ಬೆಂಗಳೂರು: ಕರ್ನಾಟಕ ಗೃಹ ಮಂಡಳಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ನಗರ ಯೋಜನಾ ಆಯುಕ್ತಾಲಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 218 ಕಿರಿಯ ಎಂಜಿನಿಯರ್‌ಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ.
ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ, ಗ್ರಾಮಾಂತರ ಯೋಜನಾ ಆಯುಕ್ತಾಲಯದಲ್ಲಿ ಖಾಲಿ ಇದ್ದ ಸಹಾಯಕ ನಗರ ಯೋಜಕರ ಹುದ್ದೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಗೃಹ ಮಂಡಳಿ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ, ಅಂತರ್ಜಲ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಖನಿಜ ನಿಗಮ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ನಿಗಮದಲ್ಲಿನ ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಉಳಿಕೆ ಮೂಲ ವೃಂದಕ್ಕೆ ಸೇರಿದ 187 ಹಾಗೂ ಕಲ್ಯಾಣ ಕರ್ನಾಟಕ ವೃಂದಕ್ಕೆ ಸೇರಿದ 31 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ನ. 26 ಹಾಗೂ ಶುಲ್ಕ ಪಾವತಿಗೆ ನ. 27 ಕೊನೇ ದಿನ. ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಜನವರಿ ತಿಂಗಳಲ್ಲಿ ಲಿಖಿತ ಪರೀಕ್ಷೆ ಇರಲಿದೆ. ಆದರೆ, ಕನ್ನಡ ಭಾಷಾ ಪರೀಕ್ಷೆಯನ್ನು ಮಾತ್ರ ಜನವರಿ 8ರಂದು ನಡೆಸಲಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
261101-51-2087433471

