಾಗಿವೆ. ಘೇಂಡಾಗಳ ಕೊಂಬಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯಿದೆ. ಮೂಢನಂಬಿಕೆಯ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ ಅವುಗಳ ಕೊಂಬನ್ನು ಬಳಸಲಾಗುತ್ತದೆ. ಆದರೆ, ಅವುಗಳ ಕೊಂಬಿನಲ್ಲಿ ವಿಶೇಷ ಅಂಶಗಳೇನೂ ಇಲ್ಲ. ಮನುಷ್ಯನ ಕೂದಲು ಮತ್ತು ಉಗುರಿನಲ್ಲಿರುವ ಕೆರಟಿನ್ ಅಂಶವೇ ಘೇಂಡಾಗಳ ಕೊಂಬಿನಲ್ಲೂ ಇರುತ್ತದೆ. 2022-2023ರ ಅವಧಿಯಲ್ಲಿ ಆಫ್ರಿಕಾದಲ್ಲಿ ಕಳ್ಳಬೇಟೆ ಪ್ರಮಾಣ ಶೇ 4ರಷ್ಟು ಹೆಚ್ಚಿದ್ದು, ಆ ಅವಧಿಯಲ್ಲಿ 586 ಘೇಂಡಾಮೃಗಗಳನ್ನು ಹತ್ಯೆಗೈಯಲಾಗಿದೆ ಎಂದು ವರದಿಯೊಂದು ಹೇಳುತ್ತಿದೆ.
ಪ್ರಾಣಿಗಳನ್ನು ಬೇಟೆಯಾಡಲು ಅತ್ಯಾಧುನಿಕ ಟೆಲಿಸ್ಕೋಪಿಕ್ ಬಂದೂಕುಗಳು ಬಳಕೆಯಾದರೆ, ಅಂಗಾಂಗಗಳನ್ನು ಮಾರಾಟ ಮಾಡಲು ಇಂಟರ್ನೆಟ್ ಸೇವೆಗಳನ್ನು ಬಳಸಲಾಗುತ್ತಿದೆ. ಕೆಲವು ವಿಶೇಷ ದತ್ತಾಂಶಗಳ ಮೂಲಕ ಮಾತ್ರ ಪ್ರವೇಶ ಮಾಡಲು ಸಾಧ್ಯವಾಗುವ ವಿಧಾನದ ಗೋಪ್ಯ ಅಂತರ್ಜಾಲ (ಡಾರ್ಕ್ ವೆಬ್) ವ್ಯವಸ್ಥೆಯಲ್ಲಿ ಕಾನೂನುಬಾಹಿರ ವ್ಯವಹಾರಗಳು ಬಹಳ ಗೋಪ್ಯವಾಗಿರುತ್ತವೆ. ಅಲ್ಲಿನ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಕಷ್ಟ. ಅಂತರರಾಷ್ಟ್ರೀಯಮಟ್ಟದಲ್ಲಿ ವನ್ಯಜೀವಿ ವ್ಯಾಪಾರಕ್ಕೆ ಡಾರ್ಕ್ ವೆಬ್ ಬಳಕೆಯಾಗುತ್ತಿದೆ. ಕ್ರಿಪ್ಟೋಕರೆನ್ಸಿ ಮಾದರಿಯ ಕ್ಲಿಷ್ಟಕರವಾದ ಡಿಜಿಟಲ್ ಕರೆನ್ಸಿಗಳ ಮೂಲಕ ವಹಿವಾಟುಗಳನ್ನು ನಡೆಸಲಾಗುತ್ತದೆ. ಇದರಿಂದ ಹಣ ಎಲ್ಲಿಂದ ಬರುತ್ತಿದೆ, ಎಲ್ಲಿಗೆ ಹೋಗುತ್ತಿದೆ ಎಂದು ಪತ್ತೆಹಚ್ಚುವುದು ಕಷ್ಟ. ಕಾಡಿನಲ್ಲಿ ಬಂದೂಕು ಹಿಡಿದು ಬೇಟೆಯಾಡುವವರನ್ನು ಹಿಡಿಯಲು ಸಾಧ್ಯವಿದೆ. ಆದರೆ, ಸೈಬರ್ ವಂಚಕರನ್ನು ಪತ್ತೆಹಚ್ಚುವುದು ಅತ್ಯಂತ ಸಂಕೀರ್ಣ ಮತ್ತು ಸವಾಲಿನ ಕೆಲಸ.
ಹುಲಿ ಚರ್ಮ, ಉಗುರು, ಆನೆ ದಂತ, ಚಿಪ್ಪುಹಂದಿಯ ಚಿಪ್ಪು, ಮುಂಗುಸಿಯ ಕೂದಲು, ಘೇಂಡಾಮೃಗದ ಕೊಂಬು, ಹೀಗೆ ವನ್ಯಜೀವಿಗಳ ವಿವಿಧ ಅಂಗಗಳಿಗೆ ಜಾಗತಿಕ ಬೇಡಿಕೆ ಬಹಳವಿದೆ. ಕಳ‍್ಳಬೇಟೆ, ಸಾಗಾಣಿಕೆಯಿಂದಾಗಿ ಹಲವು ಪ್ರಭೇದಗಳು ಅಳಿವಿನಂಚಿಗೆ ಬಂದು ತಲಪಿವೆ. ಕಳ್ಳಬೇಟೆ ತಡೆಯಲುಜಾಗತಿಕವಾಗಿ ಅನೇಕ ಪ್ರಯತ್ನಗಳು ನಡೆದಿವೆ.
