Thursday, 04 Mar, 6.25 am ಪ್ರಜಾವಾಣಿ

ರಾಷ್ಟ್ರೀಯ
'ವಿವಾಹವಾಗಲು ನೀನು ಸಿದ್ಧನಿದ್ದೀಯಾ': ನ್ಯಾಯಮೂರ್ತಿಗಳು ಕ್ಷಮೆ ಕೇಳಲು ಒತ್ತಾಯ

ನವದೆಹಲಿ : ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯು ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ನಡೆಸುವಾಗ, 'ಸಂತ್ರಸ್ತೆಯನ್ನು ವಿವಾಹವಾಗಲು ನೀನು ಸಿದ್ಧನಿದ್ದೀಯಾ' ಎಂದು ಆರೋಪಿಯಲ್ಲಿ ಪ್ರಶ್ನಿಸಿರುವುದು ಭಾರಿ ಟೀಕೆಗೆ ಕಾರಣವಾಗಿದೆ.

ಅನೇಕ ಗಣ್ಯರು, ಕಲಾವಿದರು, ಲೇಖಕರು ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದು, 'ವಿಚಾರಣೆಯ ಸಂದರ್ಭದಲ್ಲಿ ಆಡಿದ್ದ ಮಾತುಗಳನ್ನು ಹಿಂತೆಗೆದುಕೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಅವರಿಗೆ ಪತ್ರ ಬರೆದಿರುವ ಸಿಪಿಎಂ ಪಾಲಿಟ್‌ ಬ್ಯೂರೊ ಸದಸ್ಯೆ ಬೃಂದಾ ಕಾರಟ್‌ ಅವರು, 'ಅತ್ಯಾಚಾರದಂಥ ಹೀನ ಕೃತ್ಯ ನಡೆಸುವವರ ಬೆಂಬಲಕ್ಕೆ ನ್ಯಾಯಾಂಗ ವ್ಯವಸ್ಥೆ ನಿಲ್ಲುತ್ತದೆ ಎಂಬ ಭಾವನೆ ಮೂಡಿಸುವ ಸಂದೇಶವನ್ನು ನ್ಯಾಯಾಲಯವು ರವಾನಿಸಬಾರದು' ಎಂದಿದ್ದಾರೆ.

'ಮಕ್ಕಳ ಮೇಲೆ ಅತ್ಯಾಚಾರ ನಡೆಸಿದವರಿಗೆ ಜಾಮೀನು ನೀಡುವುದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವಾಗ ಕೇಳುವ ಪ್ರಶ್ನೆಗಳು, ಬಳಸುವ ಪದಗಳು ಹಾಗೂ ಕ್ರಿಯೆಗಳು ಗಂಭೀರ ಪರಿಣಾಮ ಉಂಟುಮಾಡುತ್ತವೆ. ದಯವಿಟ್ಟು ನಿಮ್ಮ ಮಾತುಗಳನ್ನು ಮರುಪರಿಶೀಲಿಸಬೇಕು ಮತ್ತು ಅವುಗಳನ್ನು ವಾಪಸ್‌ ಪಡೆಯಬೇಕು. ಮಾತ್ರವಲ್ಲದೆ, ಆರೋಪಿಗೆ ಕೆಳಹಂತದ ನ್ಯಾಯಾಲಯವು ಜಾಮೀನು ನೀಡಿರುವುದು ತಪ್ಪು ಎಂಬ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠವು ನೀಡಿದ ತೀರ್ಪನ್ನು ಎತ್ತಿಹಿಡಿಯಬೇಕು' ಎಂದು ವೃಂದಾ ಅವರು ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

'ಅತ್ಯಾಚಾರ ನಡೆದಾಗ ಬಾಲಕಿ 16 ವರ್ಷದವಳಾಗಿದ್ದಳು. ಆರೋಪಿಯು 10-12 ಬಾರಿ ಈ ಕೃತ್ಯವನ್ನು ನಡೆಸಿದ್ದಾನೆ, ಬೇಸತ್ತ ಬಾಲಕಿ ಆತ್ಮಹತ್ಯೆಯ ಪ್ರಯತ್ನ ನಡೆಸಿದ್ದಾಳೆ. ಇದನ್ನು 'ಒಪ್ಪಿಗೆ' ಎಂದು ಹೇಳಲು ಸಾಧ್ಯವೇ? ಏನೇ ಆಗಿದ್ದರೂ, ಸಂತ್ರಸ್ತೆಯು ಅಪ್ರಾಪ್ತ ವಯಸ್ಕಳಾಗಿದ್ದರೆ, 'ಒಪ್ಪಿಗೆ'ಯ ಲೈಂಗಿಕತೆಗೂ ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಿರುವಾಗ, ಇಂಥ ಪ್ರಶ್ನೆ ಸಂತ್ರಸ್ತೆಯ ಮನಸ್ಸಿನ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆಯೂ ನ್ಯಾಯಾಲಯ ಯೋಚಿಸಬೇಕು' ಎಂದು ಬೃಂದಾ ಹೇಳಿದ್ದಾರೆ.