ದಕ್ಷಿಣ ಆಫ್ರಿಕಾದ ವಿಟ್‍ವಾಟರ್ಸ್‌ರ‍್ಯಾಂಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯು 'ರಿಸೋಟೋಪ್' ಹೆಸರಿನಯೋಜನೆಯೊಂದನ್ನು ಮುನ್ನೆಲೆಗೆತಂದಿದೆ. 2021ರಲ್ಲಿ ಆರಂಭವಾದ ಈ ಯೋಜನೆ,ಘೇಂಡಾಮೃಗದ ಕೊಂಬಿಗೆ ವಿಕಿರಣಶೀಲ ಐಸೋಟೋಪ್‍ಗಳನ್ನು ಅಳವಡಿಸುವ ಪರಿಕಲ್ಪನೆಯನ್ನು ಪರೀಕ್ಷಿಸಿತು. ಈ ಐಸೋಟೋಪ್‍ಗಳ ವಿಕಿರಣ ಪ್ರಮಾಣ ಪ್ರಾಣಿಗೆ ಯಾವುದೇ ಹಾನಿ ಮಾಡದಷ್ಟು ಕಡಿಮೆ ಇರುವಂತೆ ನೋಡಿಕೊಳ್ಳಲಾಯಿತು. ಅಂತರರಾಷ್ಟ್ರೀಯ ಗಡಿ, ಬಂದರು ಮತ್ತು ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಅಳವಡಿಸಲಾಗಿರುವ ಸುಮಾರು 10 ಸಾವಿರ ವಿಕಿರಣ ಪತ್ತೆ ಸಾಧನಗಳಿಂದ ವಿಕಿರಣಶೀಲ ವಸ್ತುಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂಬುದನ್ನು ಕಂಡುಕೊಂಡರು.
3ಡಿ ಮುದ್ರಿತ ಕೃತಕ ಘೇಂಡಾಕೊಂಬುಗಳಲ್ಲಿ ವಿಕಿರಣಶೀಲ ಐಸೋಟೋಪ್‍ಗಳನ್ನು ಇಟ್ಟು ವಿಮಾನ, ಸರಕು ವಿಮಾನ, ಅಂಚೆ ಪಾರ್ಸೆಲ್ ಹೀಗೆ ಅನೇಕ ಕಡೆಗಳಲ್ಲಿ ಪ್ರಾಯೋಗಿಕವಾಗಿ ವಿಧಾನವನ್ನು ಪರಿಶೀಲನೆ ನಡೆಸಲಾಯಿತು. ಪ್ರತಿ ಬಾರಿಯೂ ವಿಕಿರಣ ಪತ್ತೆ ಸಾಧನಗಳ ಗಂಟೆ ಮೊಳಗಿತು. ಹಡಗಿನ ಕಂಟೈನರ್ ತಳಭಾಗದಲ್ಲಿ ಇಟ್ಟ ಕೃತಕ ಘೇಂಡಾ ಕೊಂಬನ್ನು ಯಂತ್ರ ಪತ್ತೆಹಚ್ಚಿತು. ಆಫ್ರಿಕಾದ ವಾಟರ್‌ಬರ್ಗ್ ಸಂರಕ್ಷಿತ ಪ್ರದೇಶದಲ್ಲಿರುವ 20 ಘೇಂಡಾಮೃಗಗಳ ಕೊಂಬಿಗೆ ಹಾನಿಮುಕ್ತ ವಿಕಿರಣಶೀಲ ವಸ್ತುವನ್ನು ಅಳವಡಿಸಲಾಯಿತು. ನಂತರದಲ್ಲಿ ಅವುಗಳನ್ನು ರಕ್ತಪರೀಕ್ಷೆ ಮತ್ತು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಘೇಂಡಾಮೃಗಗಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಆಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಯಿತು. ಯೋಜನೆಯ ಮುಖ್ಯ ವಿಜ್ಞಾನಿ ಪ್ರೊ. ಜೇಮ್ಸ್ ಲಾರ್ಕಿನ್ ಪ್ರಕಾರ, ಈ ಕ್ರಮವು ಘೇಂಡಾಮೃಗ ಸೇರಿದಂತೆ ಇನ್ನಿತರೆ ವನ್ಯಜೀವಿಗಳ ಸಂರಕ್ಷಣೆ ದೃಷ್ಟಿಯಲ್ಲೂ ಮಹತ್ವದ್ದಾಗಿದೆ. ವಿಕಿರಣ ಅಳವಡಿಸಿದ ಕೊಂಬನ್ನು ಸಾಗಿಸುವುದು ಅಪಾಯಕಾರಿಯಾಗುವುದರಿಂದ ಅದರ ಅಕ್ರಮ ವ್ಯಾಪಾರಕ್ಕೆ ಹಿನ್ನಡೆಯಾಗಲಿದೆ. ಈ ಹಿಂದೆ ಘೇಂಡಾಮೃಗಗಳ ಸಂತತಿಯು ಅಳಿಯುವುದರಿಂದ ತಪ್ಪಿಸಲು, ಅವುಗಳಿಗೆ ಎಚ್ಚರ ತಪ್ಪಿಸಿ, ಕೊಂಬನ್ನೇ ಕತ್ತರಿಸಲಾಗುತ್ತಿತ್ತು. ಈ ಕ್ರಮಕ್ಕಿಂತ ವಿಕಿರಣಶೀಲ ವಸ್ತುವನ್ನು ಅಳವಡಿಸುವುದೇ ಹೆಚ್ಚು ಪ್ರಶಸ್ತವೆಂದು ಈಗ ಪರಿಗಣಿಸಲಾಗಿದೆ.