'ಸಂತ್ರಸ್ತೆ ಒಪ್ಪಿದರೂ- ಒಪ್ಪದಿದ್ದರೂ, ಅತ್ಯಾಚಾರಿಯು ಆಕೆಯನ್ನು ಮದುವೆಯಾಗಲು ಒಪ್ಪಿದರೆ ಆತ ಜೈಲುಶಿಕ್ಷೆಯಿಂದ ಪಾರಾಗಬಹುದು ಎಂಬ ಸಂದೇಶ ಈ ಪ್ರಶ್ನೆಗಳಿಂದ ರವಾನೆಯಾಗುತ್ತಿದೆ. ನ್ಯಾಯಾಂಗ ವ್ಯವಸ್ಥೆಯು ಸಂತ್ರಸ್ತೆಯ ಹಿತಾಸಕ್ತಿಗಳನ್ನು ಕಾಪಾಡಬೇಕು. ದುರ್ದೈವವಶಾತ್‌ ಈ ಪ್ರಕರಣದಲ್ಲಿ ಅದಕ್ಕೆ ವಿರುದ್ಧವಾದದ್ದು ಸಂಭವಿಸಿದೆ' ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಮಹಿಳಾ ಹಕ್ಕುಗಳ ಹೋರಾಟಗಾರರಾದ ಕವಿತಾ ಕೃಷ್ಣನ್‌, ಅನ್ನಿ ರಾಜಾ ಹಾಗೂ ಅಡ್ಮಿರಲ್‌ ಎಲ್‌. ರಾಮದಾಸ್‌, ಅರುಣಾ ರಾಯ್‌, ನಿಖಿಲ್‌ ಡೇ, ಪಮೇಲಾ ಫಿಲಿಪೋಸ್‌, ಆನಂದ್‌ ಸಹಾಯ್‌, ದೇವಕಿ ಜೈನ್‌, ಜಾನ್‌ ದಯಾಳ್‌ ಮುಂತಾದವರೂ ಮುಖ್ಯ ನ್ಯಾಯಮೂರ್ತಿಗೆ ಪತ್ರಬರೆದಿದ್ದು, ತಮ್ಮ ಹೇಳಿಕೆಗಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಲ್ಲದೆ ಮುಖ್ಯನ್ಯಾಯಮೂರ್ತಿ ಹುದ್ದೆಯಿಂದ ಕೂಡಲೇ ಕೆಳಗಿಳಿಯಬೇಕು ಎಂದು ಒತ್ತಾಯಿಸಿದ್ದಾರೆ. ವಿವಿಧ ಕ್ಷೇತ್ರಗಳ ಸುಮಾರು 4000 ಮಂದಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ಪ್ರಕರಣದ ಹಿನ್ನೆಲೆ

ಮಹಿಳೆಯೊಬ್ಬರ ಮೇಲೆ ಬಾರಿಬಾರಿ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದ ಸರ್ಕಾರಿ ನೌಕರನೊಬ್ಬನ ನಿರೀಕ್ಷಣಾ ಜಾಮೀನನ್ನು ಬಾಂಬೆ ಹೈಕೋರ್ಟ್‌ ರದ್ದು ಮಾಡಿದ್ದನ್ನು ಕುರಿತ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ‌ ನ್ಯಾಯಮೂರ್ತಿ ಅವರು 'ನೀನು ಸಂತ್ರಸ್ತೆಯನ್ನು ಮದುವೆ ಆಗುವೆಯಾ' ಎಂದು ಆರೋಪಿಯನ್ನು ಪ್ರಶ್ನಿಸಿದ್ದರು.

'ಸಂತ್ರಸ್ತೆಯನ್ನು ವರಿಸಲು ಸಿದ್ಧವಿರುವುದಾದರೆ, ನಿನ್ನ ಬೇಡಿಕೆಯನ್ನು (ನಿರೀಕ್ಷಣಾ ಜಾಮೀನು) ಪರಿಗಣಿಸಲು ಸಿದ್ಧ, ಇಲ್ಲವಾದಲ್ಲಿ ನೀನು ಜೈಲಿಗೆ ಹೋಗಬೇಕಾಗುತ್ತದೆ. ಆಕೆಯನ್ನು ವಿವಾಹವಾಗಬೇಕು ಎಂದು ನಾವು ಒತ್ತಡ ಹೇರುತ್ತಿಲ್ಲ' ಎಂದು ನ್ಯಾಯಮೂರ್ತಿಗಳಾದ ಎ.ಎಸ್‌. ಬೋಪಣ್ಣ ಹಾಗೂ ವಿ. ರಾಮಸುಬ್ರಮಣಿಯನ್‌ ಅವರನ್ನೊಳಗೊಂಡ ಪೀಠವು ಹೇಳಿತ್ತು.

ನ್ಯಾಯಾಲಯವು ಆರೋಪಿಗೆ ನಾಲ್ಕು ವಾರಗಳ ಕಾಲ ಬಂಧನದಿಂದ ರಕ್ಷಣೆ ಒದಗಿಸಿ, ಸಾಮಾನ್ಯ ಜಾಮೀನಿಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top