ಕಾಡಿನ ಸಾಮೂಹಿಕ ಫಲಧಾರಣ ವಿದ್ಯಮಾನ ಮತ್ತು ಘೇಂಡಾಮೃಗಗಳ ಸಂರಕ್ಷಣೆಯ ವಿಕಿರಣ ತಂತ್ರಜ್ಞಾನಗಳು ಎರಡು ಪ್ರತ್ಯೇಕ ವಿದ್ಯಮಾನಗಳು. ಆದರೆ, ಪರಿಸರ ಸಂಕಷ್ಟದ ಸಂದರ್ಭದಲ್ಲಿ ಜೀವಿಗಳ ಮತ್ತು ವಿಜ್ಞಾನದ ಹೊಂದಾಣಿಕೆಯ ಸಾಮರ್ಥ್ಯವನ್ನು ಇವು ಎತ್ತಿ ತೋರುತ್ತವೆ. ಮರಗಳ ಮಾಸ್ಟಿಂಗ್ ಲಕ್ಷಾಂತರ ವರ್ಷಗಳ ವಿಕಾಸದ ಫಲವಾಗಿದ್ದರೆ, ಘೇಂಡಾಮೃಗದ ಕೊಂಬಿಗೆ ವಿಕಿರಣ ಅಳವಡಿಕೆ ಆಧುನಿಕ ತಂತ್ರಜ್ಞಾನದ ಫಲ. ಪ್ರಕೃತಿ ತನ್ನ ಉಳಿವಿಗೆ ತಾನೇ ಹೊಸ ಸಾಧ್ಯತೆಗಳನ್ನು ರೂಪಿಸಿಕೊಳ್ಳುತ್ತದೆ. ಆ ಪ್ರಯತ್ನದ ಜೊತೆಗೆ ಮಾನವಪ್ರಯತ್ನವೂ ಸೇರಿದಾಗ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ.
ಹವಾಮಾನ ಬದಲಾವಣೆ, ಆವಾಸಸ್ಥಾನ ನಾಶ, ಕಳ್ಳಬೇಟೆ ಮುಂತಾದ ವಿಪರೀತಗಳು ಮಾನವ ನಿರ್ಮಿತ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಪ್ರಕೃತಿ ತನ್ನ ತಪ್ಪುಗಳನ್ನು ತಾನೇ ಸರಿಪಡಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಲೇ ಇರುತ್ತದೆ. ಮನುಷ್ಯ ಮಾತ್ರ ಎಡೆಬಿಡದೇ ತಪ್ಪುಗಳನ್ನು ಮಾಡುತ್ತಲೇ ಇರುತ್ತಾನೆ. ಜೀವವೈವಿಧ್ಯವನ್ನು ನಾಶಮಾಡುವ ಮೂಲ ಕಾರಣಗಳನ್ನೇ ನಿವಾರಿಸದಿದ್ದರೆ, ಯಾವುದೇ ತಂತ್ರಜ್ಞಾನ ಅಥವಾ ನೈಸರ್ಗಿಕ ಹೊಂದಾಣಿಕೆ ಅಂತಿಮ ಪರಿಹಾರ ಆಗಲಾರದು.
ಜೀವವೈವಿಧ್ಯದ ಭವಿಷ್ಯವು ಹೊಸ ತಂತ್ರಜ್ಞಾನಗಳಲ್ಲಿಲ್ಲ, ಪ್ರಕೃತಿಯೊಂದಿಗೆ ಮನುಷ್ಯನು ಕಟ್ಟಿಕೊಳ್ಳುವ ಹೊಣೆಗಾರಿಕೆಯ ಸಂಬಂಧದಲ್ಲಿದೆ.
ಅಖಿಲೇಶ್ ಚಿಪ್ಪಳಿ
